
2026 ರ ಐಪಿಎಲ್ನ (IPL 2026) ಎರಡು ಬಲಿಷ್ಠ ತಂಡಗಳಾದ ಆರ್ಸಿಬಿ ಹಾಗೂ ಪಂಜಾಬ್ ಕಿಂಗ್ಸ್ (RCB vs PBKS) ಹೈವೋಲ್ಟೇಜ್ ಕದನದಲ್ಲಿ ಇಂದು ಮುಖಾಮುಖಿಯಾಗಿದ್ದವು. ಈ ಪಂದ್ಯ ಎರಡೂ ತಂಡಗಳಿಗೆ ಸೇಡಿನ ಸಮರವಾಗಿತ್ತು. ಒಂದೆಡೆ ಪಂಜಾಬ್ ಕಳೆದ ಐಪಿಎಲ್ ಫೈನಲ್ನ ಸೋಲಿಗೆ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದ್ದರೆ, ಇತ್ತ ಆರ್ಸಿಬಿ ಸೋಶಿಯಲ್ ಮೀಡಿಯಾದಲ್ಲಿ ಪಂಜಾಬ್ ಮಾಡಿದ್ದ ಅವಮಾನಕ್ಕೆ ಸೇಡು ತೀರಿಸಿಕೊಳ್ಳುವ ಗುರಿಯೊಂದಿಗೆ ಕಣಕ್ಕಿಳಿದಿತ್ತು. ಅದರಂತೆ ಈ ಸೇಡಿನ ಸಮರದಲ್ಲಿ ಮೇಲುಗೈ ಸಾಧಿಸಿದ ಆರ್ಸಿಬಿ, ಪಂಜಾಬ್ ತಂಡವನ್ನು ಸರಿಯಾಗಿಯೇ ಟ್ರೋಲ್ ಮಾಡಿದೆ.
ವಾಸ್ತವವಾಗಿ ಕಳೆದ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ವಿರುದ್ಧ ಸೋತಿದ್ದ ಪಂಜಾಬ್ ಈ ಬಾರಿಯಾದರೂ ಟ್ರೋಫಿ ಗೆಲ್ಲಲಿ ಎಂಬುದು ಎಲ್ಲರ ಆಶಯವಾಗಿತ್ತು. ಅದರಂತೆ ಪಂಜಾಬ್ ಕೂಡ ಮೊದಲ 6 ಪಂದ್ಯಗಳಲ್ಲಿ ಚಾಂಪಿಯನ್ ಪ್ರದರ್ಶನ ನೀಡಿತ್ತು. ಹೀಗಾಗಿ ಪಂಜಾಬ್ ತಂಡಕ್ಕೆ ಆರ್ಸಿಬಿ ಅಭಿಮಾನಿಗಳಿಂದಲೂ ಬೇಷರತ್ ಬೆಂಬಲ ಸಿಕ್ಕಿತ್ತು. ಆರ್ಸಿಬಿ ತಂಡವನ್ನು ಬೆಂಬಲಿಸಿದ ರೀತಿಯಲ್ಲೇ ಪಂಜಾಬ್ ತಂಡವನ್ನು ಆರ್ಸಿಬಿ ಅಭಿಮಾನಿಗಳು ಬೆಂಬಲಿಸಿದ್ದರು. ಆದರೆ ಗೆಲುವಿನ ಅಮಲಿನಲ್ಲಿ ತೇಲುತ್ತಿದ್ದ ಪಂಜಾಬ್, ಸೋಶಿಯಲ್ ಮೀಡಿಯಾದಲ್ಲಿ ಅನಗತ್ಯ ಪೋಸ್ಟ್ವೊಂದನ್ನು ಹಂಚಿಕೊಂಡು ಆರ್ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಅಂದಿನಿಂದ ಆರ್ಸಿಬಿ ಅಭಿಮಾನಿಗಳು ಪಂಜಾಬ್ ತಂಡವನ್ನು ಕಂಡರೆ ಉರಿದು ಬೀಳುತ್ತಿದ್ದರು.
ಆರ್ಸಿಬಿ ಅಭಿಮಾನಿಗಳು ಈ ಮಟ್ಟಕ್ಕೆ ಕೋಪಗೊಳ್ಳಲು ಕಾರಣವೂ ಇತ್ತು. ಏಪ್ರಿಲ್ 28 ರಂದು ನಡೆದಿದ್ದ ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಮೊದಲ 4.3 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 49 ರನ್ ಕಲೆಹಾಕಿತ್ತು. ಈ ಸ್ಕೋರ್ ಕಾರ್ಡ್ ಅನ್ನು ಪಂಜಾಬ್ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿತ್ತು. ಈ ಪೋಸ್ಟ್ ಮೂಲಕ ಪಂಜಾಬ್, ಆರ್ಸಿಬಿ ತಂಡವನ್ನು ಗೇಲಿ ಮಾಡುವ ಕೆಲಸ ಮಾಡಿತ್ತು.
49/1 (4.3 overs)
— Punjab Kings (@PunjabKingsIPL) April 28, 2026
ವಾಸ್ತವವಾಗಿ ಐಪಿಎಲ್‌ನಲ್ಲಿ ಆರ್ಸಿಬಿ ಅತ್ಯಂತ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ. 2017 ರಲ್ಲಿ ನಡೆದಿದ್ದ ಐಪಿಎಲ್ ಪಂದ್ಯದಲ್ಲಿ ಕೆಕೆಆರ್ ನೀಡಿದ್ದ 137 ರನ್ಗಳ ಗುರಿ ಬೆನ್ನಟ್ಟಿದ್ದ ಆರ್ಸಿಬಿ 49 ರನ್ಗಳಿಗೆ ಆಲೌಟ್ ಆಗಿ ಅವಮಾನಕರ ಸೋಲಿಗೆ ಕೊರಳೊಡ್ಡಿತ್ತು. ಅಂದಿನ ಕಹಿ ಘಟನೆಯನ್ನು ಆರ್ಸಿಬಿಗೆ ಮತ್ತೆ ನೆನೆಪಿಸುವ ಕೆಲಸವನ್ನು ಪಂಜಾಬ್ ಮಾಡಿತ್ತು. ಪಂಜಾಬ್ ಮಾಡಿದ್ದ ಪೋಸ್ಟ್ ಆರ್ಸಿಬಿ ಫ್ರಾಂಚೈಸಿ ಹಾಗೂ ಅದರ ಅಭಿಮಾನಿಗಳನ್ನು ಕೆರಳಿಸಿತ್ತು.
49/3 (6 overs) pic.twitter.com/OfSwgILJIm
— Royal Challengers Bengaluru (@RCBTweets) May 17, 2026
RCB win by 2️⃣3️⃣ runs.
It’s okay guys…. But don’t do it again! pic.twitter.com/VDOY5oWfqA
— Royal Challengers Bengaluru (@RCBTweets) May 17, 2026
ಇಂದು ನಡೆದ ಪಂದ್ಯದಲ್ಲಿ ಪಂಜಾಬ್ ತಂಡವನ್ನು 23 ರನ್ಗಳಿಂದ ಸೋಲಿಸಿದ ಆರ್ಸಿಬಿ ಮೊಟ್ಟ ಮೊದಲ ತಂಡವಾಗಿ ಪ್ಲೇಆಫ್‌ಗೆ ಅರ್ಹತೆ ಪಡೆದಿದೆ. ಇತ್ತ ಆರ್ಸಿಬಿ ವಿರುದ್ಧ ಸೋತ ಪಂಜಾಬ್ ಪ್ಲೇಆಫ್ ರೇಸ್ನಿಂದ ಹೊರಬೀಳುವ ಆತಂಕದಲ್ಲಿದೆ. ಇದೀಗ ಏಪ್ರಿಲ್ 28 ರಂದು ಪಂಜಾಬ್ ಮಾಡಿದ್ದ ಅವಮಾನಕರ ಪೋಸ್ಟ್‌ಗೆ ತಿರುಗೇಟು ನೀಡಿರುವ ಆರ್ಸಿಬಿ, ತನ್ನ ಎಕ್ಸ್ ಖಾತೆಯಲ್ಲಿ ಎರಡು ಪೋಸ್ಟ್ಗಳನ್ನು ಹಂಚಿಕೊಂಡಿದೆ. ಮೊದಲನೆಯ ಪೋಸ್ಟ್ನಲ್ಲಿ ‘6 ಓವರ್ಗಳಲ್ಲಿ 49 ರನ್ ನೀಡಿ 3 ವಿಕೆಟ್ ಕಿತ್ತಿದ್ದೇವೆ’ ಎಂಬುದನ್ನು ತೊರಿಸಿಲಾಗಿದೆ. ಹಾಗೆಯೇ ಎರಡನೇ ಪೋಸ್ಟ್ನಲ್ಲಿ ‘ಪಂಜಾಬ್ ವಿರುದ್ಧ 23 ರನ್ಗಳಿಂದ ಗೆದ್ದಿದ್ದೇವೆ. ಆಗಿದ್ದು ಆಯ್ತು, ಮತ್ತೊಮ್ಮೆ ಹೀಗೆ ಮಾಡಬೇಡಿ’ ಎಂದು ಬರೆದು ಪೋಸ್ಟ್ ಮಾಡುವ ಮೂಲಕ ಪಂಜಾಬ್ ತಂಡ ಮುಟ್ಟಿ ನೋಡಿಕೊಳ್ಳುವಂತ ಉತ್ತರ ನೀಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:43 pm, Sun, 17 May 26