ಕೆರಿಬಿಯನ್ ತೂಫಾನ್… ಒಂದೇ ಓವರ್ನಲ್ಲಿ 31 ರನ್ಗಳು
England vs West Indies: ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು ಇಂಗ್ಲೆಂಡ್ 2-0 ಅಂತರದಿಂದ ವಶಪಡಿಸಿಕೊಂಡಿದೆ. ಮೊದಲ ಟಿ20 ಪಂದ್ಯದಲ್ಲಿ 21 ರನ್ಗಳ ಜಯ ಸಾಧಿಸಿದ್ಧ ಇಂಗ್ಲೆಂಡ್, ಇದೀಗ ದ್ವಿತೀಯ ಪಂದ್ಯದಲ್ಲಿ 4 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಇನ್ನು ಮೂರನೇ ಪಂದ್ಯವು ಜೂನ್ 10 ರಂದು ನಡೆಯಲಿದೆ.

ಬ್ರಿಸ್ಟೋಲ್ನ ಕೌಂಟಿ ಗ್ರೌಂಡ್ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಜಯಭೇರಿ ಬಾರಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ವಿಂಡೀಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ದಾಂಡಿಗ ಎವಿನ್ ಲೂಯಿಸ್ (0) ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದ್ದರು.
ಈ ವೇಳೆ ಜೊತೆಗೂಡಿದ ಶಾಯ್ ಹೋಪ್ (49) ಹಾಗೂ ಚಾನ್ಸನ್ ಚಾರ್ಲ್ಸ್ (47) 90 ರನ್ಗಳ ಜೊತೆಯಾಟವಾಡಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ರೋವ್ಮನ್ ಪೊವೆಲ್ 15 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 34 ರನ್ ಚಚ್ಚದರು. ಇದಾಗ್ಯೂ 18 ಓವರ್ಗಳ ಮುಕ್ತಾಯದ ವೇಳೆಗೆ ತಂಡದ ಮೊತ್ತ 150ರ ಗಡಿದಾಟಿರಲಿಲ್ಲ.
ಕೆರಿಬಿಯನ್ ತೂಫಾನ್:
ಅಂತಿಮ ಎರಡು ಓವರ್ಗಳ ವೇಳೆ ಕ್ರೀಸ್ಗಿಳಿದ ಜೇಸನ್ ಹೋಲ್ಡರ್ ಹಾಗೂ ರೊಮಾರಿಯೊ ಶೆಫರ್ಡ್ ತೂಫಾನ್ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಲ್ಲೂ ಆದಿಲ್ ರಶೀದ್ ಎಸೆದ 19ನೇ ಓವರ್ನಲ್ಲಿ ಬರೋಬ್ಬರಿ 5 ಸಿಕ್ಸ್ ಸಿಡಿಸಿ ಅಬ್ಬರಿಸಿದರು. ಈ ಓವರ್ನ ಮೊದಲ ಮೂರು ಎಸೆತದಲ್ಲಿ ಜೇಸನ್ ಹೋಲ್ಡರ್ ಸಿಕ್ಸರ್ ಸಿಡಿಸಿದರು.
ಆ ಬಳಿಕ 4ನೇ ಎಸೆತದಲ್ಲಿ ಒಂದು ರನ್ ಓಡಿದರು. 5ನೇ ಮತ್ತು 6ನೇ ಎಸೆತಗಳಲ್ಲಿ ರೊಮಾರಿಯೊ ಶೆಫರ್ಡ್ ಬ್ಯಾಟ್ನಿಂದ ಬ್ಯಾಕ್ ಟು ಬ್ಯಾಕ್ ಸಿಕ್ಸರ್ಗಳು ಮೂಡಿಬಂತು. ಈ ಮೂಲಕ ಆದಿಲ್ ರಶೀದ್ ಅವರ ಒಂದೇ ಓವರ್ನಲ್ಲಿ ಹೋಲ್ಡರ್-ಶೆಫರ್ಡ್ ಜೋಡಿ 31 ರನ್ ಕಲೆಹಾಕಿದರು.
Holder & Shepherd go BIGGGGG!! – 5️⃣ massive sixes in one brutal over! 🔥🧨#ENGvWI #SonyLIV pic.twitter.com/7upGAx9qUJ
— Sony LIV (@SonyLIV) June 8, 2025
ಇನ್ನು ಕೊನೆಯ ಓವರ್ನಲ್ಲಿ 16 ರನ್ ಚಚ್ಚುವ ಮೂಲಕ ವೆಸ್ಟ್ ಇಂಡೀಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 196 ರನ್ ಕಲೆಹಾಕಿತು.
ಇಂಗ್ಲೆಂಡ್ ಭರ್ಜರಿ ಚೇಸಿಂಗ್:
197 ರನ್ಗಳ ಕಠಿಣ ಗುರಿ ಪಡೆದ ಇಂಗ್ಲೆಂಡ್ ಪರ ಬೆನ್ ಡಕೆಟ್ 18 ಎಸೆತಗಳಲ್ಲಿ 30 ರನ್ ಬಾರಿಸಿ ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಜೋಸ್ ಬಟ್ಲರ್ 47 ರನ್ಗಳ ಕೊಡುಗೆ ನೀಡಿದರು. ಹಾಗೆಯೇ ನಾಯಕ ಹ್ಯಾರಿ ಬ್ರೂಕ್ 34 ರನ್ಗಳನ್ನು ಬಾರಿಸಿದರು.
ಇದನ್ನೂ ಓದಿ: IPL 2025 Car Winner: ಈ ಬಾರಿ ಟಾಟಾ ಕಾರ್ ಪ್ರಶಸ್ತಿ ಸಿಕ್ಕಿದ್ದು ಯಾರಿಗೆ ಗೊತ್ತಾ?
ಅಂತಿಮ ಹಂತದಲ್ಲಿ ಅಬ್ಬರಿಸಿದ ಟಾಮ್ ಬ್ಯಾಂಟನ್ 11 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ ಅಜೇಯ 30 ರನ್ ಬಾರಿಸಿದರೆ, ಜೇಕಬ್ ಬೆಥೆಲ್ 10 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 1 ಫೋರ್ನೊಂದಿಗೆ 26 ರನ್ ಚಚ್ಚಿದರು. ಈ ಮೂಲಕ ಇಂಗ್ಲೆಂಡ್ ತಂಡವು 18.3 ಓವರ್ಗಳಲ್ಲಿ 199 ರನ್ ಬಾರಿಸಿ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
