IPL 2022: ಚೆನ್ನೈ ಸೂಪರ್ ಕಿಂಗ್ಸ್ (CSK) ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಂಬಾಟಿ ರಾಯುಡು (Ambati Rayudu) ಶನಿವಾರ ಇಂಡಿಯನ್ ಪ್ರೀಮಿಯರ್ ಲೀಗ್ಗೆ (IPL 2022) ನಿವೃತ್ತಿ ಘೋಷಿಸಿದ್ದರು. ಈ ದಿಢೀರ್ ನಿರ್ಧಾರದಿಂದ ಅಂಬಾಟಿ ರಾಯುಡು ಅಭಿಮಾನಿಗಳು ಕೂಡ ಅಚ್ಚರಿಗೊಂಡಿದ್ದರು. ‘ಇದು (ಐಪಿಎಲ್-2022) ನನ್ನ ಕೊನೆಯ ಐಪಿಎಲ್ ಸೀಸನ್ ಎಂದು ನಾನು ಸಂತೋಷದಿಂದ ಘೋಷಿಸುತ್ತೇನೆ. ಕಳೆದ 13 ವರ್ಷಗಳಲ್ಲಿ ನಾನು 2 ಶ್ರೇಷ್ಠ ತಂಡಗಳೊಂದಿಗೆ ಆಡಿದ್ದೇನೆ. ಈ ಅದ್ಭುತ ಪ್ರಯಾಣಕ್ಕಾಗಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ಗೆ ಧನ್ಯವಾದಗಳು ಎಂದು ಟ್ವಿಟರ್ ಮೂಲಕ ರಾಯುಡು ತಿಳಿಸಿದ್ದರು. ಆದರೆ ಈ ಘೋಷಣೆಯ ಬೆನ್ನಲ್ಲೇ ಸಿಎಸ್‌ಕೆ ಆಟಗಾರ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದರು. ಇದೀಗ ಅಂಬಾಟಿ ರಾಯುಡು ಟ್ವೀಟ್ ಡಿಲೀಟ್ ಮಾಡಲು ಮುಖ್ಯ ಕಾರಣವೇನು ಎಂಬುದು ಬಹಿರಂಗವಾಗಿದೆ. ಕ್ರಿಕೆಟ್ ಬದುಕಿಗೆ ವಿದಾಯ ಹೇಳುತ್ತಿದ್ದಂತೆ ರಾಯುಡು ಅವರನ್ನು ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಸಂಪರ್ಕಿಸಿದ್ದಾರೆ. ಅಲ್ಲದೆ ಅವರೊಂದಿಗೆ ಮಾತುಕತೆಯನ್ನೂ ಕೂಡ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್, ‘ನಾನು ಅವರೊಂದಿಗೆ (ಅಂಬಾಟಿ ರಾಯುಡು) ಮಾತನಾಡಿದ್ದೇನೆ. ಅಲ್ಲದೆ ಅವರು ನಿವೃತ್ತಿಯಾಗುತ್ತಿಲ್ಲ. ಈ ಬಾರಿ ಉತ್ತಮ ಪ್ರದರ್ಶನ ನೀಡಲಾಗದ ನಿರಾಶೆಯಿಂದ ಅವರು ಆ ಟ್ವೀಟ್ ಮಾಡಿದ್ದರು. ಇದೀಗ ಆ ಟ್ವೀಟ್ ಅನ್ನು ಅಳಿಸಿದ್ದಾರೆ. ಹೀಗಾಗಿ ಈ ಸೀಸನ್ ನಂತರ ಅವರು ಖಂಡಿತವಾಗಿಯೂ ನಿವೃತ್ತಿಯಾಗುವುದಿಲ್ಲ. ಕಳಪೆ ಪ್ರದರ್ಶನದಿಂದಾಗಿ ಅಂಬಾಟಿ ರಾಯುಡು ನಿರಾಶೆಗೊಂಡು ನಿವೃತ್ತಿ ಮನಸ್ಸು ಮಾಡಿದ್ದರು. ಇದೀಗ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎಂದು ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ತಿಳಿಸಿದ್ದಾರೆ.
ಅಂದಹಾಗೆ ರಾಯುಡು ದಿಢೀರ್ ನಿವೃತ್ತಿ ಘೋಷಿಸಿದ್ದು ಇದೇ ಮೊದಲಲ್ಲ. 2019 ರ ODI ವಿಶ್ವಕಪ್‌ಗೆ ಅವರನ್ನು ಆಯ್ಕೆ ಮಾಡದ ಕಾರಣ ಅಂತಾರಾಷ್ಟ್ರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದರು. ಆ ಬಳಿಕ ನಿರ್ಧಾರ ಬದಲಿಸಿದರೂ ರಾಷ್ಟ್ರೀಯ ತಂಡದ ಪರ ಕಾಣಿಸಿಕೊಂಡಿರಲಿಲ್ಲ. ಇತ್ತ ಐಪಿಎಲ್ನಲ್ಲಿ ಸಿಎಸ್‌ಕೆ ತಂಡದ ಪ್ರಮುಖ ಅಂಗವಾಗಿ ಗುರುತಿಸಿಕೊಂಡಿದ್ದ ರಾಯುಡು ಈ ಬಾರಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ.
ಐಪಿಎಲ್ 2022 ರಲ್ಲಿ ಅಂಬಟಿ ರಾಯುಡು ಆಡಿರುವ 12 ಪಂದ್ಯಗಳಲ್ಲಿ 27.10 ಸರಾಸರಿಯಲ್ಲಿ 271 ರನ್ ಗಳಿಸಿದ್ದಾರೆ. ಇತ್ತ ಸಿಎಸ್‌ಕೆ ತಂಡವು ಪ್ಲೇಆಫ್ ರೇಸ್ನಿಂದ ಹೊರಬಿದ್ದಿದ್ದು, ಇದರ ಬೆನ್ನಲ್ಲೇ ಅಂಬಾಟಿ ರಾಯುಡು ಕೂಡ ಐಪಿಎಲ್ಗೆ ಗುಡ್ ಬೈ ಹೇಳುವುದಾಗಿ ತಿಳಿಸಿ ಎಲ್ಲರನ್ನೂ ಗೊಂದಲಕ್ಕೀಡು ಮಾಡಿದ್ದರು. ಇದೀಗ ಸಿಎಸ್‌ಕೆ ಸಿಇಒ ರಾಯುಡು ನಿವೃತ್ತಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸಿಎಸ್‌ಕೆ ಪರ ಆಡಿರುವ 36 ವರ್ಷದ ಅಂಬಾಟಿ ರಾಯುಡು 187 ಪಂದ್ಯಗಳಿಂದ ಒಟ್ಟು 4187 ರನ್ ಕಲೆಹಾಕಿದ್ದಾರೆ. ಈ ವೇಳೆ ಒಂದು ಶತಕ ಹಾಗೂ 22 ಅರ್ಧಶತಕಗಳು ಮೂಡಿಬಂದಿವೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.