IPL 2025: ಮಳೆಯಿಂದಾಗಿ ಪಂದ್ಯ ರದ್ದು; ಟೂರ್ನಿಯಿಂದ ಹೊರಬಿದ್ದ ಕೆಕೆಆರ್
IPL 2025 Match 58 Rained Out: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಐಪಿಎಲ್ 2025 ರ 58ನೇ ಪಂದ್ಯ, ಭಾರಿ ಮಳೆಯಿಂದಾಗಿ ರದ್ದಾಯಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳಿಗೆ ಈ ಪಂದ್ಯ ಪ್ಲೇ ಆಫ್ ದೃಷ್ಟಿಯಿಂದ ಬಹಳ ಮುಖ್ಯವಾಗಿತ್ತು. ಮಳೆಯಿಂದ ಟಾಸ್ ಸಹ ನಡೆಯಲಿಲ್ಲ. ಅಂಪೈರ್‌ಗಳು ಪಂದ್ಯವನ್ನು ರದ್ದುಗೊಳಿಸಿ, ಎರಡೂ ತಂಡಗಳಿಗೂ ಒಂದೊಂದು ಅಂಕ ನೀಡಿದರು.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಐಪಿಎಲ್ 2025 (IPL 2025) ರ 58ನೇ ಪಂದ್ಯ ಮಳೆಯಿಂದ ರದ್ದಾಗಿದೆ. ಪ್ಲೇಆಫ್ ದೃಷ್ಟಿಯಿಂದ ಈ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟರ್ ರೈಡರ್ಸ್ (RCB vs KKR) ತಂಡಕ್ಕೆ ಬಹಳ ಮುಖ್ಯವಾಗಿತ್ತು. ಆದರೆ ಈ ಮೊದಲೇ ನಿರೀಕ್ಷಿಸಿದಂತೆ ಬೆಂಗಳೂರಿನಲ್ಲಿ ಸಂಜೆಯಿಂದ ಆರಂಭವಾದ ಮಳೆ ಕೊಂಚವೂ ಬಿಡುವು ಕೊಡಲಿಲ್ಲ. ಹೀಗಾಗಿ ಪಂದ್ಯದ ಟಾಸ್ ಕೂಡ ನಡೆಯಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ರಾತ್ರಿ 10:30 ರ ಸುಮಾರಿಗೆ ಮೈದಾನವನ್ನು ಪರೀಕ್ಷಿಸಿದ ಅಂಪೈರ್‌ಗಳು ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದರು. ಹೀಗಾಗಿ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕವನ್ನು ನೀಡಲಾಗಿದೆ.
ಮೇಲೆ ಹೇಳಿದಂತೆ ಬೆಂಗಳೂರಿನಲ್ಲಿ ನಿರಂತರ ಮಳೆಯಿಂದಾಗಿ ಟಾಸ್ ಮಾಡದೆಯೇ ಪಂದ್ಯವನ್ನು ರದ್ದುಗೊಳಿಸಬೇಕಾಯಿತು. ಎರಡೂ ತಂಡಗಳಿಗೆ ತಲಾ ಒಂದು ಅಂಕ ನೀಡಲಾಯಿತು. ಇದರೊಂದಿಗೆ, ಹಾಲಿ ಚಾಂಪಿಯನ್ ಕೆಕೆಆರ್ ಈಗ 12 ಪಂದ್ಯಗಳಲ್ಲಿ 11 ಅಂಕಗಳನ್ನು ಹೊಂದಿದ್ದು, ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ. ಇದರೊಂದಿಗೆ ಪ್ಲೇಆಫ್ ರೇಸ್‌ನಿಂದ ಹೊರಬಿದ್ದ ನಾಲ್ಕನೇ ತಂಡ ಎನಿಸಿಕೊಂಡಿದೆ. ಮತ್ತೊಂದೆಡೆ, ಆರ್‌ಸಿಬಿ 12 ಪಂದ್ಯಗಳಲ್ಲಿ 17 ಅಂಕಗಳನ್ನು ಗಳಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದರೂ ಪ್ಲೇ ಆಫ್ ಟಿಕೆಟ್ ಖಚಿತವಾಗಿಲ್ಲ.
ಆರ್‌ಸಿಬಿ ಪ್ಲೇ ಆಫ್ ಹಾದಿ ಕಠಿಣ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 17 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಆದರೆ ಪ್ಲೇಆಫ್ ಸ್ಥಾನ ಇನ್ನೂ ದೃಢಪಟ್ಟಿಲ್ಲ. ಗುಜರಾತ್ ಟೈಟನ್ಸ್ ತಂಡವು 11 ಪಂದ್ಯಗಳಿಂದ 16 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿರುವುದರಿಂದ ಆರ್‌ಸಿಬಿ ತಂಡಕ್ಕೆ ಇದೀಗ ಟೂರ್ನಿಯಿಂದ ಹೊರಹೋಗುವ ಅಪಾಯವಿದೆ. ಮುಂಬೈ ಇಂಡಿಯನ್ಸ್ 12 ಪಂದ್ಯಗಳಿಂದ 14 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಈ ಎರಡೂ ತಂಡಗಳು ಲೀಗ್ ಹಂತದಲ್ಲಿ ತಲಾ 18 ಅಂಕಗಳನ್ನು ಗಳಿಸಿದರೆ, ಮತ್ತೊಂದೆಡೆ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ 17 ಅಂಕಗಳನ್ನು ಗಳಿಸಿದರೆ, ಆರ್‌ಸಿಬಿ ಪ್ಲೇಆಫ್ ತಲುಪುವುದು ಕಷ್ಟಕರವಾಗಿರುತ್ತದೆ.
IPL 2025: ಆರ್‌ಸಿಬಿ ಫೈನಲ್ಗೇರಿದರೆ ಮ್ಯಾಚ್ ನೋಡಲು ಬರ್ತೀನಿ; ಡಿವಿಲಿಯರ್ಸ್ ಭರವಸೆ
ಪಂಜಾಬ್ ತಂಡ ಆಡಿರುವ 11 ಪಂದ್ಯಗಳಲ್ಲಿ 15 ಅಂಕಗಳನ್ನು ಗಳಿಸಿದೆ. ಆದರೆ ಡೆಲ್ಲಿ ತಂಡ 11 ಪಂದ್ಯಗಳಲ್ಲಿ 13 ಅಂಕಗಳನ್ನು ಹೊಂದಿದೆ. ಇದರರ್ಥ ಈ ಎರಡೂ ತಂಡಗಳಿಗೆ ಆರ್‌ಸಿಬಿಯ 17 ಅಂಕಗಳನ್ನು ಸರಿಗಟ್ಟುವುದು ಕಷ್ಟದ ಕೆಲಸವಲ್ಲ. ಅಂತಹ ಪರಿಸ್ಥಿತಿಯಲ್ಲಿ, ಮೂರೂ ತಂಡಗಳು ತಲಾ 17 ಅಂಕಗಳನ್ನು ಹೊಂದಿದ್ದರೆ, ನೆಟ್ ರನ್ ರೇಟ್ ಮೇಲೆ ಪ್ಲೇ ಆಫ್ಗೇರುವ ತಂಡವನ್ನು ನಿರ್ಧರಿಸಲಾಗುತ್ತದೆ. ಪ್ರಸ್ತುತ, ಬೆಂಗಳೂರು (+0.482) ಪಂಜಾಬ್ (+0.376) ಮತ್ತು ದೆಹಲಿ (+0.362) ಗಿಂತ ಉತ್ತಮ ನೆಟ್ ರನ್ ರೇಟ್ ಹೊಂದಿದೆ. ಆದರೆ ಮೂರು ತಂಡಗಳ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ. ಒಂದು ವೇಳೆ ಆರ್‌ಸಿಬಿ, ಹೈದರಾಬಾದ್ ಹಾಗೂ ಲಕ್ನೋ ವಿರುದ್ಧ ಸೋತರೆ ಅದರ ನೆಟ್ ರನ್ರೇಟ್ ಕುಸಿತ ಕಾಣಲಿದೆ. ಇದರಿಂದ ಆರ್‌ಸಿಬಿ ಪ್ಲೇಆಫ್ ರೇಸ್‌ನಿಂದ ಹೊರಬೀಳುವ ಸಾಧ್ಯತೆಗಳಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:42 pm, Sat, 17 May 25
