20 ಓವರ್ಗಳವರೆಗೆ ಬ್ಯಾಟ್ ಬೀಸಿ ಕೇವಲ 33 ರನ್ ಕಲೆಹಾಕಿದ ಆರಂಭಿಕ ದಾಂಡಿಗ..!
PSL 2025 Karachi Kings vs Quetta Gladiators: ಪಾಕಿಸ್ತಾನ್ ಸೂಪರ್ ಲೀಗ್ನ 8ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರಾಚಿ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 175 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡವು ತಂಡವು 119 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ.

PSL 2025: ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಎಲ್ಲವೂ ಸಾಧ್ಯ. ಇದಕ್ಕೆ ತಾಜಾ ಉದಾಹರಣೆ ಆರಂಭಿಕನಾಗಿ ಕಣಕ್ಕಿಳಿದು 20 ಓವರ್ಗಳವರೆಗೆ ಬ್ಯಾಟ್ ಮಾಡಿ 33 ರನ್ಗಳಿಸಿರುವುದು. ಇಂತಹದೊಂದು ಇನಿಂಗ್ಸ್ ಪಿಎಸ್ಎಲ್ನ 8ನೇ ಪಂದ್ಯದಲ್ಲಿ ಕಂಡು ಬಂದಿದೆ. ಕರಾಚಿಯ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಕರಾಚಿ ಕಿಂಗ್ಸ್ (KK) ಹಾಗೂ ಕ್ವೆಟ್ಟಾ ಗ್ಲಾಡಿಯೇಟರ್ಸ್ (QG) ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಕರಾಚಿ ಕಿಂಗ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಕರಾಚಿ ಕಿಂಗ್ಸ್ ಪರ ಟಿಮ್ ಸೈಫರ್ಟ್ 27 ರನ್ ಬಾರಿಸಿದರೆ, ಡೇವಿಡ್ ವಾರ್ನರ್ 31 ರನ್ಗಳಿಸಿದರು. ಆ ಬಳಿಕ ಬಂದ ಜೇಮ್ಸ್ ವಿನ್ಸ್ ಸ್ಪೋಟಕ ಬ್ಯಾಟಿಂಗ್ನೊಂದಿಗೆ ಅಬ್ಬರಿಸಿದರು.
47 ಎಸೆತಗಳನ್ನು ಎದುರಿಸಿದ ಜೇಮ್ಸ್ ವಿನ್ಸ್ ಒಂದು ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 70 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಕರಾಚಿ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 175 ರನ್ ಕಲೆಹಾಕಿತು.
20 ಓವರ್ಗಳಲ್ಲಿ 33 ರನ್ಸ್:
176 ರನ್ಗಳ ಗುರಿ ಬೆನ್ನತ್ತಿದ ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದದ್ದು ನಾಯಕ ಸೌದ್ ಶಕೀಲ್ ಹಾಗೂ ಫಿನ್ ಅಲೆನ್. ಕೇವಲ 6 ರನ್ಗಳಿಸಿ ಅಲೆನ್ ಔಟಾದರೆ, ಇದರ ಬೆನ್ನಲ್ಲೇ ಹಸನ್ ನವಾಝ್ ವಿಕೆಟ್ ಒಪ್ಪಿಸಿದರು. ಇನ್ನು ಕುಸಾಲ್ ಮೆಂಡಿಸ್ (12) ಹಾಗೂ ಖ್ವಾಜಾ ನಫೆ (1), ರೈಲಿ ರೊಸ್ಸೊವ್ (1) ಬಂದ ವೇಗದಲ್ಲೇ ಹಿಂತಿರುಗಿದರು.
ಪರಿಣಾಮ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡವು ಕೇವಲ 47 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿತು. ಆದರೆ ಅತ್ತ ಆರಂಭಿಕನಾಗಿ ಕಣಕ್ಕಿಳಿದ ಸೌದ್ ಶಕೀಲ್ ಮಾತ್ರ ರಕ್ಷಣಾತ್ಮಕ ಆಟದೊಂದಿಗೆ ಇನಿಂಗ್ಸ್ ಮುಂದುವರೆಸಿದರು.
ಇದರ ನಡುವೆ ಬ್ಯಾಟ್ ಬೀಸಿದ ಮೊಹಮ್ಮದ್ ಅಮೀರ್ 16 ಎಸೆತಗಳಲ್ಲಿ 30 ರನ್ ಬಾರಿಸಿದರು. ಇದಾಗ್ಯೂ ಸೌದ್ ಶಕೀಲ್ ಮಾತ್ರ ಬಿರುಸಿನ ಬ್ಯಾಟಿಂಗ್ ಮುಂದಾಗಲೇ ಇಲ್ಲ. ಅಲ್ಲದೆ 20 ಓವರ್ಗಳ ತನಕ ಕ್ರೀಸ್ ಕಚ್ಚಿ ನಿಂತ ಸೌದ್ ಶಕೀಲ್ ಅಂತಿಮವಾಗಿ ಕಲೆಹಾಕಿದ್ದು ಕೇವಲ 33 ರನ್ಗಳು ಮಾತ್ರ. ಅದು 40 ಎಸೆತಗಳನ್ನು ಎದುರಿಸಿ.
ಮೊದಲ ಓವರ್ನಿಂದ ಕೊನೆಯವರೆಗೆ ಕ್ರೀಸ್ನಲ್ಲಿದ್ದ ಸೌದ್ ಶಕೀಲ್ ಬ್ಯಾಟ್ನಿಂದ ಮೂಡಿಬಂದ ಒಟ್ಟು ಫೋರ್ಗಳ ಸಂಖ್ಯೆ ಕೇವಲ 3 ಎಂದರೆ ನಂಬಲೇಬೇಕು. ಅಂತಹದೊಂದು ಅಜೇಯ ಇನಿಂಗ್ಸ್ ಆಡಿ ಇದೀಗ ಸೌದ್ ಶಕೀಲ್ ಸುದ್ದಿಯಾಗಿದ್ದಾರೆ.
ಇದನ್ನೂ ಓದಿ: IPL 2025: ಮೊದಲಾರ್ಧ ಮುಕ್ತಾಯ: RCB ಪ್ಲೇಆಫ್ಗೇರಲು ಇನ್ನೆಷ್ಟು ಪಂದ್ಯ ಗೆಲ್ಲಬೇಕು?
ಇನ್ನು ಸೌದ್ ಶಕೀಲ್ ಅವರ ಈ ಅಜೇಯ 33 ರನ್ಗಳೊಂದಿಗೆ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡವು 9 ವಿಕೆಟ್ ನಷ್ಟದೊಂದಿಗೆ 20 ಓವರ್ಗಳಲ್ಲಿ 119 ರನ್ಗಳಿಸಿ 56 ರನ್ಗಳಿಂದ ಸೋಲೊಪ್ಪಿಕೊಂಡಿದೆ.