AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ಸಿನಿಮಾ ವಿಳಂಬಕ್ಕೆ ಹಲವು ಬಲವಾದ ಕಾರಣಗಳಿವೆ: ನಟಿ ತಾರಾ ಸುತಾರಿಯಾ

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ದಿನಾಂಕ 2 ಬಾರಿ ಮುಂದೂಡಿಕೆ ಆಯಿತು. ಆ ಬಗ್ಗೆ ನಟಿ ತಾರಾ ಸುತಾರಿಯಾ ಅವರು ಮಾತನಾಡಿದ್ದಾರೆ. ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದ್ದಕ್ಕೆ ಅಭಿಮಾನಿಗಳಿಗೆ ಬೇಸರ ಇದೆ ಎಂಬುದು ನಿಜ. ಆದರೆ ಆ ಕಾಯುವಿಕೆಗೆ ಫಲ ಸಿಗಲಿದೆ ಎಂಬ ನಂಬಿಕೆ ತಾರಾ ಸುತಾರಿಯಾ ಅವರಿಗೆ ಇದೆ.

‘ಟಾಕ್ಸಿಕ್’ ಸಿನಿಮಾ ವಿಳಂಬಕ್ಕೆ ಹಲವು ಬಲವಾದ ಕಾರಣಗಳಿವೆ: ನಟಿ ತಾರಾ ಸುತಾರಿಯಾ
Yash, Tara Sutaria
ಮದನ್​ ಕುಮಾರ್​
|

Updated on: May 17, 2026 | 8:06 AM

Share

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಟಾಕ್ಸಿಕ್’ (Toxic) ಬಿಡುಗಡೆ ತಡವಾಗುತ್ತಿರುವುದು ಅಭಿಮಾನಿಗಳಲ್ಲಿ ತುಸು ನಿರಾಸೆ ಮೂಡಿಸಿರುವುದು ನಿಜ. ಆದರೆ, ಈ ವಿಳಂಬದ ಹಿಂದೆ ಸೂಕ್ತ ಹಾಗೂ ಬಲವಾದ ಕಾರಣಗಳಿವೆ ಎಂದು ಚಿತ್ರದ ನಟಿ ತಾರಾ ಸುತಾರಿಯಾ (Tara Sutaria) ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ‘ಈ ಕಾಯುವಿಕೆ ಖಂಡಿತವಾಗಿಯೂ ಸಾರ್ಥಕವಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆರಂಭದಲ್ಲಿ ಈ ಚಿತ್ರವನ್ನು ಮಾರ್ಚ್ 19ರಂದು ವಿಶ್ವಾದ್ಯಂತ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ, ಮಧ್ಯಪ್ರಾಚ್ಯದಲ್ಲಿ ನಡೆದ ಇರಾನ್-ಇಸ್ರೇಲ್ ಸಂಘರ್ಷದ ಕಾರಣದಿಂದಾಗಿ ಬಿಡುಗಡೆಯನ್ನು ಜೂನ್ 4ಕ್ಕೆ ಮುಂದೂಡಲಾಗಿತ್ತು. ಆ ಬಳಿಕ ನಟ ಯಶ್ ಅವರು ಚಿತ್ರದ ಜಾಗತಿಕ ವಿತರಣೆ ಮತ್ತು ಕಾರ್ಯತಂತ್ರದ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿರುವುದರಿಂದ ಸಿನಿಮಾ ಮತ್ತಷ್ಟು ಮುಂದೂಡಲ್ಪಟ್ಟಿದೆ ಎಂದು ಅಧಿಕೃತವಾಗಿ ಖಚಿತಪಡಿಸಿದ್ದರು.

ಈ ವಿಳಂಬವನ್ನು ಒಬ್ಬ ನಟಿಯಾಗಿ ತಾವು ಹೇಗೆ ಸ್ವೀಕರಿಸಿದ್ದಾರೆ ಎಂಬುದರ ಕುರಿತು ‘ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ’ ಜೊತೆ ತಾರಾ ಸುತಾರಿಯಾ ಮಾತನಾಡಿದ್ದಾರೆ. ‘ನಾನು ತುಂಬಾ ತಾಳ್ಮೆಯಿಂದ ಇರಬಲ್ಲೆ. ಸಿನಿಮಾ ತಕ್ಷಣವೇ ಬಿಡುಗಡೆಯಾಗದಿದ್ದರೆ ನನಗೆ ಏನಾಗಬಹುದು ಎಂಬ ಸಂಕುಚಿತ ಯೋಚನೆ ನನ್ನದಲ್ಲ. ನಾನು ಯಾವಾಗಲೂ ದೊಡ್ಡ ಚಿತ್ರಣವನ್ನು ಗಮನಿಸುತ್ತೇನೆ. ಒಬ್ಬ ನಟಿಯಾಗಿ ನಾನು ಸಿನಿಮಾವನ್ನು ಕೇವಲ ನನ್ನದು ಎಂದು ಭಾವಿಸಲಾಗುವುದಿಲ್ಲ. ಅದು ಇಡೀ ತಂಡದ ಸಿನಿಮಾ’ ಎಂದು ಅವರು ಎಂದಿದ್ದಾರೆ.

‘ಒಬ್ಬ ನಟಿಯಾಗಿ ನನ್ನ ಕೆಲಸ ಮಾಡುವುದು ಮಾತ್ರ ನನ್ನ ಜವಾಬ್ದಾರಿ ಎಂಬುದು ನನಗೆ ತಿಳಿದಿದೆ. ಅದರಾಚೆಗೆ, ನಿರ್ಮಾಪಕರು ಅಥವಾ ನಿರ್ದೇಶಕರಿಗೆ ಇರುವ ಉದ್ಯಮದ ಸೂಕ್ಷ್ಮ ತಿಳುವಳಿಕೆ ನಮಗೆ ಇರುವುದಿಲ್ಲ. ಸಿನಿಮಾ ವಿಳಂಬವಾಗುತ್ತಿರುವುದರ ಹಿಂದೆ ಹಲವು ಪ್ರಮುಖ ಕಾರಣಗಳಿವೆ ಮತ್ತು ಆ ಕಾರಣಗಳು ಅತ್ಯಂತ ತಾರ್ಕಿಕ ಹಾಗೂ ಬಲವಾಗಿವೆ ಎಂದು ನಾನು ನಂಬುತ್ತೇನೆ. ಪ್ರೇಕ್ಷಕರು ಈ ಚಿತ್ರವನ್ನು ನೋಡಲು ಎಷ್ಟು ಉತ್ಸುಕರಾಗಿದ್ದಾರೆ ಎಂಬುದು ನನಗೆ ಅರ್ಥವಾಗುತ್ತದೆ. ನನಗೂ ಅದೇ ಕುತೂಹಲವಿದೆ. ಆದರೆ ಈ ಕಾಯುವಿಕೆ ಚಿತ್ರಕ್ಕೆ ಜಾಗತಿಕ ಮಟ್ಟದಲ್ಲಿ ದೊಡ್ಡ ಮನ್ನಣೆ ತಂದುಕೊಡಲು ಸಹಕಾರಿಯಾಗಲಿದೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಹಸೆಮಣೆ ಏರಲು ಸಜ್ಜಾದ ‘ಟಾಕ್ಸಿಕ್’ ಸಿನಿಮಾ ನಟಿ ಹುಮಾ ಖುರೇಷಿ; ಹುಡುಗ ಯಾರು?

ಸಿನಿಮಾ ಎರಡನೇ ಬಾರಿ ಮುಂದೂಡಲ್ಪಟ್ಟಾಗ ನಟ ಯಶ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದರು. ‘ನಾವು ಕೆಲವು ಸಿನಿಮಾಗಳನ್ನು ಸುಮ್ಮನೇ ಮಾಡುತ್ತೇವೆ, ಆದರೆ ಇನ್ನು ಕೆಲವು ಸಿನಿಮಾಗಳು ನಾವು ಚಿತ್ರರಂಗವನ್ನು ಏಕೆ ಇಷ್ಟಪಟ್ಟೆವು ಎಂಬುದನ್ನು ನೆನಪಿಸುತ್ತವೆ. ಟಾಕ್ಸಿಕ್ ಅಂತಹ ಒಂದು ಪ್ರಯಾಣವಾಗಿದೆ. ಸಿನೆಮಾಕಾನ್​ನಲ್ಲಿ ನಮ್ಮ ಚಿತ್ರವನ್ನು ಪ್ರಸ್ತುತಪಡಿಸಿದಾಗ ಸಿಕ್ಕ ಜಾಗತಿಕ ಪ್ರತಿಕ್ರಿಯೆಯು, ಈ ಸಿನಿಮಾ ವಿಶ್ವಾದ್ಯಂತ ತಲುಪಲು ಅರ್ಹವಾಗಿದೆ ಎಂಬ ನಮ್ಮ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ’ ಎಂದು ಯಶ್ ಬರೆದುಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More