IPL 2026: ಆರ್ಸಿಬಿಯ ಉಳಿದೆರಡು ಲೀಗ್ ಪಂದ್ಯಗಳು ಯಾರ ವಿರುದ್ಧ? ಆ 2 ತಂಡಗಳ ಪ್ಲೇಆಫ್ ಲೆಕ್ಕಾಚಾರವೇನು?
RCB's IPL 2026 Playoff Path: ಐಪಿಎಲ್ 2026 ರಲ್ಲಿ ಕೆಕೆಆರ್ ವಿರುದ್ಧದ ಗೆಲುವಿನ ನಂತರ ಆರ್ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ, ಆದರೆ ಪ್ಲೇಆಫ್ ಸ್ಥಾನ ಇನ್ನೂ ಖಚಿತವಾಗಿಲ್ಲ. ಕೆಕೆಆರ್ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ. ಆರ್ಸಿಬಿ ತನ್ನ ಟಾಪ್ 2 ಸ್ಥಾನ ಭದ್ರಪಡಿಸಿಕೊಳ್ಳಲು ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಮುಂದಿನ ಎರಡು ನಿರ್ಣಾಯಕ ಪಂದ್ಯಗಳನ್ನು ಗೆಲ್ಲಲೇಬೇಕು. ಈ ಗೆಲುವುಗಳು ಆರ್ಸಿಬಿಗೆ ಪ್ಲೇಆಫ್ ಹಾದಿ ಸುಗಮಗೊಳಿಸಲಿವೆ.

ಐಪಿಎಲ್ 2026 (IPL 2026) ರ 57 ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿದ ಆರ್ಸಿಬಿ (RCB) ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದಲ್ಲದೆ 16 ಪಾಯಿಂಟ್ಗಳೊಂದಿಗೆ ಪ್ಲೇಆಫ್ಗೆ ಮತ್ತಷ್ಟು ಹತ್ತಿರವಾಗಿದೆ. ಪ್ಲೇಆಫ್ ದೃಷ್ಟಿಯಿಂದ ಉಭಯ ತಂಡಗಳಿಗೂ ಈ ಪಂದ್ಯ ಬಹಳ ಮುಖ್ಯವಾಗಿತ್ತು. ಅದರಲ್ಲೂ ಕೆಕೆಆರ್ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಆದರೆ ಈ ಪಂದ್ಯದಲ್ಲಿ ಆರ್ಸಿಬಿ ಎದುರು ಶರಣಾದ ಕೆಕೆಆರ್ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ. ಇತ್ತ ಆರ್ಸಿಬಿ 16 ಅಂಕಗಳನ್ನು ಹೊಂದಿದ್ದರೂ ಪ್ಲೇಆಫ್ಗೆ ತನ್ನ ಸ್ಥಾನವನ್ನು ಇನ್ನು ಖಚಿತಪಡಿಸಿಕೊಂಡಿಲ್ಲ. ಹೀಗಾಗಿ ಲೀಗ್ ಹಂತದಲ್ಲಿ ಉಳಿದಿರುವ ಎರಡೂ ಪಂದ್ಯಗಳು ಆರ್ಸಿಬಿ ಪಾಲಿಗೆ ನಿರ್ಣಾಯಕವಾಗಿವೆ. ಈ ಎರಡು ಪಂದ್ಯಗಳಲ್ಲಿ ಆರ್ಸಿಬಿ ಗೆದ್ದರಷ್ಟೇ ಟಾಪ್ 2 ರಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ. ಸೋತರೆ ಪ್ಲೇಆಫ್ನಿಂದಲೇ ಹೊರಬೀಳಲಿದೆ.
ಮುಂದಿನ ಎದುರಾಳಿ ಯಾರು?
ಆರ್ಸಿಬಿ ತನ್ನ ಮುಂದಿನ ಎರಡು ಲೀಗ್ ಪಂದ್ಯಗಳನ್ನು ತವರಿನಿಂದ ಹೊರಗೆ ಆಡಲಿದೆ. ಮೊದಲ ಪಂದ್ಯದಲ್ಲಿ ಕಳೆದ ಬಾರಿಯ ಫೈನಲ್ ಎದುರಾಳಿ ಪಂಜಾಬ್ ಕಿಂಗ್ಸ್ ತಂಡವನ್ನು ಮೇ 17 ರಂದು ಎದುರಿಸಿದರೆ, ಕೊನೆಯ ಲೀಗ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮೇ 22 ರಂದು ಎದುರಿಸಲಿದೆ. ಈ ಎರಡು ತಂಡಗಳು ಪ್ರಸ್ತುತ ಅದ್ಭುತ ಫಾರ್ಮ್ನಲ್ಲಿದ್ದು ಈ ತಂಡಗಳನ್ನು ಮಣಿಸುವುದು ಆರ್ಸಿಬಿಗೆ ಸವಾಲಿನ ಕೆಲಸವಾಗಿದೆ. ಇದರ ಜೊತೆಗೆ ಎದುರಾಳಿ ತಂಡಗಳಿಗೆ ತವರಿನ ಲಾಭ ಬೇರೆ ಸಿಗುವುದರಿಂದ ಆರ್ಸಿಬಿ ವಿಭಿನ್ನ ತಂತ್ರದೊಂದಿಗೆ ಕಣಕ್ಕಿಳಿಯಬೇಕಾಗುತ್ತದೆ.
ಆರ್ಸಿಬಿ ಈ ಎರಡು ಪಂದ್ಯಗಳಲ್ಲಿ ಕನಿಷ್ಠ ಒಂದು ಪಂದ್ಯವನ್ನಾದರೂ ಗೆಲ್ಲಬೇಕು. ಆಗ ಮಾತ್ರ ಅದಕ್ಕೆ ಪ್ಲೇಆಫ್ ಹಾದಿ ತೆರೆಯಲಿದೆ. ಒಂದು ವೇಳೆ ಆರ್ಸಿಬಿ ಎರಡೂ ಪಂದ್ಯಗಳಲ್ಲಿ ಸೋತರೆ ಇತರ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗಬೇಕಾಗುತ್ತದೆ. ಹೀಗಾಗಿ ಆರ್ಸಿಬಿ ಯಾವುದೇ ಅಡೆತಡೆಗಳಿಲ್ಲದೆ ಪ್ಲೇಆಫ್ಗೇರಬೇಕೆಂದರೆ ಈ ಎರಡೂ ತಂಡಗಳನ್ನು ಮಣಿಸಿದರೆ ಒಳಿತು. ಇತ್ತ ಆರ್ಸಿಬಿಗೆ ಎದುರಾಳಿಗಳಾಗಿರುವ ಆ ಎರಡು ತಂಡಗಳಿಗೂ ಆರ್ಸಿಬಿ ವಿರುದ್ಧದ ಗೆಲುವು ಪ್ಲೇಆಫ್ ದೃಷ್ಟಿಯಿಂದ ಅತ್ಯವಶ್ಯಕವಾಗಿದೆ.
ಪಂಜಾಬ್ಗೆ ಗೆಲುವು ಅತ್ಯವಶ್ಯಕ
ಆರ್ಸಿಬಿಗೆ ಮುಂದಿನ ಎದುರಾಳಿಯಾಗಿರುವ ಪಂಜಾಬ್ ಕಿಂಗ್ಸ್ಗೆ ಲೀಗ್ ಹಂತದಲ್ಲಿ ಇನ್ನ 3 ಪಂದ್ಯಗಳು ಬಾಕಿ ಉಳಿದಿವೆ. ಪ್ರಸ್ತುತ 6 ಗೆಲುವುಗಳೊಂದಿಗೆ 13 ಅಂಕಗಳನ್ನು ಹೊಂದಿರುವ ಪಂಜಾಬ್ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಹೀಗಾಗಿ ಪಂಜಾಬ್ ಪ್ಲೇಆಫ್ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಉಳಿದಿರುವ 3 ಪಂದ್ಯಗಳನ್ನು ಗೆಲ್ಲಬೇಕಿದೆ. ಆದರೆ ಪಂಜಾಬ್ ತಂಡ ಕಳೆದ ಐದು ಪಂದ್ಯಗಳಲ್ಲಿ ಸೋತು ಸೋಲಿನ ಸುಳಿಗೆ ಸಿಲುಕಿದೆ. ಹೀಗಾಗಿ ಪಂಜಾಬ್ ಪ್ಲೇಆಫ್ ರೇಸ್ನಲ್ಲಿ ಉಳಿಯಬೇಕೆಂದರೆ ಆರ್ಸಿಬಿ ವಿರುದ್ಧ ಹೈವೋಲ್ಟೇಜ್ ಕದನವನ್ನು ಗೆಲ್ಲಲೇಬೇಕಿದೆ.
RCB vs KKR: ಕಿಂಗ್ ಕೊಹ್ಲಿ ಶತಕ; ಕೆಕೆಆರ್ ವಿರುದ್ಧ ಗೆದ್ದ ಆರ್ಸಿಬಿಗೆ ಅಗ್ರಸ್ಥಾನ
ಸನ್ರೈಸರ್ಸ್ಗೆ ಸೇಡಿನ ಸಮರ
ಪಂಜಾಬ್ ಜೊತೆಗೆ ಸನ್‌ರೈಸರ್ಸ್ ಹೈದರಾಬಾದ್ ಕೂಡ ಪ್ಲೇಆಫ್ ರೇಸ್ನಲ್ಲಿದೆ. ಪ್ರಸ್ತುತ ಆಡಿರುವ 12 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದಿರುವ ಸನ್‌ರೈಸರ್ಸ್ 14 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಸನ್ರೈಸರ್ಸ್ಗೆ ಲೀಗ್ ಹಂತದಲ್ಲಿ ಇನ್ನ 2 ಪಂದ್ಯಗಳು ಬಾಕಿ ಉಳಿದಿದ್ದು ಅದರಲ್ಲಿ ಒಂದು ಪಂದ್ಯವನ್ನು ಆರ್ಸಿಬಿ ವಿರುದ್ಧ ಆಡಲಿದೆ. ಆರ್ಸಿಬಿ ವಿರುದ್ಧ ಗೆಲ್ಲುವುದರ ಜೊತೆಗೆ ಇನ್ನೊಂದು ಪಂದ್ಯದಲ್ಲೂ ಸನ್‌ರೈಸರ್ಸ್ ಗೆಲ್ಲಬೇಕಿದೆ. ಅದರಲ್ಲೂ ಆರ್ಸಿಬಿ ವಿರುದ್ಧ ಲೀಗ್ನ ಉದ್ಘಾಟನಾ ಪಂದ್ಯದಲ್ಲೇ ಸೋತಿರುವ ಸನ್ರೈಸರ್ಸ್ಗೆ ಇದು ಸೇಡಿನ ಸಮರವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:45 pm, Thu, 14 May 26





