Ranji Trophy: ಕರ್ನಾಟಕ ಪರ ಕಣಕ್ಕಿಳಿದ ಕೆಎಲ್ ರಾಹುಲ್: ಹೀಗಿದೆ ಪ್ಲೇಯಿಂಗ್ ಇಲೆವೆನ್
Ranji Trophy: ನ್ಯೂಝಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಸೋತಿರುವ ಟೀಮ್ ಇಂಡಿಯಾ ಆಟಗಾರರಿಗೆ ರಣಜಿ ಟೂರ್ನಿ ಆಡಬೇಕೆಂದು ಬಿಸಿಸಿಐ ಸೂಚಿಸಿದೆ. ಅದರಂತೆ ಇದೀಗ ಹರ್ಯಾಣ ವಿರುದ್ಧ ಕೆಎಲ್ ರಾಹುಲ್ ಹಾಗೂ ರೈಲ್ವೇಸ್ ವಿರುದ್ಧ ವಿರಾಟ್ ಕೊಹ್ಲಿ ಕಣಕ್ಕಿಳಿದಿದ್ದಾರೆ. ರಾಹುಲ್ ಕರ್ನಾಟಕ ಪರ ಕಣಕ್ಕಿಳಿದರೆ, ಕೊಹ್ಲಿ ದೆಹಲಿ ಪರ ಆಡುತ್ತಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಹರ್ಯಾಣ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ ಪರ ಕೆಎಲ್ ರಾಹುಲ್ ಕಣಕ್ಕಿಳಿದಿದ್ದಾರೆ. ಇದರೊಂದಿಗೆ ಕರ್ನಾಟಕ ತಂಡದಲ್ಲಿ ಕೆಎಲ್ಆರ್ ಆಡುವುದನ್ನು ಎದುರು ನೋಡುತ್ತಿದ್ದ ಅಭಿಮಾನಿಗಳ 4 ವರ್ಷಗಳ ಕಾಯುವಿಕೆ ಅಂತ್ಯಗೊಂಡಂತಾಗಿದೆ. ಕೆಎಲ್ ರಾಹುಲ್ ಕೊನೆಯ ಬಾರಿ ಕರ್ನಾಟಕ ಪರ ಕಣಕ್ಕಿಳಿದದ್ದು 2020 ರಲ್ಲಿ.
ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಬಂಗಾಳ ವಿರುದ್ಧ ಬ್ಯಾಟ್ ಬೀಸಿದ್ದ ರಾಹುಲ್ ಮೊದಲ ಇನಿಂಗ್ಸ್ನಲ್ಲಿ 26 ರನ್ ಬಾರಿಸಿದ್ದರು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಇದಾದ ಬಳಿಕ ರಾಹುಲ್ ಮತ್ತೆ ರಣಜಿ ಪಂದ್ಯವಾಡಿರಲಿಲ್ಲ. ಇದೀಗ 4 ವರ್ಷಗಳ ಬಳಿಕ ಕೆಎಲ್ಆರ್ ದೇಶೀಯ ಅಂಗಳದಲ್ಲಿ ಕಾಣಿಸಿಕೊಂಡಿದ್ದಾರೆ.
ಟಾಸ್ ಗೆದ್ದ ಹರ್ಯಾಣ:
ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಹರ್ಯಾಣ ತಂಡವು ಬೌಲಿಂಗ್ ಆಯ್ದುಕೊಂಡಿದೆ. ಅದರಂತೆ ಕರ್ನಾಟಕ ತಂಡ ಇನಿಂಗ್ಸ್ ಆರಂಭಿಸಿದ್ದು, ಅನೀಶ್ ಕೆವಿ ಹಾಗೂ ಮಯಾಂಕ್ ಅಗರ್ವಾಲ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಇನ್ನು ಕೆಎಲ್ ರಾಹುಲ್ ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ.
ಕರ್ನಾಟಕ ತಂಡದಲ್ಲಿ 2 ಬದಲಾವಣೆ:
ಈ ಪಂದ್ಯಕ್ಕಾಗಿ ಕರ್ನಾಟಕ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ 2 ಬದಲಾವಣೆ ಮಾಡಲಾಗಿದೆ. ಕಳೆದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಅಭಿನವ್ ಮನೋಹರ್ ಬದಲಿಗೆ ಕೆಎಲ್ ರಾಹುಲ್ ಅವರಿಗೆ ಆಡುವ ಬಳಗದಲ್ಲಿ ಸ್ಥಾನ ನೀಡಲಾಗಿದೆ. ಹಾಗೆಯೇ ಅಭಿಲಾಷ್ ಶೆಟ್ಟಿ ಈ ಪಂದ್ಯದಿಂದ ಹೊರಗುಳಿದಿದ್ದು, ಅವರ ಸ್ಥಾನದಲ್ಲಿ ಕೊಡಗಿನ ವೇಗಿ ವಿಧ್ವತ್ ಕಾವೇರಪ್ಪ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಕರ್ನಾಟಕ (ಪ್ಲೇಯಿಂಗ್ XI): ಅನೀಶ್ ಕೆವಿ, ಮಯಾಂಕ್ ಅಗರ್ವಾಲ್ (ನಾಯಕ), ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಸ್ಮರಣ್ ರವಿಚಂದ್ರನ್, ಕೃಷ್ಣನ್ ಶ್ರೀಜಿತ್ (ವಿಕೆಟ್ ಕೀಪರ್), ಹಾರ್ದಿಕ್ ರಾಜ್, ಯಶೋವರ್ಧನ್ ಪರಂತಪ್, ಪ್ರಸಿದ್ಧ್ ಕೃಷ್ಣ, ವಾಸುಕಿ ಕೌಶಿಕ್, ವಿಧ್ವತ್ ಕಾವೇರಪ್ಪ.
ಇದನ್ನೂ ಓದಿ: ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ವಿಶೇಷ ದಾಖಲೆ ಬರೆದ ಫಾಫ್ ಡುಪ್ಲೆಸಿಸ್
ಹರ್ಯಾಣ (ಪ್ಲೇಯಿಂಗ್ XI): ಲಕ್ಷ್ಯ ದಲಾಲ್, ಅಂಕಿತ್ ಕುಮಾರ್ (ನಾಯಕ), ಹಿಮಾಂಶು ರಾಣಾ, ನಿಶಾಂತ್ ಸಿಂಧು, ಧೀರು ಸಿಂಗ್, ರೋಹಿತ್ ಪರ್ಮೋದ್ ಶರ್ಮಾ (ವಿಕೆಟ್ ಕೀಪರ್), ಯುವರಾಜ್ ಯೋಗೇಂದರ್ ಸಿಂಗ್, ಜಯಂತ್ ಯಾದವ್, ಅನ್ಶುಲ್ ಕಾಂಬೋಜ್, ಅನುಜ್ ಥಕ್ರಾಲ್, ಅಜಿತ್ ಚಹಲ್.