IPL 2026: ಬಾಂಗ್ಲಾದೇಶ್ನಲ್ಲಿ ಐಪಿಎಲ್ ಬ್ಯಾನ್: ಮುಂದೇನು?
ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದಾಳಿಯನ್ನು ಖಂಡಿಸಿ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಬಾಂಗ್ಲಾ ಆಟಗಾರರನ್ನು ಕೈ ಬಿಡುವಂತೆ ಪ್ರತಿಭಟನೆಗಳು ನಡೆದಿದ್ದವು. ಇದರ ಬೆನ್ನಲ್ಲೇ ಬಿಸಿಸಿಐ, ಕೆಕೆಆರ್ ತಂಡದಲ್ಲಿದ್ದ ಮುಸ್ತಫಿಝುರ್ ರೆಹಮಾನ್ ಅವರನ್ನು ಕೈ ಬಿಡುವಂತೆ ಸೂಚಿಸಿತ್ತು. ಇದೀಗ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಮುಸ್ತಫಿಝುರ್ ರೆಹಮಾನ್ ಅವರನ್ನು ತಂಡದಿಂದ ಕೈ ಬಿಟ್ಟಿದ್ದಾರೆ.

ಬಾಂಗ್ಲಾದೇಶ್ ಸರ್ಕಾರವು ಇಂಡಿಯನ್ ಪ್ರೀಮಿಯರ್ ಲೀಗ್ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ಪ್ರಸಾರವನ್ನು ಅನಿರ್ದಿಷ್ಟಾವಧಿಗೆ ನಿಷೇಧಿಸಿದೆ. ಐಪಿಎಲ್ನಿಂದ ಬಾಂಗ್ಲಾ ಆಟಗಾರ ಮುಸ್ತಫಿಝುರ್ ರೆಹಮಾನ್ ಅವರನ್ನು ಹೊರಗಿಟ್ಟ ಬೆನ್ನಲ್ಲೇ ಬಾಂಗ್ಲಾದೇಶ್ ತನ್ನ ದೇಶದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನ ಪ್ರಸಾರಕ್ಕೆ ನಿಷೇಧ ಹೇರಿದೆ.
ಇದಕ್ಕೂ ಮುನ್ನವೇ ಬಾಂಗ್ಲಾದೇಶ್ನ ಕ್ರೀಡಾ ಸಚಿವಾಲಯದ ಉಸ್ತುವಾರಿ ಸಚಿವ ಆಸಿಫ್ ನಜ್ರುಲ್ ಬಾಂಗ್ಲಾದಲ್ಲಿ ಐಪಿಎಲ್ ಬ್ಯಾನ್ ಮಾಡುವ ಸೂಚನೆ ನೀಡಿದ್ದರು. ಬಾಂಗ್ಲಾದೇಶ್ ಆಟಗಾರನಿಗೆ ಮಾಡಲಾದ ಅವಮಾನಕ್ಕೆ ಪ್ರತೀಕಾರವಾಗಿ ನಮ್ಮ ದೇಶದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನ ಪಂದ್ಯಗಳ ಪ್ರಸಾರವನ್ನು ನಿಲ್ಲಿಸುವಂತೆ ನಾನು ಮಾಹಿತಿ ಮತ್ತು ಪ್ರಸಾರ ಸಚಿವರನ್ನು ವಿನಂತಿಸಿದ್ದೇನೆ ಎಂದು ತಿಳಿಸಿದ್ದರು.
ಅಲ್ಲದೆ ಯಾವುದೇ ಸಂದರ್ಭದಲ್ಲೂ ಬಾಂಗ್ಲಾದೇಶ್, ಬಾಂಗ್ಲಾದೇಶ್ ಕ್ರಿಕೆಟ್ ಅಥವಾ ಬಾಂಗ್ಲಾದೇಶ ಕ್ರಿಕೆಟಿಗರ ಅವಮಾನವನ್ನು ನಾವು ಸಹಿಸುವುದಿಲ್ಲ. ಗುಲಾಮಗಿರಿಯ ದಿನಗಳು ಮುಗಿದಿವೆ. ಹೀಗಾಗಿ ನಮ್ಮ ದೇಶದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನ ಪ್ರಸಾರ ನಿಷೇಧಿಸಲು ಮನವಿ ಸಲ್ಲಿಸಿದ್ದೇನೆ ಎಂದು ನಜ್ರುಲ್ ಬಹಿರಂಗ ಹೇಳಿಕೆ ನೀಡಿದ್ದರು.
ಈ ಹೇಳಿಕೆ ಬೆನ್ನಲ್ಲೇ ಇದೀಗ ಬಾಂಗ್ಲಾದೇಶ್ನಲ್ಲಿ ಐಪಿಎಲ್ ಪ್ರಸಾರವನ್ನು ನಿಷೇಧಿಸಲಾಗಿದೆ. ಈಗಾಗಲೇ ಐಪಿಎಲ್ ಪಂದ್ಯಗಳಿಗೆ ಪಾಕಿಸ್ತಾನ್ ಸರ್ಕಾರ ನಿಷೇಧ ಹೇರಿದ್ದಾರೆ. ಇತ್ತ ಬಾಂಗ್ಲಾದೇಶ್ ಕೂಡ ಪಾಕ್ ಮಾದರಿಯಲ್ಲೇ ಇಂಡಿಯನ್ ಪ್ರೀಮಿಯರ್ ಲೀಗ್ ಲೈವ್ ಪ್ರಸಾರಕ್ಕೆ ಬ್ರೇಕ್ ಹಾಕಿದ್ದಾರೆ.
ಮುಂದೇನು?
ಭಾರತದಲ್ಲಿ ನಡೆಯಲಿರುವ ಬಾಂಗ್ಲಾದೇಶ್ ತಂಡದ ಟಿ20 ವಿಶ್ವಕಪ್ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಈಗಾಗಲೇ ಮನವಿ ಸಲ್ಲಿಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಬಾಂಗ್ಲಾ ಆಟಗಾರ ಮುಸ್ತಫಿಝುರ್ ರೆಹಮಾನ್ ಅವರನ್ನು ಹೊರಗಿಟ್ಟ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು, ಹೀಗಾಗಿ ಬಾಂಗ್ಲಾದೇಶ್ ತಂಡದ ಟಿ20 ವಿಶ್ವಕಪ್ ಪಂದ್ಯಗಳು ಭಾರತದಲ್ಲಿ ನಡೆಯುವುದು ಅನುಮಾನ.
ಈ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಪ್ರತಿಕ್ರಿಯಿಸಿರುವ ಬಾಂಗ್ಲಾದೇಶದ ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್, ಬಾಂಗ್ಲಾ ತಂಡದ ಪಂದ್ಯಗಳಿಗೆ ಪರ್ಯಾಯ ಸ್ಥಳವಾಗಿ ಶ್ರೀಲಂಕಾವನ್ನು ಪ್ರಸ್ತಾಪಿಸಲು ಮಧ್ಯಂತರ ಸರ್ಕಾರವು ಬಿಸಿಬಿಗೆ ನಿರ್ದೇಶನ ನೀಡಿದೆ ಎಂದು ತಿಳಿಸಿದ್ದಾರೆ.
ಬಾಂಗ್ಲಾದೇಶ್ ಕ್ರಿಕೆಟಿಗರ ಅವಮಾನವನ್ನು ನಾವು ಸಹಿಸುವುದಿಲ್ಲ. ತೀವ್ರವಾದಿ ಕೋಮುವಾದಿ ಶಕ್ತಿಗಳಿಗೆ ಮಣಿದು, ಭಾರತೀಯ ಕ್ರಿಕೆಟ್ ಮಂಡಳಿಯು ಬಾಂಗ್ಲಾದೇಶದ ಕ್ರಿಕೆಟಿಗ ಮುಸ್ತಾಫಿಝುರ್ ರೆಹಮಾನ್ ಅವರನ್ನು ತಂಡದಿಂದ ಕೈ ಬಿಟ್ಟಿದ್ದಾರೆ.
ಬಾಂಗ್ಲಾದೇಶದ ಕ್ರಿಕೆಟಿಗನೊಬ್ಬನಿಗೆ ಭಾರತದಲ್ಲಿ ಆಡಲು ಸಾಧ್ಯವಾಗದಿದ್ದರೆ, ಬಾಂಗ್ಲಾದೇಶ್ ತನ್ನ ಇಡೀ ಕ್ರಿಕೆಟ್ ತಂಡವು ವಿಶ್ವಕಪ್ ಆಡಲು ಭಾರತಕ್ಕೆ ಪ್ರಯಾಣಿಸುವುದು ಸುರಕ್ಷಿತವೆಂದು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ ಟಿ20 ವಿಶ್ವಕಪ್ನ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಬಿಸಿಬಿ ಐಸಿಸಿಗೆ ಪತ್ರ ಬರೆದಿದೆ.
ಇದನ್ನೂ ಓದಿ: ಅಬ್ಬರ ಸಿಡಿಲಬ್ಬರ… ಟ್ರಾವಿಸ್ ಹೆಡ್ ಬ್ಯಾಟ್ನಿಂದ ದಾಖಲೆಯ ಸೆಂಚುರಿ
ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ನ ಈ ಮನವಿಯನ್ನು ಐಸಿಸಿ ಪರಿಗಣಿಸುವ ಸಾಧ್ಯತೆಯಿದೆ. ಅದರಂತೆ ಮುಂಬರುವ ಟಿ20 ವಿಶ್ವಕಪ್ನ ಬಾಂಗ್ಲಾದೇಶದ ಪಂದ್ಯಗಳಿಗೆ ಶ್ರೀಲಂಕಾ ಆತಿಥ್ಯವಹಿಸುವ ಸಾಧ್ಯತೆ ಹೆಚ್ಚಿದೆ.
