ಮಹಿಳಾ ಟಿ20 ಏಷ್ಯಾಕಪ್ ಫೈನಲ್‌ ಗೆದ್ದರೂ ಕಪ್ ಸ್ವೀಕರಿಸದ ಟೀಂ ಇಂಡಿಯಾ! ಬಿಸಿಸಿಐ ಕೊಟ್ಟ ಕಾರಣ ಇಲ್ಲಿದೆ

ಟೀಂ ಇಂಡಿಯಾ ಪುರುಷರ ತಂಡ ಕಳೆದ ವರ್ಷ ಏಷ್ಯಾಕಪ್ ಟ್ರೋಫಿ ಸ್ವೀಕರಿಸದೆ ತೆಗೆದುಕೊಂಡಿದ್ದ ನಿಲುವಿನ ಹಾದಿಯನ್ನೇ ಇದೀಗ ಮಹಿಳಾ ತಂಡವೂ ಹಿಡಿದಿದೆ. ಶ್ರೀಲಂಕಾ ವಿರುದ್ಧ ಭರ್ಜರಿ ಗೆಲುವಿನೊಂದಿಗೆ ಏಷ್ಯಾಕಪ್ ಕಿರೀಟ ಮುಡಿಗೇರಿಸಿಕೊಂಡರೂ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸದೆ ಮಹಿಳಾ ತಂಡ ದಿಟ್ಟ ನಿಲುವು ಪ್ರದರ್ಶಿಸಿದೆ. ಈ ಬಗ್ಗೆ ಬಿಸಿಸಿಐ ಹೇಳಿದ್ದೇನು ಎಂಬ ಮಾಹಿತಿ ಇಲ್ಲಿದೆ.

ಮಹಿಳಾ ಟಿ20 ಏಷ್ಯಾಕಪ್ ಫೈನಲ್‌ ಗೆದ್ದರೂ ಕಪ್ ಸ್ವೀಕರಿಸದ ಟೀಂ ಇಂಡಿಯಾ! ಬಿಸಿಸಿಐ ಕೊಟ್ಟ ಕಾರಣ ಇಲ್ಲಿದೆ
ದಾಖಲೆಯ ಎಂಟನೇ ಬಾರಿ ಮಹಿಳಾ ಏಷ್ಯಾಕಪ್ ಪ್ರಶಸ್ತಿ ಗೆದ್ದ ಟೀಂ ಇಂಡಿಯಾ
Image Credit source: PTI

Updated on: Sep 14, 2026 | 8:50 AM

ಮುಖ್ಯಾಂಶಗಳು

  • ಭಾರತಕ್ಕೆ ದಾಖಲೆಯ ಎಂಟನೇ ಏಷ್ಯಾಕಪ್ ಕಿರೀಟ
  • ನಖ್ವಿಯಿಂದ ಟ್ರೋಫಿ ಸ್ವೀಕರಿಸದ ಟೀಂ ಇಂಡಿಯಾ
  • ಪುರುಷರ ತಂಡದ ನಿಲುವಿಗೆ ಮಹಿಳಾ ತಂಡ ಬೆಂಬಲ

ನವದೆಹಲಿ, ಸೆಪ್ಟೆಂಬರ್ 14: ಶ್ರೀಲಂಕಾ ವಿರುದ್ಧ 72 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡ ದಾಖಲೆಯ ಎಂಟನೇ ಬಾರಿ ಮಹಿಳಾ ಏಷ್ಯಾಕಪ್ ಪ್ರಶಸ್ತಿ ಗೆದ್ದುಕೊಂಡಿದೆ. ಆದರೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟೀಂ ಇಂಡಿಯಾ ಟ್ರೋಫಿ ಸ್ವೀಕರಿಸದಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ನಿರ್ಧಾರವು ಕಳೆದ ವರ್ಷ ಪುರುಷರ ಏಷ್ಯಾಕಪ್ ಗೆಲುವಿನ ವೇಳೆ ತೆಗೆದುಕೊಂಡಿದ್ದ ನಿಲುವಿಗೆ ಬೆಂಬಲ ಸೂಚಿಸುವ ಕ್ರಮವಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸ್ಪಷ್ಟಪಡಿಸಿದ್ದಾರೆ.

ನಖ್ವಿ ಕೈಯಿಂದ ಟ್ರೋಫಿ ಸ್ವೀಕರಿಸದಿದ್ದೇಕೆ ಟೀಂ ಇಂಡಿಯಾ?

2025ರ ಏಪ್ರಿಲ್‌ನಲ್ಲಿ ನಡೆದ ಪಹಲ್ಗಾಮ್ ದಾಳಿ ಬಳಿಕ ಭಾರತ-ಪಾಕಿಸ್ತಾನ ಸಂಬಂಧಗಳಲ್ಲಿ ಉದ್ವಿಗ್ನತೆ ಹೆಚ್ಚಾಗಿತ್ತು. ಬಹುರಾಷ್ಟ್ರೀಯ ಟೂರ್ನಿಗಳಲ್ಲಿ ಪಾಕಿಸ್ತಾನ ವಿರುದ್ಧ ಆಡುವುದು ಸರ್ಕಾರದ ನೀತಿಯ ಭಾಗವಾಗಿದ್ದರೂ, ಪಾಕಿಸ್ತಾನದೊಂದಿಗೆ ಎಲ್ಲ ರೀತಿಯ ಸಂಬಂಧಗಳನ್ನು ಮುಂದುವರಿಸಬೇಕೆಂಬ ನಿಯಮವಿಲ್ಲ ಎಂದು ಸೈಕಿಯಾ ಹೇಳಿದ್ದಾರೆ. ಭಾರತದ ವಿರೋಧಿ ಕೃತ್ಯಗಳಿಗೆ ಕುಮ್ಮಕ್ಕು ನೀಡುವಲ್ಲಿ ಪ್ರಮುಖ ಪಾತ್ರ ಹೊಂದಿರುವ ವ್ಯಕ್ತಿಯಿಂದ ಟ್ರೋಫಿ ಸ್ವೀಕರಿಸುವುದು ಸೂಕ್ತವಲ್ಲ ಎಂಬ ನಿಲುವನ್ನು ಮಹಿಳಾ ತಂಡವೂ ಬೆಂಬಲಿಸಿದೆ ಎಂದು ದೇವಜಿತ್ ಸೈಕಿಯಾ ತಿಳಿಸಿದ್ದಾರೆ.

ಮೈದಾನದಲ್ಲಿ ಚಾಂಪಿಯನ್‌ಗಳ ಸಂಭ್ರಮ

ಶ್ರೀಲಂಕಾವನ್ನು 72 ರನ್‌ಗಳಿಂದ ಮಣಿಸಿದ ಭಾರತ ಮಹಿಳಾ ತಂಡ ಪ್ರಶಸ್ತಿ ಗೆಲುವನ್ನು ಭರ್ಜರಿಯಾಗಿ ಸಂಭ್ರಮಿಸಿತು. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡ ಟೂರ್ನಿಯಲ್ಲಿ ಪ್ರಭಾವಿ ಪ್ರದರ್ಶನ ನೀಡಿದ್ದು, ಮಹಿಳಾ ಕ್ರಿಕೆಟ್‌ನಲ್ಲಿ ಭಾರತದ ಪ್ರಾಬಲ್ಯವನ್ನು ಮತ್ತೊಮ್ಮೆ ತೋರಿಸಿದೆ. 2026ರ ಐಸಿಸಿ ಟಿ20 ವಿಶ್ವಕಪ್‌ಗಾಗಿ ತಂಡದ ಸಿದ್ಧತೆ ಮುಂದುವರಿದಿದ್ದು, ಈ ಗೆಲುವು ಆಟಗಾರ್ತಿಯರ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಬಿಸಿಸಿಐ ತಿಳಿಸಿದೆ.

ಟ್ರೋಫಿ ಪ್ರದಾನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಡೆದಿತ್ತು ಯತ್ನ

ಟ್ರೋಫಿ ಪ್ರದಾನದ ವಿಚಾರವನ್ನು ಬಗೆಹರಿಸಲು ಪ್ರಯತ್ನಿಸಲಾಗಿತ್ತು. ಆದರೆ ಆ ಪ್ರಯತ್ನಗಳು ಯಶಸ್ವಿಯಾಗಲಿಲ್ಲ ಎಂದು ಸೈಕಿಯಾ ಹೇಳಿದ್ದಾರೆ. ಟ್ರೋಫಿಯನ್ನು ಯಾರು ನೀಡುತ್ತಾರೆ ಎಂಬುದಕ್ಕಿಂತ ಭಾರತ ತಂಡ ಗೆಲ್ಲುವುದು ನಮ್ಮ ಪ್ರಮುಖ ಗುರಿಯಾಗಿತ್ತು ಮತ್ತು ಅದನ್ನು ಸಾಧಿಸಿರುವ ಕಾರಣ ಈಗ ನಮಗೆ ಯಾವುದೇ ವಿಷಾದವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಸೇಡಿನ ಸಮರದಲ್ಲಿ ಗೆದ್ದು ಏಷ್ಯನ್ ಕಿರೀಟ ತೊಟ್ಟ ಭಾರತದ ವನಿತೆಯರು

ಇದೇ ವೇಳೆ ಪಂದ್ಯದ ವೇಳೆ ಸೈಕಿಯಾ ಹಾಗೂ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರೊಂದಿಗೆ ನಖ್ವಿ ರಾಯಲ್ ಬಾಕ್ಸ್‌ನಲ್ಲಿ ಕಾಣಿಸಿಕೊಂಡಿದ್ದು ಕೂಡ ಚರ್ಚೆಗೆ ಕಾರಣವಾಗಿತ್ತು. ಎಲ್ಲ ಗಣ್ಯರು ಪರಸ್ಪರ ಭೇಟಿಯಾಗಿ ಮಾತನಾಡುವುದು ಸಾಮಾನ್ಯ ಪ್ರಕ್ರಿಯೆ ಎಂದು ಸೈಕಿಯಾ ಹೇಳಿದ್ದಾರೆ.

ಮತ್ತಷ್ಟು ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us