AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯರ ಬ್ಯಾಟ್​​ನಲ್ಲಿ ರಬ್ಬರ್ ಇದೆ: ಹೊಸ ಚರ್ಚೆ ಹುಟ್ಟುಹಾಕಿದ ಲಂಕಾ ಕ್ರಿಕೆಟಿಗ

ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ಅಭಿಷೇಕ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅದರಲ್ಲೂ ಮೂರನೇ ಟಿ20 ಪಂದ್ಯದಲ್ಲಿ ಅವರು ಕೇವಲ 20 ಎಸೆತಗಳಲ್ಲಿ 68 ರನ್ ಸಿಡಿಸಿದ್ದರು. ಈ ಇನಿಂಗ್ಸ್ ಬಳಿಕ ನ್ಯೂಝಿಲೆಂಡ್ ಆಟಗಾರರು ಅಭಿಷೇಕ್ ಶರ್ಮಾ ಅವರ ಬ್ಯಾಟ್ ಪರಿಶೀಲಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದೀಗ ಭಾರತೀಯರ ಬ್ಯಾಟ್​ಗೆ ರಬ್ಬರ್ ಕೋಟಿಂಗ್ ಅನ್ವಯಿಸುತ್ತಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಭಾರತೀಯರ ಬ್ಯಾಟ್​​ನಲ್ಲಿ ರಬ್ಬರ್ ಇದೆ: ಹೊಸ ಚರ್ಚೆ ಹುಟ್ಟುಹಾಕಿದ ಲಂಕಾ ಕ್ರಿಕೆಟಿಗ
Abhishek - Banuka
ಝಾಹಿರ್ ಯೂಸುಫ್
|

Updated on: Feb 11, 2026 | 10:53 AM

Share

ಭಾರತೀಯರು ಬಳಸುವ ಬ್ಯಾಟ್​ಗೆ ರಬ್ಬರ್ ಪದರ ಅನ್ವಯಿಸಲಾಗುತ್ತಿದೆ. ಇದರಿಂದ ಅವರು ಸುಲಭವಾಗಿ ರನ್​ಗಳಿಸುತ್ತಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟಿಗ ಭಾನುಕಾ ರಾಜಪಕ್ಸೆ ಗಂಭೀರ ಆರೋಪ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಭಾನುಕಾ, ಭಾರತೀಯ ಆಟಗಾರರು ಬಳಸುವ ಬ್ಯಾಟ್ ವಿಶೇಷವಾಗಿರುತ್ತದೆ. ಅಂತಹ ಬ್ಯಾಟ್​ಗಳು ಎಲ್ಲೂ ಸಿಗುವುದಿಲ್ಲ ಎಂಬುದೇ ಅಚ್ಚರಿ.

ಭಾರತೀಯ ಆಟಗಾರರ ಬಳಿ ಇರುವ ಬ್ಯಾಟ್‌ಗಳು ನಾವು ಖರೀದಿಸುವ ಅತ್ಯುತ್ತಮ ಬ್ಯಾಟ್‌ಗಳಿಗಿಂತ ಬಹಳ ಶ್ರೇಷ್ಠವಾಗಿರುತ್ತವೆ. ಅದರ ಮೇಲೆ ರಬ್ಬರ್ ಪದರವನ್ನು ಅನ್ವಯಿಸಿದಂತೆ ಭಾಸವಾಗುತ್ತದೆ. ಅದು ಹೇಗೆ ಸಾಧ್ಯ ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ಅಂತಹ ಬ್ಯಾಟ್​ಗಳು ಇತರರಿಗೆ ಸಿಗುವುದಿಲ್ಲ. ಈ ವಿಚಾರ ಎಲ್ಲರಿಗೂ ತಿಳಿದಿದೆ ಎಂದು ಭಾನುಕಾ ರಾಜಪಕ್ಸೆ ಹೇಳಿದ್ದಾರೆ.

ಟೀಮ್ ಇಂಡಿಯಾ ಆಟಗಾರರ ಬ್ಯಾಟ್ ಮೇಲೆ ರಬ್ಬರ್ ಪದರ ಇರುವುದರಿಂದ ಅವರು ಸುಲಭವಾಗಿ ರನ್​ಗಳಿಸುತ್ತಿದ್ದಾರೆ. ಅಂತಹ ಬ್ಯಾಟ್​ಗಳು ಇತರೆ ದೇಶದ ಆಟಗಾರರಿಗೆ ಸಿಗುವುದಿಲ್ಲ. ಅಲ್ಲದೆ ಅಂತಹ ಬ್ಯಾಟ್​​ಗಳನ್ನು ಇತರರು ಖರೀದಿಸಲು ಸಹ ಸಾಧ್ಯವಿಲ್ಲ ಎಂದು ಶ್ರೀಲಂಕಾ ಕ್ರಿಕೆಟಿಗ ಹೇಳಿದ್ದಾರೆ.

ಭಾನುಕಾ ರಾಜಪಕ್ಸೆಯ ಈ ಹೇಳಿಕೆಯು ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ. ಅದರಲ್ಲೂ ಪರೋಕ್ಷವಾಗಿ ಭಾರತೀಯರು ನಿಯಮಬಾಹಿರ ಬ್ಯಾಟ್​ಗಳನ್ನು ಬಳಸುತ್ತಿದ್ದಾರೆ ಎಂದು ರಾಜಪಕ್ಸೆ ಆರೋಪಿಸಿದ್ದಾರೆ. ಹೀಗಾಗಿಯೇ ಈ ವಿಷಯವು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

ಇತ್ತ ತನ್ನ ಹೇಳಿಕೆಯು ಮಹತ್ವ ಪಡೆದುಕೊಳ್ಳುತ್ತಿದ್ದಂತೆ ಭಾನುಕಾ ರಾಜಪಕ್ಸೆ ಯೂಟರ್ನ್ ಹೊಡೆದಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿರುವ ಅವರು, ಸಂದರ್ಶನದಲ್ಲಿನ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ಅನುವಾದದಲ್ಲಿ ವ್ಯತ್ಯಾಸಗಳಾಗಿವೆ.

ನನ್ನ ಮಾತು ಹೊಗಳಿಕೆಯ ಉದ್ದೇಶವಾಗಿತ್ತು. ಭಾರತೀಯ ಕ್ರಿಕೆಟ್, ಅದರ ವ್ಯವಸ್ಥೆಗಳು ಮತ್ತು ಮೂಲಸೌಕರ್ಯದಿಂದ ಅದರ ಸಲಕರಣೆಗಳ ಮಾನದಂಡಗಳವರೆಗೆ ನಂಬಲಾಗದಷ್ಟು ಮುಂದುವರೆದಿದೆ. ಅವರ ಬ್ಯಾಟ್ ತಯಾರಕರು ನಿಜವಾಗಿಯೂ ವಿಶ್ವದ ಅತ್ಯುತ್ತಮ ತಯಾರಕರಲ್ಲಿ ಒಬ್ಬರು. ಇದನ್ನೇ  ನಾನು ಭಾರತೀಯರು ಬಳಸುವ ಬ್ಯಾಟ್​ ಅತ್ಯುತ್ತಮವಾಗಿದೆ ಅಂದಿರುವುದು. ಇದನ್ನು ಬೇರೆ ಅರ್ಥದಲ್ಲಿ ಅನುವಾದಿಸಲಾಗಿದೆ ಎಂದು ಭಾನುಕಾ ರಾಜಪಕ್ಸೆ ಸ್ಪಷ್ಟೀಕರಣ ನೀಡಿದ್ದಾರೆ.

ಐಸಿಸಿ ನಿಯಮ ಹೇಳುವುದೇನು?

ಅಂತರಾಷ್ಟ್ರೀಯ ಕ್ರಿಕೆಟ್ ನಿಯಮಗಳ ಪ್ರಕಾರ ಬ್ಯಾಟ್ ತಯಾರಿಕೆಯಲ್ಲಿ ಕೆಲವು ಕಟ್ಟುನಿಟ್ಟಿನ ಕ್ರಮಗಳಿವೆ. ಆ ನಿಯಮಗಳಾವುವು ಎಂದು ನೋಡುವುದಾದರೆ…

  • ಬ್ಯಾಟ್‌ಗಳನ್ನು ಕೇವಲ ಮರದಿಂದ ಮಾತ್ರ ತಯಾರಿಸಬೇಕು. ಒಳಗೆ ರಬ್ಬರ್ ಅಥವಾ ಇತರ ಯಾವುದೇ ಶಕ್ತಿ ವರ್ಧಕ ವಸ್ತುಗಳನ್ನು ಬಳಸುವುದು ನಿಯಮಬಾಹಿರ.
  • ಪಂದ್ಯದ ಅಧಿಕಾರಿಗಳು ನಿಯಮಿತವಾಗಿ ಆಟಗಾರರ ಕ್ರೀಡಾ ಸಲಕರಣೆಗಳನ್ನು ತಪಾಸಣೆ ಮಾಡುತ್ತಾರೆ. ಈ ವೇಳೆ ಬ್ಯಾಟ್ ಅನ್ನು ಸಹ ಪರಿಶೀಲಿಸಲಾಗುತ್ತದೆ.

ಇದನ್ನೂ ಓದಿ: ಅಲೆನ್ ಆರ್ಭಟಕ್ಕೆ ಅಭಿಷೇಕ್ ವಿಶ್ವ ದಾಖಲೆ ಉಡೀಸ್

ಇನ್ನು ಭಾರತೀಯ ಆಟಗಾರರು ಬಳಸುವ SG, SS ನಂತಹ ಬ್ರ್ಯಾಂಡ್‌ಗಳ ಬ್ಯಾಟ್​ಗಳನ್ನು ವೈಯಕ್ತಿಕ ಅಗತ್ಯಕ್ಕೆ ತಕ್ಕಂತೆ ಕಸ್ಟಮೈಸ್ ಮಾಡಲ್ಪಟ್ಟಿರುತ್ತವೆಯೇ ಹೊರತು ಅವುಗಳಲ್ಲಿ ಯಾವುದೇ ಕಾನೂನುಬಾಹಿರ ಮಾರ್ಪಾಡುಗಳಿರುವುದಿಲ್ಲ.

ಅಲ್ಲದೆ SG, SS ಮತ್ತು MRF ಬ್ಯಾಟ್​ಗಳಿಗಾಗಿ ಅತ್ಯುನ್ನತ ದರ್ಜೆಯ ‘ಗ್ರೇಡ್ 1’ ಇಂಗ್ಲಿಷ್ ವಿಲೋ ಮರವನ್ನು ಬಳಸಲಾಗುತ್ತದೆ. ಈ ಮರವು ನೈಸರ್ಗಿಕವಾಗಿಯೇ ಹೆಚ್ಚು “ಪಿಂಗ್” (ಚೆಂಡು ತಗುಲಿದಾಗ ಚಿಮ್ಮುವ ಶಕ್ತಿ) ಹೊಂದಿರುತ್ತದೆ.

ಹಾಗೆಯೇ ಅತ್ಯುತ್ತಮ ಪ್ರೆಸ್ಸಿಂಗ್​ನೊಂದಿಗೆ ಬ್ಯಾಟ್​ನ ಪಿಂಗ್ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತದೆ. ಇದು ನೋಡುಗರಿಗೆ ರಬ್ಬರ್ ತರಹದ ಎಫೆಕ್ಟ್ ನೀಡಬಹುದು. ಇದೇ ಕಾರಣದಿಂದಾಗಿ ಭಾನುಕಾ ರಾಜಪಕ್ಸೆ ಕೂಡ ಭಾರತೀಯರ ಬ್ಯಾಟ್​ ಮೇಲೆ ರಬ್ಬರ್ ಕೋಟಿಂಗ್ ಇರುವಂತೆ ಭಾಸವಾಗುತ್ತದೆ ಎಂದಿರುವುದು.