AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೈ ತಪ್ಪಿದ ರಾಜಸ್ಥಾನ್ ರಾಯಲ್ಸ್​: ಕಾನೂನು ಸಮರಕ್ಕೆ ಸಜ್ಜು!

ರಾಜಸ್ಥಾನ್ ರಾಯಲ್ಸ್ ಮೈದಾನದಲ್ಲಿ ಸಿಕ್ಸರ್-ಬೌಂಡರಿಗಳ ಮೂಲಕ ಅಬ್ಬರಿಸುತ್ತಿದ್ದರೆ, ತೆರೆಯ ಮರೆಯಲ್ಲಿ ತಂಡದ ಮಾಲೀಕತ್ವಕ್ಕಾಗಿ ಕೋಟಿ ಕೋಟಿ ಹಣದ ಜಿದ್ದಾಜಿದ್ದಿ ಶುರುವಾಗಿದೆ. ಮಿತ್ತಲ್-ಪೂನಾವಾಲಾ ಕೈಸೇರಬೇಕಿದ್ದ ರಾಯಲ್ಸ್ ಸಾಮ್ರಾಜ್ಯಕ್ಕೆ ಈಗ ಸೋಮಾನಿ ಗ್ರೂಪ್ ಅಡ್ಡಗಾಲು ಹಾಕಿದೆ. ಮುಗಿದೇ ಹೋಯಿತು ಎನ್ನುವಷ್ಟರಲ್ಲಿ ಈ ಡೀಲ್‌ಗೆ ಎದುರಾದ ವಿಘ್ನವೇನು? 1.63 ಬಿಲಿಯನ್ ಡಾಲರ್ ಕಾನೂನು ಹೋರಾಟದ ಹಿಂದಿರುವ ಅಸಲಿ ಸತ್ಯವೇನು? ಇಲ್ಲಿದೆ ಸಂಪೂರ್ಣ ವಿವರ.

ಕೈ ತಪ್ಪಿದ ರಾಜಸ್ಥಾನ್ ರಾಯಲ್ಸ್​: ಕಾನೂನು ಸಮರಕ್ಕೆ ಸಜ್ಜು!
Rajastan Royals
ಝಾಹಿರ್ ಯೂಸುಫ್
|

Updated on:May 04, 2026 | 2:09 PM

Share

ರಾಜಸ್ಥಾನ್ ರಾಯಲ್ಸ್ ತಂಡದ ಮಾಲೀಕತ್ವದ ಬದಲಾವಣೆ ಈಗ ಕೇವಲ ವ್ಯಾಪಾರವಾಗಿ ಉಳಿದಿಲ್ಲ, ಅದೊಂದು ದೊಡ್ಡ ಮಟ್ಟದ ಕಾನೂನು ಕದನವಾಗಿ ಮಾರ್ಪಡುವಂತಿದೆ! $1.65 ಬಿಲಿಯನ್ ಮೊತ್ತಕ್ಕೆ ಮಿತ್ತಲ್-ಪೂನಾವಾಲಾ ಪಾಲಾಗಿದ್ದ ರಾಯಲ್ಸ್ ಸಾಮ್ರಾಜ್ಯಕ್ಕೆ, ಈಗ ಹಳೆಯ ಬಿಡ್ಡರ್ ಕಲ್ ಸೋಮಾನಿ ಒಕ್ಕೂಟ ಅಡ್ಡಗಾಲು ಹಾಕಿದೆ. 1.63 ಬಿಲಿಯನ್ ಡಾಲರ್ ಮೊತ್ತದ ಈ ಕಾನೂನು ಸಮರ ಐಪಿಎಲ್ ಇತಿಹಾಸದಲ್ಲೇ ಹೊಸ ಸಂಚಲನ ಸೃಷ್ಟಿಸಿದೆ.

ಏನಿದು ವಿವಾದ?

ವರದಿಗಳ ಪ್ರಕಾರ, ವಾಲ್‌ಮಾರ್ಟ್ ವಾರಸುದಾರ ರಾಬ್ ವಾಲ್ಟನ್ ಮತ್ತು ಡೆಟ್ರಾಯಿಟ್ ಲಯನ್ಸ್ ಮಾಲೀಕರನ್ನು ಒಳಗೊಂಡ ಕಲ್ ಸೋಮಾನಿ ಒಕ್ಕೂಟವು ಮೊದಲು ರಾಜಸ್ಥಾನ್ ರಾಯಲ್ಸ್ ಖರೀದಿಸಲು $1.63 ಬಿಲಿಯನ್ (ಸುಮಾರು ₹13,500 ಕೋಟಿಗೂ ಹೆಚ್ಚು) ಮೊತ್ತದ ಆಫರ್ ನೀಡಿತ್ತು.

ಆದರೆ, ಅಂತಿಮ ಹಂತದಲ್ಲಿ ಈ ಒಪ್ಪಂದ ಮುರಿದುಬಿದ್ದು, ರಾಜಸ್ಥಾನ್ ರಾಯಲ್ಸ್ ಆಡಳಿತ ಮಂಡಳಿಯು ಲಕ್ಷ್ಮಿ ಮಿತ್ತಲ್ ಮತ್ತು ಆದರ್ ಪೂನಾವಾಲಾ ಅವರೊಂದಿಗೆ ಹೊಸ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದವೇ ಈಗ ಕಾನೂನು ಸಮರಕ್ಕೆ ಎಡೆ ಮಾಡಿಕೊಟ್ಟಿದೆ.

ಸೋಮಾನಿ ಗ್ರೂಪ್ ಆರೋಪಗಳೇನು?

  • ಒಪ್ಪಂದ ವಿಳಂಬ:  ರಾಜಸ್ಥಾನ್ ರಾಯಲ್ಸ್ ತಂಡದ ಆಡಳಿತ ಮಂಡಳಿಯು ಬೇಕೆಂದೇ ದಾಖಲೆಗಳ ಹಸ್ತಾಂತರದಲ್ಲಿ ವಿಳಂಬ ಮಾಡಿತು ಮತ್ತು ಶೇ. 90ರಷ್ಟು ದಾಖಲಾತಿಗಳು ಬಾಕಿ ಇರುವಾಗಲೇ ಮಾತುಕತೆಯಿಂದ ಹಿಂದೆ ಸರಿಯಿತು ಎಂಬುದು ಸೋಮಾನಿ ಗ್ರೂಪ್ ಆರೋಪ.
  • ನೋಟಿಸ್: ಈ ಅನ್ಯಾಯದ ವಿರುದ್ಧ ಸೋಮಾನಿ ಒಕ್ಕೂಟವು ರಾಜಸ್ಥಾನ್ ರಾಯಲ್ಸ್ ಮ್ಯಾನೇಜ್‌ಮೆಂಟ್ ಮತ್ತು ಬಿಸಿಸಿಐಗೆ (BCCI) ಕಾನೂನು ನೋಟಿಸ್ ಕಳುಹಿಸಲು ಸಿದ್ಧತೆ ನಡೆಸಿದೆ.

ಒಪ್ಪಂದ ಮುರಿದು ಬೀಳಲು ಕಾರಣಗಳೇನು?

ರಾಜಸ್ಥಾನ್ ರಾಯಲ್ಸ್ ತಂಡದ ಮಾಲೀಕರಾದ ಮನೋಜ್ ಬಡಾಲೆ ಅವರು ಮಾರಾಟದ ನಂತರವೂ ತಮ್ಮ ಶೇ. 7ರಷ್ಟು ಪಾಲನ್ನು ಉಳಿಸಿಕೊಳ್ಳಲು ಬಯಸಿದ್ದರು. ಆದರೆ ಸೋಮಾನಿ ಗ್ರೂಪ್ ಸಂಪೂರ್ಣ ಮಾಲೀಕತ್ವವನ್ನು ಪಡೆಯಲು ಆಸಕ್ತಿ ಹೊಂದಿತ್ತು. ಅಲ್ಲದೆ ಬಡಾಲೆ ಅವರ ಪಾಲುದಾರಿಕೆಯನ್ನು ಮುಂದುವರಿಸಲು ಒಪ್ಪಿರಲಿಲ್ಲ.

ಇದಲ್ಲದೆ ಸೋಮಾನಿ ಗ್ರೂಪ್ ಒಪ್ಪಂದದ ನಿಯಮದಂತೆ ನಿಗದಿತ ಒಂದು ತಿಂಗಳ ಎಕ್ಸ್‌ಕ್ಲೂಸಿವಿಟಿ ಅವಧಿಯೊಳಗೆ ಹಣ ಪಾವತಿಸಲು ವಿಫಲರಾಗಿದ್ದರು ಎಂದು ಹೇಳಲಾಗಿದೆ.

ಸೋಮಾನಿ ಗ್ರೂಪ್ ಹೇಳುವುದೇನು?

ಸೋಮಾನಿ ಗ್ರೂಪ್ ವಾದದ ಪ್ರಕಾರ, ರಾಜಸ್ಥಾನ್ ರಾಯಲ್ಸ್ ಮ್ಯಾನೇಜ್‌ಮೆಂಟ್ ಉದ್ದೇಶಪೂರ್ವಕವಾಗಿ ದಾಖಲಾತಿ ಪ್ರಕ್ರಿಯೆಯನ್ನು ವಿಳಂಬ ಮಾಡಿತು. ಶೇ. 90ರಷ್ಟು ದಾಖಲೆಗಳು ಇನ್ನೂ ಬಾಕಿ ಇರುವಾಗಲೇ ಮಾತುಕತೆ ಸ್ಥಗಿತಗೊಳಿಸಲಾಯಿತು ಎಂಬುದು ಎಂದು ಆರೋಪಿಸಿದ್ದಾರೆ.

ರಾಜಸ್ಥಾನ್ ರಾಯಲ್ಸ್​ ತಂಡದ ಆರ್ಥಿಕ ಮತ್ತು ಕಾನೂನು ಸ್ಥಿತಿಗತಿಯ ಬಗ್ಗೆ ಸೋಮಾನಿ ಗ್ರೂಪ್ ಕೇಳಿದ್ದ ನೂರಾರು ಪ್ರಶ್ನೆಗಳಿಗೆ ಮ್ಯಾನೇಜ್‌ಮೆಂಟ್ ಉತ್ತರ ನೀಡಿಲ್ಲ. ಮುಖ್ಯವಾಗಿ ಬಿಸಿಸಿಐಗೆ ನೀಡಬೇಕಾದ ಬಾಕಿ ಹಣ ಮತ್ತು ತಂಡದ ಮೇಲಿರುವ ಕಾನೂನು ಪ್ರಕರಣಗಳ ಬಗ್ಗೆ ಸ್ಪಷ್ಟತೆ ನೀಡಿರಲಿಲ್ಲ.

ಹೀಗಾಗಿ ಈ ಮಾಹಿತಿಗಾಗಿ ನಾವು ಕಾಯುತ್ತಿದ್ದೆವು. ಆದರೆ ತಮ್ಮೊಂದಿಗೆ ಮಾತುಕತೆ ನಡೆಸುತ್ತಿರುವಾಗಲೇ, ರಾಜಸ್ಥಾನ್ ರಾಯಲ್ಸ್ ಮ್ಯಾನೇಜ್‌ಮೆಂಟ್ ಗುಟ್ಟಾಗಿ ಲಕ್ಷ್ಮಿ ಮಿತ್ತಲ್ ಅವರ ಒಕ್ಕೂಟದೊಂದಿಗೆ ‘ಸೈಡ್ ಡೀಲಿಂಗ್’ ನಡೆಸಿದೆ  ಎಂದು ಸೋಮಾನಿ ಗ್ರೂಪ್ ಗಂಭೀರ ಆರೋಪ ಮಾಡಿದ್ದಾರೆ.

ಹೊಸ ಒಪ್ಪಂದ ಹೇಗಿದೆ?

ಪ್ರಸ್ತುತ ಆಗಿರುವ ಹೊಸ ಒಪ್ಪಂದದ ಪ್ರಕಾರ, ಸುಮಾರು $1.65 ಬಿಲಿಯನ್ (₹15,660 ಕೋಟಿ) ಮೊತ್ತಕ್ಕೆ ತಂಡದ ಬಹುಪಾಲು ಷೇರುಗಳನ್ನು ಮಾರಾಟ ಮಾಡಲಾಗಿದೆ. ಇಲ್ಲಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಪಾಲು ಖರೀದಿಸಿರುವವರು…

  • ಲಕ್ಷ್ಮಿ ಮಿತ್ತಲ್ ಫ್ಯಾಮಿಲಿ: ಶೇ. 75ರಷ್ಟು ಪಾಲು.
  •  ಆದಾರ್ ಪೂನಾವಾಲಾ: ಶೇ. 18ರಷ್ಟು ಪಾಲು.
  • ಮನೋಜ್ ಬಡಾಲೆ ಮತ್ತು ಇತರರು:  ಶೇ. 7ರಷ್ಟು ಪಾಲು

ಈ ಒಪ್ಪಂದವು ಕೇವಲ ಐಪಿಎಲ್ ತಂಡ ಮಾತ್ರವಲ್ಲದೆ, ಸೌತ್ ಆಫ್ರಿಕಾ ಟಿ20 ಲೀಗ್​ನ ಪಾರ್ಲ್ ರಾಯಲ್ಸ್ ಮತ್ತು ಕೆರಿಬಿಯನ್ ಪ್ರೀಮಿಯರ್ ಲೀಗ್‌ನ ಬಾರ್ಬಡೋಸ್ ರಾಯಲ್ಸ್ ತಂಡಗಳನ್ನೂ ಒಳಗೊಂಡಿದೆ. ಅಂದರೆ ಒಂದೇ ಡೀಲ್​ ಮೂಲಕ ಮೂರು ತಂಡಗಳನ್ನು ಖರೀದಿಸಲಾಗಿದೆ.

ಸೋಮಾನಿ ಗ್ರೂಪ್​ನ ಮುಂದಿನ ನಡೆಯೇನು?

ಕಾಲ್ ಸೋಮಾನಿ ಒಕ್ಕೂಟವು ಈ ವಿಚಾರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ರಾಜಸ್ಥಾನ್ ರಾಯಲ್ಸ್ ಮತ್ತು ಮಿತ್ತಲ್-ಪೂನಾವಾಲಾ ನಡುವಿನ ಒಪ್ಪಂದಕ್ಕೆ ಅಡ್ಡಿಯಾಗುವಂತಹ ಪ್ರಬಲ ಕಾನೂನು ಹೆಜ್ಜೆಗಳನ್ನು ಇಡಲು ನಿರ್ಧರಿಸಿದೆ. ಅವರ ಮುಂದಿನ ಪ್ರಮುಖ ನಡೆಗಳು ಹೀಗಿರಲಿವೆ…

  • ನ್ಯಾಯಾಲಯದಲ್ಲಿ ದಾವೆ: ಸೋಮಾನಿ ಗ್ರೂಪ್ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ವಿರುದ್ಧ ಬೃಹತ್ ಮೊತ್ತದ ಪರಿಹಾರ ಕೋರಿ ನ್ಯಾಯಾಲಯದಲ್ಲಿ ಮೊರೆ ಹೋಗಲು ಸಿದ್ಧತೆ ನಡೆಸಿದೆ. ಸುಮಾರು $1.63 ಬಿಲಿಯನ್ ಮೌಲ್ಯದ ಈ ಕಾನೂನು ಹೋರಾಟವು ಐಪಿಎಲ್ ಇತಿಹಾಸದಲ್ಲೇ ಅತಿ ದೊಡ್ಡದಾಗುವ ಸಾಧ್ಯತೆಯಿದೆ.
  • ಬಿಸಿಸಿಐಗೆ ಅಧಿಕೃತ ದೂರು: ಈ ಮಾರಾಟ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲದಿರುವ ಬಗ್ಗೆ ಮತ್ತು ನಿಯಮಗಳ ಉಲ್ಲಂಘನೆಯ ಬಗ್ಗೆ ಬಿಸಿಸಿಐ ಗೆ ಸುದೀರ್ಘ ಪತ್ರ ಬರೆಯಲು ಒಕ್ಕೂಟ ನಿರ್ಧರಿಸಿದೆ. ಬಿಸಿಸಿಐ ಈ ಒಪ್ಪಂದಕ್ಕೆ ಅಂತಿಮ ಮುದ್ರೆ ಒತ್ತದಂತೆ ತಡೆಯುವುದು ಅವರ ಮುಖ್ಯ ಉದ್ದೇಶವಾಗಿದೆ.
  • ತಡೆಯಾಜ್ಞೆಗಾಗಿ ಪ್ರಯತ್ನ: ಮಿತ್ತಲ್ ಮತ್ತು ಪೂನಾವಾಲಾ ಅವರೊಂದಿಗೆ ಮಾಡಿಕೊಂಡಿರುವ ಹೊಸ ಒಪ್ಪಂದದ ಅನುಷ್ಠಾನಕ್ಕೆ ತಡೆಯಾಜ್ಞೆ ತರಲು ಸೋಮಾನಿ ಗ್ರೂಪ್ ಕಾನೂನು ತಜ್ಞರ ಸಲಹೆ ಪಡೆಯುತ್ತಿದೆ. ಒಂದು ವೇಳೆ ತಡೆಯಾಜ್ಞೆ ಸಿಕ್ಕರೆ, 2026ರ ಮೂರನೇ ತ್ರೈಮಾಸಿಕದಲ್ಲಿ ನಡೆಯಬೇಕಿರುವ ಮಾಲೀಕತ್ವ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಳ್ಳಬಹುದು.
  • ಹಣಕಾಸು ನಷ್ಟದ ಪರಿಹಾರ: ಒಪ್ಪಂದದ ಮಾತುಕತೆಗಾಗಿ ತಾವು ವ್ಯಯಿಸಿದ ಸಮಯ, ಸಂಪನ್ಮೂಲ ಮತ್ತು ವಿಶ್ವಾಸಾರ್ಹತೆಗೆ ಧಕ್ಕೆ ತಂದಿದ್ದಕ್ಕಾಗಿ ಭಾರೀ ಪ್ರಮಾಣದ ದಂಡ ಪಾವತಿಸಬೇಕೆಂದು ಅವರು ಒತ್ತಾಯಿಸಲಿದ್ದಾರೆ.

ಇದನ್ನೂ ಓದಿ: RCB ತಂಡಕ್ಕೆ ಬಿಗ್ ಶಾಕ್: ಇಂಗ್ಲೆಂಡ್​ಗೆ ತೆರಳಿದ ಫಿಲ್ ಸಾಲ್ಟ್!

ಒಟ್ಟಿನಲ್ಲಿ, ರಾಜಸ್ಥಾನ್ ರಾಯಲ್ಸ್ ತಂಡದ ಮಾಲೀಕತ್ವದ ಈ ಹಗ್ಗಜಗ್ಗಾಟ ಈಗ ರೋಚಕ ತಿರುವು ಪಡೆದುಕೊಂಡಿದೆ. ಮಿತ್ತಲ್-ಪೂನಾವಾಲಾ ಅವರಂತಹ ದಿಗ್ಗಜರ ಪ್ರವೇಶ ಒಂದೆಡೆಯಾದರೆ, ಕಲ್ ಸೋಮಾನಿ ಒಕ್ಕೂಟದ ಕಾನೂನು ಸಮರದ ಎಚ್ಚರಿಕೆ ಮತ್ತೊಂದೆಡೆ ಫ್ರಾಂಚೈಸಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಬಿಲಿಯನ್ ಡಾಲರ್ ಸಮರದಲ್ಲಿ ಅಂತಿಮವಾಗಿ ಜಯ ಯಾರಿಗೆ ಸಿಗಲಿದೆ? ಎಂಬುದನ್ನು ಕಾದು ನೋಡಬೇಕಿದೆ.

Published On - 2:08 pm, Mon, 4 May 26

Follow Us