IPL 2024: ಪಿಚ್ ಬಿಸಿಯಾಗಿತ್ತು, ಅದಕ್ಕೆ ಸೋತೆವು ಎಂದ ಸಂಜು ಸ್ಯಾಮ್ಸನ್
IPL 2024: ರಾಜಸ್ಥಾನ್ ರಾಯಲ್ಸ್ ತಂಡವು ಈವರೆಗೆ 12 ಪಂದ್ಯಗಳನ್ನಾಡಿದೆ. ಈ ಮ್ಯಾಚ್ಗಳಲ್ಲಿ 8 ಜಯ ಸಾಧಿಸಿರುವ ಸಂಜು ಸ್ಯಾಮ್ಸನ್ ಪಡೆಗೆ ಪ್ಲೇಆಫ್ ಹಂತಕ್ಕೇರಲು ಇನ್ನೂ ಒಂದು ಗೆಲುವಿನ ಅವಶ್ಯಕತೆಯಿದೆ. ಅದರಂತೆ ಪಂಜಾಬ್ ಕಿಂಗ್ಸ್ ಅಥವಾ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ಜಯ ಸಾಧಿಸಿದರೆ ನೇರವಾಗಿ ಪ್ಲೇಆಫ್ ಪ್ರವೇಶಿಸಲಿದೆ.

IPL 2024: ಐಪಿಎಲ್ನಲ್ಲಿ ಭಾನುವಾರ ನಡೆದ 61ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (RR) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಜಯ ಸಾಧಿಸಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್ಆರ್ ತಂಡ ಉತ್ತಮ ಆರಂಭ ಪಡೆದಿರಲಿಲ್ಲ.
ಪವರ್ಪ್ಲೇನಲ್ಲಿ ಕೇವಲ 42 ರನ್ ಕಲೆಹಾಕಿದ ರಾಜಸ್ಥಾನ್ ರಾಯಲ್ಸ್ ತಂಡವು ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿತು. ಅಲ್ಲದೆ 15ನೇ ಓವರ್ ವೇಳೆ 3 ವಿಕೆಟ್ ಕಳೆದುಕೊಂಡು ಗಳಿಸಿದ್ದು ಕೇವಲ 91 ರನ್ಗಳು ಮಾತ್ರ.
ಅತ್ತ ವಿಕೆಟ್ ಇದ್ದರೂ ರಾಜಸ್ಥಾನ್ ರಾಯಲ್ಸ್ ತಂಡ ಬಿರುಸಿನ ಬ್ಯಾಟಿಂಗ್ಗೆ ಮುಂದಾಗಿರಲಿಲ್ಲ. ಅಲ್ಲದೆ ಅಂತಿಮವಾಗಿ 20 ಓವರ್ಗಳಲ್ಲಿ 141 ರನ್ಗಳಿಸಲಷ್ಟೇ ಶಕ್ತರಾಗಿದ್ದರು. 142 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 18.2 ಓವರ್ಗಳಲ್ಲಿ ಚೇಸ್ ಮಾಡಿ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಈ ಸೋಲಿನ ಬಳಿಕ ಮಾತನಾಡಿದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್, ಪಿಚ್ ಬ್ಯಾಟಿಂಗ್ಗೆ ಸಹಕಾರಿಯಾಗಿರಲಿಲ್ಲ ಎಂದಿದ್ದಾರೆ. ನಾವು ಕನಿಷ್ಠ 170 ರನ್ಗಳಿಸುವ ಉದ್ದೇಶದೊಂದಿಗೆ ಬ್ಯಾಟಿಂಗ್ ಆಯ್ದುಕೊಂಡಿದ್ದೆವು. ಆದರೆ ಪವರ್ಪ್ಲೇನಲ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ್ದೆವು. ಇದರಿಂದ 20-25 ರನ್ಗಳು ಕಡಿಮೆಯಾಯಿತು.
ಅಲ್ಲದೆ ಪಿಚ್ ಕೂಡ ಬಿಸಿಯಾಗಿತ್ತು. ನಾವು 2ನೇ ಇನಿಂಗ್ಸ್ ವೇಳೆ ಪಿಚ್ ನಿಧಾನವಾಗುತ್ತದೆ ಅಂದುಕೊಂಡಿದ್ದೆವು. ಸಾಮಾನ್ಯವಾಗಿ ರಾತ್ರಿ ಮ್ಯಾಚ್ನಲ್ಲಿ ದ್ವಿತೀಯ ಇನಿಂಗ್ಸ್ ವೇಳೆ ಇಬ್ಬನಿ ಇರುತ್ತದೆ. ಅದೇ ರೀತಿ ಸೆಕೆಂಡ್ ಇನಿಂಗ್ಸ್ ವೇಳೆ ಪಿಚ್ ಬೌಲರ್ಗಳಿಗೆ ಸಹಕಾರಿಯಾಗಲಿದೆ ಎಂದು ಭಾವಿಸಿದ್ದೆ. ಆದರೆ ಬೇಸಿಗೆಯಿಂದಾಗಿ ಪಿಚ್ ಮೇಲ್ಮೈ ಬಿಸಿಯಾಗಿತ್ತು. ಇದರಿಂದ ದ್ವಿತೀಯ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡುವುದು ಸಿಎಸ್ಕೆಗೆ ಕಷ್ಟವಾಗಿಲ್ಲ. ಇದೇ ಕಾರಣದಿಂದಾಗಿ ನಾವು ಸೋಲಬೇಕಾಯಿತು ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.
ಪ್ಲೇಆಫ್ ರೇಸ್ನಲ್ಲಿ ಸಿಎಸ್ಕೆ:
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಗೆಲುವಿನೊಂದಿಗೆ ಸಿಎಸ್ಕೆ ತಂಡವು ಅಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಅತ್ತ ರಾಜಸ್ಥಾನ್ ರಾಯಲ್ಸ್ ತಂಡವು 16 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಆರ್ಆರ್ ತಂಡಕ್ಕೆ ಇನ್ನೂ 2 ಪಂದ್ಯಗಳಿದ್ದು, ಈ ಮ್ಯಾಚ್ಗಳಲ್ಲಿ ಒಂದು ಪಂದ್ಯ ಗೆದ್ದರೆ ಪ್ಲೇಆಫ್ ಹಂತಕ್ಕೇರಲಿದೆ.
ಇದನ್ನೂ ಓದಿ: IPL 2024: CSK ವಿರುದ್ಧ RCB ಎಷ್ಟು ರನ್ಗಳ ಅಂತರದಿಂದ ಗೆಲ್ಲಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ
ಇನ್ನು ಸಿಎಸ್ಕೆ ತಂಡವು ಪ್ಲೇಆಫ್ ಪ್ರವೇಶವನ್ನು ಖಚಿತಪಡಿಸಲು ತನ್ನ ಕೊನೆಯ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಗೆಲ್ಲಬೇಕು. ಇತ್ತ ಆರ್ಸಿಬಿ ತಂಡಕ್ಕೂ ಪ್ಲೇಆಫ್ ಚಾನ್ಸ್ ಇದ್ದು, ಹೀಗಾಗಿ ಸಿಎಸ್ಕೆ ತಂಡವನ್ನು ಸೋಲಿಸಿ ಮುಂದಿನ ಹಂತಕ್ಕೇರುವುದನ್ನು ಎದುರು ನೋಡುತ್ತಿದೆ.
Published On - 9:03 am, Mon, 13 May 24
