T20 World Cup Prize Money: ಸೆಮಿ ಫೈನಲ್‌ನಲ್ಲಿ ಹೊರಬಿದ್ದ ಭಾರತ ತಂಡಕ್ಕೆ ಸಿಕ್ಕ ಹಣವೆಷ್ಟು ಗೊತ್ತೇ?
T20 World Cup 2022: ಇಂಗ್ಲೆಂಡ್ನ ಒಂದು ವಿಕೆಟ್ ಕೂಡ ಪಡೆಯಲು ಸಾಧ್ಯವಾಗದೆ ರೋಹಿತ್ ಪಡೆ ಸೋಲುಂಡು ತವರಿಗೆ ಹಿಂದಿರುಗಬೇಕಾಯಿತು. ಹಾಗಾದರೆ ಸೆಮಿ ಫೈನಲ್ಗೆ ತನ್ನ ಅಭಿಯಾನವನ್ನು ಅಂತ್ಯಗೊಳಿಸಿದ ಭಾರತಕ್ಕೆ ಎಷ್ಟು ಹಣ ಸಿಕ್ಕಿದೆ?.
ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ಅನೇಕ ಅಚ್ಚರಿಯ ಫಲಿತಾಂಶಗಳು ಕಂಡುಬಂದವು. ದುರ್ಬಲ ಎಂದುಕೊಂಡಿದ್ದ ತಂಡಗಳೆಲ್ಲ ವಿಶ್ವಶ್ರೇಷ್ಠ ಚಾಂಪಿಯನ್ ತಂಡಕ್ಕೆ ಸೋಲುಣಿಸಿದ ಘಟನೆಗೆ ಚುಟುಕು ವಿಶ್ವಕಪ್ ಸಾಕ್ಷಿಯಾಯಿತು. ಸೂಪರ್ 12 ಹಂತದಲ್ಲಿ ಕೇವಲ ಒಂದು ಸೋಲು ಕಂಡು ಭರ್ಜರಿ ಫಾರ್ಮ್ನಲ್ಲಿದ್ದ ಭಾರತ (India) ಸೆಮಿ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ತೋರಿದ ಪ್ರದರ್ಶನ ಕೂಡ ಎಲ್ಲರಿಗೆ ಆಘಾತ ನೀಡಿತು. ಆಂಗ್ಲರ ಒಂದು ವಿಕೆಟ್ ಕೂಡ ಪಡೆಯಲು ಸಾಧ್ಯವಾಗದೆ ರೋಹಿತ್ ಪಡೆ ಸೋಲುಂಡು ತವರಿಗೆ ಹಿಂದಿರುಗಬೇಕಾಯಿತು. ಭಾನುವಾರ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಪಾಕಿಸ್ತಾನ ಹಾಗೂ ಇಂಗ್ಲೆಂಡ್ (Pakistan vs England) ನಡುವೆ ಫೈನಲ್ ಪಂದ್ಯ ಏರ್ಪಡಿಸಲಾಗಿದೆ. ಹಾಗಾದರೆ ಸೆಮಿ ಫೈನಲ್ಗೆ ತನ್ನ ಅಭಿಯಾನವನ್ನು ಅಂತ್ಯಗೊಳಿಸಿದ ಭಾರತಕ್ಕೆ ಎಷ್ಟು ಹಣ ಸಿಕ್ಕಿದೆ? ಎಂಬುದನ್ನು ನೋಡೋಣ.
ಅಂತರರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಟಿ20 ವಿಶ್ವಕಪ್ ಈವೆಂಟ್‌ನಲ್ಲಿ ಒಟ್ಟು 5,600,000 ಯುಎಸ್ ಡಾಲರ್ ಬಹುಮಾನವನ್ನು ನೀಡುತ್ತಿದೆ. ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ 45,71,75,040 ರೂ. ಗಳು. ಸದ್ಯ ಸೆಮಿ ಫೈನಲ್‌ನಲ್ಲಿ ಸೋತ ಭಾರತ ಕ್ರಿಕೆಟ್ ತಂಡಕ್ಕೆ 400,000 ಡಾಲರ್ ಸಿಗುತ್ತದೆ. ಅಂದರೆ 3,26,55,360 ರೂ. ಅನ್ನು ರೋಹಿತ್ ಪಡೆಗೆ ನೀಡಲಾಗಿದೆ. ನ್ಯೂಜಿಲೆಂಡ್ ತಂಡಕ್ಕೂ ಇಷ್ಟೇ ಮೊತ್ತ ಕೊಡಲಾಗಿದೆ. ಅಂತೆಯೆ ಸೂಪರ್ 12 ಹಂತದಲ್ಲಿ ಪಂದ್ಯಾವಳಿಯಿಂದ ಹೊರಗುಳಿದ 8 ತಂಡಗಳಿಗೆ ತಲಾ 70,000 ಡಾಲರ್ (57,14,688 ರೂ.) ಮತ್ತು ಪ್ರತಿ ಸೂಪರ್ 12 ಪಂದ್ಯದ ವಿಜೇತರಿಗೆ 40,000 (32,65,536 ರೂ.) ಐಸಿಸಿ ನೀಡಿದೆ.
ಫೈನಲ್‌ನಲ್ಲಿ ಗೆದ್ದ ತಂಡಕ್ಕೆ ಎಷ್ಟು ಹಣ?:
ನವೆಂಬರ್ 13 ಭಾನುವಾರದಂದು ಮೆಲ್ಬೋರ್ನ್‌ನಲ್ಲಿ ನಡೆಯುವ ಐಸಿಸಿ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಗೆಲ್ಲುವ ಪಾಕಿಸ್ತಾನ ಅಥವಾ ಇಂಗ್ಲೆಂಡ್ ತಂಡಕ್ಕೆ ಯುಎಸ್ ಡಾಲರ್ 1.6 ಮಿಲಿಯನ್ ಬಹುಮಾನವನ್ನು ನೀಡಲಾಗುತ್ತದೆ. ಅಂದರೆ ಭಾರತೀಯ ಮೌಲ್ಯದ ಪ್ರಕಾರ ಬರೋಬ್ಬರಿ 13 ಕೋಟಿ ರೂಪಾಯಿ ಬಹುಮಾನ ಸಿಗಲಿದೆ. ಅದೇ ಸಮಯದಲ್ಲಿ ರನ್ನರ್ ಅಪ್ ತಂಡಕ್ಕೆ 8 ಲಕ್ಷ ಅಮೆರಿಕನ್ ಡಾಲರ್, ಅಂದರೆ ಸುಮಾರು ಆರೂವರೆ ಕೋಟಿ ರೂಪಾಯಿ ಬಹುಮಾನ ಸಿಗಲಿದೆ. ಟಿ20 ವಿಶ್ವಕಪ್‌ನ ಒಟ್ಟು ಬಹುಮಾನದ ಮೊತ್ತ 5.6 ಮಿಲಿಯನ್ ಅಮೆರಿಕನ್ ಡಾಲರ್ ಆಗಿದೆ.
ದ್ರಾವಿಡ್-ರೋಹಿತ್ ಜೊತೆ ಬಿಸಿಸಿಐ ಸಭೆ:
ಟಿ20 ವಿಶ್ವಕಪ್ 2022ಕ್ಕಾಗಿ ಟೀಮ್ ಇಂಡಿಯಾ ಕಳೆದ 12 ತಿಂಗಳುಗಳಿಂದ ಅನೇಕ ರೀತಿಯಲ್ಲಿ ತಯಾರಾಗಿ ಮಾಡಿದ ಪ್ರಯೋಗಗಳು ಮಡಿದ್ದವು. ಆದರೆ, ಇದು ಸೆಮೀಸ್ ಹಂತಕ್ಕೇರುವವರೆಗೆ ಮಾತ್ರ ಸಾಕಾಯಿತು. ಈ ಮೂಲಕ ಕಳೆದ ಒಂಬತ್ತು ವರ್ಷಗಳಲ್ಲಿ ಏಳನೇ ಬಾರಿ ಭಾರತ ಐಸಿಸಿ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಲು ವಿಫಲವಾಗಿದೆ. ಟೀಮ್ ಇಂಡಿಯಾ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ನಾಯಕ ರೋಹಿತ್ ಶರ್ಮ ಹಾಗೂ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ಸಭೆ ನಡೆಸಲು ಬಿಸಿಸಿಐ ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ. ಈ ಸಭೆಯಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಹಾಜರು ಇರುತ್ತಾರೆ. ಭಾರತ ತಂಡ ದೊಡ್ಡ ಮಟ್ಟದಲ್ಲಿ ತಯಾರಿ ನಡೆಸಿದ್ದರೂ ವಿಶ್ವಕಪ್‌ನಲ್ಲಿ ಹೀನಾಯ ಸೋಲು ಕಾಣುವುದಕ್ಕೆ ಕಾರಣವೇನು ಹಾಗೂ ಮುಂದಿನ ಸರಣಿಗೆ ತಂಡದಲ್ಲಿ ಏನು ಬದಲಾವಣೆ ಮಾಡಬೇಕು ಎಂಬ ಕುರಿತು ಚರ್ಚೆಗಳು ನಡೆಯಲಿವೆ.
Published On - 8:18 am, Sat, 12 November 22