ಪಾಕಿಸ್ತಾನ್ 20 ಓವರ್ಗಳಲ್ಲಿ ನೀಡಿದ ಗುರಿಯನ್ನು 60 ಎಸೆತಗಳಲ್ಲಿ ಮುಗಿಸಿದ ನ್ಯೂಝಿಲೆಂಡ್
New Zealand vs Pakistan: ಪಾಕಿಸ್ತಾನ್ ವಿರುದ್ಧದ ಟಿ20 ಸರಣಿಯ ಮೊದಲೆರಡು ಪಂದ್ಯಗಳಲ್ಲಿ ನ್ಯೂಝಿಲೆಂಡ್ ತಂಡ ಜಯ ಸಾಧಿಸಿತು. ಆದರೆ ನಿರ್ಣಾಯಕವಾಗಿದ್ದ ಮೂರನೇ ಮ್ಯಾಚ್ನಲ್ಲಿ ಪಾಕ್ ಪಡೆ ಗೆಲುವು ದಾಖಲಿಸಿತ್ತು. ಇನ್ನು ನಾಲ್ಕನೇ ಪಂದ್ಯದಲ್ಲಿ ಜಯಭೇರಿ ಬಾರಿಸಿದ್ದ ಕಿವೀಸ್ ಪಡೆ ಇದೀಗ ಕೊನೆಯ ಟಿ20 ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದಿದೆ. ಈ ಮೂಲಕ 4-1 ಅಂತರದಿಂದ ಸರಣಿ ಗೆದ್ದುಕೊಂಡಿದೆ.

ಪಾಕಿಸ್ತಾನ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯನ್ನು ನ್ಯೂಝಿಲೆಂಡ್ 4-1 ಅಂತರದಿಂದ ಗೆದ್ದುಕೊಂಡಿದೆ. ವೆಲ್ಲಿಂಗ್ಟನ್ನ ಸ್ಕೈ ಸ್ಟೇಡಿಯಂನಲ್ಲಿ ನಡೆದ ಈ ಸರಣಿಯ 5ನೇ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ಮೈಕಲ್ ಬ್ರೇಸ್‌ವೆಲ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ತಂಡದ ಮೊತ್ತ 23 ಆಗುವಷ್ಟರಲ್ಲಿ ಆರಂಭಿಕರಾದ ಮೊಹಮ್ಮದ್ ಹ್ಯಾರಿಸ್ (11) ಹಾಗೂ ಹಸನ್ ನವಾಝ್ (0) ಪೆವಿಲಿಯನ್ ಸೇರಿದ್ದರು. ಆ ಬಳಿಕ ಬಂದ ಒಮೈರ್ ಯೂಸುಫ್ 7 ರನ್ಗಳಿಸಿ ಔಟಾದರು.
ಈ ಹಂತದಲ್ಲಿ ಕಣಕ್ಕಿಳಿದ ನಾಯಕ ಸಲ್ಮಾನ್ ಅಲಿ ಅಘಾ 39 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 51 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಪಾಕಿಸ್ತಾನ್ ತಂಡ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 128 ರನ್ ಕಲೆಹಾಕಿತು.
129 ರನ್ಗಳ ಸುಲಭ ಗುರಿ ಬೆನ್ನತ್ತಿದ ನ್ಯೂಝಿಲೆಂಡ್ ತಂಡಕ್ಕೆ ಟಿಮ್ ಸೈಫರ್ಟ್ ಹಾಗೂ ಫಿನ್ ಅಲೆನ್ ಸ್ಪೋಟಕ ಆರಂಭ ದೊಗಿಸಿದರು. ಪರಿಣಾಮ ಮೊದಲ 6 ಓವರ್ಗಳಲ್ಲಿ 92 ರನ್ ಮೂಡಿಬಂತು.
ಪವರ್ಪ್ಲೇ ಮುಕ್ತಾಯದ ಬೆನ್ನಲ್ಲೇ ಬಿರುಸಿನ ಹೊಡೆತಕ್ಕೆ ಮುಂದಾಗಿ ಫಿನ್ ಅಲೆನ್ (27) ಔಟಾದರು. ಆದರೆ ಮತ್ತೊಂದೆಡೆ ಆರ್ಭಟ ಮುಂದುವರೆಸಿದ ಟಿಮ್ ಸೈಫರ್ಟ್ ಪಾಕ್ ಬೌಲರ್ಗಳ ಬೆಂಡೆತ್ತಿದರು. ಅಲ್ಲದೆ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಸೈಫರ್ಟ್ ಸಿಡಿಲಬ್ಬರ:
ಅರ್ಧಶತಕದ ಬಳಿಕ ಸಿಡಿಲಬ್ಬದ ಮುಂದುವರೆಸಿದ ಟಿಮ್ ಸೈಫರ್ಟ್ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಪರಿಣಾಮ ಸೈಫರ್ಟ್ ಬ್ಯಾಟ್ನಿಂದ 10 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳು ಮೂಡಿಬಂತು. ಅಲ್ಲದೆ ಕೇವಲ 38 ಎಸೆತಗಳಲ್ಲಿ ಅಜೇಯ 97 ರನ್ ಬಾರಿಸಿದರು. ಈ ಸ್ಪೋಟಕ ಇನಿಂಗ್ಸ್ ನೆರವಿನೊಂದಿಗೆ ನ್ಯೂಝಿಲೆಂಡ್ ತಂಡವು 10 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 131 ರನ್ ಬಾರಿಸಿ 8 ವಿಕೆಟ್ಗಳ ಭರ್ಜರಿ ಸಾಧಿಸಿದೆ. ಈ ಗೆಲುವಿನೊಂದಿಗೆ ಕಿವೀಸ್ ಪಡೆ 4-1 ಅಂತರದಿಂದ ಸರಣಿ ಗೆದ್ದುಕೊಂಡಿದೆ.
ಪಾಕಿಸ್ತಾನ್ ಪ್ಲೇಯಿಂಗ್ 11: ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್) , ಹಸನ್ ನವಾಝ್ , ಸಲ್ಮಾನ್ ಅಘಾ (ನಾಯಕ) , ಒಮೈರ್ ಯೂಸುಫ್ , ಉಸ್ಮಾನ್ ಖಾನ್ , ಶಾದಾಬ್ ಖಾನ್ , ಅಬ್ದುಲ್ ಸಮದ್ , ಜಹಂದಾದ್ ಖಾನ್ , ಹಾರಿಸ್ ರೌಫ್ , ಸುಫಿಯಾನ್ ಮುಖೀಮ್ , ಮೊಹಮ್ಮದ್ ಅಲಿ.
ಇದನ್ನೂ ಓದಿ: David Warner: ಡೇವಿಡ್ ವಾರ್ನರ್ಗೆ ಒಲಿದ ನಾಯಕತ್ವ..!
ನ್ಯೂಝಿಲೆಂಡ್ ಪ್ಲೇಯಿಂಗ್ 11: ಟಿಮ್ ಸೈಫರ್ಟ್ , ಫಿನ್ ಅಲೆನ್ , ಮಾರ್ಕ್ ಚಾಪ್ಮನ್ , ಡೇರಿಲ್ ಮಿಚೆಲ್ , ಜೇಮ್ಸ್ ನೀಶಮ್ , ಮಿಚೆಲ್ ಹೇ (ವಿಕೆಟ್ ಕೀಪರ್) , ಮೈಕೆಲ್ ಬ್ರೇಸ್‌ವೆಲ್ (ನಾಯಕ) , ಇಶ್ ಸೋಧಿ , ಜಾಕೋಬ್ ಡಫಿ , ಬೆನ್ ಸಿಯರ್ಸ್ , ವಿಲಿಯಂ ಒರೋಕ್.