PAK vs UAE: ಪಾಕಿಸ್ತಾನದ ಏಷ್ಯಾಕಪ್ ಭವಿಷ್ಯ ಇಂದು ನಿರ್ಧಾರ: ಯುಎಇ ವಿರುದ್ಧ ಆಡುತ್ತ-ಇಲ್ವಾ?
Asia Cup 2025: ಏಷ್ಯಾಕಪ್‌ನಲ್ಲಿ ಯುಎಇ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಬೆದರಿಕೆ ಹಾಕಿತ್ತು. ಉಭಯ ತಂಡಗಳ ನಡುವಿನ ಪಂದ್ಯ ಇಂದು ನಡೆಯಬೇಕಿದೆ. ಆದರೆ, ಇದಕ್ಕೂ ಮೊದಲು ಪಿಸಿಬಿ ಪ್ರತಿಕ್ರಿಯಿಸಿದೆ. ಸದ್ಯ ಪಾಕಿಸ್ತಾನ ಈ ಪಂದ್ಯವನ್ನು ಆಡುತ್ತದೆಯೇ ಅಥವಾ ಇಲ್ಲವೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಬೆಂಗಳೂರು (ಸೆ. 17): 2025 ರ ಏಷ್ಯಾಕಪ್ ನ ಆರನೇ ಪಂದ್ಯ ಮುಗಿದ ನಂತರ, ಭಾರತೀಯ ತಂಡದ ಆಟಗಾರರು ಪಾಕಿಸ್ತಾನ ತಂಡದೊಂದಿಗೆ ಕೈಕುಲುಕಲಿಲ್ಲ. ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಸಿಕ್ಸರ್ ಬಾರಿಸಿ ಪಂದ್ಯವನ್ನು ಮುಗಿಸಿ ನೇರವಾಗಿ ಡ್ರೆಸ್ಸಿಂಗ್ ಕೋಣೆಗೆ ತೆರಳಿದರು. ಇಡೀ ತಂಡ ಒಳಗೆ ಹೋಗಿ ಬಾಗಿಲು ಮುಚ್ಚಿತು. ಪಂದ್ಯಕ್ಕೂ ಮೊದಲು ಕೂಡ ಟಾಸ್ ಸಮಯದಲ್ಲಿ ಸೂರ್ಯ ಮತ್ತು ಪಾಕಿಸ್ತಾನಿ ನಾಯಕ ಸಲ್ಮಾನ್ ಆಘಾ ಕೈಕುಲುಕಲಿಲ್ಲ. ಇದರ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿಯನ್ನು ಸಂಪರ್ಕಿಸಿತು. ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರನ್ನು ತೆಗೆದುಹಾಕದಿದ್ದರೆ, ನಾವು ಯುಎಇ ವಿರುದ್ಧದ ತಮ್ಮ ಮುಂದಿನ ಪಂದ್ಯವನ್ನು ಬಹಿಷ್ಕರಿಸುವುದಾಗಿ ಮಂಡಳಿ ತಿಳಿಸಿದೆ. ಆದರೆ, ಏಷ್ಯಾಕಪ್ ನಿಂದ ಪೈಕ್ರಾಫ್ಟ್ ಅವರನ್ನು ಐಸಿಸಿ ತೆಗೆದುಹಾಕಿಲ್ಲ.
ಪಾಕಿಸ್ತಾನ ತಂಡ ಯುಎಇ ವಿರುದ್ಧ ಆಡುತ್ತದೆಯೇ?
ಪಾಕಿಸ್ತಾನ ಮತ್ತು ಯುಎಇ ನಡುವಿನ ಪಂದ್ಯ ಇಂದು ದುಬೈ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ, ಪಾಕಿಸ್ತಾನ ಈ ಪಂದ್ಯವನ್ನು ಆಡುತ್ತದೆಯೇ ಅಥವಾ ಇಲ್ಲವೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಪಿಸಿಬಿ ಮಂಗಳವಾರ ಈ ಕುರಿತು ಹೇಳಿಕೆ ನೀಡಿದೆ.
ಪಾಕಿಸ್ತಾನಿ ಮಾಧ್ಯಮಗಳ ಪ್ರಕಾರ, ಮಂಡಳಿಯ ವಕ್ತಾರರು, ‘ಏಷ್ಯಾ ಕಪ್ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಇನ್ನೂ ಸಲಹೆಗಳನ್ನು ತೆಗೆದುಕೊಳ್ಳಲಾಗುತ್ತಿದೆ ಮತ್ತು ನಾಳೆ (ಬುಧವಾರ) ವೇಳೆಗೆ ನಿರ್ಧಾರವನ್ನು ಪ್ರಕಟಿಸಲಾಗುವುದು. ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ಪಾಕಿಸ್ತಾನದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಲಾಗುವುದು ಎಂದು ಪಿಸಿಬಿ ಸ್ಪಷ್ಟಪಡಿಸಲು ಬಯಸುತ್ತದೆ.’
ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಸೂಪರ್ 4 ಹಂತಕ್ಕೆ ತಲುಪಿದೆಯೇ?
ಪಾಕಿಸ್ತಾನ ಯುಎಇ ಪಂದ್ಯವನ್ನು ಬಹಿಷ್ಕರಿಸಿದರೆ, ಅದು ಏಷ್ಯಾ ಕಪ್‌ನಿಂದ ಹೊರಹೋಗುತ್ತದೆ. ಸೂಪರ್ ಫೋರ್‌ಗೆ ಮುನ್ನಡೆಯಲು, ಪಾಕ್ ಯುಎಇಯನ್ನು ಸೋಲಿಸಬೇಕು. ಪಾಕಿಸ್ತಾನ 2025 ರ ಏಷ್ಯಾ ಕಪ್‌ನಲ್ಲಿ ಓಮನ್ ಅನ್ನು ಸೋಲಿಸುವ ಮೂಲಕ ತನ್ನ ಅಭಿಯಾನವನ್ನು ಪ್ರಾರಂಭಿಸಿತು, ಆದರೆ ಭಾರತ ವಿರುದ್ಧ ಸೋತಿತು. ಭಾರತ ವಿರುದ್ಧ ಸೋತ ನಂತರ, ಯುಎಇ ಒಮಾನ್ ಅನ್ನು ಸೋಲಿಸಿತು. ಎರಡೂ ತಂಡಗಳು 2 ಪಂದ್ಯಗಳಿಂದ ತಲಾ 2 ಅಂಕಗಳನ್ನು ಹೊಂದಿವೆ.
ಪಾಕಿಸ್ತಾನ ಉತ್ತಮ ನಿವ್ವಳ ರನ್ ದರವನ್ನು ಹೊಂದಿದೆ, ಆದರೆ ಈಗ ಅದು ಪ್ರಯೋಜನವಿಲ್ಲ. ದುಬೈನಲ್ಲಿ ಯುಎಇ ವಿರುದ್ಧದ ಪಂದ್ಯ ಪಾಕಿಸ್ತಾನಕ್ಕೆ ಬಹಳ ಮುಖ್ಯ. ಇದು ಅವರಿಗೆ ಮಾಡು ಇಲ್ಲವೇ ಮಡಿ ಪಂದ್ಯ. ಈ ಪಂದ್ಯದಲ್ಲಿ ಸೋತರೆ ಸೂಪರ್ 4 ಗೆ ಅರ್ಹತೆ ಪಡೆಯಲು ಸಾಧ್ಯವಾಗುವುದಿಲ್ಲ ಮತ್ತು ಏಷ್ಯಾ ಕಪ್ ನಿಂದ ಹೊರಗುಳಿಯಬೇಕಾಗುತ್ತದೆ. ಪಂದ್ಯಾವಳಿಯಲ್ಲಿ ಉಳಿಯಲು ಪಾಕಿಸ್ತಾನ ಯಾವುದೇ ಬೆಲೆ ತೆತ್ತಾದರೂ ಈ ಪಂದ್ಯವನ್ನು ಗೆಲ್ಲಲೇಬೇಕು. ಆದರೆ, ಇಂದಿನ ಪಂದ್ಯ ನಡೆಯುತ್ತ ಇಲ್ಲವೇ ಎಂಬುದನ್ನು ನೋಡಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




