IPL 2025: ಸಾವಿನ ದವಡೆಯಿಂದ ಕೂದಲೆಳೆ ಅಂತರದಲ್ಲಿ ಪಾರು; ಇದು ಕರುಣ್ ಸಾವು ಗೆದ್ದು ಬಂದ ಕಥೆ
Karun Nair: ಐಪಿಎಲ್ 2025 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಸೋತರೂ, ಕನ್ನಡಿಗ ಕರುಣ್ ನಾಯರ್ ಅವರ ಅದ್ಭುತ ಬ್ಯಾಟಿಂಗ್ ಎಲ್ಲರ ಗಮನ ಸೆಳೆಯಿತು. 40 ಎಸೆತಗಳಲ್ಲಿ 89 ರನ್ ಗಳಿಸಿದ ಅವರು 5 ಸಿಕ್ಸರ್ ಮತ್ತು 12 ಬೌಂಡರಿ ಬಾರಿಸಿದರು. 2016 ರಲ್ಲಿ ನದಿ ಅಪಘಾತದಿಂದ ಪಾರಾದ ಕರುಣ್, ಕಷ್ಟಗಳನ್ನು ಎದುರಿಸಿ ಐಪಿಎಲ್ ಗೆ ಮರಳಿದ್ದು ವಿಶೇಷ.

ಐಪಿಎಲ್ 2025 (IPL 2025) ರ 29 ನೇ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ (DC vs MI) ವಿರುದ್ಧ ಸೋತಿತ್ತಾದರೂ ಕನ್ನಡಿಗ ಕರುಣ್ ನಾಯರ್ (Karun Nair) ಮಾತ್ರ ತಮ್ಮ ಆಟದಿಂದ ಎಲ್ಲರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾದರು. ಬಲಿಷ್ಠ ಬೌಲಿಂಗ್ ವಿಭಾಗವನ್ನು ಹೊಂದಿರುವ ಮುಂಬೈ ಇಂಡಿಯನ್ಸ್ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಕರುಣ್ 40 ಎಸೆತಗಳಲ್ಲಿ 89 ರನ್‌ಗಳ ಇನ್ನಿಂಗ್ಸ್ ಆಡಿದರು. ಕರುಣ್ ನಾಯರ್ ತಮ್ಮ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 5 ಸಿಕ್ಸರ್‌ಗಳು ಮತ್ತು 12 ಬೌಂಡರಿಗಳನ್ನು ಬಾರಿಸಿದರು. ಜಸ್ಪ್ರೀತ್ ಬುಮ್ರಾ ಅವರಂತಹ ಮಾರಕ ವೇಗಿಯನ್ನು ದಂಡಿಸಿದ ಕರುಣ್, ಬುಮ್ರಾ ಅವರ 9 ಎಸೆತಗಳಲ್ಲಿ 26 ರನ್ ಗಳಿಸಿದರು. ಇಂದು ಕ್ರಿಕೆಟ್ ಮೈದಾನದಲ್ಲಿ ರನ್ ಮಳೆ ಹರಿಸುತ್ತಿರುವ ಕರುಣ್, ಕೂದಲೆಳೆ ಅಂತರದಲ್ಲಿ ಸಾವು ಗೆದ್ದುಬಂದ ಕಥೆ ನಿಮ್ಮಲ್ಲಿ ಎಷ್ಟು ಜನರಿಗೆ ಗೊತ್ತು?
ಸಾವನ್ನು ಗೆದ್ದುಬಂದಿದ್ದ ಕರುಣ್
ವಾಸ್ತವವಾಗಿ ಕರುಣ್ ನಾಯರ್ 2016 ರಲ್ಲಿಯೇ ನದಿಯಲ್ಲಿ ಮುಳುಗಿ ಸಾವನ್ನಪ್ಪಬೇಕಾಗಿತ್ತು. ಆದರೆ ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಕರುಣ್ ಸಾವನ್ನು ಗೆದ್ದುಬಂದಿದ್ದರು. 2016 ರ ಜೂನ್‌ನಲ್ಲಿ ಅಂದರೆ ಕರುಣ್ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಒಂದು ತಿಂಗಳ ನಂತರ ಈ ಘಟನೆ ಸಂಭವಿಸಿತ್ತು. ವಾಸ್ತವವಾಗಿ ಕರುಣ್ ನಾಯರ್ ಕೇರಳದ ಪಂಪಾ ನದಿಯ ಮೂಲಕ ದೋಣಿಯಲ್ಲಿ ದೇವಾಲಯಕ್ಕೆ ಭೇಟಿ ನೀಡಲು ಹೋಗುತ್ತಿದ್ದರು. ಆದರೆ ದೇವಸ್ಥಾನ ತಲುಪುವಷ್ಟರಲ್ಲಿ ಅವರು ಪ್ರಯಾಣಿಸುತ್ತಿದ್ದ ದೋಣಿ ನದಿಯಲ್ಲಿ ಮಗುಚಿ ಬಿದ್ದಿತ್ತು.
ನದಿಯಲ್ಲಿ ದೋಣಿ ಮಗುಚಿ ಬಿದ್ದ ಪರಿಣಾಮ ಆರು ಜನರು ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿದ್ದರು. ಆದರೆ ಕರುಣ್ ಮಾತ್ರ ಮುಳುಗುತ್ತಿದ್ದ ದೋಣಿಯಿಂದ ಹೊರಬಂದು ದಡ ಸಿಗುವವರೆಗೂ ಈಜುವ ಮೂಲಕ ಸಾವನ್ನು ಜಯಿಸಿದ್ದರು.
ವೃತ್ತಿಜೀವನದಲ್ಲೂ ಸಂಕಷ್ಟಗಳು
ಆದರೆ ಈ ಅವಘಡದ ನಂತರವೂ ಕರುಣ್ ನಾಯರ್‌ಗೆ ಸಮಸ್ಯೆಗಳು ಕಡಿಮೆಯಾಗಲಿಲ್ಲ. ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಕರುಣ್ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಯಿತು. ನವೆಂಬರ್ 2016 ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಕರುಣ್ರನ್ನು ಮತ್ತೆ ತಂಡಕ್ಕೆ ಮರಳಲು ಸಾಧ್ಯವಾಗದ ರೀತಿಯಲ್ಲಿ ಅವರನ್ನು ಟೀಂ ಇಂಡಿಯಾದಿಂದ ಕೈಬಿಡಲಾಯಿತು. ಟೀಂ ಇಂಡಿಯಾದಿಂದ ಹೊರಬಿದ್ದ ಕರುಣ್ಗೆ ಐಪಿಎಲ್ ಬಾಗಿಲು ಮುಚ್ಚಿತ್ತು. ಇದರ ಜೊತೆಗೆ ಅವರನ್ನು ರಾಜ್ಯ ತಂಡದಿಂದಲೂ ಕೈಬಿಡಲಾಯಿತು.
ಐಪಿಎಲ್‌ನಲ್ಲಿ ಅಬ್ಬರಿಸಿದ ಕನ್ನಡಿಗ ಕರುಣ್ ನಾಯರ್
ಮತ್ತೆ ಲಯಕಂಡುಕೊಂಡ ಕರುಣ್
ಕರ್ನಾಟಕ ರಣಜಿ ತಂಡದಿಂದ ಹೊರಬಿದ್ದ ಬಳಿಕ ಕರುಣ್ ನಾಯರ್, ವಿದರ್ಭ ತಂಡವನ್ನು ಸೇರಿಕೊಳ್ಳೂವ ಮೂಲಕ ಅಲ್ಲಿಂದ ದೇಶೀಯ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಕಳೆದ ರಣಜಿ ಋತುವಿನಲ್ಲಿ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ವಿದರ್ಭ ಪರ ರನ್‌ಗಳ ಶಿಖರ ಕಟ್ಟಿದರು. ಇದರ ಫಲವಾಗಿ ಕರುಣ್ಗೆ ಐಪಿಎಲ್ ಬಾಗಿಲು ತೆರೆದಿದೆ. ಮುಂದಿನ ದಿನಗಳಲ್ಲಿ ಕರುಣ್ಗೆ ಟೀಂ ಇಂಡಿಯಾದ ಬಾಗಿಲು ಕೂಡ ತೆರೆಯಲಿ ಎಂಬುದು ಟೀಂ ಇಂಡಿಯಾ ಅಭಿಮಾನಿಗಳ ಆಶಯವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ