ಡಾ. ಡಿವೈ ಪಾಟಿಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ (India Women vs Australia Women) ಮಹಿಳಾ ತಂಡಗಳ ನಡುವಣ ಎರಡನೇ ಟಿ20 ಪಂದ್ಯ ರಣ ರೋಚಕವಾಗಿತ್ತು. ಮೊದಲ ಪಂದ್ಯದಲ್ಲಿ ಭಾರತೀಯ ಮಹಿಳೆಯರು ಸೋತ ಪರಿಣಾಮ ದ್ವಿತೀಯ ಪಂದ್ಯ ಮಹತ್ವದ್ದಾಗಿತ್ತು. ಅದರಂತೆ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿದ ಕೌರ್ ಪಡೆ ಹೋರಾಟ ನಡೆಸಿತು. ಕೊನೆಯಲ್ಲಿ ಪಂದ್ಯ ಟೈ ಆದ ಪರಿಣಾಮ ಸೂಪರ್ ಓವರ್ (Super Over) ನಡೆಸಲಾಯಿತು. ಇದರಲ್ಲಿ ಭಾರತ ಗೆಲುವು ಸಾಧಿಸಿ ಇದೀಗ ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-1 ಅಂತರದ ಮುನ್ನಡೆ ಪಡೆದುಕೊಂಡಿದೆ. ಭಾರತದ ಗೆಲುವಿನಲ್ಲಿ ಸ್ಮೃತಿ ಮಂದಾನ (Smriti Mandhana) ಪ್ರಮುಖ ಪಾತ್ರವಹಿಸಿದರು.
ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಬ್ಯಾಟಿಂಗ್ಗೆ ಬಂದ ಆಸ್ಟ್ರೇಲಿಯಾ ಆರಂಭದಲ್ಲಿ ನಾಯಕಿ ಅಲೆಸ್ಸಾ ಹೇಲೆ (25) ವಿಕೆಟ್ ಕಳೆದುಕೊಂಡಿತು. ನಂತರ ಶುರುವಾಗಿದ್ದು ಇನ್ಫಾರ್ಮ್ ಬ್ಯಾಟರ್ಗಳಾದ ಬೆತ್ ಮೋನೆ ಮತ್ತು ತಹಿಲಾ ಮೆಕ್ಘ್ರಾತ್ ಆಟ. ಭಾರತೀಯ ಬೌಲರ್ಗಳನ್ನು ಕಾಡಿದ ಈ ಜೋಡಿ ಸಂಪೂರ್ಣ ಓವರ್ ಆಡಿತು. ಎಷ್ಟೇ ಹರಸಾಹಸ ಪಟ್ಟರೂ ಭಾರತೀಯ ಮಹಿಳೆಯರಿಗೆ ಇವರಿಬ್ಬರ ಜೊತೆಯಾಟ ಮುರಿಯಲು ಸಾಧ್ಯವಾಗಲಿಲ್ಲ. ಇಬ್ಬರೂ ಅರ್ಧಶತಕ ಸಿಡಿಸಿ ಮಿಂಚಿದರು. ಆಸ್ಟ್ರೇಲಿಯಾ 20 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 187 ರನ್ ಕಲೆಹಾಕಿತು. ಮೋನೆ 54 ಎಸೆತಗಳಲ್ಲಿ 13 ಫೋರ್ನೊಂದಿಗೆ ಅಜೇಯ 82 ಹಾಗೂ ಮೆಕ್ಘ್ರಾತ್ 51 ಎಸೆತಗಳಲ್ಲಿ 10 ಫೋರ್, 1 ಸಿಕ್ಸರ್ನೊಂದಿಗೆ ಅಜೇಯ 70 ರನ್ ಸಿಡಿಸಿದರು.
ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಭಾರತ ಮಹಿಳಾ ತಂಡ ಸ್ಫೋಟಕ ಆರಂಭ ಪಡೆದುಕೊಂಡಿತು. ಓಪನರ್ಗಳಾದ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂದಾನ ಮೊದಲ ವಿಕೆಟ್ಗೆ 8.4 ಓವರ್ಗಳಲ್ಲಿ 76 ರನ್ಗಳ ಕಾಣಿಕೆ ನೀಡಿದರು. ಶಫಾಲಿ 23 ಎಸೆತಗಳಲ್ಲಿ 34 ರನ್ ಬಾರಿಸಿದರು. ಜೆಮಿಯ ರೋಡ್ರಿಗಸ್ ಮತ್ತೊಮ್ಮೆ ವೈಫಲ್ಯ ಅನುಭವಿಸಿ 4 ರನ್ಗೆ ಔಟಾದರೆ, ನಾಯಕಿ ಹರ್ಮನ್ಪ್ರೀತ್ ಕೌರ್ (21 ರನ್) ಅವರು ಮಂದಾನ ಜೊತೆಗೂಡಿ ಗೆಲುವಿಗೆ ಹೋರಾಟ ನಡೆಸಿದರು. ಇತ್ತ ಬಿರುಸಿನ ಆಟ ಆಡುತ್ತಿದ್ದ ಮಂದಾನ 49 ಎಸೆತಗಳಲ್ಲಿ 9 ಫೋರ್, 4 ಸಿಕ್ಸರ್ನೊಂದಿಗೆ 79 ರನ್ ಚಚ್ಚಿ ನಿರ್ಗಮಿಸಿದರು. ದೀಪ್ತಿ ಶರ್ಮಾ 2 ರನ್ಗೆ ಸುಸ್ತಾದರು.
IPL 2023 Start DATE: ಒಂದು ವಾರ ತಡವಾಗಿ ಆರಂಭವಾಗಲಿದೆ ಈ ಬಾರಿಯ ಐಪಿಎಲ್..!
ಈ ಹಂತದಲ್ಲಿ ಜೊತೆಯಾದ ರಿಚ್ಚಾ ಘೋಷ್ ಹಾಗೂ ದೇವಿಕಾ ವೈದ್ಯ ಗೆಲುವಿಗೆ ಹೋರಾಡಿ ಪಂದ್ಯವನ್ನು ಮತ್ತಷ್ಟು ರೋಚಕತೆ ಸೃಷ್ಟಿಸಿದರು. ಕೊನೆಯ 2 ಓವರ್ಗಳಲ್ಲಿ ಭಾರತದ ಗೆಲುವಿಗೆ 18 ರನ್ಗಳ ಅವಶ್ಯಕತೆಯಿತ್ತು. 19ನೇ ಓವರ್ನಲ್ಲಿ ಭಾರತ ಕಲೆಹಾಕಿದ್ದು ಕೇವಲ 4 ರನ್. ಹೀಗಾಗಿ ಅಂತಿಮ 6 ಎಸೆತಗಳಲ್ಲಿ 13 ರನ್ ಬೇಕಾಯಿತು. ಮೆಗನ್ ಸ್ಕಟ್ ಅವರ ಮೊದಲ ಎಸೆತದಲ್ಲಿ ಘೋಷ್ 1 ರನ್ ಗಳಿಸಿದರೆ, ಎರಡನೇ ಎಸೆತದಲ್ಲಿ ದೇವಿಕಾ ಫೋರ್ ಬಾರಿಸಿದರು. ಮೂರನೇ ಎಸೆತ 1 ರನ್, 4ನೇ ಎಸೆತ 2 ರನ್ ಮತ್ತು 5ನೇ ಎಸೆತದಲ್ಲಿ 1 ರನ್ ಮೂಡಿಬಂತು. ಕೊನೇ ಎಸೆತದಲ್ಲಿ 5 ರನ್ಗಳು ಬೇಕಾಯಿತು. ಈ ಸಂದರ್ಭ ದೇವಿಕಾ ಚೆಂಡನ್ನು ಫೋರ್ಗೆ ಅಟ್ಟಿದ ಪರಿಣಾಮ ಭಾರತ ಕೂಡ 20 ಓವರ್ಗೆ 5 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು. ಹೀಗಾಗಿ ಸೂಪರ್ ಓವರ್ ಆಡಿಸಬೇಕಾಯಿತು. ಘೋಷ್ 13 ಎಸೆತಗಳಲ್ಲಿ 26 ರನ್ ಮತ್ತು ದೇವಿಕಾ 11 ರನ್ ಗಳಿಸಿ ಅಜೇಯರಾಗಿದ್ದರು.
A victory lap to honour the crowd who were in attendance to support the women in blue
Over 47,000 in attendance for the second T20I who witnessed a thriller here at the DY Patil Stadium ? ?
Keep cheering for Women in Blue ? ?#TeamIndia | #INDvAUS | @mastercardindia pic.twitter.com/CtzdsyhxZu
— BCCI Women (@BCCIWomen) December 11, 2022
ಸೂಪರ್ ಓವರ್:
ಸೂಪರ್ ಓವರ್ನಲ್ಲಿ ಮೊದಲು ಭಾರತ ಬ್ಯಾಟಿಂಗ್ ಮಾಡಿತು. ಸ್ಮೃತಿ ಮಂದಾನ ಮತ್ತು ರಿಚ್ಚಾ ಘೋಷ್ ಕಣಕ್ಕಿಳಿದರು. ಹೇದರ್ ಗ್ರಹಮ್ ಅವರ ಮೊದಲ ಎಸೆತದಲ್ಲೇ ಘೋಷ್ ಚೆಂಡನ್ನು ಸಿಕ್ಸರ್ಗೆ ಅಟ್ಟಿದರು. ಆದರೆ, ಎರಡನೇ ಎಸೆತದಲ್ಲಿ ಔಟಾದರು. ಮೂರನೇ ಎಸೆತದಲ್ಲಿ ಕೌರ್ 1 ರನ್ ಗಳಿಸಿದರೆ, 4ನೇ ಎಸೆತದಲ್ಲಿ ಮಂದಾನ ಫೋರ್, 5ನೇ ಎಸೆತದಲ್ಲಿ ಸಿಕ್ಸ್ ಹಾಗೂ 6ನೇ ಎಸೆತದಲ್ಲಿ 3 ರನ್ ಕಲೆಹಾಕಿದರು. ಈ ಮೂಲಕ ಆಸ್ಟ್ರೇಲಿಯಾಕ್ಕೆ ಸೂಪರ್ ಓವರ್ನಲ್ಲಿ ಗೆಲ್ಲಲು ಭಾರತ 21 ರನ್ಗಳ ಟಾರ್ಗೆಟ್ ನೀಡಿತು.
ಭಾರತ ಪರ ರೇಣುಕಾ ಸಿಂಗ್ ಬೌಲಿಂಗ್ ಮಾಡಿದರು. ಅಲೆಸ್ಸಾ ಹೇಲೆ ಆಶ್ಲೆಗ್ ಗಾರ್ಡನರ್ ಕಣಕ್ಕಿಳಿದರು. ಮೊದಲ ಎಸೆತದಲ್ಲಿ ಹೇಲೆ ಫೋರ್ ಬಾರಿಸಿದರು. ಎರಡನೇ ಎಸೆತದಲ್ಲಿ 1 ರನ್ ಗಳಿಸಿದರೆ, ಮೂರನೇ ಎಸೆತದಲ್ಲಿ ಗಾರ್ಡನರ್ ಔಟಾದರು. 4ನೇ ಎಸೆತದಲ್ಲಿ ಮೆಕ್ಘ್ರತ್ 1 ರನ್ ಗಳಿಸಲಷ್ಟೇ ಶಕ್ತವಾದರು. 5ನೇ ಎಸೆತದಲ್ಲಿ ಫೋರ್ ಬಂತು. 6ನೇ ಎಸೆತದಲ್ಲಿ ಸಿಕ್ಸ್ ಸಿಡಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಆಸ್ಟ್ರೇಲಿಯಾ 6 ಎಸೆತಗಳಲ್ಲಿ 1 ವಿಕೆಟ್ ನಷ್ಟಕ್ಕೆ 16 ರನ್ ಗಳಿಸಿ ಸೋಲು ಕಂಡಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ