CWG 2026: ಜೂಡೋದಲ್ಲಿ ಭಾರತಕ್ಕೆ 2ನೇ ಚಿನ್ನದ ಪದಕ; ಬಂಗಾರಕ್ಕೆ ಮುತ್ತಿಕ್ಕಿದ ಹರ್ಷ್ ಸಿಂಗ್
Commonwealth Games 2026: 2026ರ ಕಾಮನ್‌ವೆಲ್ತ್ ಗೇಮ್ಸ್‌ನ 9ನೇ ದಿನ ಭಾರತ ಜೂಡೋದಲ್ಲಿ ಎರಡು ಐತಿಹಾಸಿಕ ಚಿನ್ನ ಗೆದ್ದಿತು. ಅಸ್ಮಿತಾ ಡೇ (ಮಹಿಳಾ 48 ಕೆಜಿ) ಮತ್ತು ಹರ್ಷ್ ಸಿಂಗ್ (ಪುರುಷರ 60 ಕೆಜಿ) ಪದಕ ಗಳಿಸಿದರು. ಇಬ್ಬರೂ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಜೂಡೋ ಚಿನ್ನ ಗೆದ್ದ ಮೊದಲ ಭಾರತೀಯರಾಗಿದ್ದಾರೆ. ಇದರೊಂದಿಗೆ ಭಾರತದ ಒಟ್ಟು ಚಿನ್ನ 5, ಒಟ್ಟು ಪದಕಗಳ ಸಂಖ್ಯೆ 19ಕ್ಕೇರಿದೆ.

2026ರ ಕಾಮನ್‌ವೆಲ್ತ್ ಗೇಮ್ಸ್ (Commonwealth Games 2026) ಕ್ರೀಡಾಕೂಟದ 9ನೇ ದಿನದಂದು ಭಾರತ ಕೆಲವೇ ನಿಮಿಷಗಳ ಅಂತರದಲ್ಲಿ ಎರಡೆರಡು ಬಂಗಾರದ ಪದಕಗಳನ್ನು ಗೆದ್ದುಕೊಂಡಿದೆ. ಅಚ್ಚರಿಯ ಸಂಗತಿಯೆಂದರೆ ಈ ಎರಡು ಚಿನ್ನದ ಪದಕಗಳು ಒಂದೇ ಗೇಮ್ನಲ್ಲಿ ಅಂದರೆ ಜೂಡೋದಲ್ಲಿ ಬಂದಿದೆ. ಮೊದಲಿಗೆ ಮಹಿಳೆಯರ ಜೂಡೋ 48 ಕೆಜಿ ವಿಭಾಗದಲ್ಲಿ ಅಸ್ಮಿತಾ ಡೇ (Asmita Day) ಕೆನಡಾದ ಆಟಗಾರ್ತಿ ಹೈಡಿ ಕ್ವಾಚ್ ಅವರನ್ನು ಸೋಲಿಸುವ ಮೂಲಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರೆ, ಈ ಪಂದ್ಯ ಮುಗಿದ ಕೆಲವೇ ನಿಮಿಷಗಳಲ್ಲಿ ನಡೆದ ಪುರುಷರ 60 ಕೆಜಿ ವಿಭಾಗದ ಫೈನಲ್‌ನಲ್ಲಿ ಹರ್ಷ್ ಸಿಂಗ್ (Harsh Singh) ಆಸ್ಟ್ರೇಲಿಯಾದ ಜೋಶುವಾ ಕಾಟ್ಜ್ ಅವರನ್ನು 10-0 ಅಂತರದಿಂದ ಸೋಲಿಸಿ ಚಿನ್ನಕ್ಕೆ ಮುತ್ತಿಟ್ಟರು.
ಭಾರತಕ್ಕೆ 5ನೇ ಚಿನ್ನದ ಪದಕ
ಅಸ್ಮಿತಾ ಡೇ ಮತ್ತು ಹರ್ಷ್ ಸಿಂಗ್ ಜೂಡೋದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದರು. ಏಕೆಂದರೆ ಕಾಮನ್‌ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಜೂಡೋದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಮತ್ತು ಪುರುಷ ಜೂಡೋ ಪಟುಗಳು ಎಂಬ ಹೆಗ್ಗಳಿಕೆಗೆ ಅಸ್ಮಿತಾ ಡೇ ಹಾಗೂ ಹರ್ಷ್ ಸಿಂಗ್ ಪಾತ್ರರಾಗಿದ್ದಾರೆ. ಇದರೊಂದಿಗೆ, ಪ್ರಸ್ತುತ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಗೆದ್ದ ಚಿನ್ನದ ಪದಕಗಳ ಸಂಖ್ಯೆ 5 ಕ್ಕೇರಿದೆ. ಹಾಗೆಯೇ ಭಾರತದ ಒಟ್ಟು ಪದಕಗಳ ಸಂಖ್ಯೆ 19 ಕ್ಕೆ ತಲುಪಿದೆ.
ಹರ್ಷ್ ಸಿಂಗ್ ಫೈನಲ್ ಪ್ರಯಾಣ
ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಹರ್ಷ್ ಅವರ ಪ್ರಯಾಣವನ್ನು ನೋಡುವುದಾದರೆ.. 16 ನೇ ಸುತ್ತಿನಲ್ಲಿ ಮಲಾವಿಯ ಚಿಕೊಂಡಿ ಕಥೆವೆರಾ ಅವರನ್ನು ಸೋಲಿಸಿದ ಹರ್ಷ್, ಕ್ವಾರ್ಟರ್ ಫೈನಲ್‌ನಲ್ಲಿ ವನವಾಟುವಿನ ಅಲನ್ ಮಂತುಲಿಯನ್ನು ಸೋಲಿಸಿದರು. ನಂತರ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾದ ಪೆಡ್ರೊ ಕಾರ್ಲೋಸ್ ಆಂಟೂನ್ ನೆಟೊ ಅವರನ್ನು ಸೋಲಿಸಿ ಫೈನಲ್‌ಗೆ ಅರ್ಹತೆ ಪಡೆದರು. ಫೈನಲ್‌ನಲ್ಲಿ ಹರ್ಷ್, ಆಸ್ಟ್ರೇಲಿಯಾದ ಒಲಿಂಪಿಕ್ಸ್ ಚಾಂಪಿಯನ್ ಜೋಶುವಾ ಕಾಟ್ಜ್ ಅವರನ್ನು ಎದುರಿಸಿದರು.
CWG 2026: ಭಾರತಕ್ಕೆ 4ನೇ ಚಿನ್ನ; ಜೂಡೋದಲ್ಲಿ ಬಂಗಾರ ಗೆದ್ದ ಅಸ್ಮಿತಾ ಡೇ
ಪಂದ್ಯದ ಆರಂಭದಲ್ಲಿ, ಆಸ್ಟ್ರೇಲಿಯಾದ ಜೋಶುವಾ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಆದರೆ ಹರ್ಷ್ ಶಾಂತಯುತ ಆಟವನ್ನು ಪ್ರದರ್ಶಿಸುವ ಮೂಲಕ ಆಸೀಸ್ ಆಟಗಾರನಿಗೆ ಮುನ್ನಡೆ ಸಾಧಿಸಲು ಬಿಡಲಿಲ್ಲ. ಪಂದ್ಯ ಮುಗಿಯಲು ಕೆಲವೇ ಸೆಕೆಂಡುಗಳು ಬಾಕಿ ಇರುವಾಗ, ಹರ್ಷ್ ‘ಥ್ರೋ ಮತ್ತು ಪಿನ್’ ಮೂವ್ ಮಾಡುವ ಮೂಲಕ 10-0 ಅಂತರದಿಂದ ಪಂದ್ಯವನ್ನು ಗೆದ್ದು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:01 pm, Fri, 31 July 26




