
ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಬಿಸಿಸಿಐ (BCCI), ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ರೋಹಿತ್ ಶರ್ಮಾ (Rohit Sharma) ಬದಲಿಗೆ ಶುಭ್ಮನ್ ಗಿಲ್ ಅವರನ್ನು ಏಕದಿನ ತಂಡಕ್ಕೆ ಹೊಸ ನಾಯಕನನ್ನಾಗಿ ನೇಮಿಸಿದೆ. ಹೀಗಾಗಿ ರೋಹಿತ್ ಶರ್ಮಾ ಈಗ ಬ್ಯಾಟ್ಸ್‌ಮನ್ ಆಗಿ ತಂಡದಲ್ಲಿ ಆಡಲಿದ್ದಾರೆ. 2021 ರಲ್ಲಿ ವಿರಾಟ್ ಕೊಹ್ಲಿ ಬದಲಿಗೆ ರೋಹಿತ್ ಅವರನ್ನು ನಾಯಕನನ್ನಾಗಿ ನೇಮಿಸಲಾಯಿತು. ಇದೀಗ ರೋಹಿತ್ರನ್ನು ಕೆಳಗಿಳಿಸಿ ಶುಭ್ಮನ್ ಗಿಲ್ಗೆ (Shubman Gill) ನೀಡಲಾಗಿದೆ. ಈ ನಡುವೆ ನಾಯಕತ್ವ ಕಳೆದುಕೊಂಡಿರುವ ರೋಹಿತ್ ಶರ್ಮಾ ಬಗ್ಗೆ ವ್ಯಂಗ್ಯವಾಡಿ ವಿರಾಟ್ ಕೊಹ್ಲಿ (Virat Kohli), ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ ಎಂಬ ಸುದ್ದಿ ಗಾಳಿಯಂತೆ ಹರಿದಾಡುತ್ತಿದೆ.
ಟೀಂ ಇಂಡಿಯಾದ ಇಬ್ಬರು ಲೆಜೆಂಡರಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವಿನ ಬಿರುಕಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ವದಂತಿಗಳು ಹರಿದಾಡುತ್ತಿರುತ್ತವೆ. ಈ ಬಾರಿ, ವೈರಲ್ ಆಗಿರುವ ಪೋಸ್ಟ್ ಮತ್ತೊಂದು ಕೋಲಾಹಲಕ್ಕೆ ಕಾರಣವಾಗಿದ್ದು, ರೋಹಿತ್ ಶರ್ಮಾ ಅವರನ್ನು ಏಕದಿನ ನಾಯಕತ್ವದಿಂದ ತೆಗೆದುಹಾಕಿದ ನಂತರ, ವಿರಾಟ್ ಇನ್‌ಸ್ಟಾಗ್ರಾಮ್ ಸ್ಟೋರಿಯ ಮೂಲಕ ಅವರನ್ನು ಅಪಹಾಸ್ಯ ಮಾಡಿದ್ದಾರೆ ಎಂದು ಹೇಳಲಾಗಿದೆ. ಹೇಳಿಕೆಯ ಪ್ರಕಾರ, ವಿರಾಟ್ ಇನ್‌ಸ್ಟಾಗ್ರಾಮ್ ಸ್ಟೋರಿಯನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು ‘ಜೀವನವು ಒಂದು ಚಕ್ರವಿದಂತೆ, ನೀವು ಏನು ಕೊಡುತ್ತೀರೋ ಅದು ನಿಮಗೆ ವಾಪಸ್ ಸಿಗುತ್ತದೆ’ ಎಂದು “ಕರ್ಮ” ಎಂಬ ಪದದೊಂದಿಗೆ ಬರೆದಿದ್ದಾರೆ.
ಆದಾಗ್ಯೂ, ಈ ಪೋಸ್ಟ್ನ ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ, ಈ ಪೋಸ್ಟ್ ಸತ್ಯಕ್ಕೆ ದೂರವಾಗಿದೆ. ಅಂದರೆ ವಿರಾಟ್ ಕೊಹ್ಲಿ ಅವರ ಅಧಿಕೃತ ಖಾತೆಯಿಂದ ಈ ರೀತಿಯ ಯಾವುದೇ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿಲ್ಲ. ಬದಲಿಗೆ ಈ ಪೋಸ್ಟ್ ಅನ್ನು AI ತಂತ್ರಜ್ಞಾನವನ್ನು ಬಳಸಿಕೊಂಡು ರಚಿಸಲಾಗಿದೆ.
IND vs AUS: ಶುಭ್ಮನ್ ಗಿಲ್ಗೆ ಏಕದಿನ ನಾಯಕತ್ವ; ವಿಶ್ವಕಪ್ ಆಡ್ತಾರಾ ರೋಹಿತ್, ಕೊಹ್ಲಿ?
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಪ್ರವಾಸದ ಏಕದಿನ ತಂಡದ ಭಾಗವಾಗಿದ್ದಾರೆ. ಇಬ್ಬರೂ ಆಟಗಾರರು ಕೊನೆಯ ಬಾರಿಗೆ 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಪರ ಆಡಿದ್ದರು. ಇದರರ್ಥ ಅವರು ಸುಮಾರು ಏಳು ತಿಂಗಳ ನಂತರ ಟೀಂ ಇಂಡಿಯಾ ಪರ ಮತ್ತೆ ಆಡಲಿದ್ದಾರೆ. ಅಲ್ಲದೆ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ಭಾರತ ತಂಡದ ಮೊದಲ ಏಕದಿನ ಸರಣಿ ಇದಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:42 pm, Sun, 5 October 25