IND vs BAN: ಭಾರತ vs ಬಾಂಗ್ಲಾದೇಶ್ ನಡುವಣ 2ನೇ ಟಿ20 ಪಂದ್ಯ ಯಾವಾಗ?
India India vs Bangladesh, 2nd T20I: ಬಾಂಗ್ಲಾದೇಶ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಮ್ಯಾಚ್ನಲ್ಲೇ ಟೀಮ್ ಇಂಡಿಯಾ ಪಾರುಪತ್ಯ ಮೆರೆದಿದೆ. ಗ್ವಾಲಿಯರ್ನಲ್ಲಿ ನಡೆದ ಈ ಪಂದ್ಯವನ್ನು ಭಾರತ ತಂಡವು 7 ವಿಕೆಟ್ಗಳಿಂದ ಗೆದ್ದುಕೊಂಡಿದೆ. ಇದೀಗ ಉಭಯ ತಂಡಗಳು ಎರಡನೇ ಪಂದ್ಯಕ್ಕಾಗಿ ದೆಹಲಿಯತ್ತ ಮುಖ ಮಾಡಲಿದೆ.
ಬಾಂಗ್ಲಾದೇಶ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 7 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿದೆ. ಗ್ವಾಲಿಯರ್ನ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಗೆದ್ದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಬಾಂಗ್ಲಾ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಟೀಮ್ ಇಂಡಿಯಾ ಬೌಲರ್ಗಳು ಯಶಸ್ವಿಯಾದರು.
ಮೊದಲ ಓವರ್ನ 5ನೇ ಎಸೆತದಲ್ಲಿ ಲಿಟ್ಟನ್ ದಾಸ್ (4) ವಿಕೆಟ್ ಪಡೆದ ಅರ್ಷದೀಪ್ ಸಿಂಗ್, ಮೂರನೇ ಓವರ್ನ ಮೊದಲ ಎಸೆತದಲ್ಲೇ ಪರ್ವೇಝ್ ಹೊಸೈನ್ಗೆ (8) ಪೆವಿಲಿಯನ್ ಹಾದಿ ತೋರಿಸಿದರು. ಇನ್ನು ವರುಣ್ ಚಕ್ರವರ್ತಿ ಎಸೆತದಲ್ಲಿ ತೌಹಿದ್ ಹೃದೋಯ್ (12) ಔಟಾದರೆ, ಮಯಾಂಕ್ ಯಾದವ್ ಎಸೆತದಲ್ಲಿ ಮಹಮ್ಮದುಲ್ಲಾ (1) ವಿಕೆಟ್ ಒಪ್ಪಿಸಿದರು.
ಇನ್ನು ನಾಯಕ ನಜ್ಮುಲ್ ಹೊಸೈನ್ ಶಾಂತೊ (27) ರನ್ನು ಔಟ್ ಮಾಡುವಲ್ಲಿ ವಾಷಿಂಗ್ಟನ್ ಸುಂದರ್ ಯಶಸ್ವಿಯಾದರು. ಇದರ ನಡುವೆ ಮೆಹದಿ ಹಸನ್ ಮಿರಾಝ್ 32 ಎಸೆತಗಳಲ್ಲಿ ಅಜೇಯ 35 ರನ್ ಬಾರಿಸಿ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು.
ಅಂತಿಮವಾಗಿ ಬಾಂಗ್ಲಾದೇಶ್ ತಂಡವನ್ನು 19.5 ಓವರ್ಗಳಲ್ಲಿ 127 ರನ್ಗಳಿಗೆ ಆಲೌಟ್ ಮಾಡುವಲ್ಲಿ ಟೀಮ್ ಇಂಡಿಯಾ ಬೌಲರ್ಗಳು ಯಶಸ್ವಿಯಾದರು. ಭಾರತದ ಪರ ಅರ್ಷದೀಪ್ ಸಿಂಗ್ 3.5 ಓವರ್ಗಳಲ್ಲಿ 14 ರನ್ ನೀಡಿ 3 ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ 4 ಓವರ್ಗಳಲ್ಲಿ 31 ರನ್ ನೀಡಿ 3 ವಿಕೆಟ್ ಕಬಳಿಸಿದರು.
128 ರನ್ಗಳ ಸುಲಭ ಗುರಿ ಪಡೆದ ಟೀಮ್ ಇಂಡಿಯಾಗೆ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಸ್ಪೋಟಕ ಆರಂಭ ಒದಗಿಸಿದ್ದರು. ಆದರೆ 16 ರನ್ಗಳಿಸಿದ್ದ ವೇಳೆ ರನೌಟ್ ಆಗುವ ಮೂಲಕ ಅಭಿಷೇಕ್ ನಿರ್ಗಮಿಸಿದರು. ಈ ಹಂತದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ 14 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್ನೊಂದಿಗೆ 29 ರನ್ ಚಚ್ಚಿದರು. ಹಾಗೆಯೇ ಸಂಜು ಸ್ಯಾಮ್ಸನ್ 19 ಎಸೆತಗಳಲ್ಲಿ 29 ರನ್ ಕಲೆಹಾಕಿದರು.
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಸಿಕ್ಸರ್ಗೆ ಕೆಳಗೆ ಬಿದ್ದ ವಿರಾಟ್ ಕೊಹ್ಲಿಯ ದಾಖಲೆ
ಇನ್ನು ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ ಕೇವಲ 16 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 39 ರನ್ ಬಾರಿಸುವ ಮೂಲಕ 11.5 ಓವರ್ಗಳಲ್ಲಿ ಟೀಮ್ ಇಂಡಿಯಾವನ್ನು ಗೆಲುವಿನ ಗುರಿ ಮುಟ್ಟಿಸಿದರು. ಈ ಮೂಲಕ ಭಾರತ ತಂಡವು ಮೊದಲ ಪಂದ್ಯದಲ್ಲಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಎರಡನೇ ಟಿ20 ಪಂದ್ಯ ಯಾವಾಗ?
ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಮ್ಯಾಚ್ನಲ್ಲಿ ಭರ್ಜರಿ ಜಯ ಸಾಧಿಸಿರುವ ಟೀಮ್ ಇಂಡಿಯಾ ಇದೀಗ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಇನ್ನು ಅಕ್ಟೋಬರ್ 9 ರಂದು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡ ಗೆದ್ದರೆ ಸರಣಿಯನ್ನು ವಶಪಡಿಸಿಕೊಳ್ಳಬಹುದು. ಹಾಗೆಯೇ ಮೂರನೇ ಟಿ20 ಪಂದ್ಯವು ಅಕ್ಟೋಬರ್ 12 ರಂದು ನಡೆಯಲಿದ್ದು, ಈ ಪಂದ್ಯಕ್ಕೆ ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂ ಆತಿಥ್ಯವಹಿಸಲಿದೆ.