Jannik Sinner: ಯಾನಿಕ್ ಸಿನ್ನರ್ಗೆ ಯುಎಸ್ ಓಪನ್ ಕಿರೀಟ
US Open: ಈ ಬಾರಿಯ ಯುಎಸ್ ಓಪನ್ ಟೆನಿಸ್ ಟೂರ್ನಿಯ ಎರಡನೇ ಸುತ್ತಿನಲ್ಲೇ ಕಾರ್ಲೋಸ್ ಅಲ್ಕರಾಝ್ ಹೊರಬಿದ್ದಿದ್ದರು. ಇನ್ನು ನೊವಾಕ್ ಜೊಕೊವಿಚ್ ಮೂರನೇ ಸುತ್ತಿನಲ್ಲೇ ನಿರ್ಗಮಿಸಿದ್ದರು. ಇತ್ತ ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ 23 ವರ್ಷದ ಯಾನಿಕ್ ಸಿನ್ನರ್ ಅಂತಿಮವಾಗಿ ಯುಎಸ್ ಓಪನ್ ಕಿರೀಟವನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ವಿಶ್ವದ ನಂಬರ್ ಒನ್ ಟೆನಿಸ್ ತಾರೆ ಯಾನಿಕ್ ಸಿನ್ನರ್ ಯುಎಸ್ ಓಪನ್ ಕಿರೀಟ ತಮ್ಮದಾಗಿಸಿಕೊಂಡಿದ್ದಾರೆ. ನ್ಯೂಯಾರ್ಕ್ನ ಆರ್ಥರ್ ಆಶೆ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅಮೆರಿಕದ ಟೇಲರ್ ಫ್ರಿಟ್ಝ್ ಅವರನ್ನು ನೇರ ಸೆಟ್ಗಳಿಂದ ಸೋಲಿಸಿ ಯಾನಿಕ್ ಚಾಂಪಿಯನ್ ಪಟ್ಟ ಅಲಂಕರಿಸಿದರು. ಈ ಮೂಲಕ ಯುಎಸ್ ಓಪನ್ ಗೆದ್ದ ಮೊದಲ ಇಟಾಲಿಯನ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಅಂತಿಮ ಹಣಾಹಣಿಯನ್ನು ಯಾನಿಕ್ ಸಿನ್ನರ್ ಏಕಪಕ್ಷೀಯವಾಗಿಸುವಲ್ಲಿ ಸಫಲರಾದರು. ಮೊದಲ ಸುತ್ತಿನಲ್ಲೇ ಅತ್ಯುತ್ತಮ ಸರ್ವ್ಗಳೊಂದಿಗೆ ಗಮನ ಸೆಳೆದ ಜಾನಿಕ್, ಆ ಬಳಿಕ ಫೋರ್ಹ್ಯಾಂಡ್ ಶಾಟ್ಗಳ ಮೂಲಕ ಫ್ರಿಟ್ಝ್ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಪರಿಣಾಮ ಮೊದಲ ಸುತ್ತನ್ನು ಸಿನ್ನರ್ 6-3 ಅಂತರದಿಂದ ಗೆದ್ದುಕೊಂಡರು.
ಇದೇ ಲಯವನ್ನು ಎರಡನೇ ಸುತ್ತಿನಲ್ಲೂ ಮುಂದುವರೆಸಿದ ಯಾನಿಕ್ ಸಿನ್ನರ್ ಡ್ರಾಪ್ಶಾಟ್ ಮತ್ತು ಓವರ್ಹೆಡ್ ಹೊಡೆತಗಳ ಮೂಲಕ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು. ಪರಿಣಾಮ ಟೇಲರ್ ಫ್ರಿಟ್ಝ್ 4 ಅಂಕಗಳನ್ನು ಕಲೆಹಾಕುವಷ್ಟರಲ್ಲಿ ಸಿನ್ನರ್ 6 ಪಾಯಿಂಟ್ಸ್ ಗಳಿಸಿ 6-4 ಅಂತರದಿಂದ ದ್ವಿತೀಯ ಸುತ್ತನ್ನು ಗೆದ್ದುಕೊಂಡರು.
ಇನ್ನು ಟೇಲರ್ ಫ್ರಿಟ್ಝ್ಗೆ ನಿರ್ಣಾಯವಾಗಿದ್ದ ಮೂರನೇ ಸುತ್ತಿನಲ್ಲಿ ಉಭಯ ಆಟಗಾರರಿಂದ ಭರ್ಜರಿ ಪೈಪೋಟಿ ಕಂಡು ಬಂತು. ಅತ್ತ ಮೂರನೇ ಸುತ್ತನ್ನು ಸುಲಭವಾಗಿ ಗೆದ್ದುಕೊಳ್ಳಬಹುದು ಎಂದುಕೊಂಡಿದ್ದ ಯಾನಿಕ್ಗೆ ಅತ್ಯುತ್ತಮ ಸರ್ವ್ಗಳ ಮೂಲಕ ಫ್ರಿಟ್ಝ್ ಪೈಪೋಟಿ ನೀಡಿದರು. ಪರಿಣಾಮ ಮೂರನೇ ಸೆಟ್ ಗೆಲ್ಲಲು ಜಾನಿಕ್ ಸಿನ್ನರ್ ತುಸು ಹೆಚ್ಚೇ ಬೆವರಿಳಿಸಬೇಕಾಯಿತು.
ಇದಾಗ್ಯೂ ಅಂತಿಮವಾಗಿ 7-5 ಅಂತರದಿಂದ ಮೂರನೇ ಸುತ್ತನ್ನು ಗೆಲ್ಲುವ ಮೂಲಕ ಯಾನಿಕ್ ಸಿನ್ನರ್ ಯಶಸ್ವಿಯಾದರು. ಈ ಮೂಲಕ ನೇರ ಸೆಟ್ಗಳಿಂದ ಫೈನಲ್ ಪಂದ್ಯವನ್ನು ಗೆದ್ದು ಯಾನಿಕ್ ಸಿನ್ನರ್ ಯುಎಸ್ ಓಪನ್ ಗೆದ್ದ ಇಟಲಿಯ ಮೊದಲ ಟೆನಿಸ್ ತಾರೆ ಎಂಬ ದಾಖಲೆಯನ್ನು ನಿರ್ಮಿಸಿದರು.
ಇದಕ್ಕೂ ಮುನ್ನ 23 ವರ್ಷದ ಯಾನಿಕ್ ಸಿನ್ನರ್ ಜನವರಿಯಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ಶಿಪ್ ಗೆದ್ದಿದ್ದರು. ಈ ಮೂಲಕ ಸ್ಲಾಮ್ ಖಾತೆ ತೆರೆದಿದ್ದ ಇಟಲಿಯನ್ ಟೆನಿಸ್ ತಾರೆ ಇದೀಗ ಯುಎಸ್ ಓಪನ್ ಮೂಲಕ ಮತ್ತೊಮ್ಮೆ ಟೆನಿಸ್ ಅಂಗಳದಲ್ಲಿ ಪರಾಕ್ರಮ ಮೆರೆದಿದ್ದಾರೆ.
In his Grand Slam lover era 💜 pic.twitter.com/3BKgPbb0aI
— US Open Tennis (@usopen) September 8, 2024
ಮಹಿಳಾ ಸಿಂಗಲ್ಸ್ ಫೈನಲ್:
ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಅಮೆರಿಕದ ಜೆಸ್ಸಿಕಾ ಪೆಗುಲಾ ವಿರುದ್ಧ ಬೆಲರೂಸಿಯನ್ ತಾರೆ ಅರೀನಾ ಸಬಲೆಂಕಾ ಜಯ ಸಾಧಿಸಿದ್ದಾರೆ. ಅಂತಿಮ ಹಣಾಹಣಿಯನ್ನು ಅರೀನಾ 7-5, 7-5 ಅಂತರದಿಂದ ಗೆದ್ದುಕೊಳ್ಳುವ ಮೂಲಕ ಯುಎಸ್ ಓಪನ್ ಮಹಿಳಾ ಕಿರೀಟವನ್ನು ತಮ್ಮದಾಗಿಸಿಕೊಂಡರು.
Published On - 10:57 am, Mon, 9 September 24