
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಗುಜರಾತ್ ಟೈಟಾನ್ಸ್ (GT) ತಂಡ ಸೋಲನುಭವಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್‌ಗಳಲ್ಲಿ 205 ರನ್ ಕಲೆಹಾಕಿದ್ದರು. ಈ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18.5 ಓವರ್‌ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ ಆರ್ಸಿಬಿ 5 ವಿಕೆಟ್ಗಳ ಗೆಲುವು ದಾಖಲಿಸಿದೆ.
ಈ ಸೋಲಿನ ಬಳಿಕ ಮಾತನಾಡಿದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್ಮನ್ ಗಿಲ್, ನಿರ್ಣಾಯಕ ಹಂತದಲ್ಲಿ ಬೌಂಡರಿಗಳನ್ನು ಬಾರಿಸಲು ವಿಫಲರಾದದ್ದು ಮತ್ತು ಮಧ್ಯಂತರ ಓವರ್‌ಗಳಲ್ಲಿ ವಿಕೆಟ್ ಪಡೆಯದಿದ್ದದ್ದು ಸೋಲಿಗೆ ಮುಖ್ಯ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಮ್ಮ ಬ್ಯಾಟರ್ಗಳಿಗೆ 16 ರಿಂದ 19ನೇ ಓವರ್‌ಗಳ ನಡುವೆ ನಾವು ಒಂದೂ ಬೌಂಡರಿ ಬಾರಿಸಲು ಸಾಧ್ಯವಾಗಲಿಲ್ಲ. ಈ ಮೂರು ಓವರ್‌ಗಳಲ್ಲಿ ನಾವು ನಿರೀಕ್ಷಿತ ರನ್ ಗಳಿಸಲಿಲ್ಲ, ಇದು ನಮ್ಮ ಪಾಲಿಗೆ ಬಹಳ ನಿರ್ಣಾಯಕವಾಯಿತು. ಪವರ್‌ಪ್ಲೇ ಅಂತ್ಯಕ್ಕೆ ನಾವು ಉತ್ತಮ ಸ್ಥಿತಿಯಲ್ಲಿದ್ದೆವು, ಆದರೆ ಅಂತಿಮ ಹಂತದಲ್ಲಿ ಲಯ ತಪ್ಪಿದೆವು. ಈ ಮೂರು ಓವರ್‌ಗಳಲ್ಲಿ ಒಂದೇ ಒಂದು ಬೌಂಡರಿ ಬಾರಿಸದೇ ಇರುವುದು ಸೋಲಿಗೆ ಕಾರಣವಾಯ್ತು ಎಂದು ಶುಭ್ಮನ್ ಗಿಲ್ ಹೇಳಿದ್ದಾರೆ.
ಇದೇ ವೇಳೆ ವಾಷಿಂಗ್ಟನ್ ಸುಂದರ್ ಮೊದಲ ಓವರ್ನಲ್ಲೇ ವಿರಾಟ್ ಕೊಹ್ಲಿಯ ಕ್ಯಾಚ್ ಕೈಬಿಟ್ಟ ಬಗ್ಗೆ ಪ್ರತಿಕ್ರಿಯಿಸಿದ ಗಿಲ್, ಫೀಲ್ಡರ್ ಆಗಿ ಅದು ಕಷ್ಟದ ಸಮಯ. ಇಂತಹ ಅವಕಾಶವನ್ನು ಕೈ ಚೆಲ್ಲಿದ ಬಳಿಕ ನಾವು ಪಂದ್ಯದಲ್ಲಿ ಹೇಗೆ ಕಂಬ್ಯಾಕ್ ಮಾಡುತ್ತೇವೆ ಎಂಬುದು ಮುಖ್ಯ. ಬೌಲಿಂಗ್‌ನಲ್ಲಿ ನಾವು ಕೆಲವು ಉತ್ತಮ ಕ್ಷಣಗಳನ್ನು ಹೊಂದಿದ್ದರೂ, ಈ ಪಿಚ್ನಲ್ಲಿ ಅಗತ್ಯವಿದ್ದ ‘ಲೆಂತ್ ಬಾಲ್’ಗಳನ್ನು ನಿರಂತರವಾಗಿ ಎಸೆಯಲು ನಮಗೆ ಸಾಧ್ಯವಾಗಲಿಲ್ಲ.
ಇದಾಗ್ಯೂ ಮಾನವ್ ಸುತಾರ್ ಉತ್ತಮ ಓವರ್ ಎಸೆದಿದ್ದರು. ಅವರಿಗೆ ಚೆಂಡು ನೀಡಲು ಮುಖ್ಯ ಕಾರಣ, ನಾನು ಬ್ಯಾಟಿಂಗ್ ಮಾಡುತ್ತಿದ್ದಾಗ ಕೃನಾಲ್ ಪಾಂಡ್ಯ ಎಸೆದ ನಿಧಾನಗತಿಯ ಎಸೆತಗಳು ಸ್ವಲ್ಪ ಗ್ರಿಪ್ ಆಗುತ್ತಿದ್ದವು. ಹಾಗಾಗಿ ಸುತಾರ್ ಮೂಲಕ ಒಂದು ಪ್ರಯತ್ನ ನಡೆಸಿದೆವು. ಒಂದು ವೇಳೆ ಅಲ್ಲಿ ಒಂದೆರಡು ವಿಕೆಟ್ ಬಿದ್ದಿದ್ದರೆ ಪಂದ್ಯದ ಚಿತ್ರಣ ಬದಲಾಗುತ್ತಿತ್ತು ಎಂದು ಶುಭ್ಮನ್ ಗಿಲ್ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಸಾಯಿ ಸುದರ್ಶನ್ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶುಭ್ಮನ್ ಗಿಲ್, ಕಳೆದ ಕೆಲವು ಪಂದ್ಯಗಳ ವೈಫಲ್ಯದಿಂದ ಸಾಯಿ ಬೇಸರಗೊಂಡಿದ್ದರು, ಆದರೆ ಈ ಪಂದ್ಯದಲ್ಲಿ ಅವರು ಉತ್ತಮವಾಗಿ ಆಡಿದ್ದಾರೆ. ಆದರೆ ಮುಂದಿನ ಪಂದ್ಯಗಳಲ್ಲಿ ಪವರ್‌ಪ್ಲೇ ಅವಧಿಯಲ್ಲಿ ಅವರು ನನಗೆ ಇನ್ನಷ್ಟು ಸ್ಟ್ರೈಕ್ ನೀಡುತ್ತಾರೆಂದು ಭಾವಿಸುತ್ತೇನೆ” ಎಂದು ಹಾಸ್ಯಮಯವಾಗಿ ಮಾತು ಮುಗಿಸಿದರು.
ಇದನ್ನೂ ಓದಿ: IPL 2026: RCB ಜಸ್ಟ್ 3 ಪಂದ್ಯ ಗೆದ್ದರೆ ಸಾಕು!
ಸದ್ಯ ಮೊದಲಾರ್ಧ ಮುಗಿಸಿರುವ ಗುಜರಾತ್ ಟೈಟಾನ್ಸ್ ತಂಡವು 3 ಗೆಲುವುಗಳೊಂದಿಗೆ ಅಂಕ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ದ್ವಿತೀಯಾರ್ಧದಲ್ಲಿ ಕನಿಷ್ಠ 5 ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೆ ಮಾತ್ರ ಗುಜರಾತ್ ಟೈಟಾನ್ಸ್ ತಂಡವು ನೇರವಾಗಿ ಪ್ಲೇಆಫ್ಗೇರಬಹುದು.