IPL 2025: RCB ಗೆ ಪಂದ್ಯ ಗೆಲ್ಲಿಸಿಕೊಟ್ಟ ಧೋನಿ
IPL 2025 RCB vs CSK: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 20255 52ನೇ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಆರ್ಸಿಬಿ 2 ರನ್ಗಳ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 213 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಸಿಎಸ್ಕೆ 211 ರನ್ಗಳಿಸಲಷ್ಟೇ ಶಕ್ತರಾದರು.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 52ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಸೋಲನುಭವಿಸಿದೆ. ಈ ಸೋಲಿಗೆ ಕಾರಣ ಮಹೇಂದ್ರ ಸಿಂಗ್ ಧೋನಿ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಪರ ವಿರಾಟ್ ಕೊಹ್ಲಿ (62) ಹಾಗೂ ಜೇಕಬ್ ಬೆಥಲ್ (55) ಅರ್ಧಶತಕ ಬಾರಿಸಿದ್ದರು.
ಇನ್ನು ಅಂತಿಮ ಹಂತದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ರೊಮೊರಿಯೊ ಶೆಫರ್ಡ್ ಕೇವಲ 14 ಎಸೆತಗಳಲ್ಲಿ 53 ರನ್ ಚಚ್ಚಿದರು. ಪರಿಣಾಮ ಆರ್ಸಿಬಿ ತಂಡದ ಸ್ಕೋರ್ 20 ಓವರ್ಗಳಲ್ಲಿ 213 ಕ್ಕೆ ಬಂದು ನಿಂತಿತು.
214 ರನ್ಗಳ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಪರ ಆಯುಷ್ ಮ್ಹಾತ್ರೆ 94 ರನ್ ಸಿಡಿಸಿದರು. ಹಾಗೆಯೇ ರವೀಂದ್ರ ಜಡೇಜಾ ಕೂಡ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಸಿಎಸ್ಕೆ ತಂಡವು 16.3 ಓವರ್ಗಳಲ್ಲಿ 172 ರನ್ ಕಲೆಹಾಕಿತ್ತು. ಅಲ್ಲದೆ ಕೊನೆಯ 21 ಎಸೆತಗಳಲ್ಲಿ ಸಿಎಸ್ಕೆ ಮುಂದೆ 42 ರನ್ಗಳ ಗುರಿಯಿತ್ತು.
ಈ ಹಂತದಲ್ಲಿ ಕಣಕ್ಕಿಳಿದ ಮಹೇಂದ್ರ ಸಿಂಗ್ ಧೋನಿ 8 ಎಸೆತಗಳಲ್ಲಿ ಕಲೆಹಾಕಿದ್ದು ಕೇವಲ 12 ರನ್ಗಳು ಮಾತ್ರ. ಈ ಎಂಟು ಎಸೆತಗಳಲ್ಲಿ ಧೋನಿ ಬ್ಯಾಟ್ನಿಂದ ಏಕೈಕ ಸಿಕ್ಸ್ ಮಾತ್ರ ಮೂಡಿಬಂದಿತ್ತು. ನಿರ್ಣಾಯಕ ಹಂತದಲ್ಲಿ ಧೋನಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸದೇ ಇರುವುದು ಚೆನ್ನೈ ಸೂಪರ್ ಕಿಂಗ್ಸ್ ಪಾಲಿಗೆ ಮುಳುವಾಯಿತು.
ಅದರಲ್ಲೂ ಶಿವಂ ದುಬೆ ಅಂತಹ ಹೊಡಿಬಡಿ ದಾಂಡಿಗನಿದ್ದರೂ. ಅವರನ್ನು ಬಿಟ್ಟು ಧೋನಿ ಮೇಲಿನ ಕ್ರಮಾಂಕದಲ್ಲಿ ಕಣಕ್ಕಿಳಿದು ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ್ದು ಅಚ್ಚರಿಗೆ ಕಾರಣವಾಗಿತ್ತು. ಪರಿಣಾಮ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅಂತಿಮವಾಗಿ 2 ರನ್ಗಳಿಂದ ಸೋಲೊಪ್ಪಿಕೊಂಡಿತು.
ಒಂದು ವೇಳೆ ಧೋನಿ 8 ಎಸೆತಗಳಲ್ಲಿ ಒಂದೆರಡು ಬೌಂಡರಿಗಳನ್ನು ಬಾರಿಸಿದ್ದರೆ, ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲ್ಲುವುದು ಖಚಿತವಾಗಿತ್ತು. ಆದರೆ ರನ್ಗಳಿಸಲು ಪರದಾಡಿದ ಧೋನಿ, ಸಿಎಸ್ಕೆ ಪರ ವಾಲಿದ್ದ ಪಂದ್ಯವನ್ನು ಆರ್ಸಿಬಿ ತೆಕ್ಕೆಗೆ ತಂದಿಟ್ಟರು. ಅಲ್ಲದೆ ಅಂತಿಮ ಓವರ್ನಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರನಡೆಯುವ ಮೂಲಕ ಸಿಎಸ್ಕೆ ತಂಡವನ್ನು ಸೋಲಿನತ್ತ ಕೊಂಡೊಯ್ದರು.
ಇದನ್ನೂ ಓದಿ: 11 ಫೋರ್, 3 ಸಿಕ್ಸ್: ಕೊನೆಗೂ ಶತಕ ಪೂರೈಸಿದ ಗ್ಲೆನ್ ಮ್ಯಾಕ್ಸ್ವೆಲ್
ಇದೀಗ ಮಹೇಂದ್ರ ಸಿಂಗ್ ಧೋನಿಯ ಈ ನಿಧಾನಗತಿಯ ಬ್ಯಾಟಿಂಗ್ ಸಿಎಸ್ಕೆ ತಂಡದ ಸೋಲಿಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಸೋಲಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲ ಸ್ಥಾನಕ್ಕೇರಿದೆ.
Published On - 6:57 am, Sun, 4 May 25




