AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದೆಂದೂ ಕಾಣದ ಅದ್ಭುತ ಆಟ: ವಿಶ್ವ ದಾಖಲೆ ಬರೆದ ಗೋಲ್ ಕೀಪರ್!

FIFA World Cup 2026: ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅದ್ಭುತ ಆಟಕ್ಕೆ ಕ್ಯಾನ್ಸಾಸ್ ಸಿಟಿಯ ಆ್ಯರೋಹೆಡ್ ಸ್ಟೇಡಿಯಂ ಸಾಕ್ಷಿಯಾಗಿದೆ. ಅದು ಕೂಡ ಗೋಲ್ ಕೀಪರ್ ಕಡೆಯಿಂದ. ಅಂದರೆ 90 ನಿಮಿಷಗಳ ಅವಧಿಯಲ್ಲಿ ಒಂದೇ ಒಂದು ಗೋಲು ಬಾರಿಸಲು ಬಿಡದೇ ಕುರಾಸಾವೊ ದ್ವೀಪ ರಾಷ್ಟ್ರದ ಗೋಲ್‌ ಕೀಪರ್ ಎಲೋಯ್ ರೂಮ್ ಸಾರ್ವಕಾಲಿಕ ವಿಶ್ವ ದಾಖಲೆ ಬರೆದಿದ್ದಾರೆ.

ಹಿಂದೆಂದೂ ಕಾಣದ ಅದ್ಭುತ ಆಟ: ವಿಶ್ವ ದಾಖಲೆ ಬರೆದ ಗೋಲ್ ಕೀಪರ್!
Eloy RoomImage Credit source: YT
ಝಾಹಿರ್ ಯೂಸುಫ್
|

Updated on: Jun 21, 2026 | 9:43 AM

Share

ಜೂನ್ 20, 2026 ರಂದು ಇಡೀ ಫುಟ್‌ಬಾಲ್ ಜಗತ್ತೇ ಕುರಾಸಾವೊ (Curaçao) ದ್ವೀಪ ರಾಷ್ಟ್ರದ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದಾರೆ ಆ ದೇಶದ ಗೋಲ್‌ಕೀಪರ್ ಎಲೋಯ್ ರೂಮ್ (Eloy Room).  ಈಕ್ವೆಡಾರ್ ವಿರುದ್ಧದ ಪಂದ್ಯದಲ್ಲಿ ಎಲೋಯ್ ರೂಮ್ ಒಂದಲ್ಲ, ಎರಡಲ್ಲ, ಬರೋಬ್ಬರಿ 15 ಗೋಲು ಪ್ರಯತ್ನಗಳನ್ನು ತಡೆದು ನಿಲ್ಲಿಸಿದ್ದಾರೆ. ಈ ಮೂಲಕ 90 ನಿಮಿಷಗಳ ಅವಧಿಯಲ್ಲಿ ಅತ್ಯಧಿಕ ಗೋಲುಗಳನ್ನು ತಡೆದ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಮೊದಲ ಪಂದ್ಯದಲ್ಲಿ ಜರ್ಮನಿ ವಿರುದ್ಧ ಅನುಭವಿಸಿದ ಹೀನಾಯ ಸೋಲಿನಿಂದ ಕಂಗೆಟ್ಟಿದ್ದ ಕುರಾಸಾವೊ ತಂಡ ಈ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿದಿತ್ತು. ಆದರೆ ಈಕ್ವೆಡಾರ್ ತಂಡದ ಮುನ್ಪಡೆ ಆಟಗಾರರನ್ನು ಕಟ್ಟಿಹಾಕುವುದೇ ಕುರಾಸಾವೊ ಡಿಫೆಂಡರ್​ಗಳ ಮುಂದಿದ್ದ ದೊಡ್ಡ ಸವಾಲು.

ಈ ಸವಾಲನ್ನು ಮೆಟ್ಟಿ ನಿಲ್ಲುವ ಪ್ರಯತ್ನ ಮಾಡಿದರೂ ಬ್ಯಾಕ್ ಟು ಬ್ಯಾಕ್ ಅಟ್ಯಾಕ್ ಮೂಲಕ ಈಕ್ವೆಡಾರ್ ಕುರಾಸಾವೊ ನಿರ್ಮಿಸಿದ ರಕ್ಷಣಾ ಕೋಟೆಯನ್ನು ಭೇದಿಸಿತು. ಈ ರಕ್ಷಣಾ ಕೋಟೆಯನ್ನು ದಾಟಿದರೂ 37 ವರ್ಷದ ಅನುಭವಿ ಗೋಲ್‌ಕೀಪರ್ ಎಲೋಯ್ ರೂಮ್ ಮಾತ್ರ ಒಂದೇ ಒಂದು ಗೋಲು ದಾಖಲಿಸಲು ಬಿಡಲಿಲ್ಲ ಎಂಬುದು ವಿಶೇಷ.

ಪಂದ್ಯದ ಮುಖ್ಯಾಂಶಗಳು:

  • ಕ್ಯಾನ್ಸಾಸ್ ಸಿಟಿಯ ಆ್ಯರೋಹೆಡ್ ಸ್ಟೇಡಿಯಂನಲ್ಲಿ ನಡೆದ ಈಕ್ವೆಡಾರ್ ವಿರುದ್ಧದ ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಕುರಾಸಾವೊ 0-0 ಅಂತರದಿಂದ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
  • ಈ ಡ್ರಾನೊಂದಿಗೆ ಕುರಾಸಾವೊ ತಂಡವು ಇದೇ ಮೊದಲ ಬಾರಿಗೆ ಫಿಫಾ ವಿಶ್ವಕಪ್​ನಲ್ಲಿ ಒಂದು ಅಂಕ ಪಡೆದುಕೊಂಡಿದೆ.
  • ಮೊದಲ ಮ್ಯಾಚ್​ನಲ್ಲಿ ಐವರಿ ಕೋಸ್ಟ್ ವಿರುದ್ಧ ಸೋತಿದ್ದ ಈಕ್ವೆಡಾರ್ ಇದೀಗ 1 ಅಂಕದೊಂದಿಗೆ ಗ್ರೂಪ್-ಇ ಪಾಯಿಂಟ್ಸ್ ಟೇಬಲ್​ನಲ್ಲಿ ಮೂರನೇ ಸ್ಥಾನದಲ್ಲೇ ಉಳಿದುಕೊಂಡಿದೆ

ಎಲೋಯ್ ರೂಮ್ ವಿಶ್ವ ದಾಖಲೆ:

ಈ ಪಂದ್ಯದ ಮೂಲಕ ಕುರಾಸಾವೊ ಗೋಲ್ ಕೀಪರ್ ಎಲೋಯ್ ರೂಮ್ ಫಿಫಾ ವಿಶ್ವಕಪ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ರಮೋನ್ ಕ್ವಿರೋಗಾ ಅವರ ಹೆಸರಿನಲ್ಲಿದ್ದ ವರ್ಲ್ಡ್​ ರೆಕಾರ್ಡ್ ಅನ್ನು ಅಳಿಸಿ ಹಾಕುವ ಮೂಲಕ ಎಂಬುದು ವಿಶೇಷ.

  •  ದಾಖಲೆಯ 15 ಸೇವ್‌ಗಳು: ಈ ಪಂದ್ಯದಲ್ಲಿ ಈಕ್ವೆಡಾರ್ ತಂಡವು ಕುರಾಸಾವೊ ಗೋಲ್ ಪೋಸ್ಟ್​ನತ್ತ ಒಟ್ಟು 28 ಬಾರಿ ಚೆಂಡನ್ನು ಒದ್ದಿದ್ದರು. ಅದರಲ್ಲಿ 15 ಅತ್ಯಂತ ನಿಖರವಾದ ಆನ್‌-ಟಾರ್ಗೆಟ್ ಶಾಟ್‌ಗಳಾಗಿದ್ದವು. ಆದರೆ ತಡೆ ಗೋಡೆಯಂತೆ ನಿಂತ ಎಲೋಯ್ ರೂಮ್, ಆ ಎಲ್ಲಾ 15 ಪ್ರಯತ್ನಗಳನ್ನು ವಿಫಲಗೊಳಿಸಿದ್ದು ವಿಶೇಷ.
  •  ಹೊಸ ವಿಶ್ವ ದಾಖಲೆ: 90 ನಿಮಿಷಗಳ ನಿಗದಿತ ಅವಧಿಯ ಪಂದ್ಯವೊಂದರಲ್ಲಿ ಅತಿ ಹೆಚ್ಚು ಸೇವ್ ಮಾಡಿದ ದಾಖಲೆ ಈಗ ಎಲೋಯ್ ರೂಮ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ರಮೋನ್ ಕ್ವಿರೋಗಾ ಹೆಸರಿನಲ್ಲಿತ್ತು.
  • ರಮೋನ್ ಕ್ವಿರೋಗಾ ದಾಖಲೆ: 1978 ರಲ್ಲಿ ನೆದರ್​ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಪೆರು ತಂಡದ ಗೋಲು ಕೀಪರ್ ರಮೋನ್ ಕ್ವಿರೋಗಾ ಬರೋಬ್ಬರಿ 13 ಸೇವ್​ಗಳನ್ನು ಮಾಡಿದ್ದರು. ಈ ಮೂಲಕ 90 ನಿಮಿಷಗಳ ಅವಧಿಯಲ್ಲಿ ಅತ್ಯಧಿಕ ಗೋಲು ತಡೆದ ಗೋಲ್ ಕೀಪರ್ ಎನಿಸಿಕೊಂಡಿದ್ದರು.

ಇದೀಗ ಕುರಾಸಾವೊ ತಂಡದ ಗೋಲ್ ಕೀಪರ್ ಎಲೋಯ್ ರೂಮ್ ಬರೋಬ್ಬರಿ 15 ಸೇವ್​ಗಳನ್ನು ಮಾಡಿದ್ದಾರೆ. ಈ ಮೂಲಕ ಫಿಫಾ ವಿಶ್ವಕಪ್ ಇತಿಹಾಸದಲ್ಲೇ 90 ನಿಮಿಷಗಳ ಅವಧಿಯಲ್ಲಿ ಅತ್ಯಧಿಕ ಗೋಲು ಶಾಟ್​ಗಳನ್ನು ತಡೆದ ಗೋಲ್ ಕೀಪರ್ ಎನಿಸಿಕೊಂಡಿದ್ದಾರೆ.

ಒಟ್ಟಾರೆ ವಿಶ್ವ ದಾಖಲೆ:

ಫುಟ್​ಬಾಲ್ ವಿಶ್ವಕಪ್​ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಅತ್ಯಧಿಕ ಗೋಲುಗಳನ್ನು ತಡೆದ ವಿಶ್ವ ದಾಖಲೆ ಅಮೆರಿಕಾದ ಟಿಮ್ ಹೊವಾರ್ಡ್ ಹೆಸರಿನಲ್ಲಿದೆ. 2014 ರ ವಿಶ್ವಕಪ್‌ನಲ್ಲಿ ಬೆಲ್ಜಿಯಂ ವಿರುದ್ಧದ ಪಂದ್ಯದಲ್ಲಿ ಟಿಮ್ ಹೊವಾರ್ಡ್  16 ಸೇವ್‌ಗಳನ್ನು ಮಾಡಿದ್ದರು. ಆದರೆ ಅದು 120 ನಿಮಿಷಗಳ (ಹೆಚ್ಚುವರಿ ಸಮಯ ಸೇರಿದಂತೆ) ಅವಧಿಯಲ್ಲಿ ಎಂಬುದು ಇಲ್ಲಿ ಉಲ್ಲೇಖಾರ್ಹ.

ಇದನ್ನೂ ಓದಿ: 2 ಪಂದ್ಯಗಳು ಬಾಕಿ ಇರುವಾಗಲೇ ಪಾಕ್ ತಂಡದ ವಿಶ್ವಕಪ್ ಕನಸು ನುಚ್ಚುನೂರು!

ಆದರೀಗ ನಿಗದಿತ 90 ನಿಮಿಷಗಳ ಅವಧಿಯಲ್ಲಿ ಬರೋಬ್ಬರಿ 15 ಗೋಲ್ ಸೇವ್​ಗಳನ್ನು ಮಾಡಿ ಕುರಾಸಾವೊ ಗೋಲ್ ಕೀಪರ್ ಎಲೋಯ್ ರೂಮ್ ಇಡೀ ಫುಟ್​ಬಾಲ್ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ್ದಾರೆ.

Follow Us