
ಭಾರತ ಮತ್ತು ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯಕ್ಕೆ ಕಾರ್ಮೋಡ ಕವಿದಿದೆ. ಫೆಬ್ರವರಿ 15 ರಂದು ಕೊಲಂಬೋದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಡೊ-ಪಾಕ್ ನಡುವಿನ ಟಿ20 ವಿಶ್ವಕಪ್ 2026 ರ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಹೀಗಾಗಿ ಮ್ಯಾಚ್ ನಡೆಯುವುದು ಕೂಡ ಅನುಮಾನ ಎನ್ನಲಾಗುತ್ತಿದೆ.
ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯದ ಸಮಯದಲ್ಲಿ ಸುಮಾರು ಶೇ. 50 ರಿಂದ ಶೇ. 70 ರಷ್ಟು ಮಳೆಯಾಗುವ ಮುನ್ಸೂಚನೆ ಇದೆ. ಲೈವ್ ಮಿಂಟ್ (LiveMint) ವರದಿಯ ಪ್ರಕಾರ, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇರುವುದರಿಂದ ಭಾರಿ ಮಳೆಯಾಗಬಹುದು.
ಸ್ಥಳೀಯ ಕಾಲಮಾನ ರಾತ್ರಿ 7:00 ಗಂಟೆಗೆ ಪಂದ್ಯ ಆರಂಭವಾಗಬೇಕಿದೆ. ಸಂಜೆಯ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇರುವುದರಿಂದ ಟಾಸ್ ವಿಳಂಬವಾಗಬಹುದು. ಅತ್ತ ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ಆಧುನಿಕ ಡ್ರೈನೇಜ್ ಸಿಸ್ಟಂ ಇಲ್ಲದೇ ಇರುವುದರಿಂದ, ಮೈದಾನದಲ್ಲಿ ನೀರು ತುಂಬಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಸಂಜೆ ವೇಳೆ ಭಾರೀ ಮಳೆಯಾದರೆ ಪಂದ್ಯವನ್ನು ಆಯೋಜಿಸುವುದು ಕಷ್ಟಕರ.
ಟಿ20 ವಿಶ್ವಕಪ್ನ ಲೀಗ್ ಹಂತದ ಪಂದ್ಯಗಳಿಗೆ ಯಾವುದೇ ಮೀಸಲು ದಿನವಿಲ್ಲ. ಫೆಬ್ರವರಿ 15 ರಂದೇ ಭಾರತ ಮತ್ತು ಪಾಕಿಸ್ತಾನ್ ಕಣಕ್ಕಿಳಿಯಬೇಕು. ಅದು ಅಸಾಧ್ಯವಾದರೆ ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ.
ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದರೆ, ಐಸಿಸಿ (ICC) ನಿಯಮದಂತೆ ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕವನ್ನು ಹಂಚಲಾಗುತ್ತದೆ.
ಪ್ರಸ್ತುತ ಅಂಕಪಟ್ಟಿಯಲ್ಲಿ ಈ ಎರಡೂ ತಂಡಗಳು ಉತ್ತಮ ಸ್ಥಾನದಲ್ಲಿದ್ದು, ಅಂಕ ಹಂಚಿಕೆಯಾದರೂ ಸೂಪರ್ 8 ಹಂತಕ್ಕೇರಲು ಹೆಚ್ಚಿನ ತೊಂದರೆಯಾಗುವುದಿಲ್ಲ.
ಫೆಬ್ರವರಿ 15 ರಂದು ಮಳೆ ಬಂದು ಪಂದ್ಯ ರದ್ದಾದರೆ ಪಾಕಿಸ್ತಾನ್ ತಂಡಕ್ಕೆ ಲಾಭವಾಗಲಿದೆ. ಏಕೆಂದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲುವ ಫೇವರೇಟ್. ಅದರಲ್ಲೂ ಪಾಕಿಸ್ತಾನ್ ತಂಡವು ಕಳೆದ 5 ಮುಖಾಮುಖಿಯಲ್ಲಿ ಟೀಮ್ ಇಂಡಿಯಾ ವಿರುದ್ಧ ಹೀನಾಯವಾಗಿ ಸೋತಿದೆ.
ಅಷ್ಟೇ ಅಲ್ಲದೆ ಕಳೆದ ವರ್ಷ ನಡೆದ ಏಷ್ಯಾಕಪ್ನಲ್ಲೂ ಭಾರತ ತಂಡವು ಪಾಕಿಸ್ತಾನ್ ತಂಡವನ್ನು 3 ಬಾರಿ ಸೋಲಿಸಿ ಮೇಲುಗೈ ಸಾಧಿಸಿದೆ. ಹೀಗಾಗಿ ಟಿ20 ವಿಶ್ವಕಪ್ನಲ್ಲೂ ಭಾರತ ತಂಡವೇ ಗೆಲ್ಲುವ ಫೇವರೇಟ್ ತಂಡವಾಗಿ ಗುರುತಿಸಿಕೊಂಡಿದೆ.
ಇದನ್ನೂ ಓದಿ: ಟಿ20 ಕ್ರಿಕೆಟ್ನಲ್ಲಿ ಹಿಂದೆಂದೂ ಕಂಡರಿಯದ ವಿಶ್ವ ದಾಖಲೆ ಬರೆದ ‘ಮೊಸ್ಕಾ’ ಬ್ರದರ್ಸ್
ಅತ್ತ ಮಳೆ ಬಂದು ಪಂದ್ಯ ರದ್ದಾದರೆ ಪಾಕಿಸ್ತಾನ್ ತಂಡವು ಸೋಲಿನಿಂದ ತಪ್ಪಿಸಿಕೊಳ್ಳಲಿದೆ. ಅಲ್ಲದೆ 2 ಅಂಕಗಳಲ್ಲಿ ಒಂದು ಅಂಕವನ್ನು ಪಡೆದುಕೊಳ್ಳಲಿದ್ದಾರೆ. ಹೀಗಾಗಿ ಟಿ20 ವಿಶ್ವಕಪ್ನ 28ನೇ ಪಂದ್ಯವು ರದ್ದಾದರೆ ಪಾಕಿಸ್ತಾನ್ ತಂಡಕ್ಕೆ ಹೆಚ್ಚಿನ ಲಾಭವಾಗಲಿದೆ ಎನ್ನಬಹುದು.