AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

CWG 2026: ಭಾರತಕ್ಕೆ 4ನೇ ಚಿನ್ನ; ಜೂಡೋದಲ್ಲಿ ಬಂಗಾರ ಗೆದ್ದ ಅಸ್ಮಿತಾ ಡೇ

Commonwealth Games 2026 Judo: ಗ್ಲ್ಯಾಸ್ಗೋ ಕಾಮನ್‌ವೆಲ್ತ್ ಗೇಮ್ಸ್ 2026ರಲ್ಲಿ ಭಾರತದ ಅಸ್ಮಿತಾ ಡೇ ಮಹಿಳಾ 48 ಕೆಜಿ ಜೂಡೋ ವಿಭಾಗದಲ್ಲಿ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಇದು ಕಾಮನ್‌ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಜೂಡೋದಲ್ಲಿ ಭಾರತಕ್ಕೆ ಲಭಿಸಿದ ಮೊದಲ ಚಿನ್ನದ ಪದಕವಾಗಿದೆ. ಕೆನಡಾದ ಆಟಗಾರ್ತಿಯನ್ನು ಫೈನಲ್‌ನಲ್ಲಿ ಸೋಲಿಸಿ, ಭಾರತದ ಒಟ್ಟು ಪದಕಗಳ ಸಂಖ್ಯೆಯನ್ನು 18ಕ್ಕೆ ಹೆಚ್ಚಿಸಿದ್ದಾರೆ. ಅಸ್ಮಿತಾ ಅವರ ಈ ಸಾಧನೆ ಭಾರತೀಯ ಕ್ರೀಡಾಲೋಕಕ್ಕೆ ಹೆಮ್ಮೆ ತಂದಿದೆ.

CWG 2026: ಭಾರತಕ್ಕೆ 4ನೇ ಚಿನ್ನ; ಜೂಡೋದಲ್ಲಿ ಬಂಗಾರ ಗೆದ್ದ ಅಸ್ಮಿತಾ ಡೇ
Asmita Dey
ಪೃಥ್ವಿಶಂಕರ
|

Updated on:Jul 31, 2026 | 9:40 PM

Share

ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಗೇಮ್ಸ್ (Commonwealth Games 2026) ಕ್ರೀಡಾಕೂಟದಲ್ಲಿ ಭಾರತಕ್ಕೆ ನಾಲ್ಕನೇ ಚಿನ್ನದ ಪದಕ ಲಭಿಸಿದೆ. ಕ್ರೀಡಾಕೂಟದ 9ನೇ ದಿನದಂದು ಭಾರತದ ಮಹಿಳಾ ಜೂಡೋ ಆಟಗಾರ್ತಿ ಅಸ್ಮಿತಾ ಡೇ (Asmita Dey) 48 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಕೆನಡಾದ ಆಟಗಾರ್ತಿಯನ್ನು ಸೋಲಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಇದು ಕಾಮನ್‌ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಜೂಡೋದಲ್ಲಿ ಭಾರತಕ್ಕೆ ಲಭಿಸಿದ ಮೊದಲ ಚಿನ್ನದ ಪದಕವಾಗಿದ್ದು, ಈ ಮೂಲಕ ಅಸ್ಮಿತಾ ಡೇ ಇತಿಹಾಸ ನಿರ್ಮಿಸಿದ್ದಾರೆ. ಇದರೊಂದಿಗೆ ಭಾರತದ ಪದಕಗಳ ಸಂಖ್ಯೆ 18ಕ್ಕೆ ಏರಿದೆ.

ಅಸ್ಮಿತಾ ಕಾಮನ್‌ವೆಲ್ತ್ ಪ್ರಯಾಣ

ಅಸ್ಮಿತಾ ಡೇ ಅವರ ಕಾಮನ್‌ವೆಲ್ತ್ ಗೇಮ್ಸ್ ಪ್ರಯಾಣವನ್ನು ನೋಡುವುದಾದರೆ.. ಮೊದಲಿಗೆ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಸ್ಕಾಟ್ಲೆಂಡ್‌ನ ಇವಾ ಎವಿಂಗ್ ಅವರನ್ನು ಸೋಲಿಸಿದ್ದ ಅಸ್ಮಿತಾ, ಸೆಮಿಫೈನಲ್‌ನಲ್ಲಿ ಸ್ಕಾಟ್ಲೆಂಡ್‌ನ ಜೂಡೋ ಆಟಗಾರ್ತಿ ಸಮ್ಮರ್ ಶಾ ಅವರನ್ನು ಮಣಿಸಿದ್ದರು. ಇದೀಗ ಫೈನಲ್​ನಲ್ಲಿ ಕೆನಡಾದ ಹೈಡಿ ಕ್ವಾಚ್ ಅವರನ್ನು ಸೋಲಿಸುವ ಮೂಲಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

ಯಾರು ಈ ಅಸ್ಮಿತಾ ಡೇ?

ತ್ರಿಪುರಾದ ಬೆಲೋನಿಯಾದವರಾದ ಅಸ್ಮಿತಾ ಡೇ ಜೂಡೋ ಆಟಗಾರ್ತಿಯಾಗುವ ಮೊದಲು ಓಟದಲ್ಲಿ ಆಸಕ್ತಿ ಹೊಂದಿದ್ದರು. 800 ಮೀಟರ್ ಓಟದಲ್ಲಿ ತಮ್ಮ ಛಾಪು ಮೂಡಿಸಿದ್ದ ಅಸ್ಮಿತಾಗೆ ಆ ನಂತರ, ಜಿಲ್ಲಾ ಟ್ರಯಲ್ಸ್ ಸಮಯದಲ್ಲಿ ಜೂಡೋ ಮೇಲೆ ಆಸಕ್ತಿ ಬೆಳೆಯಿತು. ಹೀಗಾಗಿ ಭೋಪಾಲ್‌ನ SAI ಪ್ರಾದೇಶಿಕ ಕೇಂದ್ರದಲ್ಲಿ ತರಬೇತುದಾರ ಯಶ್ಪಾಲ್ ಸೋಲಂಕಿ ಅವರ ಅಡಿಯಲ್ಲಿ ತರಬೇತಿ ಪಡೆದು ಇದೀಗ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಇತಿಹಾಸ ನಿರ್ಮಿಸಿದ್ದಾರೆ.

ಅಸ್ಮಿತಾ ಡೇ ಪದಕಗಳ ಭೇಟೆ

ಅಸ್ಮಿತಾ ಡೇ ಈ ಹಿಂದೆ 2025 ರಲ್ಲಿ ಮೊರಾಕೊದಲ್ಲಿ ನಡೆದ ಕಾಸಾಬ್ಲಾಂಕಾ ಆಫ್ರಿಕನ್ ಓಪನ್‌ನಲ್ಲಿ ಚಿನ್ನ ಗೆದ್ದಿದ್ದಾರೆ. ಹಾಗೆಯೇ ಮಕಾವುದಲ್ಲಿ ನಡೆದ 2023 ರ ಜೂನಿಯರ್ ಏಷ್ಯಾಕಪ್‌ನಲ್ಲಿಯೂ ಚಿನ್ನ ಗೆದ್ದಿದ್ದರು. ನಂತರ 2023 ರ ಏಷ್ಯನ್ ಓಪನ್‌ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದ ಅಸ್ಮಿತಾ, ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಹಲವಾರು ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದ್ದರು. ಇದರ ಜೊತೆಗೆ ಅಸ್ಮಿತಾ ಜೂನಿಯರ್ ರಾಷ್ಟ್ರೀಯ ಚಾಂಪಿಯನ್ ಕೂಡ ಆಗಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:36 pm, Fri, 31 July 26

Follow Us