KKR vs GT: ಕಳಪೆ ಫಿಲ್ಡಿಂಗ್ಗೆ ಸೋಲಿನ ಬೆಲೆ ತೆತ್ತ ಗುಜರಾತ್; ಕೆಕೆಆರ್ಗೆ 29 ರನ್ ಜಯ
IPL 2026 KKR vs GT: ಐಪಿಎಲ್ 2026 ರ 60 ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಗುಜರಾತ್ ಟೈಟಾನ್ಸ್ ತಂಡವನ್ನು 29 ರನ್‌ಗಳಿಂದ ಸೋಲಿಸಿ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಕೆಕೆಆರ್ ಸುಲಭ ಜಯ ದಾಖಲಿಸಲು ಗುಜರಾತ್‌ನ ಕಳಪೆ ಫಿಲ್ಡಿಂಗ್ ಹಾಗೂ ಬ್ಯಾಟರ್‌ಗಳ ಸ್ಫೋಟಕ ಬ್ಯಾಟಿಂಗ್ ಕಾರಣವಾಯಿತು. ಕೆಕೆಆರ್ 247 ರನ್ ಗಳಿಸಿದರೆ, ಗುಜರಾತ್ 218 ರನ್ ಗಳಿಸಲಷ್ಟೇ ಶಕ್ತವಾಯಿತು.

ಐಪಿಎಲ್ 2026 (IPL 2026) ರ 60 ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ, ಗುಜರಾತ್ ಟೈಟಾನ್ಸ್ (KKR vs GT) ತಂಡವನ್ನು 29 ರನ್‌ಗಳಿಂದ ಸೋಲಿಸಿ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಕೆಕೆಆರ್ ತಂಡ ಪ್ಲೇಆಫ್ ರೇಸ್ನಲ್ಲಿ ಇರಬೇಕೆಂದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಿತ್ತು. ಅದರಂತೆ ಗುಜರಾತ್‌ನ ಕಳಪೆ ಫಿಲ್ಡಿಂಗ್ ಹಾಗೂ ಬ್ಯಾಟರ್‌ಗಳ ಸ್ಫೋಟಕ ಬ್ಯಾಟಿಂಗ್ನಿಂದಾಗಿ ಕೆಕೆಆರ್ ಸುಲಭ ಜಯ ದಾಖಲಿಸಿತು. ಈಡನ್ ಗಾರ್ಡನ್ಸ್ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 247 ರನ್ ಗಳಿಸಿತು, ಇದು ಗುಜರಾತ್ ವಿರುದ್ಧ ಕೆಕೆಆರ್ ಕಲೆಹಾಕಿದ ಅತ್ಯಧಿಕ ಮೊತ್ತವಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಗುರಿ ಬೆನ್ನಟ್ಟಿದ ಗುಜರಾತ್ 218 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು.
ಅಲೆನ್ ಅಬ್ಬರ
ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ಗೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ ಅಜಿಂಕ್ಯ ರಹಾನೆ 14 ರನ್ ಗಳಿಸಿ ಔಟಾದರು. ಆದಾಗ್ಯೂ ಎಂದಿನಂತೆ ತನ್ನ ಹೊಡಿಬಡಿ ಆಟ ಮುಂದುವರೆಸಿದ ಫಿನ್ ಅಲೆನ್ 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದಾಗ್ಯೂ ಶತಕದಂಚಿನಲ್ಲಿ ಎಡವಿದ ಅಲೆನ್ 35 ಎಸೆತಗಳಲ್ಲಿ 93 ರನ್ ಔಟಾದರು. ಅಲೆನ್ ಈ ಮೊತ್ತ ಕಲೆಹಾಲು ಗುಜರಾತ್ ಫಿಲ್ಡರ್ಗಳು ನೀಡಿದ 2 ಜೀವದಾನಗಳು ಕಾರಣವಾದವು. ಇದು ಗುಜರಾತ್ ತಂಡದ ಸೋಲಿಗೂ ಪ್ರಮುಖ ಕಾರಣವಾಯಿತು ಎಂದರೆ ತಪ್ಪಾಗಲಾರದು.
ರಘುವಂಶಿ, ಗ್ರೀನ್ ಅರ್ಧಶತಕ
ಅಲೆನ್ ಹೊರತುಪಡಿಸಿ ಅಂಗ್ಕ್ರಿಶ್ ರಘುವಂಶಿ 33 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರೆ, 82 ರನ್ ಸಿಡಿಸಿ ಅಜೇಯರಾಗಿ ಉಳಿದರು. ಇವರ ಜೊತೆಗೆ ಕ್ಯಾಮರೂನ್ ಗ್ರೀನ್ ಕೂಡ 52 ರನ್ ಗಳಿಸಿ ಅಜೇಯರಾಗಿ ಪೆವಿಲಿಯನ್‌ಗೆ ಮರಳಿದರು. ಗ್ರೀನ್ ಮತ್ತು ರಘುವಂಶಿ ಕೂಡ ಮೂರನೇ ವಿಕೆಟ್‌ಗೆ 52 ಎಸೆತಗಳಲ್ಲಿ 108 ರನ್‌ಗಳ ಅಜೇಯ ಶತಕದ ಪಾಲುದಾರಿಕೆಯನ್ನು ನೀಡಿದರು. ಗುಜರಾತ್ ಪರ ಸಿರಾಜ್ ಮತ್ತು ಸಾಯಿ ಕಿಶೋರ್ ತಲಾ ಒಂದು ವಿಕೆಟ್ ಪಡೆದರು.
ಗುಜರಾತ್ಗೆ ಉತ್ತಮ ಆರಂಭ
ಈ ಬೃಹತ್ ಗುರಿ ಬೆನ್ನಟ್ಟಿದ ಗುಜರಾತ್ಗೆ ಉತ್ತಮ ಆರಂಭ ಸಿಕ್ಕಿತು. ಆದರೆ ಆರಂಭಿಕ ಸಾಯಿ ಸುದರ್ಶನ್ 23 ರನ್ ಗಳಿಸಿ ಗಾಯಗೊಂಡು ನಿವೃತ್ತರಾದ ಬಳಿಕ ಗುಜರಾತ್ ರನ್ ವೇಗ ಕುಸಿಯಿತು. ಪವರ್ ಪ್ಲೇ ಬಳಿಕ ಗುಜರಾತ್ ಬ್ಯಾಟರ್ಗಳು ಬಿಗ್ ಶಾಟ್ ಆಡದಂತೆ ತಡೆಯುವಲ್ಲಿ ಕೆಕೆಆರ್ ಬೌಲರ್ಗಳು ಯಶಸ್ವಿಯಾದರು. ಗಿಲ್ ಜೊತೆಗೂಡಿದ ಬಟ್ಲರ್ಗೆ ಮುಕ್ತವಾಗಿ ಬ್ಯಾಟ್ ಬೀಸಲು ಸಾಧ್ಯವಾಗಲಿಲ್ಲ. ಆದಾಗ್ಯೂ ನಾಯಕನ ಇನ್ನಿಂಗ್ಸ್ ಆಡಿದ ಗಿಲ್ 33 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ತಂಡಕ್ಕೆ 85 ರನ್‌ಗಳ ನಿರ್ಣಾಯಕ ಇನ್ನಿಂಗ್ಸ್ ಆಡಿದರು.
KKR vs GT IPL 2026 Highlights: ಗೆಲ್ಲಲೇಬೇಕಾದ ಪಂದ್ಯದಲ್ಲಿ ಗೆದ್ದ ಕೆಕೆಆರ್
ಗುರಿ ಬೆನ್ನಟ್ಟುವಲ್ಲಿ ಗುಜರಾತ್ ವಿಫಲ
ಜೋಸ್ ಬಟ್ಲರ್ ಕೂಡ 57 ರನ್‌ಗಳ ಇನ್ನಿಂಗ್ಸ್ ಆಡಿದರು. ಆದರೆ ಅವರ ಇನ್ನಿಂಗ್ಸ್ನಲ್ಲಿ ವೇಗ ಇರಲಿಲ್ಲ. ಇದು ಕೂಡ ಇತರೆ ಬ್ಯಾಟರ್‌ಗಳ ಮೇಲೆ ಹೆಚ್ಚಿನ ಒತ್ತಡ ಹೇರಿತು. ಗಿಲ್ ವಿಕೆಟ್ ಬಳಿಕ ಮತ್ತೆ ಬ್ಯಾಟಿಂಗ್ಗೆ ಬಂದ ಸುದರ್ಶನ್ ಅಜೇಯ 57 ರನ್‌ಗಳ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ದಡ ಮುಟ್ಟಿಸುವಲ್ಲಿ ವಿಫಲರಾದರು. ಕೆಕೆಆರ್ ಪರ ಸುನಿಲ್ ನರೈನ್ ಗರಿಷ್ಠ 2 ವಿಕೆಟ್‌ಗಳನ್ನು ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:41 pm, Sat, 16 May 26





