WTC ಫೈನಲ್‌ಗೆ ಅರ್ಹತೆ ಪಡೆಯದ ಭಾರತ; ಭಾರಿ ನಷ್ಟದ ಸುಳಿಗೆ ಸಿಲುಕಿಕೊಂಡ ಆಯೋಜಕರು
WTC Final 2025: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ನಲ್ಲಿ ಭಾರತದ ಅನುಪಸ್ಥಿತಿಯಿಂದಾಗಿ ಲಾರ್ಡ್ಸ್ ಕ್ರಿಕೆಟ್ ಮೈದಾನವು ಭಾರೀ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗಿ ಬಂದಿದೆ. ಟೀಂ ಇಂಡಿಯಾ ಫೈನಲ್‌ಗೆ ಅರ್ಹತೆ ಪಡೆಯುವ ನಿರೀಕ್ಷೆಯಿಂದ ಟಿಕೆಟ್ ಬೆಲೆಗಳನ್ನು ಹೆಚ್ಚಿಸಲಾಗಿತ್ತು. ಆದರೆ ಭಾರತದ ಸೋಲಿನಿಂದಾಗಿ ಟಿಕೆಟ್ ಬೆಲೆಗಳನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ, ಇದರಿಂದ ಆಯೋಜಕರಿಗೆ ನಷ್ಟ ಉಂಟಾಗಿದೆ. ಲಾರ್ಡ್ಸ್ ಕ್ಲಬ್ ಸುಮಾರು 45 ಕೋಟಿ ರೂಪಾಯಿಗಳ ನಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ

ಚಾಂಪಿಯನ್ಸ್ ಟ್ರೋಫಿಯ ಅಂತ್ಯದೊಂದಿಗೆ ಸದ್ಯಕ್ಕೆ ಐಸಿಸಿ (ICC) ಈವೆಂಟ್ಗಳಿಗೆ ಬ್ರೇಕ್ ಬಿದ್ದಿದೆ. ಮುಂದಿನ ಜೂನ್ ತಿಂಗಳಲ್ಲಿ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (WTC Final) ಐಸಿಸಿ ನಡೆಸುವ ಪ್ರಮುಖ ಈವೆಂಟ್ ಆಗಿದೆ. ಆದರೆ ಈ ಫೈನಲ್ ಪಂದ್ಯ ನಷ್ಟದ ಸುಳಿಗೆ ಸಿಲುಕಿದ್ದು, ಆಯೋಜಕರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತ್ತಾಗಿದೆ. ಇದಕ್ಕೆ ಪ್ರಮುಖ ಕಾರಣ, ಪ್ರಸ್ತುತ ಕ್ರಿಕೆಟ್ ಲೋಕವನ್ನು ಅಕ್ಷರಶಃ ಆಳುತ್ತಿರುವ ಟೀಂ ಇಂಡಿಯಾ (Team India) ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆಯಲು ವಿಫಲವಾಗಿರುವುದು. ಟೀಂ ಇಂಡಿಯಾ ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ ಎಂಬ ನಂಬಿಕೆಯ ಮೇಲೆ ಫೈನಲ್ ಪಂದ್ಯದ ಟಿಕೆಟ್ಗಳ ಬೆಲೆಯಲ್ಲಿ ಹೆಚ್ಚಳ ಮಾಡಿದ ಆಯೋಜಕರು ಇದೀಗ ಫೈನಲ್ ಪಂದ್ಯದ ಟಿಕೆಟ್ಗಳ ಬೆಲೆಯನ್ನು ಇಳಿಸಿದ್ದಾರೆ ಎಂದು ವರದಿಯಾಗಿದೆ.
ಫೈನಲ್ ರೇಸ್ನಿಂದ ಹೊರಬಿದ್ದ ಭಾರತ
ವಾಸ್ತವವಾಗಿ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಳು ನಡೆಯುವುದಕ್ಕೂ ಮುನ್ನ ಡಬ್ಲ್ಯುಟಿಸಿ ಫೈನಲ್ ರೇಸ್ನಲ್ಲಿ ಟೀಂ ಇಂಡಿಯಾ ಅಗ್ರಸ್ಥಾನದಲ್ಲಿತ್ತು. ಅಲ್ಲದೆ ಕಿವೀಸ್ ತಂಡವನ್ನು ತವರಿನಲ್ಲೇ ಎದುರಿಸುತ್ತಿದ್ದ ಟೀಂ ಇಂಡಿಯಾ ಸುಲಭವಾಗಿ ಸರಣಿ ಗೆದ್ದು ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ ಎಂದು ಆಯೋಜಕರು ಭರವಸೆ ಹೊಂದಿದ್ದರು. ಆದರೆ ಕಿವೀಸ್ ವಿರುದ್ಧ ಟೆಸ್ಟ್ ಸರಣಿ ಸೋತ್ತಿದ್ದ ಭಾರತ, ಆ ಬಳಿಕ ಆಸ್ಟ್ರೇಲಿಯಾದಲ್ಲೂ ಸೋಲಿಗೆ ಸುಳಿಗೆ ಸಿಲುಕಿತು. ಅಂತಿಮವಾಗಿ ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಫೈನಲ್ ಪಂದ್ಯವನ್ನಾಡಲು ಟಿಕೆಟ್ ಪಡೆದುಕೊಂಡವು.
45 ಕೋಟಿ ರೂ. ನಷ್ಟ
ಇದೀಗ ಮೊದಲೇ ನಿರ್ಧರಿಸಿದಂತೆ ಡಬ್ಲ್ಯುಟಿಸಿ ಮೂರನೇ ಆವೃತ್ತಿಯ ಫೈನಲ್ ಪಂದ್ಯಕ್ಕೆ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನ ಆತಿಥ್ಯವಹಿಸಲು ಸಜ್ಜಾಗಿ ನಿಂತಿದೆ. ಆದರೆ ಸತತ ಮೂರನೇ ಬಾರಿಗೆ ಭಾರಿ ಲಾಭಗಳಿಸುವ ನಿರೀಕ್ಷೆಯಲ್ಲಿದ್ದ ಮೇರಿಲ್‌ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಮಾತ್ರ ನಷ್ಟದ ಸುಳಿಗೆ ಸಿಲುಕುವ ಆತಂಕದಲ್ಲಿದೆ. ದಿ ಟೈಮ್ಸ್ ವರದಿಯ ಪ್ರಕಾರ, ಭಾರತ ಅರ್ಹತೆ ಪಡೆಯುವಲ್ಲಿ ವಿಫಲವಾದ ಕಾರಣ ಡಬ್ಲ್ಯುಟಿಸಿ ಫೈನಲ್ ಪಂದ್ಯವನ್ನು ಲಾರ್ಡ್ಸ್ ಮೈದಾನದಲ್ಲಿ ಆಯೋಜಿಸುತ್ತಿರುವ ಮೇರಿಲ್‌ಬೋನ್ ಕ್ರಿಕೆಟ್ ಕ್ಲಬ್, ಸರಿ ಸುಮಾರು ನಾಲ್ಕು ಮಿಲಿಯನ್ ಪೌಂಡ್‌ಗಳು ಅಂದರೆ ಭಾರತೀಯ ರೂಪಾಯಿಗಳಲ್ಲಿ 45 ಕೋಟಿ ರೂಗಳಷ್ಟು ಕಡಿಮೆ ಆದಾಯವನ್ನು/ ನಷ್ಟವನ್ನು ಅನುಭವಿಸಲಿದೆ ಎಂದು ವರದಿ ಮಾಡಿದೆ.
ಮೊದಲೆರಡು ಆವೃತ್ತಿಗಳಲ್ಲಿ ಭರ್ಜರಿ ಲಾಭ
ವಾಸ್ತವವಾಗಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಮೊದಲೆರಡು ಆವೃತ್ತಿಗಳ ಫೈನಲ್ ಪಂದ್ಯಕ್ಕೂ ಇದೇ ಲಾರ್ಡ್ಸ್ ಮೈದಾನ ಆತಿಥ್ಯವಹಿಸಿತ್ತು. ಆ ಎರಡೂ ಆವೃತ್ತಿಗಳಲ್ಲು ಭಾರತ ಫೈನಲ್ಗೇರಿತ್ತಾದರೂ, ಚಾಂಪಿಯನ್ ಆಗಲು ಆಗಿರಲಿಲ್ಲ. ಮೊದಲ ಡಬ್ಲ್ಯುಟಿಸಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿದ್ದ ಭಾರತ, ಎರಡನೇ ಆವೃತ್ತಿಯ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿತ್ತು. ಆದಾಗ್ಯೂ ಮೇರಿಲ್‌ಬೋನ್ ಕ್ರಿಕೆಟ್ ಕ್ಲಬ್ನ ಆದಾಯಕ್ಕೆ ಯಾವುದೇ ಧಕ್ಕೆಯಾಗಿರಲಿಲ್ಲ. ಏಕೆಂದರೆ ಭಾರತ ಫೈನಲ್ಗೇರಿದ್ದ ಕಾರಣ, ಕ್ರಿಕೆಟ್ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಕಿಕ್ಕಿರಿದ್ದು ತುಂಬಿದ್ದರು. ಇದರ ಲಾಭ ಪಡೆಯುವ ಸಲುವಾಗಿ ಆಯೋಜಕರು ಕೂಡ ಫೈನಲ್ ಪಂದ್ಯದ ಟಿಕೆಟ್ಗಳ ಬೆಲೆಯಲ್ಲಿ ಏರಿಕೆ ಮಾಡಿದ್ದರು.
ಇದನ್ನೂ ಓದಿ: ‘ಯಾವುದೇ ಕಾರಣವಿಲ್ಲ’; ರೋಹಿತ್ ನಿವೃತ್ತಿಯ ಬಗ್ಗೆ ಎಬಿ ಡಿವಿಲಿಯರ್ಸ್ ಏನಂದ್ರು?
50 ಪೌಂಡ್ಗಳಷ್ಟು ಅಗ್ಗ
ಮೊದಲೆರಡು ಆವೃತ್ತಿಗಳಂತೆ ಮೂರನೇ ಆವೃತ್ತಿಯಲ್ಲೂ ಭಾರತ ಫೈನಲ್ ತಲುಪುವ ನಿರೀಕ್ಷೆಯಿಂದ ಮೇರಿಲ್‌ಬೋನ್ ಕ್ರಿಕೆಟ್ ಕ್ಲಬ್ ಮೂಲತಃ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಟಿಕೆಟ್ ಬೆಲೆಗಳನ್ನು ಹೆಚ್ಚಿಸಿತ್ತು. ಆದರೆ ಟೀಂ ಇಂಡಿಯಾ, ಫೈನಲ್ ರೇಸ್ನಿಂದ ಹೊರಬಿದ್ದ ಬಳಿಕ ಫೈನಲ್ ಪಂದ್ಯದ ಟಿಕೆಟ್ ಬೆಲೆಯನ್ನು ಆಯೋಜಕರು ಅರ್ಧಕ್ಕರ್ಧದಷ್ಟು ಕಡಿಮೆ ಮಾಡಿದ್ದಾರೆ. ಪ್ರಸ್ತುತ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವೆ ನಡೆಯಲ್ಲಿರುವ ಡಬ್ಲ್ಯುಟಿಸಿ ಫೈನಲ್ ಪಂದ್ಯದ ಟಿಕೆಟ್‌ಗಳನ್ನು ಈಗ 40 ರಿಂದ 90 ಪೌಂಡ್ಗಳವರೆಗೆ ಮಾರಾಟ ಮಾಡಲಾಗುತ್ತಿದೆ. ಇದು ಮೂಲ ಬೆಲೆಗಿಂತ ಸುಮಾರು 50 ಪೌಂಡ್ಗಳಷ್ಟು ಅಗ್ಗವಾಗಿದೆ. ಇದರಿಂದಾಗಿ ಆಯೋಜಕರ ಆದಾಯದಲ್ಲಿ ಇಳಿಕೆ ಕಂಡುಬಂದಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:28 pm, Thu, 13 March 25