WPL 2023: ಯುಪಿ ವಾರಿಯರ್ಸ್ಗೆ ಜಯ: ಪ್ಲೇಆಫ್ನಿಂದ RCB ಔಟ್
Gujarat Giants vs UP Warriorz: ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಸೋತರೆ ಮಾತ್ರ ಆರ್ಸಿಬಿ ತಂಡಕ್ಕೆ ಪ್ಲೇಆಫ್ ಪ್ರವೇಶಿಸುವ ಅವಕಾಶವಿತ್ತು.

WPL 2023: ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ನ 18ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಯುಪಿ ವಾರಿಯರ್ಸ್ ತಂಡವು ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಯುಪಿ ವಾರಿಯರ್ಸ್ ಮುಂದಿನ ಹಂತಕ್ಕೇರಿದರೆ, ಆರ್ಸಿಬಿ ತಂಡದ ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಗುಜರಾತ್ ತಂಡಕ್ಕೆ ಸೋಫಿಯಾ ಡಂಕ್ಲಿ ಹಾಗೂ ಲೌರಾ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 41 ರನ್ ಪೇರಿಸಿದ ಈ ಜೋಡಿಯು ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಆ ಬಳಿಕ ಬಂದ ಹೇಮಲತಾ 33 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 6 ಫೋರ್ನೊಂದಿಗೆ 57 ರನ್ ಚಚ್ಚಿದರು. ಅಂತಿಮ ಹಂತದಲ್ಲಿ ಅಬ್ಬರಿಸಿದ ಗಾರ್ಡ್ನರ್ 39 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 6 ಫೋರ್ನೊಂದಿಗೆ 60 ರನ್ ಕಲೆಹಾಕಿದರು. ಪರಿಣಾಮ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುಜರಾತ್ ಜೈಂಟ್ಸ್ ತಂಡವು 178 ರನ್ ಕಲೆಹಾಕಿತು.
179 ರನ್ಗಳ ಟಾರ್ಗೆಟ್ ಪಡೆದ ಯುಪಿ ವಾರಿಯರ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ತಹ್ಲಿಯಾ ಮೆಕ್ಗ್ರಾಥ್ ಹಾಗೂ ಗ್ರೇಸ್ ಹ್ಯಾರಿಸ್ ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು. ಅಲ್ಲದೆ 15 ಓವರ್ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 130 ಕ್ಕೆ ತಂದು ನಿಲ್ಲಿಸಿದರು. ಈ ಹಂತದಲ್ಲಿ 38 ಎಸೆತಗಳಲ್ಲಿ 11 ಫೋರ್ನೊಂದಿಗೆ 57 ರನ್ ಬಾರಿಸಿದ ತಹ್ಲಿಯಾ ಮೆಕ್ಗ್ರಾಥ್ ವಿಕೆಟ್ ಒಪ್ಪಿಸಿದರು. ಇದಾಗ್ಯೂ ಏಕಾಂಗಿ ಹೋರಾಟ ಮುಂದುವರೆಸಿದ ಗ್ರೇಸ್ ಹ್ಯಾರಿಸ್ ಗುಜರಾತ್ ಜೈಂಟ್ಸ್ ಬೌಲರ್ಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದರು. ಪರಿಣಾಮ ಅಂತಿಮ 2 ಓವರ್ಗಳಲ್ಲಿ ಯುಪಿ ವಾರಿಯರ್ಸ್ಗೆ ಗೆಲ್ಲಲು 19 ರನ್ಗಳ ಅವಶ್ಯಕತೆಯಿತ್ತು.
19ನೇ ಓವರ್ ಎಸೆದ ಕಿಮ್ ಗಾರ್ತ್ ಎಸೆತಗಳಲ್ಲಿ ಸೋಫಿಯಾ ಫೋರ್ ಬಾರಿಸಿದರೆ, ಗ್ರೇಸ್ ಹ್ಯಾರಿಸ್ ಭರ್ಜರಿ ಸಿಕ್ಸ್ ಸಿಡಿಸಿದರು. 8 ಎಸೆತಗಳಲ್ಲಿ 7 ರನ್ಗಳು ಮಾತ್ರ ಬೇಕಿದ್ದ ವೇಳೆ ಮತ್ತೊಂದು ಭರ್ಜರಿ ಹೊಡೆತಕ್ಕೆ ಮುಂದಾಗಿ ಗ್ರೇಸ್ ಹ್ಯಾರಿಸ್ (72 ರನ್, 41 ಎಸೆತ) ಕ್ಯಾಚ್ ನೀಡಿ ಹೊರನಡೆದರು.
ಕೊನೆಯ ಓವರ್ನಲ್ಲಿ ಯುಪಿ ವಾರಿಯರ್ಸ್ 7 ರನ್ಗಳ ಟಾರ್ಗೆಟ್ ಪಡೆಯಿತು. ಸ್ನೇಹ್ ರಾಣಾ ಎಸೆದ ಅಂತಿಮ ಓವರ್ನ ಮೊದಲ ಎಸೆತದಲ್ಲಿ ಸೋಫಿ ಎಕ್ಲೆಸ್ಟೋನ್ 2 ರನ್ ಕಲೆಹಾಕಿದರು. ಆ ಬಳಿಕ 2 ಸಿಂಗಲ್ ತೆಗೆದರು. ಈ ಹಂತದಲ್ಲಿ 3 ಎಸೆತಗಳಲ್ಲಿ 3 ರನ್ಗಳ ಅವಶ್ಯಕತೆಯಿತ್ತು. ಇದೇ ವೇಳೆ 2 ರನ್ ಓಡುವ ತವಕದಲ್ಲಿ ಸಿಮ್ರಾನ್ ಶೇಖ್ ರನೌಟ್ ಆದರು.
ಕೊನೆಯ 2 ಎಸೆತಗಳಲ್ಲಿ 2 ರನ್ಗಳ ಗುರಿ. ಸ್ನೇಹ್ ರಾಣಾ ಎಸೆತವನ್ನು ಸ್ವೀಪ್ ಶಾಟ್ ಮೂಲಕ ಬೌಂಡರಿಗಟ್ಟಿ ಸೋಫಿ ಎಕ್ಲೆಸ್ಟೋನ್ ಯುಪಿ ವಾರಿಯರ್ಸ್ಗೆ ರೋಚಕ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಯುಪಿ ವಾರಿಯರ್ಸ್ ತಂಡವು ಪ್ಲೇಆಫ್ ಪ್ರವೇಶಿಸಿದೆ. ಇತ್ತ ಆರ್ಸಿಬಿ ತಂಡವು ಪ್ಲೇಆಫ್ನಿಂದ ಹೊರಬಿದ್ದಿದೆ.
ಕಮರಿದ ಆರ್ಸಿಬಿ ಪ್ಲೇಆಫ್ ಕನಸು:
ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಸೋತರೆ ಮಾತ್ರ ಆರ್ಸಿಬಿ ತಂಡಕ್ಕೆ ಪ್ಲೇಆಫ್ ಪ್ರವೇಶಿಸಲು ಅವಕಾಶವಿತ್ತು. ಅಂದರೆ ಪಾಯಿಂಟ್ ಟೇಬಲ್ನಲ್ಲಿ ಮೂರನೇ ಸ್ಥಾನದಲ್ಲಿದ್ದ ಯುಪಿ ವಾರಿಯರ್ಸ್ ತನ್ನ 2 ಪಂದ್ಯಗಳಲ್ಲೂ ಸೋಲಬೇಕಿತ್ತು. ಇತ್ತ ಆರ್ಸಿಬಿ ತನ್ನ ಕೊನೆಯ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ನೆಟ್ ರನ್ ರೇಟ್ ಮೂಲಕ ಪ್ಲೇಆಫ್ ಪ್ರವೇಶಿಸುವ ಅವಕಾಶವಿತ್ತು. ಆದರೀಗ ಗುಜರಾತ್ ಜೈಂಟ್ಸ್ ತಂಡಕ್ಕೆ ಸೋಲುಣಿಸುವ ಮೂಲಕ ಯುಪಿ ವಾರಿಯರ್ಸ್ ತಂಡವು ಪ್ಲೇಆಫ್ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಇತ್ತ ಆರ್ಸಿಬಿ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದರೂ ಪ್ಲೇಆಫ್ಗೇರುವುದಿಲ್ಲ.
ಇದನ್ನೂ ಓದಿ: IPL 2023: ಐಪಿಎಲ್ 5 ತಂಡಗಳ ಹೊಸ ಜೆರ್ಸಿ ಅನಾವರಣ
3 ತಂಡಗಳಿಗೆ ಮಾತ್ರ ಅವಕಾಶ:
ವುಮೆನ್ಸ್ ಪ್ರೀಮಿಯರ್ ಲೀಗ್ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನ ಪಡೆಯುವ ತಂಡವು ನೇರವಾಗಿ ಫೈನಲ್ ಪ್ರವೇಶಿಸಲಿದೆ. ಇನ್ನು 2ನೇ ಹಾಗೂ 3ನೇ ಸ್ಥಾನ ಪಡೆಯುವ ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಇದರಲ್ಲಿ ಗೆಲ್ಲುವ ತಂಡವು ಫೈನಲ್ ಪ್ರವೇಶಿಸಲಿದೆ.
Published On - 6:57 pm, Mon, 20 March 23
