IPL 2025: ಕನ್ನಡಿಗನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್ ಕಿಂಗ್ಸ್
IPL 2025 Gujarat Titans vs Punjab Kings: ಇಂಡಿಯನ್ ಪ್ರೀಮಿಯರ್ ಲೀಗ್ನ 5ನೇ ಪಂದ್ಯದಲ್ಲಿ ರೋಚಕ ಜಯ ಸಾಧಿಸಿ ಪಂಜಾಬ್ ಕಿಂಗ್ಸ್ ತಂಡ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 243 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು 232 ರನ್ ಕಲೆಹಾಕಿತು.

IPL 2025: ಅಹದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 5ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ವಿರುದ್ಧ ಪಂಜಾಬ್ ಕಿಂಗ್ಸ್ (PBKS) ತಂಡ ಜಯಭೇರಿ ಬಾರಿಸಿದೆ. ಈ ಗೆಲುವಿನ ರೂವಾರಿ ಕನ್ನಡಿಗ ವೈಶಾಲ್ ವಿಜಯಕುಮಾರ್ ಎಂಬುದು ವಿಶೇಷ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್ಮನ್ ಗಿಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ (47) ಸ್ಪೋಟಕ ಆರಂಭ ಒದಗಿಸಿದ್ದರು.
ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಶ್ರೇಯಸ್ ಅಯ್ಯರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 42 ಎಸೆತಗಳನ್ನು ಎದುರಿಸಿದ ಅಯ್ಯರ್ 9 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 97 ರನ್ ಚಚ್ಚಿದರು.
ಹಾಗೆಯೇ ಅಂತಿಮ ಓವರ್ಗಳ ವೇಳೆ ಅಬ್ಬರಿಸಿದ ಶಶಾಂಕ್ ಸಿಂಗ್ 16 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ ಅಜೇಯ 44 ರನ್ ಬಾರಿಸಿದರು. ಈ ಸ್ಪೋಟಕ ಇನಿಂಗ್ಸ್ಗಳ ನೆರವಿನೊಂದಿಗೆ ಪಂಜಾಬ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 243 ರನ್ ಕಲೆಹಾಕಿತು.
244 ರನ್ಗಳ ಕಠಿಣ ಗುರಿ ಪಡೆದ ಗುಜರಾತ್ ಟೈಟಾನ್ಸ್ ತಂಡಕ್ಕೆ ಶುಭ್ಮನ್ ಗಿಲ್ (33) ಹಾಗೂ ಸಾಯಿ ಸುದರ್ಶನ್ (74) ಭರ್ಜರಿ ಆರಂಭ ಒದಗಿಸಿದ್ದರು. ಇದಾದ ಬಳಿಕ ಜೋಸ್ ಬಟ್ಲರ್ ಹಾಗೂ ಶೆರ್ಫೆನ್ ರುದರ್ಫೋರ್ಡ್ ಬಿರುಸಿನ ಬ್ಯಾಟಿಂಗ್ನೊಂದಿಗೆ ಪಂಜಾಬ್ ಕಿಂಗ್ಸ್ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ 14 ಓವರ್ಗಳಲ್ಲಿ ಗುಜರಾತ್ ಟೈಟಾನ್ಸ್ ತಂಡವು ಬರೋಬ್ಬರಿ 169 ರನ್ ಕಲೆಹಾಕಿತು. ಅಲ್ಲದೆ ಉಳಿದ 6 ಓವರ್ಗಳಲ್ಲಿ 75 ರನ್ ಬಾರಿಸುವ ನಿರೀಕ್ಷೆಯನ್ನು ಹುಟ್ಟುಹಾಕಿದ್ದರು.
ಕನ್ನಡಿಗನನ್ನು ಕಣಕ್ಕಿಳಿಸಿದ ಪಂಜಾಬ್ ಕಿಂಗ್ಸ್:
ಕೊನೆಯ 6 ಓವರ್ಗಳಿರುವಾಗ ಪಂಜಾಬ್ ಕಿಂಗ್ಸ್ ತಂಡವು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕರ್ನಾಟಕದ ವೇಗಿ ವೈಶಾಕ್ ವಿಜಯಕುಮಾರ್ ಅವರನ್ನು ಕಣಕ್ಕಿಳಿಸಿತು. ಅದರಂತೆ ಅದರಂತೆ 15ನೇ ಓವರ್ ಎಸೆದ ವೈಶಾಕ್ ನೀಡಿದ್ದು ಕೇವಲ 5 ರನ್ ಮಾತ್ರ.
ಇದಾದ ಬಳಿಕ ಮತ್ತೆ 17ನೇ ಓವರ್ ಎಸೆದ ವೈಶಾಕ್ ಕೇವಲ 5 ರನ್ ಮಾತ್ರ ಬಿಟ್ಟು ಕೊಟ್ಟರು. ಅಂದರೆ ನಿರ್ಣಾಯಕ ಹಂತದಲ್ಲಿ 2 ಓವರ್ಗಳಲ್ಲಿ ಕೇವಲ 10 ರನ್ ನೀಡುವ ಮೂಲಕ ಗುಜರಾತ್ ಟೈಟಾನ್ಸ್ ಪರ ವಾಲಿದ್ದ ಪಂದ್ಯವನ್ನು ಕನ್ನಡಿಗ ಮತ್ತೆ ಪಂಜಾಬ್ ಕಿಂಗ್ಸ್ ತೆಕ್ಕೆಗೆ ತೆಗೆದುಕೊಂಡರು. ಅದು ಸಹ ಅನುಭವಿ ಬ್ಯಾಟರ್ಗಳ ಜೋಸ್ ಬಟ್ಲರ್ (54) ಹಾಗೂ ಶೆರ್ಫೇನ್ ರುದರ್ಫೋರ್ಡ್ (46) ಅವರ ಅಬ್ಬರವನ್ನು ನಿಯಂತ್ರಿಸುವ ಮೂಲಕ.
ಇನ್ನು ಕೊನೆಯ ಎರಡು ಓವರ್ಗಳಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ 45 ರನ್ಗಳ ಅವಶ್ಯಕತೆಯಿತ್ತು. 19ನೇ ಓವರ್ ಎಸೆದ ವೈಶಾಕ್ 18 ರನ್ಗಳನ್ನು ನೀಡಿದರೂ ಪಂಜಾಬ್ ಕಿಂಗ್ಸ್ ತಂಡಕ್ಕೆ ಗೆಲ್ಲುವ ಅವಕಾಶವನ್ನು ಮಾಡಿಕೊಟ್ಟರು.
ಅದರಂತೆ 20ನೇ ಓವರ್ನಲ್ಲಿ 27 ರನ್ಗಳ ಗುರಿ ಪಡೆದ ಗುಜರಾತ್ ಟೈಟಾನ್ಸ್ ತಂಡವು ಅಂತಿಮವಾಗಿ 15 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಗುಜರಾತ್ ಪಡೆಯನ್ನು 20 ಓವರ್ಗಳಲ್ಲಿ 232 ರನ್ಗಳಿಗೆ ನಿಯಂತ್ರಿಸಿ ಪಂಜಾಬ್ ಕಿಂಗ್ಸ್ ತಂಡವು 11 ರನ್ಗಳ ಜಯ ಸಾಧಿಸಿತು.
ನಿರ್ಣಾಯಕ ಹಂತದಲ್ಲಿ ಡೆತ್ ಮೂರು ಓವರ್ಗಳನ್ನು ಎಸೆದ ವೈಶಾಕ್ ವಿಜಯಕುಮಾರ್ ಕೇವಲ 28 ರನ್ಗಳನ್ನು ನೀಡುವ ಮೂಲಕ ಪಂಜಾಬ್ ಕಿಂಗ್ಸ್ ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿರುವುದು ವಿಶೇಷ.
ಪಂಜಾಬ್ ಪಡೆಯ ಗೆಲುವಿನ ಸಂಭ್ರಮ:
Punjab Kings hold their nerves in the end to clinch a splendid win against Gujarat Titans ❤️
Scorecard ▶ https://t.co/PYWUriwSzY#TATAIPL | #GTvPBKS | @PunjabKingsIPL pic.twitter.com/0wy29ODStQ
— IndianPremierLeague (@IPL) March 25, 2025
ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11: ಶುಭ್ಮನ್ ಗಿಲ್ (ನಾಯಕ) , ಜೋಸ್ ಬಟ್ಲರ್ (ವಿಕೆಟ್ ಕೀಪರ್) , ಸಾಯಿ ಸುದರ್ಶನ್ , ಶಾರುಖ್ ಖಾನ್ , ರಾಹುಲ್ ತೆವಾಟಿಯಾ , ಸಾಯಿ ಕಿಶೋರ್ , ಅರ್ಷದ್ ಖಾನ್ , ರಶೀದ್ ಖಾನ್ , ಕಗಿಸೋ ರಬಾಡ , ಮೊಹಮ್ಮದ್ ಸಿರಾಜ್ , ಪ್ರಸಿದ್ಧ್ ಕೃಷ್ಣ.
ಇದನ್ನೂ ಓದಿ: David Warner: ಡೇವಿಡ್ ವಾರ್ನರ್ಗೆ ಒಲಿದ ನಾಯಕತ್ವ..!
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11: ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಫರ್) , ಪ್ರಿಯಾಂಶ್ ಆರ್ಯ , ಶ್ರೇಯಸ್ ಅಯ್ಯರ್ (ನಾಯಕ) , ಶಶಾಂಕ್ ಸಿಂಗ್ , ಮಾರ್ಕಸ್ ಸ್ಟೊಯಿನಿಸ್ , ಗ್ಲೆನ್ ಮ್ಯಾಕ್ಸ್‌ವೆಲ್ , ಸೂರ್ಯಾಂಶ್ ಶೆಡ್ಜ್ , ಅಝ್ಮತುಲ್ಲಾ ಒಮರ್ಜಾಯ್ , ಮಾರ್ಕೊ ಯಾನ್ಸೆನ್ , ಅರ್ಷ್‌ದೀಪ್ ಸಿಂಗ್ , ಯುಜ್ವೇಂದ್ರ ಚಹಲ್.
Published On - 7:05 am, Wed, 26 March 25