AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND A vs AUS A: ಸೋಲಿನಿಂದ ಪಾರಾಗಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಗೆದ್ದ ಭಾರತ

India A vs Australia A: ಕಾನ್ಪುರದಲ್ಲಿ ನಡೆದ ಭಾರತ ಎ ಮತ್ತು ಆಸ್ಟ್ರೇಲಿಯಾ ಎ ನಡುವಿನ ರೋಚಕ ಮೂರನೇ ಏಕದಿನ ಪಂದ್ಯದಲ್ಲಿ, ಭಾರತ ಎ ತಂಡ 2 ವಿಕೆಟ್‌ಗಳಿಂದ ಅದ್ಭುತ ಗೆಲುವು ಸಾಧಿಸಿ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿತು. ಪ್ರಭ್ಸಿಮ್ರಾನ್ ಸಿಂಗ್ ಅವರ ಶತಕ, ಶ್ರೇಯಸ್ ಅಯ್ಯರ್ ಮತ್ತು ರಿಯಾನ್ ಪರಾಗ್ ಅವರ ಅರ್ಧಶತಕಗಳು ಹಾಗೂ ವಿಪ್ರರಾಜ್ ನಿಗಮ್ ಅವರ ಕೊನೆಯ ಹಂತದ ಪ್ರದರ್ಶನ ತಂಡದ ಗೆಲುವಿಗೆ ನಿರ್ಣಾಯಕವಾಯಿತು. ಆಸ್ಟ್ರೇಲಿಯಾ ಎ ನೀಡಿದ 316 ರನ್‌ಗಳ ಬೃಹತ್ ಗುರಿಯನ್ನು ಭಾರತ ಯಶಸ್ವಿಯಾಗಿ ಬೆನ್ನಟ್ಟಿತು.

IND A vs AUS A: ಸೋಲಿನಿಂದ ಪಾರಾಗಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಗೆದ್ದ ಭಾರತ
India A
ಪೃಥ್ವಿಶಂಕರ
|

Updated on:Oct 05, 2025 | 10:40 PM

Share

ಕಾನ್ಪುರದಲ್ಲಿ ನಡೆದ ಭಾರತ ಎ ಮತ್ತು ಆಸ್ಟ್ರೇಲಿಯಾ ಎ (India A vs Australia A) ನಡುವಿನ ಮೂರು ಅನಧಿಕೃತ ಪಂದ್ಯಗಳ ಏಕದಿನ ಸರಣಿಯ ಮೂರನೇ ಪಂದ್ಯವನ್ನು ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ಎ ತಂಡವು ಅದ್ಭುತ ಪ್ರದರ್ಶನ ನೀಡಿ ಗೆದ್ದುಕೊಂಡಿತು. ಈ ಮೂಲಕ ಮೂರು ಪಂದ್ಯಗಳ ಅನಧಿಕೃತ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಒಂದು ಹಂತದಲ್ಲಿ, ಆತಿಥೇಯ ಭಾರತ ಸೋಲಿನ ಅಂಚಿನಲ್ಲಿತ್ತು. ಆದರೆ ಆಲ್​ರೌಂಡರ್ ವಿಪ್ರಾಜ್ ನಿಗಮ್ ಮತ್ತು ಅರ್ಷದೀಪ್ ಸಿಂಗ್ ವಿರೋಚಿತ ಪ್ರದರ್ಶನ ನೀಡಿ ತಂಡವನ್ನು 24 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಮುಟ್ಟಿಸಿದರು. ಈ ಮೂಲಕ ಭಾರತ ತಂಡ ಟೆಸ್ಟ್ ಸರಣಿಯೊಂದಿಗೆ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿದೆ. ವಾಸ್ತವವಾಗಿ ಏಕದಿನ ಸರಣಿಗೂ ಮುನ್ನ 2 ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿ ನಡೆದಿತ್ತು. ಈ ಸರಣಿಯನ್ನು ಭಾರತ 1-0 ಅಂತರದಿಂದ ಗೆದ್ದುಕೊಂಡಿತ್ತು.

ಪ್ರಭ್ಸಿಮ್ರಾನ್ ಸಿಂಗ್ ಶತಕ

ಅಂತಿಮ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಎ ತಂಡವು 49.1 ಓವರ್‌ಗಳಲ್ಲಿ 316 ರನ್‌ಗಳಿಗೆ ಆಲೌಟ್ ಆಯಿತು. ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ ಎ ತಂಡದ ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡಿ, 46 ಓವರ್‌ಗಳಲ್ಲಿ 24 ಎಸೆತಗಳು ಬಾಕಿ ಇರುವಾಗಲೇ 8 ವಿಕೆಟ್‌ ಕಳೆದುಕೊಂಡು ಜಯದ ನಗೆ ಬೀರಿತು. ಭಾರತದ ಈ ಗೆಲುವಿನಲ್ಲಿ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಪ್ರಭ್ಸಿಮ್ರಾನ್ ಸಿಂಗ್ ಪ್ರಮುಖ ಪಾತ್ರವಹಿಸಿದರು. ಅವರು ಕೇವಲ 68 ಎಸೆತಗಳಲ್ಲಿ 8 ಬೌಂಡರಿ ಮತ್ತು 7 ಸಿಕ್ಸರ್‌ಗಳನ್ನು ಒಳಗೊಂಡಂತೆ 102 ರನ್ ಬಾರಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು.

ಶ್ರೇಯಸ್- ಪರಾಗ್ ಶತಕ

ಆ ಬಳಿಕ ನಾಯಕನ ಇನ್ನಿಂಗ್ಸ್ ಆಡಿದ ಶ್ರೇಯಸ್ ಅಯ್ಯರ್ 58 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ 62 ರನ್ ಬಾರಿಸಿದರು. ರಿಯಾನ್ ಪರಾಗ್ ಕೂಡ ನಾಯಕನಿಗೆ ಉತ್ತಮ ಸಾಥ್ ನೀಡಿ 55 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ ಸೇರಿದಂತೆ 66 ರನ್​ಗಳ ಕಾಣಿಕೆ ನೀಡಿದರು. ಈ ಸರಣಿಯಲ್ಲಿ ರಿಯಾನ್ ಪರಾಗ್ ಸತತ ಮೂರು ಅರ್ಧಶತಕಗಳನ್ನು ಬಾರಿಸಿ ಟೀಂ ಇಂಡಿಯಾದ ಕದ ತಟ್ಟುವ ಕೆಲಸ ಮಾಡಿದ್ದಾರೆ. ಅಂತಿಮವಾಗಿ, ವಿಪ್ರರಾಜ್ ನಿಗಮ್ 32 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ ಅಜೇಯ 24 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಆಸ್ಟ್ರೇಲಿಯಾ ಎ ಪರ ಟಾಡ್ ಮರ್ಫಿ ಮತ್ತು ತನ್ವೀರ್ ಸಂಘ ತಲಾ 4 ವಿಕೆಟ್ ಪಡೆದರು.

ಆಸೀಸ್​ಗೆ ಆರಂಭಿಕ ಆಘಾತ

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಎ ತಂಡ ಕಳಪೆ ಆರಂಭ ಸಿಕ್ಕಿತು. ಕೇವಲ 135 ರನ್‌ಗಳಿಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು. ನಂತರ ಲಿಯಾಮ್ ಸ್ಕಾಟ್ ಮತ್ತು ನಾಯಕ ಜ್ಯಾಕ್ ಎಡ್ವರ್ಡ್ಸ್ ಏಳನೇ ವಿಕೆಟ್‌ಗೆ 152 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಲಿಯಾಮ್ ಸ್ಕಾಟ್ 64 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಆರು ಸಿಕ್ಸರ್‌ಗಳನ್ನು ಒಳಗೊಂಡಂತೆ 73 ರನ್ ಬಾರಿಸಿದರು. ನಾಯಕ ಜ್ಯಾಕ್ ಎಡ್ವರ್ಡ್ಸ್ 75 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಒಳಗೊಂಡಂತೆ 89 ರನ್ ಗಳಿಸಿ ಗರಿಷ್ಠ ಸ್ಕೋರರ್ ಆದರು.

ಕೂಪರ್ ಕಾನೋಲಿ ಕೂಡ 49 ಎಸೆತಗಳಲ್ಲಿ ಐದು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ 64 ರನ್ ಗಳಿಸಿ ಚುರುಕಿನ ಇನ್ನಿಂಗ್ಸ್ ಆಡಿದರು. ಇದರ ಹೊರತಾಗಿಯೂ, ಆಸ್ಟ್ರೇಲಿಯಾ ಎ ತಂಡವು 49.1 ಓವರ್‌ಗಳಲ್ಲಿ 316 ರನ್‌ಗಳಿಗೆ ಆಲೌಟ್ ಆಯಿತು. ಭಾರತ ಎ ಪರ, ವೇಗಿಗಳಾದ ಅರ್ಶ್‌ದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ತಲಾ ಮೂರು ವಿಕೆಟ್ ಪಡೆದರು. ಆಯುಷ್ ಬಡೋನಿ ಎರಡು ವಿಕೆಟ್ ಪಡೆದರೆ, ಗುರ್ಜಪ್ನೀತ್ ಸಿಂಗ್ ಮತ್ತು ನಿಶಾಂತ್ ಸಿಂಧು ತಲಾ ಒಂದು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:31 pm, Sun, 5 October 25

Follow Us