
IPL 2025: ಮಾರ್ಚ್ 20 ರಂದು ನಡೆದ ಐಪಿಎಲ್ನ 37ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಪಂಜಾಬ್ ಕಿಂಗ್ಸ್ (PBKS) ತಂಡ ಸೋಲನುಭವಿಸಿದೆ. ಈ ಸೋಲಿನ ಬೆನ್ನಲ್ಲೇ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರ ಸಹೋದರಿ ಶ್ರೇಷ್ಠಾ ಅಯ್ಯರ್ ವಿರುದ್ಧ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಮುಗಿಬಿದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ಕುಟುಂಬದವರನ್ನು ಗುರಿಯಾಗಿಸಿದವರ ವಿರುದ್ಧ ಶ್ರೇಷ್ಠಾ ಅಯ್ಯರ್ ಪೋಸ್ಟ್ ಹಂಚಿಕೊಳ್ಳುವ ಮೂಲಕ ಆಕ್ರೋಶವನ್ನು ಹೊರಹಾಕಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡದ ಸೋಲಿನ ಬೆನ್ನಲ್ಲೇ ಇನ್ಸ್ಟಾಗ್ರಾಮ್ ಸ್ಟೋರಿ ಹಂಚಿಕೊಂಡಿರುವ ಶ್ರೇಷ್ಠಾ, ಈ ಪರಾಜಯಕ್ಕೆ ನಮ್ಮ ಕುಟುಂಬವನ್ನು ದೂಷಿಸುತ್ತಿದ್ದಾರೆ. ನಿಜಕ್ಕೂ ಇದು ತುಂಬಾ ದುಃಖಕರ ವಿಷಯ. ನಾವು ದೈಹಿಕವಾಗಿ ಅಲ್ಲಿ ಇದ್ದರೂ ಅಥವಾ ಇಲ್ಲದಿದ್ದರೂ, ಪಂಜಾಬ್ ಕಿಂಗ್ಸ್ ತಂಡಕ್ಕೆ ನಮ್ಮ ಬೆಂಬಲಕ್ಕೆ ಸಾಟಿಯಿಲ್ಲ.
ಇದೀಗ ಸೋಲಿಗೆ ನನ್ನನ್ನೇ ದೂಷಿಸುತ್ತಿರುವವರೇ, ನಿಮ್ಮ ಆಲೋಚನೆ ನಗೆಪಾಟಲಿಗೆ ಈಡಾಗಿಸುವಂತಿದೆ. ಅಲ್ಲದೆ ನಾಚಿಕೆಗೇಡಿನ ಸಂಗತಿಯೂ ಆಗಿದೆ. ನಾನು ಈ ಹಿಂದೆ ಹಲವು ಪಂದ್ಯಗಳ ವೇಳೆ ಕಾಣಿಸಿಕೊಂಡಿದ್ದೇನೆ. ಅದು ಟೀಮ್ ಇಂಡಿಯಾ ಆಗಿರಲಿ ಅಥವಾ ಬೇರೆ ಯಾವುದೇ ಪಂದ್ಯವಾಗಿರಲಿ. ಈ ವೇಳೆ ನಾವು ಹೆಚ್ಚಿನದನ್ನು ಗೆದ್ದಿದ್ದೇವೆ. ನಿಮಗೆ ಸತ್ಯ ಬೇಕಿಲ್ಲ. ತೆರೆಮರೆಯಲ್ಲಿ ನಿಂತು ಟ್ರೋಲ್ ಮಾಡುವುದಷ್ಟೇ ನಿಮ್ಮ ಕೆಲಸವೆಂದು ಭಾವಿಸುತ್ತೇನೆ.
ನಾನು ಯಾವಾಗಲೂ ನನ್ನ ಸಹೋದರ ಮತ್ತು ಅವನ ತಂಡಕ್ಕೆ ಸಂಪೂರ್ಣ ಬೆಂಬಲ ಸೂಚಿಸುತ್ತೇನೆ. ನಿಮ್ಮ ಅಸಂಬದ್ಧ ಹೇಳಿಕೆಗಳು ನನ್ನಲ್ಲಿ ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ. ಇದು ನಿಮ್ಮ ಉದ್ದೇಶವನ್ನು ತೋರಿಸುತ್ತದೆ. ತಂಡ ಗೆದ್ದರೂ ಸೋತರೂ ನನ್ನ ಬೆಂಬಲ ಅದರೊಂದಿಗಿದೆ. ಇದು ನಿಜವಾದ ಸಪೋರ್ಟ್.
ಇವತ್ತು ಪಂಜಾಬ್ ಕಿಂಗ್ಸ್ ತಂಡದ ದಿನವಾಗಿರಲಿಲ್ಲ. ಆದರೆ ಗೆಲುವು ಮತ್ತು ಸೋಲು ಆಟದ ಒಂದು ಭಾಗ. ಆನ್‌ಲೈನ್‌ನಲ್ಲಿ ಟ್ರೋಲ್ ಮಾಡುವುದನ್ನು ಬಿಟ್ಟು ಬೇರೆ ಏನನ್ನಾದರೂ ಮಾಡುವ ಅಥವಾ ತಿಳಿದುಕೊಳ್ಳುವ ಬಗ್ಗೆ ನೀವು ಯೋಚಿಸಿ. ಆಗ ಮಾತ್ರ ನಿಮಗೆ ಕೆಲ ವಿಷಯಗಳು ಅರ್ಥವಾಗುತ್ತವೆ. ಹಾಗಾಗಿ ಮುಂದಿನ ಬಾರಿ ಇಂತಹ ಕೆಲಸವನ್ನು ಮಾಡುವ ಮೊದಲು, ಯಾರು ಏನು ಮಾಡ್ತಿದ್ದಾರೆ, ಏನು ಮಾಡ್ತಿಲ್ಲ ಎಂಬುದನ್ನು ಎರಡು ಬಾರಿ ಯೋಚಿಸಿ ಇಂತಹ ಕಾಯಕಕ್ಕೆ ಕೈ ಹಾಕಿ ಎಂದು ಶ್ರೇಷ್ಠಾ ಅಯ್ಯರ್ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಮುಲ್ಲನ್ಪುರ್ನ ಎಂವೈಎಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 156 ರನ್ ಕಲೆಹಾಕಿತು.
ಇದನ್ನೂ ಓದಿ: VIDEO: RCB ಅಭಿಮಾನಿಗಳ ಗಮನಕ್ಕೆ: ನೀವು ಸುಳ್ಳಿಗೆ ಮರುಳಾಗಿದ್ದೀರಿ
ಈ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18.5 ಓವರ್ಗಳಲ್ಲಿ 159 ರನ್ ಬಾರಿಸಿ 7 ವಿಕೆಟ್ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಆರ್ಸಿಬಿ ತಂಡ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.