AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಲ್ ನಿಯಮ ಬದಲಿಸಿ: ಬಿಸಿಸಿಐಗೆ ಪತ್ರ ಬರೆದ ಸುನಿಲ್ ಗವಾಸ್ಕರ್

IPL 2026: ಐಪಿಎಲ್ ಪಂದ್ಯಗಳು ದಿನದಿಂದ ದಿನಕ್ಕೆ ಅವಧಿಗಿಂತಲೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದು ಕ್ರೀಡಾ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಆಟದ ವೇಗ ಕುಂಠಿತವಾಗುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್, 'ಆಟಗಾರರು ನೀಡಲಾದ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ' ಎಂದು ಕಿಡಿಕಾರಿದ್ದಾರೆ. 

ಐಪಿಎಲ್ ನಿಯಮ ಬದಲಿಸಿ: ಬಿಸಿಸಿಐಗೆ ಪತ್ರ ಬರೆದ ಸುನಿಲ್ ಗವಾಸ್ಕರ್
Sunil Gavaskar
ಝಾಹಿರ್ ಯೂಸುಫ್
|

Updated on: Apr 29, 2026 | 9:53 AM

Share

ಐಪಿಎಲ್ ಪಂದ್ಯಗಳು ನಿಗದಿತ ಸಮಯ ಮೀರಿ ಅತಿಯಾಗಿ ವಿಳಂಬವಾಗುತ್ತಿರುವುದಕ್ಕೆ ಭಾರತದ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಟಗಾರರು ಮತ್ತು ತಂಡಗಳು ನೀಡಲಾಗುವ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದು ಕಿಡಿಕಾರಿರುವ ಅವರು, 2026ರ ಆವೃತ್ತಿಯಿಂದ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ವಿಶೇಷ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ನಾಲ್ಕು ಪ್ರಮುಖ ವಿಷಯಗಳನ್ನು ಉಲ್ಲೇಖಿಸಿದ್ದು, ಈ ನಿಯಮಗಳನ್ನು ಜಾರಿಗೊಳಿಸುವಂತೆ ಆಗ್ರಹಿಸಿದ್ದಾರೆ. ಸುನಿಲ್ ಗವಾಸ್ಕರ್ ನೀಡಿರುವ ಪ್ರಮುಖ ಸಲಹೆಗಳು ಈ ಕೆಳಗಿನಂತಿವೆ…

ಮೈದಾನಕ್ಕೆ ಬರುವವರ ಸಂಖ್ಯೆ ಇಳಿಕೆಯಾಗಲಿ: ತಂತ್ರಗಾರಿಕೆಯ ವಿರಾಮದ (Strategic Timeout) ಸಮಯದಲ್ಲಿ ಕೋಚಿಂಗ್ ಸ್ಟಾಫ್ ಮತ್ತು ಮೀಸಲು ಆಟಗಾರರು ತಂಡೋಪತಂಡವಾಗಿ ಮೈದಾನಕ್ಕೆ ನುಗ್ಗುವುದನ್ನು ಗವಾಸ್ಕರ್ ಖಂಡಿಸಿದ್ದಾರೆ. ಕೇವಲ ಇಬ್ಬರು ಮೀಸಲು ಆಟಗಾರರು (ಪಾನೀಯ ನೀಡಲು) ಮತ್ತು ಇಬ್ಬರು ತರಬೇತುದಾರರಿಗೆ ಮಾತ್ರ ಮೈದಾನ ಪ್ರವೇಶಿಸಲು ಅನುಮತಿ ನೀಡಬೇಕು ಎಂದು ಗವಾಸ್ಕರ್ ಬಿಸಿಸಿಐಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಬ್ಯಾಟರ್‌ಗಳ ಸಮಯ ಮಿತಿ ಕಡಿತ: ಪ್ರಸ್ತುತ ಒಬ್ಬ ಬ್ಯಾಟರ್ ಔಟಾದ ನಂತರ ಮತ್ತೊಬ್ಬ ಬ್ಯಾಟರ್ ಕ್ರೀಸ್‌ಗೆ ಬರಲು ಎರಡು ನಿಮಿಷಗಳ ಕಾಲಾವಕಾಶವಿದೆ. ಆದರೆ, ಬ್ಯಾಟರ್‌ಗಳು ಈಗಾಗಲೇ ಡಗೌಟ್‌ನಲ್ಲಿ ಸಿದ್ಧವಾಗಿ ಕುಳಿತಿರುವುದರಿಂದ, ಈ ಸಮಯವನ್ನು ಒಂದು ನಿಮಿಷಕ್ಕೆ ಇಳಿಸಬೇಕು ಎಂದು ಗವಾಸ್ಕರ್ ಸಲಹೆ ನೀಡಿದ್ದಾರೆ.

ದಂಡದ ಬದಲಿಗೆ ‘ಪೆನಾಲ್ಟಿ ರನ್’ ಶಿಕ್ಷೆ: ಸ್ಲೋ ಓವರ್ ರೇಟ್ ಅಥವಾ ಪಂದ್ಯ ವಿಳಂಬವಾದರೆ ಪ್ರಸ್ತುತ ಪಂದ್ಯದ ಶುಲ್ಕದಲ್ಲಿ ದಂಡ ವಿಧಿಸಲಾಗುತ್ತದೆ. ಆದರೆ ಫ್ರಾಂಚೈಸಿಗಳೇ ಈ ದಂಡವನ್ನು ಪಾವತಿಸುವುದರಿಂದ ಆಟಗಾರರ ಮೇಲೆ ಇದು ಯಾವುದೇ ಪರಿಣಾಮ ಬೀರುತ್ತಿಲ್ಲ. ಇದರ ಬದಲಿಗೆ ಪಂದ್ಯದ ಸಮಯದಲ್ಲಿ ಪೆನಾಲ್ಟಿ ರನ್ ನೀಡುವುದು ಅಥವಾ ಅಂಕ ಪಟ್ಟಿಯಲ್ಲಿ ಅಂಕಗಳನ್ನು ಕಡಿತಗೊಳಿಸುವ ನಿಯಮ ತಂದರೆ ಮಾತ್ರ ಆಟಗಾರರು ಮತ್ತು ತಂಡಗಳು ಗಂಭೀರವಾಗಿ ವರ್ತಿಸುತ್ತಾರೆ ಎಂದು ಗವಾಸ್ಕರ್ ತಿಳಿಸಿದ್ದಾರೆ.

ಮೈದಾನದ ಪವಿತ್ರತೆ ಕಾಪಾಡಿ: ಲೆಜೆಂಡರಿ ಕಾಮೆಂಟೇಟರ್ ರಿಚಿ ಬೆನೊ ಅವರ ಮಾತನ್ನು ನೆನಪಿಸಿರುವ ಸುನಿಲ್ ಗವಾಸ್ಕರ್, “ಕ್ರಿಕೆಟ್ ಮೈದಾನವು ಅತ್ಯಂತ ಪವಿತ್ರವಾದ ಸ್ಥಳ. ಅಲ್ಲಿ ಆಡುವವರು ಮತ್ತು ಅಂಪೈರ್‌ಗಳನ್ನು ಹೊರತುಪಡಿಸಿ ಅನಗತ್ಯವಾಗಿ ಉಳಿದವರು ಪ್ರವೇಶಿಸಬಾರದು”. ಹೀಗಾಗಿ ಅನಗತ್ಯವಾಗಿ ಆಟಗಾರರು ಹಾಗೂ ಇತರೆ ಸಿಬ್ಬಂದಿಗಳು ಮೈದಾನ ಪ್ರವೇಶಿಸುವುದಕ್ಕೆ ಕಡಿವಾಣ ಹಾಕಬೇಕೆಂದು ಸುನಿಲ್ ಗವಾಸ್ಕರ್ ಆಗ್ರಹಿಸಿದ್ದಾರೆ.

ಈ ಸಲಹೆಗಳಿಗೆ ಕಾರಣವೇನು?

ಇತ್ತೀಚಿಗೆ ನಡೆದ ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ನಡುವಿನ ಪಂದ್ಯವು ಯಾವುದೇ ಸೂಪರ್ ಓವರ್ ಇಲ್ಲದಿದ್ದರೂ 4 ಗಂಟೆ 22 ನಿಮಿಷಗಳ ಕಾಲ ನಡೆದಿತ್ತು. ಡಿಆರ್‌ಎಸ್ ಮೇಲ್ಮನವಿಗಳು, ಓವರ್‌ಗಳ ನಡುವಿನ ಚರ್ಚೆಗಳು ಮತ್ತು ಪದೇ ಪದೇ ಮೈದಾನಕ್ಕೆ ಬರುವ ಮೀಸಲು ಆಟಗಾರರು ಪಂದ್ಯದ ಅವಧಿಯನ್ನು ಹೆಚ್ಚಿಸುತ್ತಿದ್ದಾರೆ ಎಂಬ ಆರೋಪ ಈ ಪಂದ್ಯದ ಬಳಿಕ ಕೇಳಿ ಬಂದಿತ್ತು. ಇದಾದ ಬಳಿಕ ಕೂಡ ಕೆಲ ಪಂದ್ಯಗಳು ನಿಗದಿತ ಸಮಯ ಮೀರಿತ್ತು. ಹೀಗಾಗಿಯೇ ಸುನಿಲ್ ಗವಾಸ್ಕರ್ ಐಪಿಎಲ್​ನಲ್ಲಿ ಕಟ್ಟು ನಿಟ್ಟಿನ ನಿಯಮ ಜಾರಿಗೊಳಿಸುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ: ಸೋಲಿನ ನಡುವೆಯೂ RCBಯ ಕಾಲೆಳೆದ ಡೆಲ್ಲಿ ಕ್ಯಾಪಿಟಲ್ಸ್ ಫ್ಯಾನ್ಸ್​!

ಬಿಸಿಸಿಐ ಕ್ರಮ ಕೈಗೊಳ್ಳುವುದೇ?

ಈಗಾಗಲೇ ಬಿಸಿಸಿಐ ಕೆಲವು ಶಿಸ್ತಿನ ಕ್ರಮಗಳನ್ನು ಕೈಗೊಂಡಿದೆಯಾದರೂ, ಸುನಿಲ್ ಗವಾಸ್ಕರ್ ಸೂಚಿಸಿರುವಂತೆ ಪೆನಾಲ್ಟಿ ರನ್‌ಗಳಂತಹ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಅಲ್ಲದೆ ಪಂದ್ಯಗಳು ರಾತ್ರಿ 11:30 ಅಥವಾ 12 ಗಂಟೆಯವರೆಗೆ ಸಾಗುವುದರಿಂದ ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳೂ ಕೂಡ ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನೂ ಕೂಡ ಬಿಸಿಸಿಐ ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇದೆ.

Follow Us