
ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯನ್ನು ಟೀಂ ಇಂಡಿಯಾ ಮುಕ್ತಾಯಗೊಳಿಸಿದೆ. ಭಾನುವಾರ ಸೆಡ್ಡನ್ ಪಾರ್ಕ್ನಲ್ಲಿ ನಡೆದ ಐದನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್ಗಳ ಸೋಲು ಕಂಡಿತು. ಆದರೆ ಆರಂಭದ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಭಾರತ, ಐದು ಪಂದ್ಯಗಳ ಸರಣಿಯನ್ನು 3-2 ಅಂತರದಲ್ಲಿ ತನ್ನದಾಗಿಸಿಕೊಂಡಿದೆ. ಇದೀಗ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಈ ಸರಣಿ ನವೆಂಬರ್ 4ರಿಂದ ಆರಂಭವಾಗಲಿದೆ. ಇದಾದ ಬಳಿಕ ಭಾರತ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನೂ ಆಡಲಿದೆ. ಡಿಸೆಂಬರ್ 1ರಂದು ಕ್ರೈಸ್ಟ್ಚರ್ಚ್ನಲ್ಲಿ ಎರಡನೇ ಟೆಸ್ಟ್ ಪಂದ್ಯ ಮುಕ್ತಾಯಗೊಳ್ಳಲಿದೆ. ಹೀಗಾಗಿ ಟೀಂ ಇಂಡಿಯಾ ಸುಮಾರು ಏಳು ವಾರಗಳ ಕಾಲ ಟಿ20 ಅಂತರರಾಷ್ಟ್ರೀಯ ಪಂದ್ಯಗಳಿಂದ ದೂರ ಉಳಿಯಲಿದೆ.
ಮುಂದೆ ತವರಿನಲ್ಲೇ ಭಾರತದ ಟಿ20 ಕ್ರಿಕೆಟ್ ಅಭಿಯಾನ ಆರಂಭವಾಗಲಿದ್ದು, ಡಿಸೆಂಬರ್ನಲ್ಲಿ ಶ್ರೀಲಂಕಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ. ಇದು 2026-27ರ ತವರಿನ ಅಂತರರಾಷ್ಟ್ರೀಯ ಕ್ರಿಕೆಟ್ ಕ್ಯಾಲೆಂಡರ್ನಲ್ಲಿ ಭಾರತದ ಎರಡನೇ ಸರಣಿಯಾಗಿರಲಿದೆ.
ಭಾರತ ತಂಡದ ಮುಂದಿನ ಟಿ20 ಅಂತರರಾಷ್ಟ್ರೀಯ ಪಂದ್ಯ ಡಿಸೆಂಬರ್ 22, 2026ರಂದು ನಡೆಯಲಿದೆ. ರಾಜ್ಕೋಟ್ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಟಿ20 ಪಂದ್ಯ ಆಡಲಿದೆ. ಈ ಪಂದ್ಯ ರಾತ್ರಿ 7 ಗಂಟೆಗೆ ಆರಂಭವಾಗಲಿದೆ. ಈ ಪಂದ್ಯದೊಂದಿಗೆ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದ್ದು, ಇದು 2026ರ ಕ್ಯಾಲೆಂಡರ್ ವರ್ಷದಲ್ಲಿ ಭಾರತದ ತವರಿನ ಅಂತರರಾಷ್ಟ್ರೀಯ ಕ್ರಿಕೆಟ್ ಸೀಸನ್ನ ಕೊನೆಯ ಸರಣಿಯಾಗಿರಲಿದೆ.
ಶ್ರೀಲಂಕಾ ತಂಡದ ಭಾರತ ಪ್ರವಾಸ ಡಿಸೆಂಬರ್ 13ರಿಂದ 27ರವರೆಗೆ ನಡೆಯಲಿದೆ. ಮೊದಲಿಗೆ ಉಭಯ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಲಿವೆ. ದೆಹಲಿ, ಬೆಂಗಳೂರು ಹಾಗೂ ಅಹಮದಾಬಾದ್ನಲ್ಲಿ ಏಕದಿನ ಪಂದ್ಯಗಳು ನಡೆಯಲಿವೆ. ಆ ಬಳಿಕ ಟಿ20 ಸರಣಿ ಆರಂಭವಾಗಲಿದೆ. ಮೂರು ಟಿ20 ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಆರಂಭವಾಗಲಿವೆ.
ಟಿ20 ಕ್ರಿಕೆಟ್ನಲ್ಲಿ ಭಾರತದ್ದೇ ದರ್ಬಾರ್: ಒಂದೇ ಪಂದ್ಯದಲ್ಲಿ ಮೂರು ವಿಶ್ವದಾಖಲೆ..!
ಇನ್ನು ಜನವರಿಯಲ್ಲಿ ಜಿಂಬಾಬ್ವೆ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು, ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಅದೇ ತಿಂಗಳ ಕೊನೆಯಲ್ಲಿ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಬರಲಿದೆ. ಜನವರಿ 21ರಿಂದ ಮಾರ್ಚ್ 3ರವರೆಗೆ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ನಡೆಯಲಿದೆ. ಆದರೆ ಈ ಎರಡೂ ಸರಣಿಗಳಲ್ಲಿ ಯಾವುದೇ ಟಿ20 ಪಂದ್ಯಗಳು ಇರುವುದಿಲ್ಲ.
ಹೀಗಾಗಿ ಐಪಿಎಲ್ ಆರಂಭಕ್ಕೂ ಮುನ್ನ ಭಾರತ ತಂಡಕ್ಕೆ ಶ್ರೀಲಂಕಾ ವಿರುದ್ಧದ ಟಿ20 ಸರಣಿಯೇ ಕೊನೆಯ ಅಂತರರಾಷ್ಟ್ರೀಯ ಟಿ20 ಸರಣಿಯಾಗಿರಲಿದೆ. ಈ ಸರಣಿಯು ಆಯ್ಕೆಗಾರರಿಗೆ ಮುಂದಿನ ದಿನಗಳಲ್ಲಿ ತಂಡದಲ್ಲಿ ಸ್ಥಾನ ಪಡೆಯುವ ಆಟಗಾರರ ಪ್ರದರ್ಶನವನ್ನು ಗಮನಿಸಲು ಉತ್ತಮ ಅವಕಾಶವಾಗಲಿದೆ.