ನ್ಯೂಜಿಲೆಂಡ್ ವಿರುದ್ಧದ ಅದ್ಭುತ ಗೆಲುವಿನ ನಂತರ ಇಂಗ್ಲೆಂಡ್ ಕ್ರಿಕೆಟ್ ತಂಡ (England cricket team) ಮುಂದಿನ ಸವಾಲಿನತ್ತ ಗಮನ ಹರಿಸಿದೆ. ಕಳೆದ ವರ್ಷ ನಡೆದಿದ್ದ ಇಂಗ್ಲೆಂಡ್ ಮತ್ತು ಭಾರತ (India vs England) ನಡುವಿನ ಟೆಸ್ಟ್ ಸರಣಿಯ ಐದನೇ ಮತ್ತು ಕೊನೆಯ ಪಂದ್ಯ ಜುಲೈ 1 ರಿಂದ ನಡೆಯಲಿದ್ದು, ಈ ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ಬೆನ್ ಸ್ಟೋಕ್ಸ್ (Ben Stokes) ನಾಯಕತ್ವದಲ್ಲಿ ತಂಡವನ್ನು ಪ್ರಕಟಿಸಿದೆ. ಜೂನ್ 27 ರಂದು ಸೋಮವಾರ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಗೆಲುವಿನ ನಂತರ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಸಂಜೆ ತಡವಾಗಿ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ಪಂದ್ಯಕ್ಕಾಗಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ ತಂಡದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದ ಆಂಗ್ಲ ಮಂಡಳಿ, ವಿಕೆಟ್ ಕೀಪರ್ ಸ್ಯಾಮ್ ಬಿಲ್ಲಿಂಗ್ಸ್ ಅವರನ್ನು ಮಾತ್ರ ತಂಡಕ್ಕೆ ಸೇರಿಸಿಕೊಂಡಿದೆ.
ಜುಲೈ 1 ರಿಂದ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ನಡೆಯಲಿರುವ ಈ ಟೆಸ್ಟ್ ಪಂದ್ಯದೊಂದಿಗೆ ಸರಣಿ ನಿರ್ಧಾರವಾಗಲಿದೆ. ಕಳೆದ ವರ್ಷ ಜೋ ರೂಟ್ ಮತ್ತು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರಂಭವಾದ ಈ ಸರಣಿಯ ಐದನೇ ಮತ್ತು ಕೊನೆಯ ಟೆಸ್ಟ್ ಕೊರೊನಾದಿಂದಾಗಿ ಮುಂದೂಡಲ್ಪಟ್ಟಿತ್ತು. ಹಾಗಾಗಿ ಈ ಅಂತಿಮ ಟೆಸ್ಟ್ ಪಂದ್ಯವನ್ನು 1 ಜುಲೈ 2022 ಕ್ಕೆ ನಿಗದಿಪಡಿಸಲಾಗಿತ್ತು. ಈಗ ಈ ಟೆಸ್ಟ್‌ಗೆ ಕೇವಲ 4 ದಿನಗಳು ಉಳಿದಿದ್ದು, ಇಂಗ್ಲೆಂಡ್ ತನ್ನ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
One addition for the fifth Test against @BCCI as @sambillings joins the squad! ????????#ENGvIND
— England Cricket (@englandcricket) June 27, 2022
ತಂಡದ ಸ್ಟಾರ್ ವಿಕೆಟ್‌ಕೀಪರ್ ಬೆನ್ ಫೋಕ್ಸ್ ಟೆಸ್ಟ್ ಪಂದ್ಯದ ವೇಳೆಗೆ ಸಂಪೂರ್ಣ ಫಿಟ್ ಆಗುತ್ತಾರೆ ಎಂದು ಇಂಗ್ಲೆಂಡ್ ಮಂಡಳಿ ಹೇಳಿದೆ. ನ್ಯೂಜಿಲೆಂಡ್ ವಿರುದ್ಧದ ಕೊನೆಯ ಟೆಸ್ಟ್‌ನ ಮೂರನೇ ದಿನದಂದು ಕೊರೊನಾ ಸೋಂಕಿನಿಂದ ಫೋಕ್ಸ್ ಪಂದ್ಯದಿಂದ ಹೊರಗುಳಿಯಬೇಕಾಯಿತು. ಸದ್ಯ ಅವರು ಐಸೋಲೇಶನ್‌ನಲ್ಲಿದ್ದಾರೆ.
ಭಾರತಕ್ಕೆ ಸರಣಿ ಗೆಲ್ಲುವ ಅವಕಾಶ
2007ರ ನಂತರ ಮೊದಲ ಬಾರಿಗೆ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯನ್ನು ಗೆಲ್ಲುವ ಅವಕಾಶ ಟೀಮ್ ಇಂಡಿಯಾಗೆ ಇದೆ. ಮೊದಲ ನಾಲ್ಕು ಪಂದ್ಯಗಳ ನಂತರ ಟೀಂ ಇಂಡಿಯಾ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದ್ದು, ಕೇವಲ ಡ್ರಾ ಮಾಡಿಕೊಳ್ಳಬೇಕಾಗಿದೆ. ಆದಾಗ್ಯೂ, ಬೆನ್ ಸ್ಟೋಕ್ಸ್ ಹೊಸ ನಾಯಕನಾಗಿ ಮತ್ತು ಬ್ರೆಂಡನ್ ಮೆಕಲಮ್ ಹೊಸ ಟೆಸ್ಟ್ ಕೋಚ್ ಆಗಿ, ಇಂಗ್ಲೆಂಡ್ ಕ್ರಿಕೆಟ್ ತಂಡವು ಮೂರು ಪಂದ್ಯಗಳ ಸರಣಿಯಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ನ್ಯೂಜಿಲೆಂಡ್ ಅನ್ನು ಕ್ಲೀನ್ ಸ್ವೀಪ್ ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತಕ್ಕೆ ಈ ಕೊನೆಯ ಪಂದ್ಯ ಕಳೆದ ವರ್ಷದ ಪಂದ್ಯಗಳಿಗಿಂತ ಹೆಚ್ಚು ಕಷ್ಟಕರವಾಗಲಿದೆ.
ಬರ್ಮಿಂಗ್ಹ್ಯಾಮ್ ಟೆಸ್ಟ್‌ಗೆ ಇಂಗ್ಲೆಂಡ್ ತಂಡ
ಬೆನ್ ಸ್ಟೋಕ್ಸ್ (ನಾಯಕ), ಅಲೆಕ್ಸ್ ಲೀಸ್, ಜ್ಯಾಕ್ ಕ್ರೌಲಿ, ಜೋ ರೂಟ್, ಓಲಿ ಪೋಪ್, ಜಾನಿ ಬೈರ್‌ಸ್ಟೋ, ಬೆನ್ ಫೋಕ್ಸ್, ಸ್ಯಾಮ್ ಬಿಲ್ಲಿಂಗ್ಸ್, ಹ್ಯಾರಿ ಬ್ರೂಕ್, ಜೇಮೀ ಓವರ್‌ಟನ್, ಕ್ರೇಗ್ ಓವರ್‌ಟನ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್, ಮ್ಯಾಥ್ಯೂ ಪಾಟ್ಸ್ ಮತ್ತು ಜ್ಯಾಕ್ ಲೀಚ್.
Published On - 10:09 pm, Mon, 27 June 22