IPL 2026 Final: ಈ ಸಲನೂ ಕಪ್ ನಮ್ದು..! ಸತತ 2ನೇ ಬಾರಿಗೆ ಆರ್​ಸಿಬಿ ಮುಡಿಗೇರಿದ ಐಪಿಎಲ್ ಕಿರೀಟ

RCB Wins IPL 2026: ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್‌ನಲ್ಲಿ ಆರ್​ಸಿಬಿ 2026ರ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ. ಕಳೆದ ಆವೃತ್ತಿಯಲ್ಲಿ ಟ್ರೋಫಿ ಬರ ನೀಗಿಸಿದ್ದ ಆರ್​ಸಿಬಿ, ಈ ಬಾರಿ ಗುಜರಾತ್ ತಂಡವನ್ನು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಣಿಸಿ ಸತತ ಎರಡನೇ ಬಾರಿ ಕಪ್ ಗೆದ್ದು ಅಭಿಮಾನಿಗಳಿಗೆ ಡಬಲ್ ಸಂಭ್ರಮ ತಂದಿದೆ. 17 ವರ್ಷಗಳ ಕಾಯುವಿಕೆ ನಂತರ, ಈಗ ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡು ಇತಿಹಾಸ ನಿರ್ಮಿಸಿದೆ.

IPL 2026 Final: ಈ ಸಲನೂ ಕಪ್ ನಮ್ದು..! ಸತತ 2ನೇ ಬಾರಿಗೆ ಆರ್​ಸಿಬಿ ಮುಡಿಗೇರಿದ ಐಪಿಎಲ್ ಕಿರೀಟ
Rcb

Updated on: May 31, 2026 | 11:55 PM

ಆರ್​ಸಿಬಿ (RCB).. ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್‌ನಲ್ಲಿ (IPL) ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ತಂಡ. ಈ ತಂಡದ ಪರವಾಗಿ ಹಲವು ದಿಗ್ಗಜ ಕ್ರಿಕೆಟಿಗರು ಸಾಕಷ್ಟು ವರ್ಷ ಕ್ರಿಕೆಟ್ ಆಡಿದ್ದಾರೆ. ಆದರೆ ಅಂತಹವರ ಉಪಸ್ಥಿತಿಯ ಹೊರತಾಗಿಯೂ ಸತತ 17 ವರ್ಷಗಳವರೆಗೆ ಆರ್​ಸಿಬಿಗೆ ಒಮ್ಮೆಯೂ ಚಾಂಪಿಯನ್‌ ಪಟ್ಟಕ್ಕೇರಲು ಸಾಧ್ಯವಾಗಲಿಲ್ಲ. ಆದರೆ ಕಳೆದ ಆವೃತ್ತಿಯಲ್ಲಿ ಆ ಟ್ರೋಫಿ ಬರವನ್ನು ನೀಗಿಸಿಕೊಂಡು ತನ್ನ ಅಭಿಮಾನಿಗಳು ನೀರಾಳರಾಗುವಂತೆ ಮಾಡಿದ್ದ ಆರ್​ಸಿಬಿ ಇದೀಗ 2026 ರ ಐಪಿಎಲ್‌ನಲ್ಲೂ (IPL 2026) ಟ್ರೋಫಿ ಎತ್ತಿಹಿಡಿಯುವ ಮೂಲಕ ತನ್ನ ಅಭಿಮಾನಿ ಬಳಗಕ್ಕೆ ಡಬಲ್ ಸಂತೋಷ ನೀಡಿದೆ. ಗುಜರಾತ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಗುಜರಾತ್ ತಂಡವನ್ನು ಮಣಿಸಿದ ಆರ್​ಸಿಬಿ ತನ್ನ ಹಾಲಿ ಚಾಂಪಿಯನ್‌ ಪಟ್ಟವನ್ನು ತನ್ನಲ್ಲಿಯೇ ಉಳಿಸಿಕೊಂಡಿದೆ.

5 ವಿಕೆಟ್​ಗಳಿಂದ ಗೆದ್ದ ಆರ್​​ಸಿಬಿ

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಈ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್ ತಂಡ ವಾಷಿಂಗ್ಟನ್ ಸುಂದರ್ ಅವರ ಅರ್ಧಶತಕದ ನೆರವಿನಿಂದ 156 ರನ್​ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಆರ್​ಸಿಬಿ ವಿರಾಟ್ ಕೊಹ್ಲಿ ಅವರ ಅಜೇಯ ಅರ್ಧಶತಕದ ನೆರವಿನಿಂದ 18 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ವಾಸ್ತವವಾಗಿ ಕಳೆದ ಆವೃತ್ತಿಯಲ್ಲಿ ಇದೇ ಮೈದಾನದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಮೊದಲು ಬ್ಯಾಟಿಂಗ್‌ ಮಾಡಿ ಗೆದ್ದಿದ್ದ ಆರ್​ಸಿಬಿ, ಈ ಬಾರಿ ಗುರಿ ಬೆನ್ನಟ್ಟಿ ಗೆಲುವು ಸಾಧಿಸಿತು.

ಗುಜರಾತ್​ಗೆ ಬ್ಯಾಟಿಂಗ್ ವೈಫಲ್ಯ

ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ನಾಯಕ ರಜತ್ ಪಾಟಿದರ್ ಬೌಲಿಂಗ್ ಆಯ್ದುಕೊಂಡರು. ನಾಯಕನ ಈ ಆಯ್ಕೆಯನ್ನು ಸಮರ್ಥಿಸಿಕೊಂಡ ಬೌಲರ್​ಗಳು ಆರಂಭದಿಂದಲೂ ಗುಜರಾತ್ ಬ್ಯಾಟಿಂಗ್‌ ವಿಭಾಗದ ಕತ್ತು ಹಿಸುಕಿದರು. ಇಡೀ ಆವೃತ್ತಿಯಲ್ಲಿ ಗುಜರಾತ್​ ಪರ ರನ್ ಮಳೆ ಹರಿಸಿದ್ದ ಗುಜರಾತ್ ಆರಂಭಿಕ ಜೋಡಿಯಾದ ಶುಭ್​ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಈ ಪಂದ್ಯದಲ್ಲಿ ಆರ್​ಸಿಬಿ ಬೌಲರ್​ಗಳ ಮುಂದೆ ಮಂಡಿಯೂರಿದರು. ನಾಯಕ ಗಿಲ್ ಕೇವಲ 10 ರನ್​ಗಳಿಗೆ ಹೇಜಲ್​ವುಡ್​ಗೆ ಬಲಿಯಾದರೆ, ಸಾಯಿ ಸುದರ್ಶನ್ ಕೂಡ 12 ರನ್ ಗಳಿಸಿ ಔಟ್ ಆದರು. ಇವರಿಬ್ಬರ ವಿಕೆಟ್ ಬೇಗನೇ ಪತನಗೊಂಡಿದ್ದರಿಂದ ಅನುಭವಿ ಜೋಸ್ ಬಟ್ಲರ್ ಮೇಲೆ ಇನ್ನಿಂಗ್ಸ್ ನಿಭಾಯಿಸುವ ಜವಾಬ್ದಾರಿ ಬಿದ್ದಿತು. ಆದರೆ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಎಸೆದ ವೈಡ್ ಯಾರ್ಕರ್, ಬಟ್ಲರ್ ಅವರ ಇನ್ನಿಂಗ್ಸ್​ಗೆ ಅಂತ್ಯ ಹಾಡಿತು.

ಸುಂದರ್ ಅರ್ಧಶತಕದ ಇನ್ನಿಂಗ್ಸ್

ಅನುಭವಿ ಆಟಗಾರರ ವಿಕೆಟ್ ಪತನದ ನಡುವೆಯೂ ತಂಡದ ಪರ ಹೋರಾಟದ ಇನ್ನಿಂಗ್ಸ್ ಆಡಿದ ವಾಷಿಂಗ್ಟನ್ ಸುಂದರ್ 37 ಎಸೆತಗಳಲ್ಲಿ ಅಜೇಯ 50 ರನ್​ಗಳ ಇನ್ನಿಂಗ್ಸ್ ಆಡಿದರು. ಸುಂದರ್​ ಅವರ ಇನ್ನಿಂಗ್ಸ್​ನಲ್ಲಿ ಆರ್​ಸಿಬಿ ಆಟಗಾರ ಜೇಡನ್ ಕಾಕ್ಸ್ ಅವರ ಕೊಡುಗೆಯೂ ಇತ್ತು. ಸುಂದರ್ 4 ರನ್ ಬಾರಿಸಿದ್ದಾಗ ಸುಲಭ ಕ್ಯಾಚ್ ನೀಡಿದ್ದರು. ಆದರೆ ಕಾಕ್ಸ್ ಆ ಕ್ಯಾಚ್ ಕೈಚೆಲ್ಲಿದರು. ಇಲ್ಲದಿದ್ದರೆ, ಗುಜರಾತ್ ತಂಡವನ್ನು ಎರಡಂಕಿಗೆ ಕಟ್ಟಿಹಾಕಬಹುದಿತ್ತು. ಆರ್​ಸಿಬಿ ಪರ ಮಾರಕ ದಾಳಿ ನಡೆಸಿದ ರಸಿಕ್ ಸಲಾಂ 4 ಓವರ್‌ಗಳಲ್ಲಿ 27 ರನ್‌ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಜಲ್‌ವುಡ್ ತಲಾ 2 ವಿಕೆಟ್ ಪಡೆದರೆ, ಕೃನಾಲ್ ಪಾಂಡ್ಯ ಕೂಡ 1 ವಿಕೆಟ್ ಪಡೆದರು.

RCB vs GT Final: ಕೃನಾಲ್ ಪಾಂಡ್ಯ ಬೌಲಿಂಗ್​ಗೆ ಕ್ರಿಕೆಟ್ ದೇವರೂ ಫಿದಾ..! ಏನಂದ್ರು ನೋಡಿ

ಆರ್​ಸಿಬಿಗೆ ಸ್ಫೋಟಕ ಆರಂಭ

156 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ವೆಂಕಟೇಶ್ ಅಯ್ಯರ್ ಮತ್ತು ವಿರಾಟ್ ಕೊಹ್ಲಿ ಸ್ಫೋಟಕ ಆರಂಭ ನೀಡಿದರು. ವೆಂಕಟೇಶ್ ಅಯ್ಯರ್ ಗಾಯದ ನಡುವೆಯೂ 16 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಿತ 32 ರನ್ ಗಳಿಸಿ ಔಟಾದರು. ಆದಾಗ್ಯೂ ಅವರು ತಂಡದ ಗೆಲುವನ್ನು ಭಾಗಶಃ ಖಚಿತಪಡಿಸಿದ್ದರು. ಆದರೆ ಆ ನಂತರ ಬಂದ ಕನ್ನಡಿಗ ದೇವದತ್ ಪಡಿಕ್ಕಲ್ ಕೇವಲ 1 ರನ್‌ಗೆ ಔಟಾದರು. ಆ ನಂತರ ರಶೀದ್ ಖಾನ್ ಒಂದೇ ಓವರ್‌ನಲ್ಲಿ ರಜತ್ ಪಾಟಿದಾರ್ ಮತ್ತು ಕೃನಾಲ್ ಪಾಂಡ್ಯ ಅವರನ್ನು ಔಟ್ ಮಾಡುವ ಮೂಲಕ ಗುಜರಾತ್​ಗೆ ಗೆಲುವಿನ ಆಸೆ ಹುಟ್ಟುವಂತೆ ಮಾಡಿದರು. ಆದರೆ ಈ ಫೈನಲ್ ಪಂದ್ಯದಲ್ಲಿ ತನ್ನ ಅನುಭವವನ್ನೇಲ್ಲ ಧಾರೆ ಎರೆದ ವಿರಾಟ್ ಕೊಹ್ಲಿ, ಗುರಿ ಬೆನ್ನಟ್ಟುವಾಗ ಏಕೆ ನಾನು ಅಪಾಯಕಾರಿ ಬ್ಯಾಟ್ಸ್‌ಮನ್ ಎಂಬುದನ್ನು ಮತ್ತೊಮ್ಮೆ ಸಾಭಿತುಪಡಿಸಿದರು.

ಅತಿ ವೇಗದ ಅರ್ಧಶತಕ ಬಾರಿಸಿದ ಕೊಹ್ಲಿ

ಈ ಹಂತದಲ್ಲಿ ಕೊಹ್ಲಿಗೆ ಸಾಥ್ ನೀಡಿದ ಟಿಮ್ ಡೇವಿಡ್ 17 ಎಸೆತಗಳಲ್ಲಿ 24 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಈ ಮಧ್ಯೆ ವಿರಾಟ್ ಕೊಹ್ಲಿ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದು ಕಿಂಗ್ ಕೊಹ್ಲಿಯ ಐಪಿಎಲ್ ವೃತ್ತಿಜೀವನದ ಅತಿ ವೇಗದ ಅರ್ಧಶತಕವೂ ಆಗಿತ್ತು. ಅಂತಿಮವಾಗಿ ಕೊಹ್ಲಿ 42 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಿತ ಅಜೇಯ 75 ರನ್ ಬಾರಿಸುವ ಮೂಲಕ ತಂಡವನ್ನು ಮತ್ತೊಮ್ಮೆ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:26 pm, Sun, 31 May 26

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us