
ಗ್ಯಾಲೆ ಟೆಸ್ಟ್‌ನಲ್ಲಿ ಭಾರತದ ಎರಡನೇ ಇನ್ನಿಂಗ್ಸ್ ಕೇವಲ 193 ರನ್‌ಗಳಿಗೆ ಅಂತ್ಯವಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 178 ರನ್‌ಗಳ ಮುನ್ನಡೆ ಪಡೆದುಕೊಂಡಿದ್ದ ಟೀಂ ಇಂಡಿಯಾ, ಇದೀಗ ಶ್ರೀಲಂಕಾ ತಂಡಕ್ಕೆ 371 ರನ್‌ಗಳ ಗುರಿ ನೀಡಿದೆ. ಈ ಗುರಿ ಬೆನ್ನಟ್ಟುವುದು ಆತಿಥೇಯ ಲಂಕಾ ತಂಡಕ್ಕೂ ಅಷ್ಟು ಸುಲಭವಲ್ಲ. ಏಕೆಂದರೆ ಗಾಲೆ ಮೈದಾನದಲ್ಲಿ ನಾಲ್ಕನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡುವುದು ಅಷ್ಟು ಸುಲಭದ ಮಾತಲ್ಲ. ಅಲ್ಲದೆ 371 ರನ್‌ಗಳ ಈ ಬೃಹತ್ ಗುರಿಯನ್ನು ಶ್ರೀಲಂಕಾ ತಂಡ ಈ ಮೈದಾನದಲ್ಲಿ ಇದುವರೆಗೆ ಬೆನ್ನಟ್ಟಿದ ಇತಿಹಾಸವಿಲ್ಲ. ಹೀಗಾಗಿ ಭಾರತ ಮೇಲುಗೈ ಸಾಧಿಸಿದೆ ಎನ್ನಬಹುದು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ಬ್ಯಾಟಿಂಗ್ ವಿಭಾಗದ ನಿರಸ ಪ್ರದರ್ಶನ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಅನಿರೀಕ್ಷಿತ ರನೌಟ್ಗೆ ಬಲಿಯಾಗಿದ್ದ ಜೈಸ್ವಾಲ್ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಮೊದಲ ಇನ್ನಿಂಗ್ಸ್‌ನಲ್ಲಿ 35 ರನ್‌ಗಳ ಇನ್ನಿಂಗ್ಸ್ ಆಡಿದ್ದ ಜೈಸ್ವಾಲ್ಗೆ ಎರಡನೇ ಇನ್ನಿಂಗ್ಸ್‌ನಲ್ಲಿ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಟೀಂ ಇಂಡಿಯಾ ಸೊನ್ನೆಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಆ ಬಳಿಕ ಜೊತೆಯಾದ ರಾಹುಲ್ ಹಾಗೂ ಪಡಿಕ್ಕಲ್ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಇವರಿಬ್ಬರು ಎರಡನೇ ವಿಕೆಟ್ಗೆ 65 ರನ್‌ಗಳ ಜೊತೆಯಾಟ ನೀಡಿದರು.
ರಾಹುಲ್ 47 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 35 ರನ್ ಬಾರಿಸಿ ಔಟಾದರು. ನಂತರ ಬಂದ ನಾಯಕ ಶುಭ್ಮನ್ ಗಿಲ್ಗೂ ರನ್ ಬರವಿತ್ತು. ಏಕೆಂದರೆ ಮೊದಲ ಇನ್ನಿಂಗ್ಸ್ನಲ್ಲೂ ಗಿಲ್ ಕೇವಲ 16 ರನ್‌ಗಳಿಗೆ ಔಟಾಗಿದ್ದರು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಗಿಲ್ಗೆ ಒಂದಂಕಿ ಮೊತ್ತ ದಾಟುವುದು ಕಷ್ಟಕರವಾಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ನಾಯಕ ಆಟ 8 ರನ್‌ಗಳಿಗೆ ಅಂತ್ಯವಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ 167 ರನ್‌ಗಳ ಸ್ಮರಣೀಯ ಇನ್ನಿಂಗ್ಸ್ ಆಡಿದ್ದ ಕನ್ನಡಿಗ ಪಡಿಕ್ಕಲ್ 2ನೇ ಇನ್ನಿಂಗ್ಸ್ನಲ್ಲೂ ತಮ್ಮ ಅದ್ಭುತ ಫಾರ್ಮ್ ಮುಂದುವರೆಸಿ 44 ರನ್‌ಗಳ ಕಾಣಿಕೆ ನೀಡಿದರು.
ಪಡಿಕ್ಕಲ್ ವಿಕೆಟ್ ಬಳಿಕ ಇನ್ನಿಂಗ್ಸ್ ಜವಾಬ್ದಾರಿ ಹೊತ್ತ ಪಂತ್ ತಂಡದ ಸ್ಕೋರ್ ಬೋರ್ಡ್ ವೇಗ ಹೆಚ್ಚಿಸಿದರು. ಆದರೆ ಇನ್ನೊಂದು ತುದಿಯಿಂದ ಪಂತ್ಗೆ ಸಾಥ್ ಸಿಗಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ್ದ ಜುರೇಲ್ 7 ರನ್‌ಗಳಿಗೆ ಔಟಾದರೆ, ಆಲ್‌ರೌಂಡರ್ ಜಡೇಜಾ ಎರಡನೇ ಇನ್ನಿಂಗ್ಸ್‌ನಲ್ಲಿ ವಿಫಲರಾಗಿ ಕೇವಲ 9 ರನ್ಗೆ ಸುಸ್ತಾದರು. ಯುವ ಆಲ್‌ರೌಂಡರ್ ಮಾನವ್ ಸುತಾರ್ 7 ರನ್ ಬಾರಿಸಿದರೆ, ಬಾಲಂಗೋಚಿಗಳಾದ ಕುಲ್ದೀಪ್ (5), ಸಿರಾಜ್ (2), ಪ್ರಸಿದ್ಧ್ (2) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.
ಇದರರ್ಥ ರಾಹುಲ್, ಪಡಿಕ್ಕಲ್ ಹಾಗೂ ಪಂತ್ ಈ ಮೂವರು ಒಟ್ಟಾರೆಯಾಗಿ 145 ರನ್ ಕಲೆಹಾಕಿದರೆ, ತಂಡದ ಉಳಿದ 8 ಆಟಗಾರರಿಂದ ಮೂಡಿಬಂದಿದ್ದು ಕೇವಲ 48 ರನ್. ಇದೇ ಕಾರಣದಿಂದಾಗಿ ಟೀಂ ಇಂಡಿಯಾ 2ನೇ ಇನ್ನಿಂಗ್ಸ್‌ನಲ್ಲಿ 200 ರನ್‌ಗಳ ಗಡಿ ಮುಟ್ಟುವುದಕ್ಕೂ ಸಾಧ್ಯವಾಗಲಿಲ್ಲ. ಆದಾಗ್ಯೂ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆದಿರುವ ಟೀಂ ಇಂಡಿಯಾ, ಶ್ರೀಲಂಕಾಕ್ಕೆ ಸವಾಲಿನ ಗುರಿಯನ್ನೇ ನೀಡಿದೆ. ಇದೀಗ ಲಂಕಾ ಬೌಲರ್ಗಳಂತೆ ಭಾರತದ ಬೌಲರ್‌ಗಳು ಕೂಡ ಎದುರಾಳಿ ತಂಡವನ್ನು ಬಹುಬೇಗ ಕಟ್ಟಿಹಾಕುವ ಕೆಲಸ ಮಾಡಬೇಕಿದೆ.
Published On - 3:26 pm, Tue, 18 August 26