
ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ (India vs Sri Lanka ) ಹಲವು ದಾಖಲೆಗಳನ್ನು ಬರೆಯಲಿದೆ. ಇತ್ತ ಆಟಗಾರರು ಕೂಡ ವೈಯಕ್ತಿಕವಾಗಿ ವಿಶೇಷ ಮೈಲಿಗಲ್ಲುಗಳನ್ನು ದಾಟಲಿದ್ದಾರೆ. ಅಂತಹವರಲ್ಲಿ ಟೀಂ ಇಂಡಿಯಾ ನಾಯಕ ಶುಭ್ಮನ್ ಗಿಲ್ (Shubman Gill), ರವೀಂದ್ರ ಜಡೇಜಾ ಮತ್ತು ಕುಲ್ದೀಪ್ ಯಾದವ್ ಕೂಡ ಸೇರಿದ್ದಾರೆ. ಅದರಲ್ಲೂ ನಾಯಕ ಗಿಲ್ ಈ ಸರಣಿಯಲ್ಲಿ 3 ಪ್ರಮುಖ ದಾಖಲೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಗಿಲ್ ಪ್ರಸ್ತುತ ಡಬ್ಲ್ಯೂಟಿಸಿ ಆವೃತ್ತಿಯಲ್ಲಿ ಈಗಾಗಲೇ ಐದು ಶತಕಗಳನ್ನು ಬಾರಿಸಿದ್ದಾರೆ. ಇದೀಗ ಶ್ರೀಲಂಕಾ ವಿರುದ್ಧ ಇನ್ನೊಂದು ಶತಕ ಸಿಡಿಸಿದರೆ, ಈ ಡಬ್ಲ್ಯೂಟಿಸಿ ಆವೃತ್ತಿಯಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಜೋ ರೂಟ್ ಅವರನ್ನು ಹಿಂದಿಕ್ಕಲಿದ್ದಾರೆ.
ಹಾಗೆಯೇ ಗಿಲ್ ನಾಯಕನಾಗಿ ಇನ್ನೂ ಎರಡು ಶತಕಗಳನ್ನು ಬಾರಿಸಿದರೆ ಭಾರತ ಟೆಸ್ಟ್ ತಂಡದ ನಾಯಕನಾಗಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ನಾಯಕರ ಪಟ್ಟಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯಲಿದ್ದಾರೆ. ಸಚಿನ್ ನಾಯಕನಾಗಿ ಏಳು ಟೆಸ್ಟ್ ಶತಕಗಳನ್ನು ಬಾರಿಸಿದ್ದರು. ಗಿಲ್ ಈಗಾಗಲೇ ಆರು ಶತಕಗಳನ್ನು ಸಿಡಿಸಿದ್ದು, ಸಚಿನ್ ದಾಖಲೆಯನ್ನು ಮುರಿಯಲು ಇನ್ನೇರಡು ಶತಕಗಳು ಬೇಕಿವೆ.
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದರೆ ಶುಭಮನ್ ಗಿಲ್ ನಾಯಕತ್ವದ ದಾಖಲೆಯಲ್ಲಿ ಮತ್ತೊಂದು ಮೈಲಿಗಲ್ಲು ದಾಖಲಾಗಲಿದೆ. ಗಿಲ್ ನಾಯಕತ್ವದಲ್ಲಿ ಭಾರತ ಇದುವರೆಗೆ ಒಂಬತ್ತು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಐದು ಪಂದ್ಯಗಳನ್ನು ಗೆದ್ದಿದೆ. ಎರಡು ಪಂದ್ಯಗಳ ಸರಣಿ ಗೆಲುವು ಭಾರತಕ್ಕೆ ನಾಯಕನಾಗಿ ಅತಿ ಹೆಚ್ಚು ಟೆಸ್ಟ್ ಗೆಲುವುಗಳನ್ನು ನೀಡಿದ ನಾಯಕನಾಗಿ ಗಿಲ್ ಬಿಷನ್ ಸಿಂಗ್ ಬೇಡಿ ಅವರನ್ನು ಹಿಂದಿಕ್ಕಲಿದ್ದಾರೆ. ಬೇಡಿ ನೇತೃತ್ವದಲ್ಲಿ ಭಾರತ 22 ಟೆಸ್ಟ್ ಪಂದ್ಯಗಳಲ್ಲಿ ಆರರಲ್ಲಿ ಜಯಗಳಿಸಿತ್ತು.
ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಕೂಡ ಈ ಸರಣಿಯಲ್ಲಿ ಐತಿಹಾಸಿಕ ಮೈಲಿಗಲ್ಲು ಸಾಧಿಸುವ ಅವಕಾಶ ಹೊಂದಿದ್ದಾರೆ. ಶ್ರೀಲಂಕಾ ವಿರುದ್ಧದ ಟೆಸ್ಟ್‌ನಲ್ಲಿ ಜಡೇಜಾ ಇನ್ನೆರಡು ವಿಕೆಟ್ ಪಡೆದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ 350 ವಿಕೆಟ್‌ಗಳ ಗಡಿಯನ್ನು ಮುಟ್ಟಲಿದ್ದಾರೆ. ಈ ಮೂಲಕ ಜಡೇಜಾ 350 ಅಥವಾ ಅದಕ್ಕಿಂತ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದ ಭಾರತೀಯ ಬೌಲರ್‌ಗಳ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ, ರವಿಚಂದ್ರನ್ ಅಶ್ವಿನ್, ಕಪಿಲ್ ದೇವ್ ಮತ್ತು ಹರ್ಭಜನ್ ಸಿಂಗ್ ಅವರ ಪಟ್ಟಿಗೆ ಸೇರಲಿದ್ದಾರೆ.
ಶ್ರೀಲಂಕಾ ವಿರುದ್ಧ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಭಾರತೀಯ ಬೌಲರ್‌ಗಳ ಪಟ್ಟಿಯಲ್ಲಿ ಜಡೇಜಾ ಪ್ರಸ್ತುತ ಆರನೇ ಸ್ಥಾನದಲ್ಲಿದ್ದಾರೆ (33 ವಿಕೆಟ್‌ಗಳು). ಈ ಸರಣಿಯಲ್ಲಿ ಅವರು ಇನ್ನೂ ನಾಲ್ಕು ವಿಕೆಟ್‌ಗಳನ್ನು ಪಡೆದರೆ, 36 ವಿಕೆಟ್‌ಗಳನ್ನು ಹೊಂದಿರುವ ಇಶಾಂತ್ ಶರ್ಮಾ ಅವರನ್ನು ಹಿಂದಿಕ್ಕಿ ಟಾಪ್ -5 ರಲ್ಲಿ ಸ್ಥಾನ ಪಡೆಯಲಿದ್ದಾರೆ. ಇದರರ್ಥ ಜಡೇಜಾ ಈ ಸರಣಿಯಲ್ಲಿ ಏಕಕಾಲದಲ್ಲಿ ಎರಡು ಪ್ರಮುಖ ಮೈಲಿಗಲ್ಲುಗಳನ್ನು ಸಾಧಿಸುವ ಅವಕಾಶವನ್ನು ಹೊಂದಿದ್ದಾರೆ.
IND vs SL: ಟೆಸ್ಟ್ ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸುವ ಹೊಸ್ತಿಲಲ್ಲಿ ಟೀಂ ಇಂಡಿಯಾ
ಕುಲ್ದೀಪ್ ಯಾದವ್ ಕೂಡ ಅಪರೂಪದ ಮೈಲಿಗಲ್ಲು ತಲುಪಲು ಕೇವಲ ಒಂದು ವಿಕೆಟ್ ದೂರದಲ್ಲಿದ್ದಾರೆ. ಕುಲ್ದೀಪ್ ಇದುವರೆಗೆ ಏಷ್ಯಾದ ನೆಲದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 249 ವಿಕೆಟ್‌ಗಳನ್ನು ಪಡೆದಿದ್ದಾರೆ. ಶ್ರೀಲಂಕಾ ವಿರುದ್ಧದ ಟೆಸ್ಟ್‌ನಲ್ಲಿ ಅವರು ಒಂದು ವಿಕೆಟ್ ಪಡೆದರೆ, ಏಷ್ಯಾದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 250 ವಿಕೆಟ್‌ಗಳನ್ನು ಪೂರ್ಣಗೊಳಿಸಿದ ಬೌಲರ್ ಎನಿಸಿಕೊಳ್ಳಲಿದ್ದಾರೆ.