ಚೆಕ್ ಬೌನ್ಸ್ ಪ್ರಕರಣ: ಸ್ಟಾರ್ ಆಟಗಾರನ ವಿರುದ್ಧ ಬಂಧನ ವಾರಂಟ್ ಜಾರಿ

Shakib Al Hasan: ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಅವರ ವಿರುದ್ಧ ಢಾಕಾದ ನ್ಯಾಯಾಲಯವು ಚೆಕ್ ಬೌನ್ಸ್ ಪ್ರಕರಣದಲ್ಲಿ ಬಂಧನ ವಾರಂಟ್ ಹೊರಡಿಸಿದೆ. ಐಎಫ್‌ಐಸಿ ಬ್ಯಾಂಕ್‌ಗೆ ಸುಮಾರು 3 ಕೋಟಿ ರೂಪಾಯಿ ಪಾವತಿಸಲು ಬಾಕಿ ಇರುವುದರಿಂದ ಈ ವಾರಂಟ್ ಹೊರಡಿಸಲಾಗಿದೆ. ಶಕೀಬ್ ಅವರ ಒಡೆತನದ ಕಂಪನಿಯ ಮೂವರು ಅಧಿಕಾರಿಗಳ ವಿರುದ್ಧವೂ ವಾರಂಟ್ ಜಾರಿಯಾಗಿದೆ. ಶಕೀಬ್ ಪ್ರಸ್ತುತ ವಿದೇಶದಲ್ಲಿದ್ದು, ಬಾಂಗ್ಲಾದೇಶಕ್ಕೆ ಮರಳುವ ಸಾಧ್ಯತೆ ಕಡಿಮೆ.

ಚೆಕ್ ಬೌನ್ಸ್ ಪ್ರಕರಣ: ಸ್ಟಾರ್ ಆಟಗಾರನ ವಿರುದ್ಧ ಬಂಧನ ವಾರಂಟ್ ಜಾರಿ
ಶಕೀಬ್ ಅಲ್ ಹಸನ್
Follow us
ಪೃಥ್ವಿಶಂಕರ
|

Updated on:Jan 19, 2025 | 6:08 PM

ಬಾಂಗ್ಲಾದೇಶದ ದಿಗ್ಗಜ ಆಲ್‌ರೌಂಡರ್ ಶಕೀಬ್ ಅಲ್ ಹಸನ್‌ ಕಳೆದ ಕೆಲವು ದಿನಗಳಿಂದ ಬಾರಿ ಸುದ್ದಿಯಲ್ಲಿದ್ದಾರೆ. 2024ರ ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಕೌಂಟಿ ಪಂದ್ಯದ ವೇಳೆ ಶಕೀಬ್ ಅವರ ಬೌಲಿಂಗ್ ಶೈಲಿ ಶಂಕಾಸ್ಪದವಾಗಿದ್ದ ಕಾರಣ ಅವರನ್ನು ಬೌಲಿಂಗ್​ನಿಂದ ನಿಷೇಧಿಸಲಾಗಿತ್ತು. ಅದಲ್ಲದೆ ಇಲ್ಲಿಯವರೆಗೆ ಎರಡು ಬಾರಿ ಬೌಲಿಂಗ್ ಆಕ್ಷನ್ ಪರೀಕ್ಷೆಯಲ್ಲಿ ಶಕೀಬ್ ಫೇಲ್ ಆಗಿದ್ದಾರೆ. ಇದರಿಂದಾಗಿ ಚಾಂಪಿಯನ್ಸ್ ಟ್ರೋಫಿಗೂ ಅವರು ಬಾಂಗ್ಲಾದೇಶ ತಂಡದಲ್ಲಿ ಆಯ್ಕೆಯಾಗಿಲ್ಲ. ಇದೆಲ್ಲದರ ನಡುವೆ ಶಕೀಬ್ ಅಲ್ ಹಸನ್​ಗೆ ಮತ್ತೊಂದು ಗಂಡಾಂತರ ಎದುರಾಗಿದ್ದು ಚೆಕ್ ಬೌನ್ಸ್ ಪ್ರಕರಣದಲ್ಲಿ ಅವರ ವಿರುದ್ಧ ಬಂಧನ ವಾರಂಟ್ ಜಾರಿಯಾಗಿದೆ.

ಶಕೀಬ್ ವಿರುದ್ಧ ಬಂಧನ ವಾರಂಟ್

ವಾಸ್ತವವಾಗಿ, ಐಎಫ್‌ಐಸಿ ಬ್ಯಾಂಕ್‌ಗೆ ಸಂಬಂಧಿಸಿದ ಚೆಕ್ ಬೌನ್ಸ್ ಪ್ರಕರಣದಲ್ಲಿ ಬಾಂಗ್ಲಾದೇಶದ ಆಲ್‌ರೌಂಡರ್ ಮತ್ತು ರಾಜಕಾರಣಿ ಶಕೀಬ್ ಅಲ್ ಹಸನ್ ವಿರುದ್ಧ ಢಾಕಾದ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದೆ. ವಾರೆಂಟ್‌ನಲ್ಲಿ ಇತರ ಮೂವರ ಹೆಸರನ್ನೂ ಸೇರಿಸಲಾಗಿದೆ. ಢಾಕಾದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಜಿಯಾದೂರ್ ರೆಹಮಾನ್ ಭಾನುವಾರ ಈ ಆದೇಶ ಹೊರಡಿಸಿದ್ದಾರೆ. ಡಿಸೆಂಬರ್ 15ರಂದು ಚೆಕ್ ವಂಚನೆ ಪ್ರಕರಣದಲ್ಲಿ ಶಾಕಿಬ್ ಹೆಸರು ಕೇಳಿ ಬಂದಿತ್ತು. ಇದಾದ ಬಳಿಕ ಡಿ.18ರಂದು ಪ್ರಾಥಮಿಕ ವಿಚಾರಣೆ ನಡೆದ ನಂತರ ಜನವರಿ 19ರಂದು ವಿಚಾರಣಗೆ ಹಾಜರಾಗುವಂತೆ ನ್ಯಾಯಾಲಯ ಆದೇಶಿಸಿತ್ತು. ಈ ಪ್ರಕರಣದಲ್ಲಿ ಶಕೀಬ್ ಅಲ್ಲದೆ ಅವರ ಒಡೆತನದ ಕಂಪನಿ ಅಲ್ ಹಸನ್ ಆಗ್ರೋ ಫಾರ್ಮ್ ಲಿಮಿಟೆಡ್​ನ ವ್ಯವಸ್ಥಾಪಕ ನಿರ್ದೇಶಕ ಘಾಜಿ ಶಹಗೀರ್ ಹುಸೇನ್ ಮತ್ತು ನಿರ್ದೇಶಕರಾದ ಇಮ್ದಾದುಲ್ ಹಕ್ ಮತ್ತು ಮಲೈಕರ್ ಬೇಗಂ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ.

ಐಎಫ್‌ಐಸಿ ಬ್ಯಾಂಕ್‌ನ ಅಧಿಕಾರಿ ಶಾಹಿಬುರ್ ರೆಹಮಾನ್ ಅವರು ಬ್ಯಾಂಕ್ ಪರವಾಗಿ ಪ್ರಕರಣ ದಾಖಲಿಸಿದ್ದರು. ಅದರ ಪ್ರಕಾರ, ಶಕೀಬ್ ಅಲ್ ಹಸನ್ ಮತ್ತು ಇತರ ಮೂವರು ಎರಡು ಪ್ರತ್ಯೇಕ ಚೆಕ್‌ಗಳ ಮೂಲಕ ಸರಿಸುಮಾರು 41.4 ಮಿಲಿಯನ್ ಟಾಕಾ ಅಂದರೆ ಸರಿಸುಮಾರು 3 ಕೋಟಿ ಭಾರತೀಯ ರೂಪಾಯಿಗಳನ್ನು ಪಾವತಿಸಬೇಕಾಗಿತ್ತು. ಆದರೆ ಇದುವರೆಗೂ ಹಣ ಪಾವತಿಯಾಗಿಲ್ಲ. ಹೀಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ.

ವಿದೇಶದಲ್ಲಿ ಶಕೀಬ್ ಅಲ್ ಹಸನ್

ಬಾಂಗ್ಲಾದೇಶದಲ್ಲಿ ಈ ಹಿಂದೆ ನಡೆದಿದ್ದ ಹಿಂಸಾಚಾರದ ಸಂದರ್ಭದಲ್ಲಿ ಶಕೀಬ್ ಅಲ್ ಹಸನ್ ವಿರುದ್ಧ ಕೊಲೆ ಆರೋಪ ಹೊರಿಸಲಾಗಿತ್ತು ಇದರ ನಂತರ, ಭದ್ರತಾ ಕಾಳಜಿ ಮತ್ತು ಕಾನೂನು ಜಾರಿ ಸಂಸ್ಥೆಗಳಿಂದ ಪ್ರಶ್ನಿಸುವ ಸಾಧ್ಯತೆಯನ್ನು ಉಲ್ಲೇಖಿಸಿ ಶಕೀಬ್ ದೇಶಕ್ಕೆ ಮರಳಲು ನಿರಾಕರಿಸಿದರು. ಅಂದಿನಿಂದ ಅವರು ವಿದೇಶದಲ್ಲಿ ನೆಲೆಸಿದ್ದಾರೆ. ಶಕೀಬ್ ಸದ್ಯಕ್ಕೆ ಬಾಂಗ್ಲಾದೇಶಕ್ಕೆ ಹಿಂದಿರುಗುವ ಸಾಧ್ಯತೆಯಿಲ್ಲ, ಏಕೆಂದರೆ ಅವರ ಕುಟುಂಬ ಪ್ರಸ್ತುತ ಯುನೈಟೆಡ್ ಸ್ಟೇಟ್ಸ್‌ನಲ್ಲಿ ನೆಲೆಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:06 pm, Sun, 19 January 25