AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಹುಲ್ ದ್ರಾವಿಡ್​ಗೆ ನಾನು ಸದಾ ಚಿರಋಣಿ: ವಿರಾಟ್ ಕೊಹ್ಲಿ ಮನದಾಳದ ಮಾತು

Virat Kohli: ಯಶಸ್ಸು ಮತ್ತು ಜನಪ್ರಿಯತೆಯ ಉತ್ತುಂಗದಲ್ಲಿರುವ ಕ್ರೀಡಾಪಟುಗಳು ಸದಾ ಮಾನಸಿಕವಾಗಿ ಬಲಿಷ್ಠರಾಗಿರುತ್ತಾರೆ ಎಂಬುದು ಸಾರ್ವಜನಿಕರ ಸಾಮಾನ್ಯ ನಂಬಿಕೆ. ಆದರೆ, ಭಾರತೀಯ ಕ್ರಿಕೆಟ್‌ನ ದೃಢತೆಯ ಸಂಕೇತ ಎಂದೇ ಪರಿಗಣಿಸಲ್ಪಟ್ಟಿರುವ ವಿರಾಟ್ ಕೊಹ್ಲಿ ಅವರ ಇತ್ತೀಚಿನ ಹೇಳಿಕೆ ಈ ಭ್ರಮೆಯನ್ನು ದೂರಾಗಿಸಿದೆ. ಅಲ್ಲದೆ ತಮ್ಮ ಸಂಕಷ್ಟದ ದಿನಗಳಲ್ಲಿ ಬೆಂಬಲವಾಗಿ ನಿಂತ ರಾಹುಲ್ ದ್ರಾವಿಡ್ ಅವರಿಗೆ ಕೊಹ್ಲಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ರಾಹುಲ್ ದ್ರಾವಿಡ್​ಗೆ ನಾನು ಸದಾ ಚಿರಋಣಿ: ವಿರಾಟ್ ಕೊಹ್ಲಿ ಮನದಾಳದ ಮಾತು
Virat Kohli - Rahul Dravid
ಝಾಹಿರ್ ಯೂಸುಫ್
|

Updated on:May 20, 2026 | 2:10 PM

Share

ವಿಶ್ವ ಕ್ರಿಕೆಟ್‌ನ ರನ್‌ ಮಷೀನ್, ಶತಕಗಳ ಸರದಾರ ವಿರಾಟ್ ಕೊಹ್ಲಿ (Virat Kohli) ಸದಾ ಮೈದಾನದಲ್ಲಿ ಅಗ್ರೆಸ್ಸಿವ್ ಆಗಿ ಕಾಣುವ ಆಟಗಾರ. ಆದರೆ, ಸದಾ ಆತ್ಮವಿಶ್ವಾಸದಿಂದ ಬೀಗುವ ಕೊಹ್ಲಿ ಅವರನ್ನೂ ಕೂಡ ತೀವ್ರವಾದ ಮಾನಸಿಕ ಆತಂಕ ಕಾಡಿತ್ತು ಎಂಬ ಆಘಾತಕಾರಿ ಸತ್ಯ ಹೊರಬಿದ್ದಿದೆ. ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ಸ್ಪೋರ್ಟ್ಸ್ ಸಮ್ಮಿಟ್‌ನಲ್ಲಿ ಸ್ವತಃ ಮನದಾಳ ಬಿಚ್ಚಿಟ್ಟಿರುವ ಕಿಂಗ್ ಕೊಹ್ಲಿ, ತಾವು ಸುದೀರ್ಘ ಕಾಲ ‘ಇಂಪೋಸ್ಟರ್ ಸಿಂಡ್ರೋಮ್’ ಎಂಬ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಕಠಿಣ ದಿನಗಳಲ್ಲಿ ಮಾಜಿ ಹೆಡ್ ಕೋಚ್ ರಾಹುಲ್ ದ್ರಾವಿಡ್ ತಮಗೆ ಮಾನಸಿಕ ರಕ್ಷಾಕವಚವಾಗಿ ನಿಂತು ವೃತ್ತಿಬದುಕನ್ನು ಕಾಪಾಡಿದ್ದನ್ನು ಕೊಹ್ಲಿ ಸ್ಮರಿಸಿದ್ದಾರೆ.

ಏನಿದು ಇಂಪೋಸ್ಟರ್ ಸಿಂಡ್ರೋಮ್?

ಇಂಪೋಸ್ಟರ್ ಸಿಂಡ್ರೋಮ್ (Impostor Syndrome) ಎಂದರೆ ಒಬ್ಬ ವ್ಯಕ್ತಿ ತಾನು ಸಾಧಿಸಿದ ಯಶಸ್ಸು ಮತ್ತು ಕೌಶಲ್ಯಗಳನ್ನು ನಂಬದೆ, ತನ್ನ ಸಾಮರ್ಥ್ಯದ ಬಗ್ಗೆ ತಾನೇ ಅಪನಂಬಿಕೆ ಹೊಂದುವ ಒಂದು ಮಾನಸಿಕ ಸ್ಥಿತಿ.

ಸರಳವಾಗಿ ಹೇಳುವುದಾದರೆ, ಎಷ್ಟೇ ಸಾಧನೆ ಮಾಡಿದ ಮೇಲೂ “ನಾನು ಇದಕ್ಕೆ ಅರ್ಹನಲ್ಲ, ನಾನೊಬ್ಬ ವಂಚಕ , ನನ್ನ ಅಸಲಿಯತ್ತು ಅಥವಾ ತಪ್ಪುಗಳು ಸದ್ಯದಲ್ಲೇ ಎಲ್ಲರಿಗೂ ಗೊತ್ತಾಗಿಬಿಡುತ್ತದೆ” ಎಂದು ಒಳಗೊಳಗೇ ಭಯಪಡುವುದೇ ಈ ಸಿಂಡ್ರೋಮ್. ಇದರ ಲಕ್ಷಣಗಳೆಂದರೆ…

  • ತಮ್ಮ ಯಶಸ್ಸು ಸ್ವಂತ ಕಷ್ಟದಿಂದ ಬಂದಿದ್ದಲ್ಲ, ಕೇವಲ ‘ಅದೃಷ್ಟ’ದಿಂದ ಸಿಕ್ಕಿದ್ದು ಎಂದು ಭಾವಿಸುವುದು.
  • ನೂರಾರು ಯಶಸ್ಸಿನ ನಡುವೆಯೂ, ಯಾವುದೋ ಒಂದು ಸಣ್ಣ ತಪ್ಪನ್ನು ಹಿಡಿದುಕೊಂಡು ಕೊರಗುವುದು.
  • ಬೇರೆಯವರು ತನ್ನನ್ನು ಜಡ್ಜ್ ಮಾಡುತ್ತಿದ್ದಾರೆ, ತನ್ನ ಮುಖವಾಡ ಕಳಚಿಬೀಳುತ್ತದೆ ಎಂದು ಸದಾ ಆತಂಕದಲ್ಲಿರುವುದು.

ಇಂತಹದೊಂದು ಮಾನಸಿಕ ಸಮಸ್ಯೆಯನ್ನು ವಿರಾಟ್ ಕೊಹ್ಲಿ ಕೂಡ ಅನುಭವಿಸಿದ್ದರು. ಈ ವೇಳೆ ಅವರ ನೆರವಿಗೆ ನಿಂತದ್ದು ಟೀಮ್ ಇಂಡಿಯಾ ದಿಗ್ಗಜ ರಾಹುಲ್ ದ್ರಾವಿಡ್.

ಈ ಬಗ್ಗೆ ಮಾತನಾಡಿರುವ ವಿರಾಟ್ ಕೊಹ್ಲಿ, ನಾನು ಇಷ್ಟೆಲ್ಲಾ ಸಾಧನೆ ಮಾಡಿದ ಮೇಲೂ, ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಯುವ ಆಟಗಾರರು ತನ್ನನ್ನು ಹೇಗೆ ಅಳೆಯಬಹುದು ಎಂಬ ಆತಂಕ ಇಂದಿಗೂ ಕಾಡುತ್ತದೆ ಎಂದು ಕೊಹ್ಲಿ ಒಪ್ಪಿಕೊಂಡಿದ್ದಾರೆ.

“ನಾಯಕತ್ವದ ಜವಾಬ್ದಾರಿಯಲ್ಲಿ ನಾನು ಎಷ್ಟು ಮುಳುಗಿಹೋಗಿದ್ದೆ ಎಂದರೆ, ನನ್ನ ಸ್ವಂತ ಭಾವನೆಗಳ ಕಡೆಗೆ ಗಮನ ಹರಿಸುವುದನ್ನೇ ನಿಲ್ಲಿಸಿಬಿಟ್ಟಿದ್ದೆ. ನಾನು ಎಲ್ಲವನ್ನೂ ನಿಭಾಯಿಸುತ್ತಿದ್ದೇನೆ ಅಂದುಕೊಂಡಿದ್ದೆ, ಆದರೆ ಆ 9 ವರ್ಷಗಳಲ್ಲಿ ಯಾರೊಬ್ಬರೂ ನನ್ನ ಬಳಿ ಬಂದು ‘ನೀನು ಹೇಗಿದ್ದೀಯಾ?’ ಎಂಬ ಕನಿಷ್ಠ ಪ್ರಶ್ನೆಯನ್ನೂ ಕೇಳಲಿಲ್ಲ ಎಂಬುದನ್ನು ಆಮೇಲೆ ಅರಿತುಕೊಂಡೆ.”

“ನಾಯಕತ್ವದಿಂದ ಕೆಳಗಿಳಿದ ನಂತರ ಕೂಡ ಕೊಹ್ಲಿ ಅತ್ಯಂತ ಕಠಿಣ ಹಂತವನ್ನು ಎದುರಿಸಿದ್ದೆ. ಆ ಸಮಯದಲ್ಲಿ ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ನನಗೆ ಬೆಂಬಲವಾಗಿ ನಿಂತರು” ಎಂದು ಕೊಹ್ಲಿ ಸ್ಮರಿಸಿದ್ದಾರೆ.

“ರಾಹುಲ್ (ದ್ರಾವಿಡ್) ಭಾಯ್ ಸ್ವತಃ ಉನ್ನತ ಮಟ್ಟದಲ್ಲಿ ಕ್ರಿಕೆಟ್ ಆಡಿದ್ದರಿಂದ ನಾನು ಅನುಭವಿಸುತ್ತಿದ್ದ ಮಾನಸಿಕ ಒತ್ತಡ ಅವರಿಗೆ ಚೆನ್ನಾಗಿ ಅರ್ಥವಾಗಿತ್ತು. ಅವರಿಬ್ಬರೂ ನನ್ನನ್ನು ಮಾನಸಿಕವಾಗಿ ತುಂಬಾ ಚೆನ್ನಾಗಿ ನೋಡಿಕೊಂಡರು. ನಾನು ಅವರಿಗಾಗಿ ಆಡಬೇಕು, ಮೈದಾನದಲ್ಲಿ ಕಷ್ಟಪಟ್ಟು ರನ್ ಗಳಿಸಬೇಕು ಎಂಬ ಹಸಿವನ್ನು ಅವರು ನನ್ನಲ್ಲಿ ಮತ್ತೆ ಮೂಡಿಸಿದರು. ನಾನು ಕ್ರಿಕೆಟ್ ಇತಿಹಾಸದಲ್ಲಿ ಸಾಧಿಸಿದ್ದನ್ನು ಅವರು ನನಗೆ ನೆನಪಿಸಿಕೊಟ್ಟರು, ಇದರಿಂದಾಗಿ ನಾನು ಮತ್ತೆ ಕ್ರಿಕೆಟ್ ಅನ್ನು ಆನಂದಿಸಲು ಸಾಧ್ಯವಾಯಿತು.” ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

“ನನ್ನ ಕೆರಿಯರ್​ನ ಈ ಕಠಿಣ ದಿನಗಳಲ್ಲಿ ಮಾಜಿ ಕೋಚ್ ರಾಹುಲ್ ದ್ರಾವಿಡ್ ಮತ್ತು ವಿಕ್ರಮ್ ರಾಥೋಡ್ ನೀಡಿದ ಬೆಂಬಲಕ್ಕೆ ನಿಜವಾಗಲೂ ನಾನು ಚಿರಋಣಿ. ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ವಿರಾಟ್ ಕೊಹ್ಲಿ ಅವರ ಈ ಮಾತುಗಳು ಕ್ರೀಡಾಲೋಕದ ತೆರೆಯ ಮರೆಯ ಕಹಿಸತ್ಯವನ್ನು ಮತ್ತೊಮ್ಮೆ ಜಗತ್ತಿನ ಮುಂದೆ ತಂದಿಟ್ಟಿವೆ. ಮೈದಾನದಲ್ಲಿ ಸದಾ ಬಲಿಷ್ಠವಾಗಿ ಕಾಣುವ ಸೂಪರ್ ಸ್ಟಾರ್‌ಗಳೂ ಕೂಡ ಒಳಗೊಳಗೇ ತೀವ್ರ ಮಾನಸಿಕ ಹೋರಾಟ ನಡೆಸುತ್ತಿರುತ್ತಾರೆ ಎಂಬುದಕ್ಕೆ ಕೊಹ್ಲಿ ಅವರ ಈ ‘ಇಂಪೋಸ್ಟರ್ ಸಿಂಡ್ರೋಮ್’ ಒಪ್ಪಿಗೆಯೇ ಸಾಕ್ಷಿ.

ಇದನ್ನೂ ಓದಿ: ಟೀಮ್ ಇಂಡಿಯಾಗೆ ನಾಲ್ವರು ಹೊಸ ಆಟಗಾರರು ಎಂಟ್ರಿ..!

ಕೇವಲ ತಾಂತ್ರಿಕ ಕೌಶಲ್ಯಗಳಷ್ಟೇ ಅಲ್ಲದೆ, ರಾಹುಲ್ ದ್ರಾವಿಡ್ ಅವರಂತೆ ಆಟಗಾರರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಸೂಕ್ಷ್ಮ ಮಾರ್ಗದರ್ಶಕರು ತಂಡದಲ್ಲಿದ್ದಾಗ ಮಾತ್ರ ಒಬ್ಬ ದಿಗ್ಗಜ ಆಟಗಾರ ತನ್ನ ವೃತ್ತಿಬದುಕನ್ನು ದೀರ್ಘಕಾಲ ಉಳಿಸಿಕೊಳ್ಳಲು ಸಾಧ್ಯ ಎಂಬುದಕ್ಕೆ ಕಿಂಗ್ ಕೊಹ್ಲಿ ಬಿಚ್ಚಿಟ್ಟಿರುವ ಈ ಘಟನೆಯೇ ಸಾಕ್ಷಿ.

Published On - 2:09 pm, Wed, 20 May 26

Follow Us
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More