- Kannada News Photo gallery Cricket photos IPL 2026 Mini-Auction: Venkatesh Iyer Sold to RCB for 7 Crore in Abu Dhabi
IPL Auction 2026: 16.75 ಕೋಟಿ ರೂ. ನಷ್ಟದೊಂದಿಗೆ ಆರ್ಸಿಬಿ ಸೇರಿದ ವೆಂಕಟೇಶ್ ಅಯ್ಯರ್
Venkatesh Iyer Auction Price: ಐಪಿಎಲ್ 2026 ಮಿನಿ ಹರಾಜಿನಲ್ಲಿ ವೆಂಕಟೇಶ್ ಅಯ್ಯರ್ 7 ಕೋಟಿ ರೂ.ಗೆ RCB ಸೇರಿಕೊಂಡಿದ್ದಾರೆ. ಕಳೆದ ಮೆಗಾ ಹರಾಜಿನಲ್ಲಿ 23.75 ಕೋಟಿ ಪಡೆದಿದ್ದ ವೆಂಕಟೇಶ್ ಈ ಬಾರಿ ಕಡಿಮೆ ಮೊತ್ತಕ್ಕೆ ಬಿಕರಿಯಾಗಿದ್ದಾರೆ. ಅವರ ಕಳಪೆ ಪ್ರದರ್ಶನವೇ ಇದಕ್ಕೆ ಕಾರಣ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ನೆರವಾಗಬಲ್ಲ ಅಯ್ಯರ್ ಆರ್ಸಿಬಿಗೆ ಉತ್ತಮ ಆಯ್ಕೆ ಎನ್ನಲಾಗಿದೆ.
Updated on: Dec 16, 2025 | 7:16 PM

ಅಬುಧಾಬಿಯಲ್ಲಿ ನಡೆದ ಐಪಿಎಲ್ 2026 ಮಿನಿ ಹರಾಜಿನಲ್ಲಿ ಭಾರತದ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡಿದ್ದಾರೆ. ಹಿಂದಿನ ಮೆಗಾ ಹರಾಜಿನಲ್ಲಿ 23.75 ಕೋಟಿ ರೂ.ಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೇರಿಕೊಂಡಿದ್ದ ವೆಂಕಟೇಶ್, ಈ ಮಿನಿ ಹರಾಜಿನಲ್ಲಿ 7 ಕೋಟಿಗೆ ಮಾರಾಟವಾದರು.

ವಾಸ್ತವವಾಗಿ ಕಳೆದ ಬಾರಿಯ ಮೆಗಾ ಹರಾಜಿನಲ್ಲಿ ಇದೇ ವೆಂಕಟೇಶ್ಗಾಗಿ ಆರ್ಸಿಬಿ ಹಾಗೂ ಕೆಕೆಆರ್ ನಡುವೆ ಭಾರಿ ಪೈಪೋಟಿ ನಡೆದಿತ್ತು. ಅಂತಿಮವಾಗಿ ಬಿಡ್ ಗೆಲ್ಲುವಲ್ಲಿ ಕೆಕೆಆರ್ ಯಶಸ್ವಿಯಾಗಿತ್ತು. ಈ ಬಾರಿಯೂ ಇದೇ ಎರಡು ತಂಡಗಳು ಪೈಪೋಟಿಗೆ ಬಿದ್ದಿದ್ದವು. ಆದರೆ ಈ ಬಾರಿ ಬಿಡ್ ಗೆದ್ದಿದ್ದು ಆರ್ಸಿಬಿ, ಅದು ಕೇವಲ 7 ಕೋಟಿ ರೂ.ಗಳಿಗೆ.

ಕಳೆದ ಆವೃತ್ತಿಯಲ್ಲಿ ಬರೋಬ್ಬರಿ 23.75 ಕೋಟಿ ರೂ. ಪಡೆದಿದ್ದ ವೆಂಕಟೇಶ್, ಈ ಬಾರಿ ಪಡೆದಿದ್ದು, 7 ಕೋಟಿ. ಅಂದರೆ ವೆಂಕಟೇಶ್ ಖಜಾನೆಗೆ 16.75 ಕೋಟಿ ರೂ. ನಷ್ಟವುಂಟಾಗಿದೆ. ವೆಂಕಟೇಶ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಆರ್ಸಿಬಿ ನೆರವಾಗಲಿದ್ದು, ಅವರ ಖರೀದಿ ತಂಡದ ಉತ್ತಮ ನಿರ್ಧಾರ ಎನ್ನಲಾಗುತ್ತಿದೆ.

ಮೂಲ ಬೆಲೆ 2 ಕೋಟಿ ರೂಗಳೊಂದಿಗೆ ಹರಾಜಿಗೆ ಬಂದಿದ್ದ ವೆಂಕಟೇಶ್ಗಾಗಿ ಮೊದಲು ಲಕ್ನೋ ಸೂಪರ್ ಜೈಂಟ್ಸ್ ಬಿಡ್ಡಿಂಗ್ ಮಾಡಿತು. ನಂತರ ಗುಜರಾತ್ ಟೈಟನ್ಸ್ ಬಿಡ್ಡಿಂಗ್ ಆರಂಭಿಸಿತು. ಗುಜರಾತ್ ಹೊರಬಿದ್ದ ಬಳಿಕ ಕಣಕ್ಕಿಳಿದ ಆರ್ಸಿಬಿ ಬಿಡ್ ಅನ್ನು 7 ಕೋಟಿಗೆ ಏರಿಸಿ ಅಂತಿಮವಾಗಿ ವೆಂಕಟೇಶ್ರನ್ನು ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಆದಾಗ್ಯೂ, ಕಳೆದ ಆವೃತ್ತಿಯಲ್ಲಿ ವೆಂಕಟೇಶ್ ಅವರ ಪ್ರದರ್ಶನ ತೀರ ಕಳಪೆಯಾಗಿತ್ತು. ಹೀಗಾಗಿ ಅವರನ್ನು ಕೆಕೆಆರ್ ಕೈಬಿಟ್ಟಿತು. ವೆಂಕಟೇಶ್ ಅಯ್ಯರ್ 2021 ರಿಂದ ಐಪಿಎಲ್ನಲ್ಲಿ ಆಡುತ್ತಿದ್ದು, ಇದುವರೆಗೆ ಐಪಿಎಲ್ನಲ್ಲಿ ಒಟ್ಟು 62 ಪಂದ್ಯಗಳನ್ನು ಆಡಿದ್ದಾರೆ. 29.95 ರ ಸರಾಸರಿಯಲ್ಲಿ 1,468 ರನ್ ಗಳಿಸಿದ್ದಾರೆ. 2024 ರಲ್ಲಿ ಕೆಕೆಆರ್ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ವೆಂಕಟೇಶ್, 370 ರನ್ ಬಾರಿಸಿದ್ದರು. ಆದಾಗ್ಯೂ, ಕಳೆದ ಆವೃತ್ತಿಯಲ್ಲಿ 11 ಪಂದ್ಯಗಳನ್ನಾಡಿದ ಅವರು ಕೇವಲ 142 ರನ್ ಗಳಿಸಿದರು. ಇದು ಅವರನ್ನು ಕೆಕೆಆರ್ನಿಂದ ಬಿಡುಗಡೆ ಮಾಡಲು ಕಾರಣವಾಯಿತು.
