KKR vs GT: 16,776 ಪಂದ್ಯಗಳ ಬಳಿಕ ಹೀಗೊಂದು ವಿಶ್ವ ದಾಖಲೆ..!
IPL 2026: GT vs KKR: ಇಂಡಿಯನ್ ಪ್ರೀಮಿಯರ್ ಲೀಗ್ನ 60ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್ಗಳಲ್ಲಿ 247 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್ಗಳಲ್ಲಿ 218 ರನ್ಗಳಿಸಲಷ್ಟೇ ಶಕ್ತರಾದರು.

ಟಿ20 ಕ್ರಿಕೆಟ್ನಲ್ಲಿ 16,776 ಪಂದ್ಯಗಳು ನಡೆದಿದೆ. ಈ ಪಂದ್ಯಗಳಲ್ಲಿ ಕಂಡು ಬರದ ವಿಶೇಷ ವಿಶ್ವ ದಾಖಲೆಯೊಂದಕ್ಕೆ ಐಪಿಎಲ್ನ 60ನೇ ಮ್ಯಾಚ್ ಸಾಕ್ಷಿಯಾಗಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೆಕೆಆರ್ ಪರ ಫಿನ್ ಅಲೆನ್, ಅಂಗ್‌ಕ್ರಿಶ್ ರಘುವಂಶಿ ಹಾಗೂ ಕ್ಯಾಮರೋನ್ ಗ್ರೀನ್ ಅರ್ಧಶತಕ ಬಾರಿಸಿದ್ದರು. ಈ ಅರ್ಧಶತಕಗಳ ನೆರವಿನೊಂದಿಗೆ ಕೆಕೆಆರ್ ತಂಡವು 20 ಓವರ್ಗಳಲ್ಲಿ 247 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ಪರ ಶುಭ್‌ಮನ್ ಗಿಲ್, ಸಾಯಿ ಸುದರ್ಶನ್ ಹಾಗೂ ಜೋಸ್ ಬಟ್ಲರ್ ಹಾಫ್ ಸೆಂಚುರಿ ಸಿಡಿಸಿದ್ದಾರೆ. ಇದಾಗ್ಯೂ ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ 29 ರನ್ಗಳಿಂದ ಸೋತಿದೆ. ಈ ಸೋಲಿನ ಹೊರತಾಗಿಯೂ ಈ ಮ್ಯಾಚ್ ದಾಖಲೆಯ ಪುಟ ಸೇರಿದೆ.
ವಿಶ್ವ ದಾಖಲೆ:
ಟಿ20 ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪಂದ್ಯವೊಂದರಲ್ಲಿ ಒಟ್ಟು ಆರು ಬ್ಯಾಟರ್‌ಗಳು 50ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಕೆಕೆಆರ್ ಮತ್ತು ಜಿಟಿ ಬ್ಯಾಟರ್‌ಗಳು ಜೊತೆಗೂಡಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.ಲ
- ಫಿನ್ ಅಲೆನ್ (KKR): 93 ರನ್ (35 ಎಸೆತ)
- ಶುಭ್‌ಮನ್ ಗಿಲ್ (GT): 85 ರನ್ (49 ಎಸೆತ)
- ಅಂಗ್‌ಕ್ರಿಶ್ ರಘುವಂಶಿ (KKR): 82* ರನ್ (44 ಎಸೆತ)
- ಜೋಸ್ ಬಟ್ಲರ್ (GT): 57 ರನ್ (35 ಎಸೆತ)
- ಸಾಯಿ ಸುದರ್ಶನ್ (GT): 53* ರನ್ (28 ಎಸೆತ)
- ಕ್ಯಾಮರೋನ್ ಗ್ರೀನ್ (KKR): 52* ರನ್ (28 ಎಸೆತ)
ಇದನ್ನೂ ಓದಿ: 16 ಅಂಕಗಳಿದ್ದರೂ ಹೊರಬೀಳುವ ಭೀತಿಯಲ್ಲಿ ಗುಜರಾತ್ ಟೈಟಾನ್ಸ್!
ಹಳೆಯ ದಾಖಲೆ ಧೂಳೀಪಟ:
ಇದಕ್ಕೂ ಮುನ್ನ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಕೇವಲ 20 ಬಾರಿ ಮಾತ್ರ ಒಂದೇ ಪಂದ್ಯದಲ್ಲಿ 5 ಅರ್ಧಶತಕಗಳು ದಾಖಲಾಗಿದ್ದವು. ಅಂದರೆ ಈವರೆಗೆ ಯಾವುದೇ ಮ್ಯಾಚ್ನಲ್ಲೂ 6 ಅರ್ಧಶತಕ ಮೂಡಿಬಂದಿರಲಿಲ್ಲ.
- ಭಾರತ ಮತ್ತು ನ್ಯೂಝಿಲೆಂಡ್ (ಆಕ್ಲೆಂಡ್, 2020): ಅಂತಾರಾಷ್ಟ್ರೀಯ ಟಿ20 ಇತಿಹಾಸದಲ್ಲೇ ಮೊದಲ ಬಾರಿಗೆ ಪಂದ್ಯವೊಂದರಲ್ಲಿ 5 ಅರ್ಧಶತಕಗಳು ದಾಖಲಾಗಿದ್ದವು. ನ್ಯೂಝಿಲೆಂಡ್ ಪರ ಕಾಲಿನ್ ಮುನ್ರೊ (59), ಕೇನ್ ವಿಲಿಯಮ್ಸನ್ (51), ಮತ್ತು ರಾಸ್ ಟೇಲರ್ (54*) ಫಿಫ್ಟಿ ಬಾರಿಸಿದರೆ, ಭಾರತದ ಪರ ಕೆ.ಎಲ್. ರಾಹುಲ್ (56) ಮತ್ತು ಶ್ರೇಯಸ್ ಅಯ್ಯರ್ (58*) ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದರು.
- ಸೌತ್ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ (ಸೆಂಚುರಿಯನ್, 2023): ವೆಸ್ಟ್ ಇಂಡೀಸ್ ನೀಡಿದ 258 ರನ್‌ಗಳ ಬೃಹತ್ ಗುರಿಯನ್ನು ಸೌತ್ ಆಫ್ರಿಕಾ ಬೆನ್ನಟ್ಟಿದ ಈ ಐತಿಹಾಸಿಕ ಪಂದ್ಯದಲ್ಲಿ ಕ್ವಿಂಟನ್ ಡಿ ಕಾಕ್ ಸೇರಿದಂತೆ ಒಟ್ಟು 5 ಆಟಗಾರರು ಅರ್ಧಶತಕದ ಗಡಿ ದಾಟಿದ್ದರು.
- ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಐಪಿಎಲ್ 2024): ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ರನ್ ಮಳೆಯ ಪಂದ್ಯದಲ್ಲಿ ಎಸ್‌ಆರ್‌ಹೆಚ್ ಮತ್ತು ಆರ್‌ಸಿಬಿ ತಂಡದ ಬ್ಯಾಟರ್‌ಗಳು ಸೇರಿ ಒಟ್ಟು 5 ಅರ್ಧಶತಕಗಳನ್ನು ಸಿಡಿಸಿದ್ದರು.
ಆದರೆ ಇದೀಗ ಗುಜರಾತ್ ಟೈಟಾನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವಣ ಪಂದ್ಯದಲ್ಲಿ ಶುಭ್‌ಮನ್ ಗಿಲ್, ಸಾಯಿ ಸುದರ್ಶನ್, ಜೋಸ್ ಬಟ್ಲರ್, ಫಿನ್ ಅಲೆನ್, ಅಂಗ್‌ಕ್ರಿಶ್ ರಘುವಂಶಿ ಹಾಗೂ ಕ್ಯಾಮರೋನ್ ಗ್ರೀನ್ ಅರ್ಧಶತಕ ಸಿಡಿಸಿ ಹೊಸ ಇತಿಹಾಸ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಪಂದ್ಯವೊಂದು 6 ಅರ್ಧಶತಕಗಳಿಗೆ ಸಾಕ್ಷಿಯಾಗಿದೆ.





