IPL 2025: ಐಪಿಎಲ್ನಲ್ಲಿ ಈ ನಿಯಮದ ಅಗತ್ಯವೇ ಇಲ್ಲ: ಧೋನಿ ಅಸಮಾಧಾನ
ಇಂಪ್ಯಾಕ್ಟ್ ಪ್ಲೇಯರ್ ಎಂದರೆ ಬದಲಿ ಆಟಗಾರ. ಅಂದರೆ ಟಾಸ್ ಸಮಯದಲ್ಲಿ ತಂಡಗಳು ಪ್ಲೇಯಿಂಗ್ ಇಲೆವೆನ್ ಘೋಷಿಸುವ ವೇಳೆ ಹೆಚ್ಚುವರಿ 5 ಆಟಗಾರರನ್ನು ಹೆಸರಿಸಬಹುದು. ಈ 5 ಆಟಗಾರರಲ್ಲಿ, ಯಾವುದಾದರೂ ಒಬ್ಬ ಆಟಗಾರನನ್ನು ಪಂದ್ಯದ ಮಧ್ಯದಲ್ಲಿ ಮತ್ತೊಬ್ಬ ಆಟಗಾರನ ಬದಲಿಯಾಗಿ ಕಣಕ್ಕಿಳಿಸಬಹುದು. ಇದೀಗ ಈ ನಿಯಮದ ವಿರುದ್ಧ ಪರ-ವಿರೋಧ ಚರ್ಚೆಗಳು ಮುಂದುವರೆದಿದೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಶುರುವಾಗಿ 5 ಪಂದ್ಯಗಳು ಮುಗಿದರೂ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಚರ್ಚೆಗಳು ಮುಂದುವರೆದಿದೆ. ಇದೀಗ ಈ ಚರ್ಚೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಕೂಡ ಎಂಟ್ರಿ ಕೊಟ್ಟಿದ್ದಾರೆ. ಅದು ಸಹ ಐಪಿಎಲ್ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ವಿರೋಧಿಸುವ ಮೂಲಕ ಎಂಬುದು ವಿಶೇಷ.
ಜಿಯೋಸ್ಟಾರ್ ಜೊತೆ ಈ ಬಗ್ಗೆ ಮಾತನಾಡಿದ ಮಹೇಂದ್ರ ಸಿಂಗ್ ಧೋನಿ, ಐಪಿಎಲ್ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಅಗತ್ಯವಿಲ್ಲ ಎಂಬುದು ನನ್ನ ಭಾವನೆ. ಏಕೆಂದರೆ ಆಟಗಾರನು ಇಡೀ ಪಂದ್ಯದಲ್ಲಿ ಭಾಗಿಯಾಗಬೇಕು. ಆದರೆ ಹೊಸ ನಿಯಮವು ಇಡೀ ಪಂದ್ಯದ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಂಪ್ಯಾಕ್ಟ್ ಪ್ಲೇಯರ್ ನಿಯಮ ಜಾರಿಗೆ ಬಂದಾಗಲೇ ನನಗೆ ಈ ನಿಯಮದ ಅಗತ್ಯವೇ ಇಲ್ಲ ಎಂದು ಅನಿಸಿತ್ತು. ಒಂದು ರೀತಿಯಲ್ಲಿ, ಇಂತಹ ನಿಯಮ ನನ್ನಂತಹ ಹಿರಿಯ ಆಟಗಾರರಿಗೆ ಸಹಾಯ ಮಾಡುತ್ತದೆ. ಆದರೆ ನಾನು ವಿಕೆಟ್ ಕೀಪರ್. ಹೀಗಾಗಿ ನಾನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಯಲು ಆಗುವುದಿಲ್ಲ.
ನಾನು ಇಡೀ ಪಂದ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಬಯಸುವ ಆಟಗಾರ. ಆದರೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಯುವ ಆಟಗಾರ ಒಂದಾದರೆ ಬ್ಯಾಟಿಂಗ್ ಅಥವಾ ಬೌಲಿಂಗ್ ಮಾತ್ರ ಮಾಡುತ್ತಾರೆ. ಇದರಿಂದಾಗಿಯೇ ಈಗ ಹೆಚ್ಚಿನ ಪಂದ್ಯಗಳಲ್ಲಿ ಬೃಹತ್ ಸ್ಕೋರ್ ಮೂಡಿ ಬರುತ್ತಿದೆ ಎಂದು ಧೋನಿ ಅಭಿಪ್ರಾಯಪಟ್ಟಿದ್ದಾರೆ.
ಏಕೆಂದರೆ ಆಟಗಾರನು ಆರಾಮದಾಯಕವಾಗಿ ಮೈದಾನಕ್ಕಿಳಿದು ಹೆಚ್ಚಿನ ರನ್ಗಳಿಸುತ್ತಿದ್ದಾರೆ. ಹೆಚ್ಚುವರಿ ಬ್ಯಾಟರ್ನ ಬಳಕೆಯೊಂದಿಗೆ ಪಂದ್ಯದ ಫಲಿತಾಂಶ ಕೂಡ ಬದಲಾಗುತ್ತಿದೆ. ಹೀಗಾಗಿ ನಾನು ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಪರವಿಲ್ಲ ಎಂದು ಧೋನಿ ಹೇಳಿದ್ದಾರೆ.
ಇದಕ್ಕೂ ಮುನ್ನ ಭಾರತದ ಟೆಸ್ಟ್ ಮತ್ತು ಏಕದಿನ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸಹ ಈ ನಿಯಮವನ್ನು ಟೀಕಿಸಿದ್ದರು. ಇಂತಹ ನಿಯಮವು ಆಲ್‌ರೌಂಡರ್‌ಗಳ ಬೆಳವಣಿಗೆ ಅಡ್ಡಿಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು.
ಇದಾಗ್ಯೂ ಫಾಫ್ ಡುಪ್ಲೆಸಿಸ್ ಸೇರಿದಂತೆ ಕೆಲ ಆಟಗಾರರು ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಪರವಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಿದ್ದ ಅಶುತೋಷ್ ಶರ್ಮಾ ಸ್ಪೋಟಕ 66 ರನ್ ಬಾರಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಜಯ ತಂದುಕೊಟ್ಟಿದ್ದರು. ಇದನ್ನೇ ಪ್ರಸ್ತಾಪಿಸಿ ಡುಪ್ಲೆಸಿಸ್ ಈ ನಿಯಮವನ್ನು ವಿರೋಧಿಸುವವರಿಗೆ ತಿರುಗೇಟು ನೀಡಿದ್ದರು.
ಇದನ್ನೂ ಓದಿ: David Warner: ಡೇವಿಡ್ ವಾರ್ನರ್ಗೆ ಒಲಿದ ನಾಯಕತ್ವ..!
ಒಂದು ಮ್ಯಾಚ್ ಸಂಪೂರ್ಣ ಮುಗಿದೇ ಹೋಯ್ತು ಎಂದು ಅಂದುಕೊಂಡಾಗ, ಯಾರಾದರೂ ಬಂದು ಭರ್ಜರಿ ಇನಿಂಗ್ಸ್ ಆಡುತ್ತಾರೆ. ಅಲ್ಲದೆ ಇಡೀ ಪಂದ್ಯದ ಚಿತ್ರಣವನ್ನು ಬದಲಿಸುತ್ತಾರೆ. ಹೀಗೆ ರೋಚಕ ಹೋರಾಟದೊಂದಿಗೆ ಗೆಲುವು ತಂದುಕೊಡುತ್ತಾರೆ. ಇಂತಹ ರೋಚಕತೆಗಾಗಿಯೇ ಇಂಪ್ಯಾಕ್ಟ್ ಪ್ಲೇಯರ್ ನಿಯಮವಿದೆ. ಹೀಗಾಗಿ ಈ ನಿಮಯವನ್ನು ವಿರೋಧಿಸುವುದರಲ್ಲಿ ಅರ್ಥವಿಲ್ಲ ಎಂದು ಫಾಫ್ ಡುಪ್ಲೆಸಿಸ್ ಹೇಳಿದ್ದರು. ಇದರ ಬೆನ್ನಲ್ಲೇ ಇದೀಗ ಮಹೇಂದ್ರ ಸಿಂಗ್ ಧೋನಿ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಅಗತ್ಯವಿಲ್ಲ ಎಂದಿರುವುದು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.