ಟೆಸ್ಟ್ ಕ್ರಿಕೆಟ್ನಲ್ಲಿ ಬೌಲರ್ಗಳು 300 ವಿಕೆಟ್ ಪಡೆದರೆ ಮತ್ತು ಬ್ಯಾಟ್ಸ್ಮನ್ಗಳು 5,000 ಕ್ಕಿಂತ ಜಾಸ್ತಿ ರನ್ ಗಳಿಸಿದರೆ ಅವರ ದಾಖಲೆಗಳನ್ನು ಯಾರೂ ಸರಿಗಟ್ಟಲಾರರು ಅಂತಾ ಭಾವಿಸುವ ಒಂದು ಕಾಲವಿತ್ತು. ಆದರೆ ಆ ಕಾಲ ಕ್ರಮೇಣವಾಗಿ ಬದಲಾಗುವುದನ್ನು ಕ್ರಿಕೆಟ್ ಪ್ರೇಮಿಗಳು ಗಮನಿಸುತ್ತಾ ಬಂದಿದ್ದಾರೆ.
ಭಾರತದ ಸಚಿನ್ ತೆಂಡೂಲ್ಕರ್ ಹೆಚ್ಚು ಕಡಿಮೆ 16,000 (15,921) ರನ್ಗಳನ್ನು ಟೆಸ್ಟ್ ಕ್ರಿಕೆಟ್ನಲ್ಲಿ ಬಾರಿಸಿ ವಿದಾಯ ಹೇಳಿದರು. ಹಾಗೆಯೇ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಬರೋಬ್ಬರಿ 800 ವಿಕೆಟ್ ಪಡೆಯುವ ಸಾಧನೆ ಮಾಡಿದರು. 300ಕ್ಕಿಂತ ಹೆಚ್ಚು ವಿಕೆಟ್ ಪಡೆದ ಬೌಲರ್ಗಳು ಮತ್ತು 5,000 ಕ್ಕಿಂತ ಜಾಸ್ತಿ ರನ್ ಗಳಿಸಿದ ಸಾಕಷ್ಟು ಬ್ಯಾಟ್ಸ್ಮನ್ಗಳು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ನಮಗೀಗ ಸಿಗುತ್ತಾರೆ.
ನಾವಿಲ್ಲಿ ಬೌಲರ್ಗಳನ್ನು ಕುರಿತು ಮಾತ್ರ ಚರ್ಚಿಸುವ. ನಿಮಗೆಲ್ಲ ಗೊತ್ತಿರುವ ಹಾಗೆ ಮುರಳಿ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಆಸ್ಟ್ರೇಲಿಯಾದ ಶೇನ್ ವಾರ್ನ್ 708 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. 619 ವಿಕೆಟ್ಗಳೊಂದಿಗೆ ಮೂರನೇ ಸ್ಥಾನದಲ್ಲಿರುವವರು ನಮ್ಮ ಹುಡುಗ ಅನಿಲ್ ಕುಂಬ್ಳೆ.
ಮುತ್ತಯ್ಯ ಮುರಳೀಧರನ್
ಹಾಗಾದರೆ, ಪ್ರಸಕ್ತ ಬೌಲರ್ಗಳ ಪೈಕಿ ಮುರಳಿಯ ದಾಖಲೆಯನ್ನು ಯಾರಾದರೂಸರಿಗಟ್ಟಬಲ್ಲರೆ? ಭಾರತದ ರವಿಚಂದ್ರನ್ ಅಶ್ವಿನ್ ಮತ್ತು ಆಸ್ಟ್ರೇಲಿಯಾದ ನೇಥನ್ ಲಿಯಾನ್ ಅವರಿಗೆ ಆ ಅವಕಾಶ ಇರಬಹುದಾದರೂ 800 ವಿಕೆಟ್ ಪಡೆಯುವುದು ಸುಲಭದ ಮಾತು ಅಲ್ಲ. ಅಶ್ವಿನ್ ಇದುವರೆಗೆ 74 ಟೆಸ್ಟ್ ಪಂದ್ಯಗಳನ್ನಾಡಿದ್ದು, 377 ವಿಕೆಟ್ ಕಬಳಿಸಿದ್ದಾರೆ. ಮುಂದಿನ ವಾರ ಬ್ರಿಸ್ಬೇನ್ನಲ್ಲಿ ತಮ್ಮ ಕೆರೀಯರ್ನ 100 ನೇ ಟೆಸ್ಟ್ ಆಡಲಿರುವ ಲಿಯಾನ್ 396 ವಿಕೆಟ್ ಕಿತ್ತಿದ್ದಾರೆ. ನಿಸ್ಸಂದೇಹವಾಗಿ ಅವರು ಈಗಿನ ಸ್ಪಿನ್ನರ್ಗಳ ಪೈಕಿ ಶ್ರೇಷ್ಠರು. ಆದರೆ, ಮುರಳಿ ತಲುಪಿದ ಶಿಖರವನ್ನು ಅವರಿಗೆ ಮುಟ್ಟಲಾದೀತೆ?
ಆಸ್ಟ್ರೇಲಿಯಾದ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಮುರಳಿ ಭಾರತೀಯ ಬೌಲರ್ಗೆ ಖಂಡಿತವಾಗಿಯೂ ಅವಕಾಶವಿದೆ ಎಂದು ಹೇಳಿದ್ದಾರೆ.
ಯಾರು 800 ವಿಕೆಟ್ ಪಡೆಯಬಲ್ಲರು ಎನ್ನುವುದು ನಿಮ್ಮ ಪ್ರಶ್ನೆಯೇ? ಅಶ್ವಿನ್ ಆ ಸಾಧನೆ ಮಾಡಬಹುದಾದ ಬೌಲರ್ ಎಂದು ನನಗನ್ನಿಸುತ್ತೆ. ಯಾಕೆಂದರೆ ನಿಸ್ಸಂಶಯವಾಗಿ ಅವರೊಬ್ಬ ಶ್ರೇಷ್ಠ ಬೌಲರ್. ಅವರನ್ನು ಬಿಟ್ಟರೆ ಬೇಱವುದೇ ಯುವ ಬೌಲರ್ 800 ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿದ್ದಾನೆ ಅಂತಾ ನನಗನ್ನಿಸುವುದಿಲ್ಲ. ನೇಥನ್ ಲಿಯಾನ್ ಸುಮಾರು 400 ವಿಕೆಟ್ಗಳನ್ನು ಪಡೆದಿದಿರುವುದರಿಂದ ಅವರಿಗೂ ಅವಕಾಶವಿದೆ. ಆದರೆ 800 ವಿಕೆಟ್ ಪಡೆಯಲು ಆಸ್ಸೀ ಬಹಳಷ್ಟು ಟೆಸ್ಟ್ಗಳನ್ನಾಡಬೇಕಾಗುತ್ತದೆ ಎಂದು ಮುರಳಿ ಹೇಳಿದ್ದಾರೆ.
ಕ್ರಿಕೆಟ್ನ ಸ್ವರೂಪ ತೀವ್ರವಾಗಿ ಬದಲಾಗುತ್ತಿರುವುದರಿಂದ ಸ್ಪಿನ್ನರ್ಗಳ ಮತ್ತೊಂದು ಸುವರ್ಣ ಯುಗ ಬರಲಾರದೆಂದು ಮುರಳಿ ಭಾವಿಸುತ್ತಾರೆ.
ಮೂಲಭೂತ ಸಮಸ್ಯೆಯೇನೆಂದರೆ, ಟಿ20 ಕ್ರಿಕೆಟ್ ಮತ್ತು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳು ಟೆಸ್ಟ್ ಕ್ರಿಕೆಟ್ನ ಸ್ವರೂಪವನ್ನು ಬದಲಾಯಿಸಿವೆ. ನಾನಾಡುತ್ತಿದ್ದ ದಿನಗಳಲ್ಲಿ ಬ್ಯಾಟ್ಸ್ಮನ್ಗಳು ತಾಂತ್ರಿಕವಾಗಿ ಪರಿಣಿತರಾಗಿದ್ದರು ಮತ್ತು ನಿರ್ಜೀವ ಪಿಚ್ಗಳ ಮೇಲೆ ನಾವು ಬೌಲಿಂಗ್ ಮಾಡಬೇಕಾಗುತ್ತಿತ್ತು, ಈಗಿನ ಆಟಗಾರರು ಮೂರು ದಿನಗಳಲ್ಲಿ ಟೆಸ್ಟ್ ಪಂದ್ಯವನ್ನು ಮುಗಿಸುವ ತವಕದಲ್ಲಿರುತ್ತಾರೆ ಎಂದು ಮುರಳಿ ಹೇಳಿದ್ದಾರೆ.
ನೇಥನ್ ಲಿಯಾನ್
ನನ್ನ ಸಮಕಾಲೀನ ಸ್ಪಿನ್ನರ್ಗಳು ಪಿಚ್ನಿಂದ ನೆರವು ಪಡೆಯಲು ಹೆಚ್ಚು ಶ್ರಮವಹಿಸಬೇಕಾಗುತಿತ್ತು. ಈಗಿನ ಬೌಲರ್ಗಳು ಅದನ್ನು ಮಾಡಬೇಕಿಲ್ಲ. ಸತತವಾಗಿ ಉತ್ತಮ ಲೈನ್ ಮತ್ತು ಲೆಂಗ್ತ್ ಕಾಯ್ದುಕೊಂಡು ಬೌಲ್ ಮಾಡಿದರೆ ಸಾಕು, ಅವರಿಗೆ 5 ವಿಕೆಟ್ಗಳು ಸುಲಭವಾಗಿ ಸಿಗುತ್ತವೆ. ಯಾಕೆಂದರೆ ಮಾಡರ್ನ್ ಯುಗದ ಬ್ಯಾಟ್ಸ್ಮನ್ಗಳು ಆಕ್ರಮಣಕಾರಿ ಆಟವಾಡಲು ಬಯಸುತ್ತಾರೆ ಎಂದು ಮುರಳಿ ಹೇಳಿದ್ದಾರೆ.
ಸ್ಪಿನ್ನರ್ಗಳು ಫೀಲ್ಡ್ ಅನ್ನು ಸರಿಯಾಗಿ ಸೆಟ್ ಮಾಡಿಕೊಂಡರೆ ವಿಕೆಟ್ಗಳನ್ನು ಕಬಳಿಸುವ ಉತ್ತಮ ಅವಕಾಶ ಅವರಿಗಿದೆ. ಬ್ಯಾಟ್ಸ್ಮನ್ಗಳು ತಾವಾಗಿಯೇ ಪ್ರಮಾದವೆಸಗಿ ವಿಕೆಟ್ ಒಪ್ಪಿಸಿಬಿಡುತ್ತಾರೆ. ನನ್ನ ಜಮಾನಾದಲ್ಲಿ ಸ್ಪಿನ್ನರ್ಗಳು ವಿಕೆಟ್ ಪಡೆಯಲು ಬಹಳ ಶ್ರಮ ಪಡಬೇಕಾಗುತ್ತಿತ್ತು. ಹಾಗಾಗೇ ಅವರು ಹೊಸ ಎಸೆತಗಳನ್ನು ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಈಗಿನ ಬೌಲರ್ಗಳು ಅದನ್ನೆಲ್ಲ ಟಿ20 ಕ್ರಿಕೆಟ್ನಲ್ಲಿ ಮಾಡುತ್ತಾರೆ. ಬ್ಯಾಟ್ಸ್ಮನ್ಗಳು ಅಕ್ರಮಣಕಾರಿ ಮೂಡ್ನಲ್ಲಿ ಇರುವುದರಿಂದ ಸ್ಪಿನ್ನರ್ಗಳು ತಮ್ಮ ಬೌಲಿಂಗ್ನಲ್ಲಿ ವೈವಿಧ್ಯತೆ ತರಲು ಪ್ರಯತ್ನಿಸುತ್ತಾರೆ. ಆದರೆ ಟೆಸ್ಟ್ ಕ್ರಿಕೆಟ್ನಲ್ಲಿ ಅದು ಬೇಕಿಲ್ಲ ಎಂದು ಮುರಳಿ ಹೇಳಿದ್ದಾರೆ.