ಸಿಎಸ್​ಕೆಯಲ್ಲಿ ರವಿಚಂದ್ರನ್ ಅಶ್ವಿನ್​ಗೆ ಕಪಾಳ ಮೋಕ್ಷ ಮಾಡಿದ್ಯಾರು?

ಸಿಎಸ್​ಕೆಯಲ್ಲಿ ರವಿಚಂದ್ರನ್ ಅಶ್ವಿನ್​ಗೆ ಕಪಾಳ ಮೋಕ್ಷ ಮಾಡಿದ್ಯಾರು?

ರವಿಚಂದ್ರನ್ ಅಶ್ವಿನ್.. ಐಪಿಎಲ್​ನಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಬೆಳಕಿಗೆ ಬಂದ ಪ್ರತಿಭೆ. ಸಿಎಸ್​ಕೆ ಪರ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರಿಂದಲೇ ಟೀಮ್ ಇಂಡಿಯಾಕ್ಕೂ ಎಂಟ್ರಿ ಕೊಟ್ಟ ಅಶ್ವಿನ್, ಕ್ರಿಕೆಟ್ ಜಗತ್ತು ನಿಬ್ಬೆರಗಾಗುವಂತ ಸಾಧನೆ ಮಾಡಿದ್ದು ನಿಜ.

ಆದ್ರೀಗ ರವಿಚಂದ್ರನ್ ಅಶ್ವಿನ್ ಚೆನ್ನೈ ತಂಡದಲ್ಲಾದ ಕಹಿ ಘಟನೆಯೊಂದನ್ನ ಬಿಚ್ಚಿಟ್ಟಿದ್ದಾರೆ. 2010ರ ಐಪಿಎಲ್​ನಲ್ಲಿ ಆರ್​.ಅಶ್ವಿನ್​ರನ್ನ ಚೆನ್ನೈ ತಂಡ ಎರಡು ಪಂದ್ಯಗಳಿಗೆ ತಂಡದಿಂದ ಕೈ ಬಿಟ್ಟಿತ್ತು. ಇದು ರವಿಚಂದ್ರನ್ ಅಶ್ವಿನ್​ಗೆ ಕಪಾಳಕ್ಕೆ ಹೊಡೆದ ಅನುಭವವಾಗಿತ್ತು ಅಂತಾ ಹೇಳಿಕೊಂಡಿದ್ದಾರೆ.

ಕೆಟ್ಟ ಪ್ರದರ್ಶನ ನೀಡಿದ್ದಕ್ಕೆ ಪಂದ್ಯದಿಂದ ತೆಗೆದುಹಾಕಿದ್ದರು: 2010ರ ಐಪಿಎಲ್​ನಲ್ಲಿ ನಾನು ಎರಡು ಪಂದ್ಯಗಳಲ್ಲಿ ಕೆಟ್ಟ ಪ್ರದರ್ಶನ ನೀಡಿದ್ದರಿಂದ ನನ್ನನ್ನು ಸಿಎಸ್​ಕೆ ಆಡುವ ಹನ್ನೊಂದರ ಬಳಗದಿಂದ ತೆಗೆದುಹಾಕಲಾಗಿತ್ತು. ಇದು ನನ್ನ ಕಪಾಳಕ್ಕೆ ಬಾರಿಸಿದಂತಿತ್ತು. ಏಕೆಂದರೆ ಕೋಚ್ ಸ್ಟೀಫನ್ ಫ್ಲೆಮಿಂಗ್ ನನ್ನ ಜೊತೆ ಮಾತನಾಡುತ್ತಿರಲಿಲ್ಲ. ಅವರು ನನಗೆ ಬಂಬಲವನ್ನೂ ನೀಡುತ್ತಿರಲಿಲ್ಲ ಎಂದು ಅಶ್ವಿನ್ ಹೇಳಿಕೊಂಡಿದ್ದಾರೆ.

ಅಷ್ಟಕ್ಕೂ ಅಶ್ವಿನ್ ತಾವು ಕೆಟ್ಟ ಪ್ರದರ್ಶನ ನೀಡಿದ ಪಂದ್ಯದ ಬಗ್ಗೆಯೂ ವಿವರಿಸಿದ್ದಾರೆ. ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ನಾನು 14, 16, 18 ಮತ್ತು 20ನೇ ಓವರ್ ಬೌಲಿಂಗ್ ಮಾಡಿದ್ದೆ. ಅಂದು ರಾಬಿನ್ ಉತ್ತಪ್ಪ ಮತ್ತು ಮಾರ್ಕ್ ಬೌಷರ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಪರಿಣಾಮ ನಾನು ವಿಕೆಟ್ ಪಡೆಯುವಲ್ಲಿ ವಿಫಲನಾಗಿದ್ದೆ.

ಅಲ್ಲದೆ ನಾಲ್ಕು ಓವರ್​ಗಳಲ್ಲಿ 40 ಅಥವಾ 45 ರನ್ ಗಳನ್ನು ನೀಡಿ ದುಬಾರಿ ಬೌಲರ್ ಆಗಿ ಹೊರಹೊಮ್ಮಿದ್ದೆ. ನನ್ನಿಂದಾಗಿ ಆ ಪಂದ್ಯವನ್ನ ಚೆನ್ನೈ ಸೋಲಬೇಕಾಯ್ತು. ಹೀಗಾಗಿ ಮುಂದಿನ ಪಂದ್ಯದಲ್ಲಿ ನನ್ನನ್ನ ಆಡುವ ಹನ್ನೊಂದರ ಬಳಗದಿಂದ ಕಿತ್ತು ಹಾಕಿದ್ರು. ಇದು ನನಗೆ ನಿಜಕ್ಕೂ ಕಪಾಳಕ್ಕೆ ಹೊಡೆದ ಅನುಭವ ನೀಡಿತ್ತು ಎಂದಿದ್ದಾರೆ ಅಶ್ವಿನ್.

ಚೆನ್ನೈ ಫ್ರಾಂಚೈಸಿ ಹೊಟೇಲ್​ನಲ್ಲಿ ಆಟಗಾರರ ಖರ್ಚು ವೆಚ್ಚ ಹೆಚ್ಚಾಗುತ್ತೆ ಅಂತ, 18 ಮಂದಿ ಆಟಗಾರರಿಗೆ ಹೋಟೆಲ್​ನಲ್ಲಿ ವ್ಯವಸ್ಥೆ ಮಾಡಿತ್ತು. ಹೀಗಾಗಿ ನಾನು ಮನೆಯಲ್ಲೆ ಕುಳಿತು ಚೆನ್ನೈ ಪಂದ್ಯವನ್ನ ನೋಡಬೇಕಾಯ್ತು ಅಂತಾ ಅಶ್ವಿನ್, ತಮ್ಮ ಹಳೆಯ ಕಹಿ ಘಟನೆಯೊಂದನ್ನ ಬಿಚ್ಚಿಟ್ಟಿದ್ದಾರೆ.

Click on your DTH Provider to Add TV9 Kannada