LSG vs DC: ಡೆಲ್ಲಿಗೆ ಗೆಲುವು ತಂದ ರಿಜ್ವಿ- ಸ್ಟಬ್ಸ್; ತವರಿನಲ್ಲಿ ಸೋತ ಲಕ್ನೋ

IPL 2026: ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ ಐದನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಲಕ್ನೋ ಸೂಪರ್​ಜೈಂಟ್ಸ್ ಅನ್ನು ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ಲಕ್ನೋ 141 ರನ್​ಗಳಿಗೆ ಆಲೌಟ್ ಆಯಿತು. ಸಮೀರ್ ರಿಜ್ವಿ ಅವರ ಅರ್ಧಶತಕ ಹಾಗೂ ಟ್ರಿಸ್ಟನ್ ಸ್ಟಬ್ಸ್ ಅವರ ನಿರ್ಣಾಯಕ ಇನ್ನಿಂಗ್ಸ್‌ನಿಂದ ಡೆಲ್ಲಿ ತಂಡ 17.1 ಓವರ್‌ಗಳಲ್ಲಿ ಗುರಿ ತಲುಪಿ ಗೆದ್ದಿತು. ಈ ಸೋಲಿನೊಂದಿಗೆ, ಲಕ್ನೋ ತಂಡವು ಈ ಆವೃತ್ತಿಯಲ್ಲಿ ತವರಿನಲ್ಲಿ ಸೋತ ಮೊದಲ ತಂಡ ಎನಿಸಿಕೊಂಡಿತು.

LSG vs DC: ಡೆಲ್ಲಿಗೆ ಗೆಲುವು ತಂದ ರಿಜ್ವಿ- ಸ್ಟಬ್ಸ್; ತವರಿನಲ್ಲಿ ಸೋತ ಲಕ್ನೋ
Delhi Capitals

Updated on: Apr 01, 2026 | 11:17 PM

ಲಕ್ನೋದ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 (IPL 2026) ರ ಐದನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್​ಜೈಂಟ್ಸ್ (DC vs LSG) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ತಂಡ, ಡೆಲ್ಲಿ ಬೌಲಿಂಗ್ ದಾಳಿಗೆ ನಲುಗಿ ಪೂರ್ಣ 20 ಓವರ್​ಗಳನ್ನು ಆಡಲಾಗದೆ 18.4 ಓವರ್​ಗಳಲ್ಲಿ ಕೇವಲ 141 ರನ್​ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಮೀರ್ ರಿಜ್ವಿ ಅವರ ಅರ್ಧಶತಕ ಹಾಗೂ ಟ್ರಿಸ್ಟನ್ ಸ್ಟಬ್ಸ್ ಅವರ ಸಮಯೋಜಿತ ಇನ್ನಿಂಗ್ಸ್ ನೆರವಿನಿಂದ 17.1 ಓವರ್​ಗಲ್ಲಿ ಗೆಲುವಿನ ದಡ ಮುಟ್ಟಿತು. ಈ ಸೋಲಿನೊಂದಿಗೆ ಲಕ್ನೋ ತಂಡ ಈ ಆವೃತ್ತಿಯಲ್ಲಿ ತವರಿನಲ್ಲಿ ಸೋತ ಮೊದಲ ತಂಡ ಎನಿಸಿಕೊಂಡಿತು.

ಲಕ್ನೋ ಬ್ಯಾಟಿಂಗ್ ವೈಫಲ್ಯ

ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಇದು ಸರಿಯಾದ ನಿರ್ಧಾರವೆಂದು ಆರಂಭದಲ್ಲೇ ಸಾಬೀತಾಯಿತು. ಡೆಲ್ಲಿ ದಾಳಿಗೆ ತತ್ತರಿಸಿದ ಲಕ್ನೋ ಸೂಪರ್ ಜೈಂಟ್ಸ್‌ 18.4 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 141 ರನ್‌ ಕಲೆಹಾಕಿತು. ತಂಡದ ಪರ ಅಬ್ದುಲ್ ಸಮದ್ ಅತ್ಯಧಿಕ 36 ರನ್ ಬಾರಿಸಿದರೆ, ಆರಂಭಿಕ ಮಿಚೆಲ್ ಮಾರ್ಷ್ 35 ರನ್ ಗಳಿಸಿದರು. ಈ ಇಬ್ಬರನ್ನು ಹೊರತುಪಡಿಸಿ ಯಾವುದೇ ಬ್ಯಾಟ್ಸ್‌ಮನ್ ಗಮನಾರ್ಹ ಕೊಡುಗೆ ನೀಡಲಿಲ್ಲ. ಇತ್ತ ಡೆಲ್ಲಿ ಪರ ಲುಂಗಿ ಎನ್‌ಗಿಡಿ ಮತ್ತು ಟಿ ನಟರಾಜನ್ ತಲಾ 3 ವಿಕೆಟ್‌ಗಳನ್ನು ಪಡೆದರೆ, ಕುಲ್ದೀಪ್ ಯಾದವ್ ಎರಡು ವಿಕೆಟ್‌ಗಳನ್ನು ಪಡೆದು ಲಕ್ನೋ ದೊಡ್ಡ ಮೊತ್ತವನ್ನು ದಾಖಲಿಸುವುದನ್ನು ತಡೆದರು. ನಾಯಕ ಅಕ್ಷರ್ ಪಟೇಲ್ ಕೂಡ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಸಮೀರ್ ರಿಜ್ವಿ ಅಜೇಯ ಅರ್ಧಶತಕ

ರನ್ ಚೇಸಿಂಗ್​ನಲ್ಲಿ ಡೆಲ್ಲಿ ತಂಡ ಕೂಡ ಕಳಪೆ ಆರಂಭವನ್ನೇ ಪಡೆಯಿತು. ಇನ್ನಿಂಗ್ಸ್​ನ ಮೊದಲ ಎಸೆತದಲ್ಲೇ ಮೊಹಮ್ಮದ್ ಶಮಿ, ಕೆಎಲ್ ರಾಹುಲ್ ಅವರನ್ನು ಔಟ್ ಮಾಡಿದರು. ನಂತರ ನಿತೀಶ್ ರಾಣಾ (15), ಪಾಥುಮ್ ನಿಸ್ಸಂಕ (1), ಮತ್ತು ಅಕ್ಷರ್ ಪಟೇಲ್ (0) ಬೇಗನೇ ಔಟ್ ಆದರು. ಹೀಗಾಗಿ ಡೆಲ್ಲಿ ತಂಡ ಕೇವಲ 4.3 ಓವರ್ ಗಳಲ್ಲಿ 26 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಆದರೆ ಈ ಹಂತದಲ್ಲಿ ಬಂದ ಯುವ ಬ್ಯಾಟ್ಸ್​ಮನ್ ಸಮೀರ್ ರಿಜ್ವಿ ಲಕ್ನೋ ತಂಡಕ್ಕೆ ಸವಾಲಾದರು.

LSG vs DC IPL 2026 Highlights: ಲಕ್ನೋ ವಿರುದ್ಧ ಡೆಲ್ಲಿಗೆ 6 ವಿಕೆಟ್ ಜಯ

ಇಂಪ್ಯಾಕ್ಟ್ ಪ್ಲೇಯರ್ ಆಗಿ ಬ್ಯಾಟಿಂಗ್​ಗೆ ಬಂದ ರಿಜ್ವಿ, 47 ಎಸೆತಗಳಲ್ಲಿ ಐದು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳ ಸಹಿತ ಅಜೇಯ 70 ರನ್ ಬಾರಿಸಿದರು. ಮಾತ್ರವಲ್ಲದೆ ರಿಜ್ವಿ, ಐದನೇ ವಿಕೆಟ್‌ಗೆ ಟ್ರಿಸ್ಟಾನ್ ಸ್ಟಬ್ಸ್ (39*) ಅವರೊಂದಿಗೆ 119 ರನ್‌ಗಳ ಅದ್ಭುತ ಶತಕದ ಜೊತೆಯಾಟವನ್ನು ಹಂಚಿಕೊಂಡರು, ಇದರಲ್ಲಿ ರಿಜ್ವಿ ಪ್ರಮುಖ ಕೊಡುಗೆ ನೀಡಿದರು. ಈ ಪಾಲುದಾರಿಕೆಯು ದೆಹಲಿ ತಂಡವು 17.1 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳ ನಷ್ಟಕ್ಕೆ ಗುರಿ ತಲುಪಲು ಸಹಾಯ ಮಾಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:03 pm, Wed, 1 April 26

Follow Us