ಕೊನೆಯ 5 ಎಸೆತಗಳಲ್ಲಿ 26 ರನ್​: RCB ಆಟಗಾರನ ಬಿರುಗಾಳಿ ಬ್ಯಾಟಿಂಗ್

Romario Shepherd: ಈ ಬಾರಿಯ ಐಪಿಎಲ್ ಮೆಗಾ ಹರಾಜಿನ ಮೂಲಕ ವೆಸ್ಟ್ ಇಂಡೀಸ್​ನ ಆಲ್​ರೌಂಡರ್ ರೊಮೊರಿಯೊ ಶೆಫರ್ಡ್ ಅವರನ್ನು ಆರ್​ಸಿಬಿ 1.5 ಕೋಟಿ ರೂ.ಗೆ ಖರೀದಿಸಿದೆ. ಇದೀಗ ರೊಮೊರಿಯೊ ಇಂಟರ್​ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನದೊಂದಿಗೆ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಕೊನೆಯ 5 ಎಸೆತಗಳಲ್ಲಿ 26 ರನ್​: RCB ಆಟಗಾರನ ಬಿರುಗಾಳಿ ಬ್ಯಾಟಿಂಗ್
Romario Shepherd
Follow us
ಝಾಹಿರ್ ಯೂಸುಫ್
|

Updated on: Jan 22, 2025 | 9:53 AM

ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಇಂಟರ್​ನ್ಯಾಷನಲ್​ ಲೀಗ್ ಟಿ20 ಟೂರ್ನಿಯ 14ನೇ ಪಂದ್ಯದಲ್ಲಿ ರೊಮೊರಿಯೊ ಶೆಫರ್ಡ್ ಬಿರುಗಾಳಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಕೊನೆಯ ಓವರ್​ನಲ್ಲಿ ರೊಮಾರಿಯೊ ಬ್ಯಾಟ್​ನಿಂದ ಮೂಡಿಬಂದ ರನ್​​ಗಳ ನೆರವಿನಿಂದ ಈ ಪಂದ್ಯದಲ್ಲಿ ಎಂಐ ಎಮಿರೇಟ್ಸ್ ತಂಡವು ಗೆಲುವು ಸಾಧಿಸಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಅಬುಧಾನಿ ನೈಟ್ ರೈಡರ್ಸ್ ತಂಡದ ನಾಯಕ ಸುನಿಲ್ ನರೈನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಎಂಐ ಎಮಿರೇಟ್ಸ್ ಪರ ಕುಸಾಲ್ ಪೆರೇರಾ 23 ರನ್ ಬಾರಿಸಿದರೆ, ಮುಹಮ್ಮದ್ ವಸೀಮ್ 38 ರನ್​ ಗಳಿಸಿದರು.

ಇನ್ನು ನಾಯಕ ನಿಕೋಲಸ್ ಪೂರನ್ 26 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ 49 ರನ್ ಸಿಡಿಸಿದರು. ಇದಾಗ್ಯೂ ಎಂಐ ಎಮಿರೇಟ್ಸ್ ತಂಡದ ಸ್ಕೋರ್ 150ರ ಗಡಿದಾಟಿರಲಿಲ್ಲ.

ರೊಮೊರಿಯೊ ರೌದ್ರವತಾರ:

7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರೊಮೊರಿಯಾ ಶೆಫರ್ಡ್ ಕೊನೆಯ ಓವರ್​​ಗಳ ವೇಳೆ ಅಬ್ಬರಿಸಿದರು. ಅದರಲ್ಲೂ ಅಲಿ ಖಾನ್ ಎಸೆದ ಕೊನೆಯ ಓವರ್​ನಲ್ಲಿ 3 ಸಿಕ್ಸ್ ಹಾಗೂ 2 ಫೋರ್​ ಚಚ್ಚುವ ಮೂಲಕ ಒಟ್ಟು 26 ರನ್ ಕಲೆಹಾಕಿದರು. ಈ ಮೂಲಕ ಎಂಐ ಎಮಿರೇಟ್ಸ್ ತಂಡದ ಸ್ಕೋರ್ ಅನ್ನು 20 ಓವರ್​ಗಳಲ್ಲಿ 186 ಕ್ಕೆ ತಂದು ನಿಲ್ಲಿಸಿದರು.

187 ರನ್​ಗಳ ಕಠಿಣ ಗುರಿ:

187 ರನ್​​ಗಳ ಕಠಿಣ ಗುರಿ ಪಡೆದ ಅಬುಧಾಬಿ ನೈಟ್ ರೈಡರ್ಸ್ ತಂಡಕ್ಕೆ ಕೈಲ್ ಮೇಯರ್ಸ್ (22) ಹಾಗೂ ಅ್ಯಂಡ್ರಿಸ್ ಗೌಸ್ (34) ಉತ್ತಮ ಆರಂಭ ಒದಗಿಸಿದ್ದರು. ಆದರೆ ಆರಂಭಿಕರಿಬ್ಬರು ಪೆವಿಲಿಯನ್​ಗೆ ಮರಳುತ್ತಿದ್ದಂತೆ ದಿಢೀರ್ ಕುಸಿತಕ್ಕೊಳಗಾದ ನೈಟ್ ರೈಡರ್ಸ್ 56 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡಿತು.

ಈ ಹಂತದಲ್ಲಿ ಕಣಕ್ಕಿಳಿದ ಆ್ಯಂಡ್ರೆ ರಸೆಲ್ 23 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 3 ಫೋರ್​​ಗಳೊಂದಿಗೆ 37 ರನ್ ಬಾರಿಸಿದರು. ಈ ಮೂಲಕ ತಂಡದ ಮೊತ್ತವನ್ನು 150ರ ಗಡಿದಾಟಿಸಿದರು. ಅಂತಿಮವಾಗಿ ಅಬುಧಾಬಿ ನೈಟ್ ರೈಡರ್ಸ್ ತಂಡವು 9 ವಿಕೆಟ್ ಕಳೆದುಕೊಂಡು 159 ರನ್​​ಗಳಿಸಿ 28 ರನ್​​ಗಳಿಂದ ಸೋಲೊಪ್ಪಿಕೊಂಡಿತು.

ಮಿಂಚಿದ ಆರ್​ಸಿಬಿ ಆಟಗಾರ:

ಈ ಪಂದ್ಯದಲ್ಲಿ ಬ್ಯಾಟಿಂಗ್​ನಲ್ಲಿ 13 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ ರೊಮೊರಿಯಾ ಶೆಫರ್ಡ್ ಅಜೇಯ 38 ರನ್ ಬಾರಿಸಿದ್ದರು. ಅದರಲ್ಲೂ ಕೊನೆಯ ಓವರ್​ನಲ್ಲಿ 26 ರನ್​ ಕಲೆಹಾಕಿದ್ದರು.

ಇನ್ನು ಬೌಲಿಂಗ್​ನಲ್ಲಿ 2 ಓವರ್​ಗಳಲ್ಲಿ 14 ರನ್ ನೀಡಿ 2 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆಲ್​ರೌಂಡರ್​ ಪ್ರದರ್ಶನದ ಫಲವಾಗಿ ರೊಮೊರಿಯೊ ಶೆಫರ್ಡ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿಯಿತು.

ಹೀಗೆ ಇಂಟರ್​ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ರೊಮಾರಿಯೊ ಶೆಫರ್ಡ್ ಅವರು ಈ ಬಾರಿಯ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿಯಲಿದ್ದಾರೆ.