‘ಇದು ನನ್ನ ಕೊನೆಯ ವಿಶ್ವಕಪ್’; ನಿವೃತ್ತಿಯ ಸುಳಿವು ನೀಡಿದ ಆರ್ ಅಶ್ವಿನ್..!
R Ashwin Retirement: ನಾನು ಈ ಪಂದ್ಯಾವಳಿಯನ್ನು ಆನಂದಿಸಲು ಪ್ರಯತ್ನಿಸುತ್ತೇನೆ. ಭಾರತಕ್ಕೆ ಇದು ನನ್ನ ಕೊನೆಯ ವಿಶ್ವಕಪ್ ಆಗಿರಬಹುದು, ಆದ್ದರಿಂದ ಪಂದ್ಯಾವಳಿಯನ್ನು ಆನಂದಿಸುವುದು ಅತ್ಯಂತ ಮಹತ್ವದ್ದಾಗಿದೆ ಎಂದು ರವಿಚಂದ್ರನ್ ಅಶ್ವಿನ್ ಪಂದ್ಯದ ಪೂರ್ವ ಸಂದರ್ಶನದಲ್ಲಿ ದಿನೇಶ್ ಕಾರ್ತಿಕ್‌ಗೆ ತಿಳಿಸಿದರು.

ಕೇವಲ ಎರಡೇ ಎರಡು ವಾರಗಳ ಹಿಂದೆ ತಾನು ವಿಶ್ವಕಪ್ (ODI World Cup 2023) ತಂಡದಲ್ಲಿ ಸ್ಥಾನ ಪಡೆಯುತ್ತೇನೆ ಎಂದು ಕನಸಲ್ಲೂ ಊಹಿಸದ ಆರ್. ಅಶ್ವಿನ್‌ಗೆ (R Ashwin) ಟೀಂ ಇಂಡಿಯಾದ ಬಾಗಿಲು ತೆರೆದಿದೆ. ತಂಡದ ಸ್ಟಾರ್ ಆಲ್ರೌಂಡರ್ ಅಕ್ಷರ್ ಪಟೇಲ್ (Axar Patel) ಗಾಯಗೊಂಡಿದ್ದರಿಂದಾಗಿ ಭಾರತ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ ಅನುಭವಿ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಇದೀಗ ತಮ್ಮ ಏಕದಿನ ನಿವೃತ್ತಿಯ ಬಗ್ಗೆಯೂ ಸುಳಿವು ನೀಡಿದ್ದಾರೆ. ವಾಸ್ತವವಾಗಿ ಭಾರತ ನಿನ್ನೆ ಅಂದರೆ ಸೆಪ್ಟೆಂಬರ್ 30 ರಂದು ಇಂಗ್ಲೆಂಡ್ ವಿರುದ್ಧ (India vs England) ಅಭ್ಯಾಸ ಪಂದ್ಯವನ್ನು ಆಡಬೇಕಿತ್ತು ಆದರೆ ಆ ಪಂದ್ಯ ಮಳೆಯಿಂದ ರದ್ದಾಯಿತು. ಈ ಪಂದ್ಯಕ್ಕೂ ಮುನ್ನ ಮಾತನಾಡಿದ್ದ ಅಶ್ವಿನ್ ಇದು ನನ್ನ ಕೊನೆಯ ವಿಶ್ವಕಪ್ ಆಗಿರಲಿದೆ ಎಂದು ಹೇಳುವ ಮೂಲಕ ಏಕದಿನ ಕ್ರಿಕೆಟ್ಗೆ ವಿದಾಯ ಹೇಳುವ ಸುಳಿವು ನೀಡಿದ್ದಾರೆ.
ಸ್ಥಾನ ಪಡೆದ ಬಗ್ಗೆ ನಾನು ಹೆಚ್ಚು ಯೋಚಿಸುತ್ತಿಲ್ಲ
2022 ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಕೊನೆಯ ಏಕದಿನ ಪಂದ್ಯವನ್ನಾಡಿದ್ದ ಆಡಿದ ಅಶ್ವಿನ್ ಆ ನಂತರ ಏಕದಿನ ಮಾದರಿಯಲ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿರಲಿಲ್ಲ. ಆದರೆ ಅಕ್ಸರ್ ಪಟೇಲ್ ಗಾಯಗೊಂಡಿದ್ದರಿಂದಾಗಿ ತಂಡದ ಆಯ್ಕೆ ಮಂಡಳಿ ಅನುಭವದ ಆದಾರದ ಮೇಲೆ ಅಶ್ವಿನ್‌ಗೆ ಭಾರತ ವಿಶ್ವಕಪ್ ತಂಡದಲ್ಲಿ ಅವಕಾಶ ನೀಡಿದೆ. ಇನ್ನು ವಿಶ್ವಕಪ್ ತಂಡದಲ್ಲಿ ಆಯ್ಕೆಯಾದ ಬಗ್ಗೆ ಮಾತನಾಡಿದ ಅಶ್ವಿನ್, ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದ ಬಗ್ಗೆ ನಾನು ಹೆಚ್ಚು ಯೋಚಿಸುತ್ತಿಲ್ಲ. ನಾನು ನನ್ನ ಕ್ರಿಕೆಟ್ ಅನ್ನು ಆನಂದಿಸುತ್ತಿದ್ದೇನೆ, ವಿಶ್ವಕಪ್‌ನಲ್ಲೂ ಅದನ್ನು ಮಾಡಲು ಬಯಸುತ್ತೇನೆ ಎಂದಿದ್ದಾರೆ.
IPL 2023: ಅಂಪೈರ್‌ಗೆ ನಿಯಮ ವಿವರಿಸಿದ್ದಕ್ಕಾಗಿ ಆರ್. ಅಶ್ವಿನ್‌ಗೆ ಬಿತ್ತು ಭಾರಿ ದಂಡ..!
ಇದು ನನ್ನ ಕೊನೆಯ ವಿಶ್ವಕಪ್ ಆಗಿರಬಹುದು
ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯಕ್ಕೂ ಮುನ್ನ ದಿನೇಶ್ ಕಾರ್ತಿಕ್ ಅವರೊಂದಿಗೆ ತಂಡದಲ್ಲಿ ಆಯ್ಕೆಯಾದ ಬಗ್ಗೆ ಮಾತನಾಡಿದ ಅಶ್ವಿನ್, ಜೀವನವು ಆಶ್ಚರ್ಯಗಳಿಂದ ತುಂಬಿದೆ. ನಾನೂ ಇಲ್ಲಿರುತ್ತೇನೆ ಎಂದು ಅಂದುಕೊಂಡಿರಲಿಲ್ಲ. ತಂಡದ ಆಡಳಿತ ಮಂಡಳಿ ನನ್ನ ಮೇಲೆ ವಿಶ್ವಾಸವನ್ನು ತೋರಿದೆ. ಈ ಪಂದ್ಯಾವಳಿಗಳಲ್ಲಿ ಒತ್ತಡವನ್ನು ಎದುರಿಸುವುದು ತುಂಬಾ ಅವಶ್ಯಕವಾಗಿದೆ. ಇದು ಪಂದ್ಯಾವಳಿಯು ಹೇಗೆ ನಡೆಯುತ್ತದೆ ಎಂಬುದನ್ನು ನಿರ್ದೇಶಿಸುತ್ತದೆ. ನಾನು ಈ ಪಂದ್ಯಾವಳಿಯನ್ನು ಆನಂದಿಸಲು ಪ್ರಯತ್ನಿಸುತ್ತೇನೆ. ಭಾರತಕ್ಕೆ ಇದು ನನ್ನ ಕೊನೆಯ ವಿಶ್ವಕಪ್ ಆಗಿರಬಹುದು, ಆದ್ದರಿಂದ ಪಂದ್ಯಾವಳಿಯನ್ನು ಆನಂದಿಸುವುದು ಅತ್ಯಂತ ಮಹತ್ವದ್ದಾಗಿದೆ ಎಂದು ರವಿಚಂದ್ರನ್ ಅಶ್ವಿನ್ ಪಂದ್ಯದ ಪೂರ್ವ ಸಂದರ್ಶನದಲ್ಲಿ ದಿನೇಶ್ ಕಾರ್ತಿಕ್‌ಗೆ ತಿಳಿಸಿದರು.
ಟೆಸ್ಟ್‌ನಲ್ಲಿ ಮಾತ್ರ ಗಮನ
ರವಿಚಂದ್ರನ್ ಅಶ್ವಿನ್ ಕಳೆದ ಆರು ವರ್ಷಗಳಲ್ಲಿ ಕೇವಲ ಐದು ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅಶ್ವಿನ್‌ಗೆ ಸದ್ಯ 37 ವರ್ಷ. ಅಲ್ಲದೆ ವಾಷಿಂಗ್ಟನ್ ಸುಂದರ್ ರೂಪದಲ್ಲಿ ಇನ್ನೋರ್ವ ಆಫ್-ಸ್ಪಿನ್ನರ್ ಸಿದ್ಧವಾಗುವುದರಿಂದಾಗಿ ಇದು ಅಶ್ವಿನ್ ಅವರ ಕೊನೆಯ ವಿಶ್ವಕಪ್ ಆಗಿರುವುದು ಖಚಿತ. ವಿಶ್ವಕಪ್ ಬಳಿಕ ಏಕದಿನ ಮಾದರಿಗೆ ವಿದಾಯ ಹೇಳುವ ಮೂಲಕ ಅಶ್ವಿನ್ 2025 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ವರೆಗೆ ಟೆಸ್ಟ್‌ನಲ್ಲಿ ಮಾತ್ರ ಗಮನಹರಿಸುವ ಸಾಧ್ಯತೆಗಳಿವೆ.
ಭಾರತ ವಿಶ್ವಕಪ್ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಇಶಾನ್ ಕಿಶನ್ , ಸೂರ್ಯ ಕುಮಾರ್ ಯಾದವ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:33 am, Sun, 1 October 23