
ಮೂರು ಪಂದ್ಯಗಳ ಯುವ ಏಕದಿನ ಸರಣಿಗಾಗಿ ಶ್ರೀಲಂಕಾ ಪ್ರವಾಸ ಮಾಡಿದ 19 ವರ್ಷದೊಳಗಿನವರ ಭಾರತ ತಂಡ (India U19 vs Sri Lanka U19) ಸರಣಿ ಸೋಲಿನೊಂದಿಗೆ ಪ್ರವಾಸವನ್ನು ಅಂತ್ಯಗೊಳಿಸಿದೆ. ಮೊದಲ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡಿದ್ದ ಭಾರತ ಯುವ ಪಡೆ, ಕೊನೆಯ ಎರಡು ಪಂದ್ಯಗಳನ್ನು ಸೋಲುವ ಮೂಲಕ ಸರಣಿಯನ್ನು ಕಳೆದುಕೊಂಡಿತು. ಸರಣಿಯ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 290 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಭಾರತಕ್ಕೆ ಸರಣಿ ಸೋಲಿನ ಆಘಾತವನ್ನುಂಟು ಮಾಡಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಅಂಡರ್-19 ತಂಡ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 290 ರನ್ ಕಲೆಹಾಕಿತು. ಆದಾಗ್ಯೂ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಕೇವಲ 31 ರನ್‌ಗಳಿಗೆ ತಂಡದ 2 ಪ್ರಮುಖ ವಿಕೆಟ್‌ಗಳು ಪತನಗೊಂಡವು. ನಂತರ ಜೊತೆಯಾದ ವಿಕೆ ವಿನೀತ್ ಹಾಗೂ ಲಕ್ಷ್ಯ ರಾಯ್‌ಚಂದಾನಿ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಇಬ್ಬರೂ ಮೂರನೇ ವಿಕೆಟ್‌ಗೆ ನಿರ್ಣಾಯಕ 108 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು.
ಲಕ್ಷ್ಯ ರಾಯ್‌ಚಂದಾನಿ 63 ಎಸೆತಗಳಲ್ಲಿ 61 ರನ್ ಗಳಿಸಿದರೆ, ವಿಕೆ ವಿನೀತ್ 136 ಎಸೆತಗಳನ್ನು ಎದುರಿಸಿ ಸ್ಮರಣೀಯ ಶತಕ ಬಾರಿಸಿದರು. ಅಂತಿಮವಾಗಿ 131 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಆ ನಂತರ ಬಂದ ಶವಿನ್ ವಿನೋದ್, ಮೋಹಿತ್ ಉಲ್ವಾ ಮತ್ತು ಅರ್ಜುನ್ ರಜಪೂತ್ ಅಲ್ಪ ಕಾಣಿಕೆಯ ಮೂಲಕ ತಂಡವನ್ನು ಈ ಮೊತ್ತಕ್ಕೆ ಕೊಂಡೊಯ್ದರು. ಇತ್ತ ಶ್ರೀಲಂಕಾ ಪರ ಸೇಥ್ಮಿಕಾ ಸೆನೆವಿರತ್ನೆ ನಾಲ್ಕು ವಿಕೆಟ್ ಪಡೆದರೆ, ಗಿಮ್ಹಾನ್ ಮೆಂಡಿಸ್ ಎರಡು ವಿಕೆಟ್ ಪಡೆದರು ಮತ್ತು ಕವಿಜಾ ಗಮಗೆ ಒಂದು ವಿಕೆಟ್ ಪಡೆದರು.
ಈ ಗುರಿ ಬೆನ್ನಟ್ಟಿದ ಶ್ರೀಲಂಕಾಗೂ ಉತ್ತಮ ಆರಂಭ ಸಿಗಲಿಲ್ಲ. ಲಂಕಾ ಪಡೆ ತನ್ನ ಮೊದಲ ವಿಕೆಟ್ ಅನ್ನು ಬೇಗನೆ ಕಳೆದುಕೊಂಡಿತು. ಆದರೆ ಸೆನುಜಾ ವೆಕುನಗಡ 67 ರನ್‌ಗಳ ಇನ್ನಿಂಗ್ಸ್‌ನೊಂದಿಗೆ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ನಂತರ ಕವಿಜಾ ಗಮಗೆ 29 ರನ್, ಕೀತಾಮ ವಿಥಾನಪತಿರನ 31 ರನ್ ಗಳಿಸಿದರೆ, ಚಮಿಕಾ ಹೀನಾಟಿಗಲ ಅದ್ಭುತ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಚಮಿಕಾ 68 ಎಸೆತಗಳಲ್ಲಿ 84 ರನ್‌ಗಳ ಇನ್ನಿಂಗ್ಸ್ ಆಡಿದರು.
IND vs ENG: ಬರೋಬ್ಬರಿ 3 ವರ್ಷಗಳ ಬಳಿಕ ಏಕದಿನ ಕ್ರಿಕೆಟ್ಗೆ ಮರಳಿದ ಯಾರ್ಕರ್ ಕಿಂಗ್
ಕೊನೆಯ ಓವರ್‌ನಲ್ಲಿ ತಂಡಕ್ಕೆ 11 ರನ್‌ಗಳು ಬೇಕಾಗಿದ್ದವು. ಚಮಿಕಾ ಹೀನಾಟಿಗಲ ಆ ಓವರ್‌ನ ಎರಡನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು. ಆದರೆ ನಂತರ ಸತತ ಎರಡು ಡಾಟ್ ಬಾಲ್‌ಗಳು ಶ್ರೀಲಂಕಾದ ಮೇಲೆ ಒತ್ತಡವನ್ನು ಹೆಚ್ಚಿಸಿದವು. ನಂತರ, ಚಮಿಕಾ ಹೀನಟಿಗಲ ಓವರ್‌ನ ಐದನೇ ಎಸೆತದಲ್ಲಿ ಸಿಕ್ಸರ್ ಬಾರಿಸಿ, ಪಂದ್ಯವನ್ನು ಸಮಬಲಗೊಳಿಸಿದರು. ನಂತರ, ಕೊನೆಯ ಎಸೆತದಲ್ಲಿ ಅವರು 1 ರನ್ ಗಳಿಸಿ ಶ್ರೀಲಂಕಾಕ್ಕೆ 1 ವಿಕೆಟ್ನ ರೋಚಕ ಜಯ ತಂದುಕೊಟ್ಟರು.
Published On - 8:16 pm, Thu, 9 July 26